ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಅರಿವ ಬಲ್ಲೆನೆಂದು
ಬಿರುನುಡಿಯ ನುಡಿವರೆ. (829-211)

ಅರಿವ=ಅರಿವನ್ನು/ತಿಳುವಳಿಕೆಯನ್ನು; ಬಲ್ಲೆನ್+ಎಂದು; ಬಲ್ಲ=ತಿಳಿದ/ಅರಿತ; ಬಲ್ಲೆನ್=ತಿಳಿದಿದ್ದೇನೆ/ಅರಿತಿದ್ದೇನೆ/ಕರಗತ ಮಾಡಿಕೊಂಡಿದ್ದೇನೆ; ಎಂದು=ಅಂದುಕೊಂಡು/ಒಳಮಿಡಿತದಿಂದ ಕೂಡಿ;

ಬಿರು=ಒರಟು/ಮೊನಚು/ಜೋರು/ಕಟು; ನುಡಿ=ಮಾತು/ಸೊಲ್ಲು; ಬಿರುನುಡಿ= ಕೇಳಿದವರ ಮನವನ್ನು ನೋಯಿಸುವಂತಹ ಮಾತು/ಇತರರ ವ್ಯಕ್ತಿತ್ವವನ್ನು ಅಲ್ಲಗಳೆಯುವಂತಹ ನುಡಿ/ವ್ಯಕ್ತಿಗಳ ನಡೆನುಡಿಗಳನ್ನು ಅಲ್ಲಗಳೆದು ಹಂಗಿಸುವಂತಹ ಒರಟು ಮಾತು; ನುಡಿವರೆ=ನುಡಿಯುತ್ತಾರೆಯೇ/ಆಡುತ್ತಾರೆಯೇ;

ವ್ಯಕ್ತಿಯು ತಾನೊಬ್ಬನೇ ಎಲ್ಲವನ್ನೂ ತಿಳಿದವನು ಎಂಬ ಅಹಂಕಾರದಿಂದ ಮೆರೆಯುತ್ತ ಇತರರನ್ನು ಕಡೆಗಣಿಸುವಂತಹ ಸೊಕ್ಕಿನ ನುಡಿಗಳನ್ನಾಡುವುದು ಸರಿಯಲ್ಲ.

ಏನೆಂದರಿಯರು
ಎಂತೆಂದರಿಯರು
ಬರುಮಾತಿನ ಬೊಮ್ಮವನಾಡುತ್ತಿಪ್ಪರು.(485-176)

( ಏನ್+ಎಂದು+ಅರಿಯರು; ಅರಿಯರು=ತಿಳಿಯರು; ಎಂತು+ಎಂದು+ಅರಿಯರು; ಎಂತು=ಯಾವ ರೀತಿ/ಬಗೆ/ಕ್ರಮ;

ಏನೆಂದರಿಯರು ಎಂತೆಂದರಿಯರು= ಅರಿವನ್ನು ಪಡೆಯಬೇಕಾದರೆ ಯಾವುದೇ ಒಂದು ಸಂಗತಿಯನ್ನು ಕಾರ‍್ಯ ಕಾರಣಗಳ ನೆಲೆಯಲ್ಲಿ ಒರೆಹಚ್ಚಿ ನೋಡಬೇಕು. ಮಾನವರ ಬದುಕಿನಲ್ಲಿ ನಡೆಯುವಂತಹ ಎಲ್ಲಾ ಸಂಗತಿಗಳಿಗೂ ನಿಸರ‍್ಗದಲ್ಲಿ ನಡೆಯುವ ಕ್ರಿಯೆಗಳು ಮತ್ತು ಮಾನವರ ನಡೆನುಡಿಗಳಿಂದ ಉಂಟಾಗುವ ಪರಿಣಾಮಗಳು ಕಾರಣವಾಗಿರುತ್ತವೆ.

ಆದ್ದರಿಂದ ಯಾವುದೇ ಒಂದು ಸಂಗತಿಯನ್ನು ಕುರಿತು ಚಿಂತಿಸುವಾಗ/ಮಾತನಾಡುವಾಗ “ ಅದು ಏನು? ಅದು ಯಾವ ರೀತಿ ಉಂಟಾಯಿತು? “ ಎಂಬುದನ್ನು ಪರಿಶೀಲನೆ ಮಾಡದಿದ್ದರೆ, ಆಗ ಅದರ ಬಗ್ಗೆ ಸರಿಯಾದ ಮತ್ತು ಸಮಗ್ರವಾದ ತಿಳುವಳಿಕೆಯು ದೊರೆಯುವುದಿಲ್ಲ.

ಬರು=ಬರಿದು/ಏನೂ ಇಲ್ಲದಿರುವುದು/ಪೊಳ್ಳು; ಮಾತು=ನುಡಿ/ಸೊಲ್ಲು ; ಬರುಮಾತು=ಪೊಳ್ಳು ಮಾತು/ಜೀವನದ ವ್ಯವಹಾರದಲ್ಲಿ ಆಚರಿಸಿ ತೋರಿಸದ ಮಾತು/ಏನೊಂದು ಬಗೆಯ ಕೆಲಸವನ್ನು ಮಾಡದೆ, ಕೇವಲ ಮಾತಿನಲ್ಲೇ ತೊಡಗಿರುವುದು;

ಬೊಮ್ಮ+ಅನ್+ಆಡುತ್ತ+ಇಪ್ಪರು; ಬ್ರಹ್ಮ>ಬೊಮ್ಮ; ಬೊಮ್ಮ=ಅರಿವು/ವೇದ/ವೇದ ಮಂತ್ರ/ಜೀವಿಗಳ ಹುಟ್ಟಿಗೆ ಕಾರಣನಾದ ದೇವ/ಬ್ರಹ್ಮ ; ಅನ್=ಅನ್ನು; ಆಡುತ್ತ=ನುಡಿಯುತ್ತ/ಹೇಳುತ್ತ; ಇಪ್ಪರು=ಇರುವರು/ಇದ್ದಾರೆ;

ಬರುಮಾತಿನ ಬೊಮ್ಮ=ಜಗತ್ತಿನಲ್ಲಿ ಎಲ್ಲಾ ಜೀವರಾಶಿಗಳ ಹುಟ್ಟು, ಬೆಳವಣಿಗೆ, ಬಾಳು ಮತ್ತು ಸಾವಿಗೆ ಕಾರಣನಾದವನು ಬ್ರಹ್ಮನೆಂಬ ದೇವ. ಆದ್ದರಿಂದ ಮಾನವರೆಲ್ಲರ ನಡೆನುಡಿಗಳೆಲ್ಲವೂ ಬ್ರಹ್ಮದೇವನ ಆಣತಿಯಂತೆ ನಡೆಯುತ್ತಿವೆ. ಮಾನವ ಸಮುದಾಯದ ನೋವು ನಲಿವಿಗೆ ಮತ್ತು ಏಳು ಬೀಳುಗಳಿಗೆ ಹಣೆ ಬರಹ, ವಿದಿ ಬರಹ ಮತ್ತು ಹಿಂದಿನ ಜನ್ಮದ ಪಾಪ ಪುಣ್ಯಗಳೇ ಕಾರಣವೆಂಬ ನಂಬಿಕೆಯನ್ನು ಜನಮನದಲ್ಲಿ ಬಿತ್ತುವ ನುಡಿಗಳು;

ಇಂತಹ ನುಡಿಗಳಿಂದ ಜನರ ಬದುಕಿಗೆ ಏನೊಂದು ಬಗೆಯಲ್ಲೂ ಒಳಿತಾಗುವುದಿಲ್ಲ. ಏಕೆಂದರೆ ಮಾನವ ಸಮುದಾಯದ ಹಸಿವು, ಬಡತನ ಮತ್ತು ಸಂಕಟದ ಜೀವನಕ್ಕೆ ನಿಸರ‍್ಗ ಹಾಗೂ ಮಾನವರ ನಡೆನುಡಿಗಳು ಹೇಗೆ ಕಾರಣವಾಗುತ್ತವೆ ಮತ್ತು ಅವನ್ನು ಪರಿಹರಿಸುವ ಹಾದಿ ಯಾವುದು ಎಂಬುದನ್ನು ತಿಳಿಯದಂತೆ ತಡೆಗಟ್ಟುತ್ತವೆ. ಮಾನವರು ತಮ್ಮ ಜೀವನದ ದುರಂತಕ್ಕೆ ಬ್ರಹ್ಮ ಇಲ್ಲವೇ ದೇವರು ಕಾರಣನೆಂಬ ನಂಬಿಕೆಗೆ ಒಳಗಾಗಿ , ತಮ್ಮ ಪಾಲಿನ ಹೊಣೆಗಾರಿಕೆಯನ್ನೇ ಮರೆಯುತ್ತಾರೆ.

ಒತ್ತಿ ಹಣ್ಣ ಮಾಡಿದಡೆ
ಅದೆತ್ತಣ ರುಚಿಯಪ್ಪುದೋ. (646-188)

( ಒತ್ತು=ಅದುಮು/ಹಿಸುಕು/ಅಮುಕು; ಹಣ್ಣು=ರಸದಿಂದ ಕೂಡಿ ಚೆನ್ನಾಗಿ ಮಾಗಿರುವ ಬೆಳೆ; ಮಾಡಿದಡೆ=ಮಾಡಿದರೆ;

ಒತ್ತಿ ಹಣ್ಣ ಮಾಡಿದಡೆ=ಕಾಯಿಯಾಗಿರುವುದನ್ನು ಕಿತ್ತು ತಂದು, ವ್ಯಕ್ತಿಯು ತನ್ನ ಎರಡು ಅಂಗಯ್ ನಡುವೆ ಅದನ್ನು ಇಟ್ಟುಕೊಂಡು ಬಲವಾಗಿ ಅಮುಕುವುದರಿಂದ ಹುಳಿಯಾಗಿರುವ ಕಾಯಿ, ಸಿಹಿ ರಸದಿಂದ ತುಂಬಿದ ಹಣ್ಣಾಗುವುದಿಲ್ಲ. ಏಕೆಂದರೆ ಮರ/ಗಿಡದ ಬೇರುಗಳಿಂದ ಸಾರವನ್ನು ಹೀರಿಕೊಂಡು ಕಾಯಿ ದೊಡ್ಡದಾಗುತ್ತ, ಕಾಲಕ್ರಮೇಣ ಹಣ್ಣಾದಾಗ ಮಾತ್ರ ಅದರಲ್ಲಿ ರಸ ತುಂಬುತ್ತದೆ. ಈ ರೀತಿ ಒಂದು ಕಾಯಿ ಹಣ್ಣಾಗಲು ಕಾಲ ಮತ್ತು ನಿಸರ‍್ಗದ ಕ್ರಿಯೆಗಳು ಅಗತ್ಯ;

ಅದು+ಎತ್ತಣ; ಅದು=ಆ ರೀತಿ ಹಿಸುಕಿದ ಕಾಯಿ; ಎತ್ತಣ=ಯಾವ ಬಗೆಯಿಂದ/ರೀತಿಯಿಂದ; ರುಚಿ+ಅಪ್ಪುದೋ; ರುಚಿ=ಸವಿ/ಹಿತ. ಮಾನವರು ತಿನ್ನುವ, ಕುಡಿಯುವ ಮತ್ತು ಉಣ್ಣುವ ವಸ್ತುಗಳಲ್ಲಿ ಉಪ್ಪು/ಹುಳಿ/ಕಾರ/ಸಿಹಿ/ಕಹಿ/ಒಗರು ಎಂಬ ಆರು ಬಗೆಯ ರಸಗಳನ್ನು ರುಚಿಯೆಂದು ಕರೆಯುತ್ತಾರೆ; ಅಪ್ಪುದೋ=ಆಗುವುದೋ/ಆಗುತ್ತದೆಯೇ;

ಅದೆತ್ತಣ ರುಚಿಯಪ್ಪುದೋ=ಹೇಗೆ ತಾನೆ ರುಚಿಯಾದ ಹಣ್ಣಾಗುತ್ತದೆ;

ಯಾವುದೇ ಒಂದು ಕೆಲಸವನ್ನು ಸರಿಯಾಗಿ ಮಾಡಬೇಕಾದರೆ, ಅದನ್ನು ಹಂತ ಹಂತವಾಗಿ ಮಾಡಬೇಕು. ಅದನ್ನು ಬಿಟ್ಟು, ಕಯ್ಗೊಂಡ ಕೂಡಲೇ ಮಾಡಿ ಮುಗಿಸಿ ನಲಿವನ್ನು ಪಡೆಯಬೇಕೆಂದು ಆತುರಪಟ್ಟರೆ ಕೆಲಸವು ಹದಗೆಡುತ್ತದೆಯಲ್ಲದೆ , ಅದರಿಂದ ಯಾವ ಪ್ರಯೋಜನವೂ ದೊರೆಯುವುದಿಲ್ಲ. )

( ಚಿತ್ರ ಸೆಲೆ: lingayatreligion.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.