ಇದು ಮೆಕ್ಕೆಜೋಳದ ಕತೆ!

– ಮಾರಿಸನ್ ಮನೋಹರ್.

ಮೆಕ್ಕೆಜೋಳ, corn

ನಮ್ಮ ನೆಂಟರೊಬ್ಬರ ಮನೆಯಲ್ಲಿ ಚಿಕ್ಕವನಿದ್ದಾಗ ಮೆಕ್ಕೆಜೋಳದ ರೊಟ್ಟಿ, ಅದರ ಜೊತೆಗೆ ಟೊಮೆಟೊ ಚಟ್ನಿ ತಿಂದಿದ್ದೆ. ಅದರ ರುಚಿ ತುಂಬಾ ಚೆನ್ನಾಗಿತ್ತು. ಅವರ ಮನೆಯಲ್ಲಿ ಇದ್ದ ಒಬ್ಬ ಅಜ್ಜಿ ಒಲೆಯ ಮೇಲೆ ಮೆಕ್ಕೆಜೋಳದ ರೊಟ್ಟಿ ಮಾಡಿ ಅದನ್ನು ಮತ್ತೆ ಕೆಂಡದ ಮೇಲೆ ಸುಟ್ಟು ಕುರುಂಕುರುಂ ಅನ್ನೋ ಹಾಗೆ ಮಾಡಿ ತಿನ್ನಲು ಕೊಟ್ಟಿದ್ದರು. ಮೊದಲ ಬಾರಿಗೆ ನಾನು ಮೆಕ್ಕೆಜೋಳದಿಂದ ರೊಟ್ಟಿ ಮಾಡಿದ್ದು ನೋಡಿದ್ದೆ! ಅದಾದ ಮೇಲೆ ನಾನು ಯಾರೂ ಮೆಕ್ಕೆಜೋಳದ ರೊಟ್ಟಿ ಮಾಡಿದ್ದು ನೋಡಿಲ್ಲ. ದೇಶದಲ್ಲಿ ಬರಗಾಲ ಬಿದ್ದಿದ್ದಾಗ ಅವರು ಹೊರನಾಡಿನಿಂದ ಇಂಡಿಯಾಕ್ಕೆ ಆಮದಾಗಿದ್ದ ಮೆಕ್ಕೆಜೋಳವನ್ನು ಬಳಸಿದ್ದರು ಅಂತ ಅಜ್ಜಿ ಹೇಳಿದ್ದಳು. ಇದಕ್ಕೆ ‘ಪರಂಗಿ ಜೋಳ’ ಅಂತಲೂ ಹೆಸರು ಬಂದಿದ್ದು ಹೀಗೆಯೇ. ಮೆಕ್ಕೆ, ಮೆಕ್ಕೆತೆನೆ, ಮೆಕ್ಕೆಜೋಳ, ಕಾರ‍್ನ್, ಮೇಜ್, ಬುಟ್ಟಾ ಎಂದೆಲ್ಲಾ ಕರೆಸಿಕೊಳ್ಳುವ ಇದು ಬೇಸಾಯ ಮತ್ತು ಉತ್ಪಾದನೆಯಲ್ಲಿ ಅಕ್ಕಿ-ಗೋದಿಯನ್ನೂ ಹಿಂದಿಕ್ಕಿದೆ!

ತಿಂದವನೇ ಬಲ್ಲ ಸುಟ್ಟ ಮೆಕ್ಕೆಜೋಳದ ಸವಿ!

ಮಳೆ ಬೀಳುತ್ತಿರುವಾಗ ಮತ್ತು ಚುಮುಚುಮು ಚಳಿಯಲ್ಲಿ ಸುಟ್ಟ ಮೆಕ್ಕೆತೆನೆಗಳನ್ನು ತಿನ್ನುವದು ಬದುಕಿನ ಮರೆಯಲಾಗದ ಅನುಬವಗಳಲ್ಲಿ ಒಂದು. ಹಾದಿಬದಿಯಲ್ಲಿ ಬಂಡಿಯ ಮೇಲೆ ಅವನು ಕೆಂಡದ ಮೇಲೆ ಮೆಕ್ಕೆತೆನೆಗಳನ್ನು ಇಟ್ಟು ರಟ್ಟಿನಿಂದ ಗಾಳಿ ಹಾಕುತ್ತಾ ಸುಡುತ್ತಾನೆ. ಆಮೇಲೆ ಸುಟ್ಟ ಮೆಕ್ಕೆತನೆಗಳ ಮೇಲೆ ಉಪ್ಪು-ಮಸಾಲೆ ಸವರಿ ಅದರ ಮೇಲೆ ನಿಂಬೆಹಣ್ಣು ಉಜ್ಜಿ ಕೊಡುತ್ತಾನೆ. ಇದನ್ನೇ ‘ಬುಟ್ಟಾ’ ಅಂತ ಕರೆಯುತ್ತಾರೆ. ಬಾಯಲ್ಲಿ ಕಚ್ಚಿ ಮೆಕ್ಕೆತೆನೆಗಳ ಕಾಳುಗಳನ್ನು ಬಿಡಿಸಿ ತಿನ್ನುವಾಗ ನಾಲಿಗೆಗೆ ಉಪ್ಪು ಹುಳಿ ಮಸಾಲೆ ಸಿಹಿ ರುಚಿ ಹತ್ತಿ ಕೊಡುವ ಆನಂದ ಪದಗಳಲ್ಲಿ ಬರೆಯಲು ಆಗದು. ಮೆಕ್ಕೆಜೋಳದ ಕಾಳುಗಳಿಗೆ ಸಿಹಿ ರುಚಿಯಿದೆ. ತೆಂಕಣ ಕನ್ನಡನಾಡಿನ ಕಡೆಗೆ ಮೆಕ್ಕೆತೆನೆಗಳನಶ್ಟೇ ಸುಟ್ಟು ತಿನ್ನುವದಿಲ್ಲ, ಬೇರೆ ಕಾಳುಗಳ ತೆನೆಗಳನ್ನೂ ಕೆಂಡದ ಮೇಲೆ ಸುಟ್ಟು ತಿನ್ನುತ್ತಾರೆ. ಎಳೆಯ ಜೋಳದ ತೆನೆಗಳನ್ನು ಕೆಂಡದ ಮೇಲೆ ಇಲ್ಲವೇ ಸುಡುಸುಡು ಬೂದಿಯಲ್ಲಿ ಹೂತು, ಸುಟ್ಟು ಆಮೇಲೆ ಅದರಿಂದ ಜೋಳದ ಕಾಳನ್ನು ಬಿಡಿಸಿ ಅದರ ಜೊತೆ ಸಕ್ಕರೆ ಸೇರಿಸಿ ತಿನ್ನುತ್ತಾರೆ ಇದೇ ‘ಸೀತನಿ’ (ಸಿಹಿತೆನೆಯ ಆಡುರೂಪ). ಇದೇ ತರಹ ಸಜ್ಜೆಯ ತೆನೆಗಳನ್ನೂ ಸುಟ್ಟು ತಿನ್ನುತ್ತಾರೆ. ಅದು ‘ಸಜ್ಜೆ ಸೀತನಿ’ ಆಗುತ್ತದೆ. ಗೋದಿಯ ಎಳೆಯ ತೆನೆಗಳನ್ನು ಸುಟ್ಟು ತಿನ್ನುತ್ತಾರೆ ಇದನ್ನು ‘ಉಮ್ಮಗೀ’ (ಉಮ್ಮಿಗೆ ಎಂಬ ಹಳೆಗನ್ನಡ ಪದದ ಆಡುರೂಪ) ಎನ್ನುತ್ತಾರೆ. ಆದರೆ ಇಡೀ ಇಂಡಿಯಾದಲ್ಲಿ ತುಂಬಾ ಪಾಪುಲರ್ ಆಗಿರುವದು ಸುಟ್ಟ ಮೆಕ್ಕೆತೆನೆ ಅಂದರೆ ಬುಟ್ಟಾ.

ಹಳ್ಳಿಯಿಂದ ಕೆಲವು ಸಲ ಹತ್ತು-ಹದಿನೈದು ಮೆಕ್ಕೆತೆನೆಗಳನ್ನು ತರುತ್ತಿದ್ದರು. ಆಗ ನಮಗೆ ಕುಶಿಯೋ ಕುಶಿ! ಮೆಕ್ಕೆತೆನೆಗಳ ಮೇಲಿನ ಮುಚ್ಚುಪೊರೆಯನ್ನು ತೆಗೆದುಹಾಕಿ ಕಾಳಿನ ಸಾಲಿನ ಮೇಲೆ ಇರುತ್ತಿದ್ದ ಕಂದು ಎಳೆಗಳನ್ನು ಕಿತ್ತುತ್ತಿದ್ದೆವು. ಅವುಗಳನ್ನು ಮತ್ತೊಬ್ಬರ ತಲೆಯ ಮೇಲೆ ಹಾಕಿ “ನೀನು ಮುದುಕನಾಗಿಬಿಟ್ಟೆ” ಅಂತ ಕೀಟಲೆ ಮಾಡುತ್ತಿದ್ದೆವು. ಪೊರೆತೆಗೆದ ಮೇಲೆ ಮೆಕ್ಕೆತೆನೆಗಳನ್ನು ಎರಡು ತುಂಡಾಗಿ ಮುರಿದು, ಉಪ್ಪು ಬೆರೆಸಿ ಕುದಿಯಲು ಹಾಕುತ್ತಿದ್ದರು. ಚಿಕ್ಕವರಿಗೆ ಕುದಿಸಿದ ಮೆಕ್ಕೆತೆನೆ ಮತ್ತು ದೊಡ್ಡವರಿಗೆ ಸುಟ್ಟ ಮೆಕ್ಕೆತೆನೆ ಅಂತ ಮಾಡುತ್ತಿದ್ದರು. ಮಕ್ಕಳಿಗೆ ಸುಟ್ಟ ಮೆಕ್ಕೆತೆನೆ ಬಿರುಸಾಗಿ ಹೊಟ್ಟೆಯಲ್ಲಿ ಅರಗದು ಎಂದು ಹಾಗೆ ಮಾಡುತ್ತಿದ್ದರು. ಮೆಕ್ಕೆಜೋಳದ ಕಾಳಿನ ಹೊರಸುತ್ತು (seed coat) ತುಂಬಾ ಬಿರುಸಾಗಿ ಇದ್ದು ಬೇಗನೆ ಅರಗದು. ಇದೇ ನೆಪಕ್ಕೆ ಮೆಕ್ಕೆಜೋಳದ ಇಡಿಕಾಳು (wholegrain) ಹಿಟ್ಟನ್ನು ಬಳಕೆ ಮಾಡುವದಿಲ್ಲ. ಅದರ ಬದಲಿಗೆ ಕಾಳಿನ ಒಳಹಿಟ್ಟು (endosperm) ತೆಗೆದುಕೊಳ್ಳುತ್ತಾರೆ. ಇದೇ ಕಾರ‍್ನ್ ಪ್ಲೋರ್. ಗೋಬಿ ಮಂಚೂರಿಯನ್ ಮಾಡಲು ಇದನ್ನೇ ಬಳಸುತ್ತಾರೆ.

ಮೆಕ್ಕೆಜೋಳದಲ್ಲಿ ಆರು ಬಗೆಗಳು ಇವೆ

  1. ಕುಳಿ ಮೆಕ್ಕೆ/ಗುದ್ದು ಮೆಕ್ಕೆ (Dent corn)
  2. ಕಲ್ಲು ಮೆಕ್ಕೆ (Flint corn)
  3. ಜವೆ ಮೆಕ್ಕೆ (Pod corn)
  4. ಅರಳು ಮೆಕ್ಕೆ/ಮಂಡಕ್ಕಿ ಮೆಕ್ಕೆ (Pop corn)
  5. ಹಿಟ್ಟಿನ ಮೆಕ್ಕೆ (Flour corn)
  6. ಸಿಹಿ ಮೆಕ್ಕೆ (Sweet corn)

ಇವುಗಳ ಹೆಸರೇ ಎಲ್ಲವನ್ನೂ ಹೇಳುತ್ತವೆ. ಕಾಳಿನ ತಲೆ ಮೇಲೆ ಗುದ್ದಿದ ಹಾಗೆ ಕುಳಿ ಇರುವದರಿಂದ ಅದರ ತಳಿ ಕುಳಿ ಮೆಕ್ಕೆ. ಕಾಳಿನ ಹೊರಪೊರೆ (seed coat) ತುಂಬಾ ಬಿರುಸಾಗಿ ಕಲ್ಲಿನ ತರಹ ಇರುವದರಿಂದ ಅದು ಕಲ್ಲು (flint) ಮೆಕ್ಕೆ ಎಂದು ಹೆಸರು. ಅಡವಿ ಮೆಕ್ಕೆ ತರಹ ಕಾಣಿಸುವ ತಳಿಗೆ ಜವೆ ಮೆಕ್ಕೆ ಎಂದೂ ಅರಳು ಮಾಡಲು ಬಳಸುವ ಮೆಕ್ಕೆಗೆ ಮಂಡಕ್ಕಿ ಮೆಕ್ಕೆ ಹೀಗೆ. ಮೆಕ್ಕೆಜೋಳದ ಬಿತ್ತನೆ ಮಾಡಿ ಪೈರು ಬಂದಾಗ ಅದರಲ್ಲಿ ಗಂಡು ಮೆಕ್ಕೆಗಿಡ ಮತ್ತು ಹೆಣ್ಣು ಮೆಕ್ಕೆಗಿಡ ಇರುತ್ತವೆ, ದಾಸವಾಳ ಗಿಡಗಳಲ್ಲಿ ಇರುವ ಹಾಗೆ. ಬಹುತೇಕ ಮೆಕ್ಕೆಜೋಳ ಅರಿಶಿಣ ಬಣ್ಣದ ತಳಿಗಳು ಆಗಿರುತ್ತವೆ ಆದರೆ ಇದರಲ್ಲಿ ಕೆಂಪು-ಗುಲಾಬಿ-ಕಪ್ಪು-ಹಸಿರು ಮತ್ತು ಎಲ್ಲ ಬಣ್ಣ ಬೆರಕೆ ಇರುವ ತಳಿಗಳೂ ಇವೆ. ಒಂದೇ ಮೆಕ್ಕೆತನೆಯಲ್ಲಿ ಬೇರೆ ಬೇರೆ ಬಣ್ಣದ ಕಾಳುಗಳು ಇರುತ್ತವೆ ನೋಡಲು ತುಂಬಾ ಸುಂದರವಾಗಿರುತ್ತವೆ. ಸಿಹಿ ಮೆಕ್ಕೆಯನ್ನು ಬರ‍್ಬನ್ ವಿಸ್ಕೀ ಮಾಡಲು ಬಳಸುತ್ತಾರೆ. ಕುಳಿ ಮೆಕ್ಕೆಯನ್ನು ಸಿರಪ್ ಕಾರ‍್ನ್‌ಪ್ಲೋರ್ ಮತ್ತು ಇತೆನಾಲ್ ಮಾಡಲು ಬಳಸುತ್ತಾರೆ.

‘ಪಾಪ್‌ಕಾರ‍್ನ್’ ಅದೆಶ್ಟು ಪಾಪುಲರ‍್!

ಮೆಕ್ಕೆಜೋಳದ ಬಗ್ಗೆ ಮಾತಾಡುವಾಗ ‘ಪಾಪ್‌ಕಾರ‍್ನ್’ (ಮೆಕ್ಕೆ ಮಂಡಕ್ಕಿ) ಬಂದೇ ಬರುತ್ತದೆ. ಮೆಕ್ಕೆಜೋಳ ಹೆಸರಾಗಿರುವುದು ಪಾಪಕಾರ‍್ನಿನಿಂದಲೇ ಅಲ್ಲವೇ! ಎರಡನೇ ದೊಡ್ಡ ಕಾದಾಟದ (WW2) ದೆಸೆಯಿಂದ ಅಮೆರಿಕ ರಾಜ್ಯಗಳಲ್ಲಿ ಸಕ್ಕರೆಯು ದೊರಕದಾಯ್ತು. ಇದರಿಂದ ಕ್ಯಾಂಡಿ ಮುಂತಾದ ಸಿಹಿತಿಂಡಿ ಮಾಡುವದು ತುಟ್ಟಿಯಾಗಿ ಮಂದಿ ಪಾಪ್‌ಕಾರ‍್ನ್ ಕಡೆಗೆ ತಿರುಗಿದರು. ಸಿನಿಮಾ ಮನೆಗಳಲ್ಲಿ ಪಾಪ್‌ಕಾರ‍್ನ್ ತಿನ್ನುವದು ಪ್ಯಾಶನ್ ಆಯಿತು. ಮಂದಿ ಇಶ್ಟಪಟ್ಟು ಪಾಪ್‌ಕಾರ‍್ನ್ ತಿನ್ನುತ್ತಿದ್ದರಿಂದ ಅದರ ಬೇಡಿಕೆ ಮತ್ತು ಪೂರೈಕೆ ತುಂಬಾ ಹೆಚ್ಚಾಯಿತು. ಮೊದಮೊದಲು ಅಮೆರಿಕದ ತೇಟರುಗಳ ಮಾಲೀಕರು ಅಲ್ಲಿ ಪಾಪ್‌ಕಾರ‍್ನ್ ಮಾರುವವರನ್ನು ತಡೆಯುತ್ತಿದ್ದರು. ಆದರೆ ಮಂದಿಯ ಇಶ್ಟಕ್ಕೆ ಮಣಿದು ಮುಂದೆ ಅವರೇ ತೇಟರುಗಳಲ್ಲಿ ಪಾಪ್‌ಕಾರ‍್ನ್ ಮಾಡುವ ಅಂಗಡಿಗಳನ್ನು ತೆರೆದರು! ಹೀಗೆ ಪಾಪ್‌ಕಾರ‍್ನ್ ಜಗತ್ತಿನ ಎಲ್ಲ ಕಡೆ ಪ್ರಸಿದ್ದವಾಗುತ್ತಾ ಹೋಯಿತು. ಈಗ ಸಿನಿಮಾ ಮನೆಗಳಲ್ಲಿ ಪಾಪ್‌ಕಾರ‍್ನ್ ತಿನ್ನುತ್ತಾ ಓಡುತಿಟ್ಟ ನೋಡದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಅಶ್ಟು ನಮಗೆ ಪಾಪ್‌ಕಾರ‍್ನ್ ಬೇಕೇ ಬೇಕು.

ಮೆಕ್ಸಿಕೋದ ಎಲ್ಲ ಅಡುಗೆಗಳಲ್ಲಿ ಮೆಕ್ಕೆಜೋಳದ ಬಳಕೆಯಿದೆ. ಮೆಕ್ಕೆಜೋಳದಿಂದ ಮಾಡಿದ ‘ಟೋರ‍್ಟಿಯಾ’(tortilla) ಅವರ ನಾಡಿನುಣಿಸು. ಈ ನಾಡಿನಲ್ಲಿ ಮೆಕ್ಕೆಜೋಳದ ಬಳಕೆ ಎಶ್ಟು ವ್ಯಾಪಕವಾಗಿದೆ ಅಂದರೆ ಮೆಕ್ಸಿಕೋ ಅನ್ನುವದಕ್ಕಿಂತ ಮೆಕ್ಕೆಕೋ ಅಂದರೆ ಸರಿಯಾದೀತು!

ಜಗತ್ತಿನ ಮೂಲೆ ಮೂಲೆಗೂ ಹರಡಿದ ಮೆಕ್ಕೆಜೋಳ

ಪೋರ‍್ಚುಗೀಸರು ಮೊದಲ ಸಲ ಅಮೆರಿಕಗೆ ಹೋದಾಗ ಅಲ್ಲಿನ ಮೆಕ್ಸಿಕೊ ದೇಶದಲ್ಲಿ ಮೆಕ್ಕೆಜೋಳದ ಬೇಸಾಯ ಮಾಡುವನ್ನು ಕಂಡರು. ಅಲ್ಲಿಂದ ಮೆಕ್ಕೆಜೋಳವನ್ನು ಪೋರ‍್ಚುಗೀಸರು ಯುರೋಪಿನ ನಾಡುಗಳಿಗೂ ಮತ್ತು ಇಂಡಿಯಾಕ್ಕೂ ತಂದರು. ಹೀಗೆ ಜಗತ್ತಿನ ಉದ್ದಕ್ಕೂ ಮೆಕ್ಕೆಜೋಳದ ಬೇಸಾಯ ಶುರುವಾಯಿತು. 2014ರಲ್ಲಿ ಜಗತ್ತಿನ ಮೆಕ್ಕೆಜೋಳದ ಒಕ್ಕಣೆ 1.04 ಬಿಲಿಯನ್ ಟನ್ನುಗಳಶ್ಟು ಆಗಿದೆ! ಇದರಲ್ಲಿ 40% ಪಾಲು ಇತೆನಾಲ್ ಮಾಡಲು ಹೋಗುತ್ತದೆ. ಎಲ್ಲಕ್ಕಿಂತ ಹೆಚ್ಚು ಮೆಕ್ಕೆಜೋಳ ಒಕ್ಕಣೆ ಮಾಡುವ ನಾಡುಗಳಲ್ಲಿ ಮೊದಲ ಸ್ತಾನ‌ ಅಮೆರಿಕ ರಾಜ್ಯಗಳದ್ದು.ಇಲ್ಲಿ ಬೆಳೆಯಲಾಗುವ ಮೆಕ್ಕೆಜೋಳದಲ್ಲಿ 85% ತಳಿ ಸುದಾರಿತ (GM-Genetically Modified) ಆಗಿವೆ. 2017 ರಲ್ಲಿ 1.13 ಬಿಲಿಯನ್ ಟನ್ನುಗಳಶ್ಟು ಮೆಕ್ಕೆಜೋಳ ಜಗತ್ತಿನ ಉದ್ದಕ್ಕೂ ಒಕ್ಕಲು ಆಗಿದೆ. ಇದರಲ್ಲಿ ಅಮೆರಿಕ ರಾಜ್ಯಗಳು 33% ಒಕ್ಕಣೆ ಮಾಡಿದರೆ ಚೀನಾ 23% ಮೆಕ್ಕೆಜೋಳದ ಒಕ್ಕಣೆ ಮಾಡಿ ಎರಡನೇ ಸ್ತಾನದಲ್ಲಿದೆ. ಇಂಡಿಯಾ ಒಕ್ಕೂಟ 28.7 ಮಿಲಿಯನ್ ಟನ್ ಒಕ್ಕಣೆ ಮಾಡಿ ಐದನೇ ಸ್ತಾನದಲ್ಲಿ ಇದೆ. ಮೆಕ್ಕೆಜೋಳದ ಬೇಸಾಯ ಮತ್ತು ಒಕ್ಕಣೆ ಮಳೆಗಾಲದಿಂದ ಮಳೆಗಾಲಕ್ಕೆ 11% ರೇಟಿನಲ್ಲಿ ಹೆಚ್ಚಾಗುತ್ತಲೇ ಹೋಗುತ್ತಿದೆ! ಇದಕ್ಕೆ ಮೆಕ್ಕೆಜೋಳ ಇತೆನಾಲ್ ಉತ್ಪಾದನೆಯಲ್ಲಿ ಬಳಸುತ್ತಿರುವದು ಕಾರಣವಾಗಿದೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: