ಜೆನ್ ಕತೆ : ಸರಿ ಮತ್ತು ತಪ್ಪು

–  ಕೆ.ವಿ. ಶಶಿದರ.

ಜೆನ್ ಸನ್ಯಾಸಿ, zen monk

ಜೆನ್ ಗುರು ಬ್ಯಾಂಕಿ, ದ್ಯಾನ ಶಿಬಿರವನ್ನು ತನ್ನ ಆಶ್ರಮದಲ್ಲಿ ಆಯೋಜಿಸಿದಾಗ ಜಪಾನ್ ದೇಶದ ಮೂಲೆ ಮೂಲೆಗಳಿಂದ ವಿದ್ಯಾರ‍್ತಿಗಳು ಬಾಗವಹಿಸಲು ಬಂದಿದ್ದರು. ಈ ಶಿಬಿರಕ್ಕೆ ಬಂದಿದ್ದ ಅನೇಕ ವಿದ್ಯಾರ‍್ತಿಗಳ ಪೈಕಿ ಒಬ್ಬಾತನಿಗೆ ಕದಿಯುವ ಚಟ ಇತ್ತು. ಇದನ್ನು ಗಮನಿಸಿದ ಉಳಿದ ವಿದ್ಯಾರ‍್ತಿಗಳು, ಗುರು ಬ್ಯಾಂಕಿಯ ಬಳಿ ಆ ‘ಕಳ್ಳ ವಿದ್ಯಾರ‍್ತಿಯನ್ನು ಶಿಬಿರದಿಂದ ಹೊರಹಾಕುವಂತೆ, ಇಲ್ಲದಿದ್ದಲ್ಲಿ ಸಹವಾಸ ದೋಶದಿಂದ ಮತ್ತಶ್ಟು ಕಳ್ಳರು ಹುಟ್ಟಬಹುದು’ ಎಂದು ಮನವಿ ಮಾಡಿದರು. ಗುರು ಬ್ಯಾಂಕಿ ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಸಿಕೊಳ್ಳದೆ ನಿರ‍್ಲಕ್ಶ್ಯ ತೋರಿದರು. ದಿನಗಳೆದಂತೆ ಆ ವಿದ್ಯಾರ‍್ತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಮತ್ತೊಮ್ಮೆ ಆತ ಕದಿಯುವ ಕ್ರುತ್ಯ ಎಸಗುವಾಗ ಸಿಕ್ಕಿಬಿದ್ದ. ಉಳಿದ ವಿದ್ಯಾರ‍್ತಿ ಸಮೂಹವೇ ಬ್ಯಾಂಕಿ ಬಳಿ ತೆರಳಿ, ಅವನನ್ನು ಶಿಬಿರದಿಂದ ಹೊರಹಾಕುವಂತೆ ಮತ್ತೆ ಮನವಿ ಮಾಡಿದರು. ಈ ಮನವಿಯೂ ಸಹ ‘ಕಿವುಡು ಕಿವಿಯ ಮೇಲೆ ಬಿದ್ದಂತೆ’ ಆಯಿತು. ಅವರುಗಳ ಮಾತನ್ನು ಕಡೆಗಣಿಸಿದರು ಜೆನ್ ಗುರು ಬ್ಯಾಂಕಿ.

ಗುರುಗಳು ಎಲ್ಲಾ ವಿದ್ಯಾರ‍್ತಿಗಳ ಮನವಿಗೆ ಕಿಲುಬು ಕಾಸು ಬೆಲೆ ಕೊಡಲಿಲ್ಲ ಎಂಬ ಹುಚ್ಚು ದೈರ‍್ಯ ಸಹ ಆ ವಿದ್ಯಾರ‍್ತಿಯಲ್ಲಿ ಇದೇ ಕಸುಬನ್ನು ಮುಂದುವರೆಸಲು ಇಂಬುಕೊಟ್ಟಿತು. ಪದೇ ಪದೇ ಇದೇ ರೀತಿಯ ಗಟನೆ ಮರುಕಳಿಸಿದಾಗ ವಿದ್ಯಾರ‍್ತಿಗಳಲ್ಲಿ ಹತಾಶ ಮನೋಬಾವ ಬೆಳೆಯಿತು. ಕೊನೆಗೆ ಎಲ್ಲರೂ ಗುರುಗಳ ಬಳಿ ಹೋಗಿ ‘ಆತನನ್ನು ವಜಾಗೊಳಿಸುವಂತೆ ಮನವಿ ನೀಡಿದರು. ಈ ಬಾರಿಯೂ ತಮ್ಮ ಅಹವಾಲಿಗೆ ಸ್ಪಂದಿಸದಿದ್ದಲ್ಲಿ, ವಿದಿಯಿಲ್ಲದೆ ನಾವುಗಳೇ ಶಿಬಿರದಿಂದ ಹೊರ ಹೋಗುವುದಾಗಿ’ ಗುರುವಿನಲ್ಲಿ ಬೇಡಿಕೆಯನ್ನು ಅರ‍್ಜಿ ಮೂಲಕ ಸಲ್ಲಿಸಿದರು.

ಅರ‍್ಜಿಯನ್ನು ಓದಿದ ಗುರುಗಳು, ಎಲ್ಲಾ ವಿದ್ಯಾರ‍್ತಿಗಳನ್ನು ಕರೆದು, ಎಲ್ಲರ ಸಮ್ಮುಕದಲ್ಲಿ ‘ತಾವು ನೀಡಿರುವ ಅರ‍್ಜಿಯನ್ನು ಗಮನಿಸಿದೆ. ನೀವೆಲ್ಲಾ ಬುದ್ದಿವಂತರು. ನಿಮಗೆ ಯಾವುದು ಸರಿ ಯಾವುದು ತಪ್ಪು ಎಂಬ ತಿಳುವಳಿಕೆ ಚೆನ್ನಾಗಿದೆ. ತಾವೆಲ್ಲಾ ಪ್ರಬುದ್ದರಾಗಿದ್ದೀರಿ. ಹಾಗಾಗಿ ತಾವುಗಳು ಬಯಸಿದರೆ, ಬೇರಾವುದೇ ಗುರುಕುಲಕ್ಕೆ ಅದ್ಯಯನಕ್ಕಾಗಿ ಹೋಗಬಹುದು. ಅಲ್ಲಿ ನಿಮಗೆ ಸ್ತಳಾವಕಾಶ ಕಂಡಿತಾ ಸಿಗುತ್ತದೆ. ಆದರೆ ನಿಮ್ಮ ಈ ಸಹೋದರನಿಗೆ, ಯಾವುದು ತಪ್ಪು ಯಾವುದು ಸರಿ ಎಂಬ ತಿಳುವಳಿಕೆ ಇಲ್ಲ. ಈ ಸ್ತಿತಿಯಲ್ಲಿ ಅವ ಎಲ್ಲಿ ತಾನೇ ಹೋಗಿ ವಿದ್ಯೆ ಕಲಿಯಲು ಸಾದ್ಯ? ಯಾವ ಗುರುಕುಲದಲ್ಲಿ ಆತನಿಗೆ ಜಾಗ ಸಿಕ್ಕಾತು? ಮೇಲಾಗಿ ಆತನನ್ನು ಕಳ್ಳತನದ ಆರೋಪ ಹೊರೆಸಿ, ಈ ಶಿಬಿರದಿಂದ ಹೊರ ಹಾಕಿದರೆ ಬೇರಾವ ಗುರುಕುಲದಲ್ಲಿ ತಾನೆ ಆತನಿಗೆ ಸ್ತಳಾವಕಾಶ ಸಿಗುತ್ತದೆ? ನೀವುಗಳೆಲ್ಲಾ ಹೋದರೂ ಸರಿ, ನಾನು ಆತನನ್ನು ಇಲ್ಲಿಯೇ ಉಳಿಸಿಕೊಂಡು ‘ಯಾವುದು ತಪ್ಪು ಯಾವುದು ಸರಿ’ ಎಂಬ ಅಂಶವನ್ನು ತಿಳಿಸಿಕೊಡುವ ಜವಾಬ್ದಾರಿ ಹೊರುವೆ. ಅವನಿಗೆ ನಾನಲ್ಲದೆ ಮತ್ತಾರು ತಿಳಿಸಿಕೊಡಬೇಕು? ಬುದ್ದಿವಂತ ವಿದ್ಯಾರ‍್ತಿಗಳೇ ನೀವೇ ಯೋಚಿಸಿ ಹೇಳಿ’ ಎಂದು ತಮ್ಮ ಮನದ ಇಂಗಿತವನ್ನು ಎಲ್ಲಾ ವಿದ್ಯಾರ‍್ತಿಗಳಿಗೆ ಮನಮುಟ್ಟುವಂತೆ ಹೇಳಿದರು.

ಬ್ಯಾಂಕಿ ಗುರುಗಳ ವಿವರಣೆ ಕೇಳುತ್ತಿದ್ದ, ಕಳ್ಳತನ ಮಾಡಿದ್ದ ಆ ವಿದ್ಯಾರ‍್ತಿಯ ಕಣ್ಣಿನಿಂದ ನೀರು ಪ್ರವಾಹದಂತೆ ಹರಿದು ಬಂತು. ತಾನು ಎಸಗಿದ್ದ ತಪ್ಪನ್ನೆಲ್ಲಾ ಅದು ಸ್ವಚ್ಚವಾಗಿ ತೊಡೆದು ಹಾಕಿತ್ತು. ಅವನಲ್ಲಿ ಮನೆ ಮಾಡಿದ್ದ ಕದಿಯುವ ಆಸೆ ಮಾಯವಾಗಿತ್ತು. ಆತ ಪೂರ‍್ಣ ಶುದ್ದೀಕರಣಗೊಂಡು ಹೊಸ ವಿದ್ಯಾರ‍್ತಿಯಾಗಿದ್ದ.

ಈ ಕತೆ ತುಂಬಾ ಸರಳವಾಗಿ ಕಂಡರೂ, ಜೆನ್ ಗುರು ಬ್ಯಾಂಕಿಯ ನಡವಳಿಕೆಯನ್ನು ಯೋಚನೆಗೆ ಹಚ್ಚುವುದರಲ್ಲಿ ಹಿಂದೆ ಬೀಳುವುದಿಲ್ಲ. ಈ ಕತೆಯಲ್ಲಿ, ಎಲ್ಲಾ ಸಾಮಾನ್ಯರಂತೆ ಅಲ್ಲಿನ ಇತರೆ ವಿದ್ಯಾರ‍್ತಿಗಳೂ ಯೋಚಿಸಿದ್ದರು. ಕಳ್ಳತನ ಮಾಡಿದ ವಿದ್ಯಾರ‍್ತಿಯನ್ನು ನೋಡುವ ದ್ರುಶ್ಟಿಯೇ ಬೇರಿತ್ತು. ಆದರೆ ಕೊಂಚ ಆಳವಾಗಿ ಅಬ್ಯಸಿಸಿದರೆ, ಕಳ್ಳತನ ಮಾಡಿದ ಆ ವಿದ್ಯಾರ‍್ತಿಯ ಒಳಗೆ ಮತ್ತೊಬ್ಬ ವಿದ್ಯಾರ‍್ತಿ ಇದ್ದ. ಆತನನ್ನು ಹೊರಗೆ ತರುವ ಗುರುತರ ಜವಾಬ್ದಾರಿ, ಸರಿಯಾದ ಸರಳ ಮಾರ‍್ಗವನ್ನು ತೋರಿಸಿ ಆತನನ್ನು ಸರಿದಾರಿಗೆ ತರುವ ಹೊಣೆಗಾರಿಕೆ ಆತನ ಗುರುವಾದ ಬ್ಯಾಂಕಿಯ ಮೇಲಿತ್ತು. ಸಹಾನುಬೂತಿಯನ್ನು ವ್ಯಕ್ತಪಡಿಸುವುದು ಅಶ್ಟು ಸುಲಬವಲ್ಲ. ಅದಕ್ಕೆ ಮರುಗುವ ಹ್ರುದಯ, ಇನ್ನೊಬ್ಬರ ಕಶ್ಟ, ಸಂಕಶ್ಟ ಅರಿಯುವ ಶಕ್ತಿಬೇಕು. ಬಿದ್ದವರ ಮೇಲೆ ಆಳಿಗೊಂದು ಕಲ್ಲು ಹಾಕುವ ಇಂದಿನ ಸಮಾಜದಲ್ಲಿ, ಇನ್ನೊಬ್ಬರ ಕಶ್ಟಕ್ಕೆ ತುಡಿಯುವ ಮನಸ್ತಿತಿಯವರು ಸಿಗುವುದು ಬಹಳ ವಿರಳ. ಇಂತಹ ಸಣ್ಣ ಪುಟ್ಟ ಅಪರಾದ ಮಾಡುವವರಿಗೆ ತಪ್ಪು ಸರಿಯ ಬಗ್ಗೆ ತಿಳಿಯಲು ಮಾನವೀಯ ಮೌಲ್ಯಗಳ ಸಹಾಯ ಅಗತ್ಯ ಬೇಕಿದೆ.

ನಮಗೆ ಪ್ರೀತಿ ಪಾತ್ರರಾದವರು, ಯಾವುದೋ ವಿಶ ಗಳಿಗೆಯಲ್ಲಿ, ಇಂತಹ ಅಚಾತುರ‍್ಯದ ಕೆಲಸ ಎಸಗಿದ್ದರೆ, ಅವರನ್ನು ತಿದ್ದುವ ಕೆಲಸ, ಆಪ್ತ ಸಲಹೆಯಿಂದ, ಅವರ ಮನದಲ್ಲಿ ಮೂಡಿದ್ದ ಕೆಟ್ಟ ಬಾವನೆಗಳನ್ನು ತೊಡೆದು ಹಾಕಿ, ಶಿಸ್ತನ್ನು ತರುವ ಕೆಲಸ ನಮ್ಮಿಂದಲೇ ಪ್ರಾರಂಬವಾಗಬೇಕಲ್ಲವೆ? ಅವರ ನ್ಯೂನತೆಗಳ ಹೊರತಾಗಿಯೂ ಅವರನ್ನು ಮೇಲೆತ್ತಲು ಪ್ರಯತ್ನಿಸುವುದು, ಅವರನ್ನು ಪ್ರೀತಿಸುವವರ ಆದ್ಯ ಕರ‍್ತವ್ಯವಲ್ಲವೆ?

( ಮಾಹಿತಿ ಸೆಲೆ : buddhaimonia.com )

( ಚಿತ್ರ ಸೆಲೆ : dreamcatcherreality.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: