ಕವಿತೆ : ನಮ್ಮೂರ ಜಾತ್ರೆಯಣ್ಣ

ಸಿಂದು ಬಾರ‍್ಗವ್.

ಜಾತ್ರೆ, oorahabba

ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ
ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ

ದೇಗುಲಕೆ ಹೋಗೋಣ ಹರಕೆ ತೀರಿಸಿ ಬರೋಣ
ಹಣ್ಣುಕಾಯಿ ನೀಡಿ ದೇವರಿಗೆ ಬಕ್ತಿಯಿಂದ ಬೇಡೋಣ
ಮಕ್ಕಳಿಗೆ ದಿಟ್ಟಿ ತಾಕದಂತೆ ಕಾಣ್ಕೆ ತೆಗೆದು ಇಡೋಣ
ದೇವಾಲಯಕೆ ಸುತ್ತು ಬಂದು ಅಡ್ಡ ಬೀಳೋಣ

ಮಿಟಾಯಿ ಮಾರುವವನು ಬಲೂನು ಊದುವವನು
ಬಣ್ಣಬಣ್ಣದ ಗಾಜಿನ ಬಳೆಯ ಬಳೆಗಾರನು
ಕಾರದ ಕಡ್ಡಿ ಸಿಹಿಕಡ್ಡಿ ಹುರಿಗಡಲೆಯ ಮಾರುವವನು
ಮಂಡಕ್ಕಿ ಕಾರದ ಚುರುಮುರಿಯ ಕೊಡುವವನು

ಕಿಲಕಿಲ ನಗುವ ತರುಣಿಯರು, ಕೂಲಿಂಗ್ ಗ್ಲಾಸಿನ ಹುಡುಗರು
ಆಟಿಕೆ ಬೇಕು ಎಂದು ಹಟಮಾಡೋ ಪುಟಾಣಿಗಳು
ಚೌಕಾಶಿ ಮಾಡುತ ಅಂಗಡಿಯವನ ಗೋಳುಹೊಯ್ದುಕೊಳ್ಳುವ ಅವ್ವನು
ಅಪ್ಪನ ಬುಜದ‌ ಮೇಲೆ ಕುಳಿತು ಜಾತ್ರೆ ನೋಡೋ ಮಕ್ಕಳು

ದೇವರ ರತವ ನೋಡಿರಣ್ಣ, ಎಳೆಯಲು ರೆಡಿಯಾಗಿರಣ್ಣ
ಗೋವಿಂದ ಗೋವಿಂದ ನಾಮಸ್ಮರಣೆ ಮಾಡಿರಣ್ಣ
ತೇರನ್ನು ಊರ ಕೇರಿಯವರೆಗೂ ಎಳೆದು ಹೋಗೋಣ
ಹಣ್ಣು ಕಾಯಿಚೂರು ಎಸೆಯುವಾಗ ಕೈಯ ಹಿಡಿಯೋಣ

ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ
ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ

ಚಿತ್ರ ಸೆಲೆ:  vijaykarnataka.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: