ಕೊರೊನಾ ವೈರಸ್ ಸುತ್ತಮುತ್ತ…

ಕ್ರುಶಿಕ.ಎ.ವಿ.

ಕೊರೊನಾ ವೈರಸ್, Corona Virus

ಕೊರೊನಾ ವೈರಸ್ (Corona Virus) ಈಗ ಸುದ್ದಿಯಲ್ಲಿರೋ ಹೊಸ ವೈರಲ್ ಸೋಂಕುಕಾರಕ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಳೆದ ತಿಂಗಳು ಇದನ್ನು ಪತ್ತೆ ಹಚ್ಚಲಾಯಿತು. ಹೊಸತಾಗಿ ಗುರುತಿಸಲ್ಪಟ್ಟ ವೈರಸ್ ಸೋಂಕು ಆಗಿರೋ ಕಾರಣ ಇದಕ್ಕೆ ನೋವೇಲ್ ಕೊರೊನಾ ವೈರಸ್ (NovelCoronaVirus, nCoV), ಹೊಸ ಕೊರೊನಾ ವೈರಸ್ ಅಂತ ಹೆಸರಿಡಲಾಗಿದೆ. ಈಗಾಗಲೇ ಸೋಂಕಿಗೆ ಸುಮಾರು 24000 ಜನ ಒಳಗಾಗಿದ್ರೆ, ಸತ್ತವರ ಸಂಕ್ಯೆ 480 ದಾಟಿದೆ. ಸೋಂಕು ಚೀನಾದ ಒಂದು ಪ್ರಾಂತ್ಯದಲ್ಲಿ ಇದ್ದಿದ್ದು, ಈಗ ಚೀನಾದ ಗಡಿ ದಾಟಿದೆ. ಪ್ರವಾಸಿಗರು, ಚೀನಾ ಪ್ರಯಾಣಿಕರ ಮೂಲಕ ಯುರೋಪ್ ಅಮೆರಿಕಕ್ಕೂ ಸೋಂಕು ಹೋಗಿದೆ ಎನ್ನಲಾಗಿದೆ. ಇಂಡಿಯಾಗೂ ಸೋಂಕು ಬರಬಹುದಾದ ಸಾದ್ಯತೆ ಇದ್ದು ಸರ‍್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಚೀನಾದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದ ಪ್ರವಾಸಿಗರೊಬ್ಬರು ಕೊರೋನಾ ಸೋಂಕಿನ ಗುಣಲಕ್ಶಣದ ಸಮಸ್ಯೆ ಹೇಳಿಕೊಂಡ ಕಾರಣ ಅವರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಅಂತ ಸುದ್ದಿ ಆಗಿದೆ.

ಕೊರೊನಾ ಹೆಸರಿನ ಹಿನ್ನೆಲೆ

ಕೊರೊನಾ ಒಂದೇ ಆರ್ ಎನ್ ಎ ಜೈವಿಕ ಅಂಶ ಹೊಂದಿರುವ ವೈರಸ್(ssRNA), ಕೊರೊನಾ ವಿರಿಡೇ ಅನ್ನುವ ಕುಟುಂಬಕ್ಕೆ ಇದು ಸೇರಿದೆ. ಎಲೆಕ್ಟ್ರಾನಿಕ್ ಸೂಕ್ಶ್ಮದರ‍್ಶಕದಲ್ಲಿ ಸೋಂಕುಕಾರಕ ಸಜೀವ ಕೋಶಗಳನ್ನು ನೋಡಿದಾಗ ಅವು ರಾಜರ ಕಿರೀಟದ ರೀತಿ ಕಾಣುತ್ತದೆ. ಲ್ಯಾಟಿನ್ ಬಾಶೆಯಲ್ಲಿ ಕೊರೋನ ಅಂದ್ರೆ ಕ್ರೌನ್ (Crown) ಅಂತ ಅರ‍್ತ. ಅದು ಪುರಾತನ ಗ್ರೀಕ್ ಬಾಶೆಯ ಪದ ಕೊರೊನ್(κορώνη) ಅಂದ್ರೆ ಕಿರೀಟ ಪದದ ಮೂಲದಿಂದ ಬಂದಿದೆ. ಈ ವೈರಸ್ ಕುಟುಂಬದಲ್ಲಿ 4 ಮುಕ್ಯ ಸದಸ್ಯರು (ಅಲ್ಪಾ, ಬೀಟಾ, ಗಾಮಾ, ಡೆಲ್ಟಾ) ಮತ್ತು ಹತ್ತಾರು ವೈರಸ್ಗಳು ಇವೆ. 1960ನೇ ದಶಕದಲ್ಲಿ ಈ ರೋಗಾಣುಗಳನ್ನು ಕಂಡುಹಿಡಿಯಲಾಯಿತು. ಮನುಶ್ಯರು, ಜಾನುವಾರುಗಳಲ್ಲಿ ಮೊದಲಿಗೆ ಹುಡುಕಲಾಯಿತು. ಈ ಗುಂಪಿನ ವೈರಾಣುಗಳು ಮನುಶ್ಯರಿಗೆ ಹೆಚ್ಚಾಗಿ ಬರುವ ಸಾಮಾನ್ಯ ಶೀತಕ್ಕೆ ಕಾರಣಕರ‍್ತರು. ಗಂಟಲು ಉರಿಯೂತ, ನೆಗಡಿ, ಶ್ವಾಸಕೋಶದ ಸೋಂಕು, ಜ್ವರ ಇತ್ಯಾದಿ, ಸಾಮಾನ್ಯ ವೈರಾಣು ಸೋಂಕಿನ ರೋಗದ ಗುಣಲಕ್ಶಣಗಳು. ಈ ಗುಂಪಿನ ಮುಕ್ಯ ಹಾಗೂ ಸುದ್ದಿಯಾದ ವೈರಸ್ಗಳು ಅಂದ್ರೆ 2003ರಲ್ಲಿ ಪತ್ತೆಯಾದ ಸಾರ‍್ಸ್ (SARS – Severe acute respiratory syndrome –SARS-CoV), 2012ರಲ್ಲಿ ಪತ್ತೆ ಆದ ಮರ‍್ಸ್ (MERS – Middle East respiratory syndrome MERS-CoV). ಈಗ ಪತ್ತೆಯಾಗಿರೋ ನೋವೇಲ್ ಅತವಾ ಹೊಸ ಕೊರೊನಾ ವೈರಸ್ 70% ಅಶ್ಟು ಜೈವಿಕವಾಗಿ ಸಾರ‍್ಸ್ ಹೋಲುತ್ತದೆ.

ಕೊರೊನಾ ಹರಡಿದ್ದು ಹೇಗೆ?

ಒಂದು ಗುಂಪು ಈ ವೈರಸ್ ಹಾವಿನ ಮೂಲಕ ಮನುಶ್ಯರಿಗೆ ಬಂದಿದೆ ಅಂತ ಊಹಿಸುತ್ತಿದೆ, ಆದರೆ ಅದಕ್ಕೆ ಸಾಕ್ಶಿ ಸಿದ್ದವಾಗಿಲ್ಲ. ಒಂದು ಸುದ್ದಿಯ ಪ್ರಕಾರ 2017ರಲ್ಲಿ ಚೀನಾದಲ್ಲಿ ಒಂದು ವಿಶೇಶ ವೈಗ್ನಾನಿಕ ಪ್ರಯೋಗಾಲಯ ತೆರೆಯಲಾಯಿತು. ವುಹಾನ್ ಬಯೋಸೇಪ್ಟಿ ಲ್ಯಾಬ್ ಅದರ ಹೆಸರು. ಅಲ್ಲಿ ಎಬೋಲಾ, ಸಾರ‍್ಸ್, ಇಂಪ್ಲುಯೆಂಜಾ ಇತ್ಯಾದಿ ಅಪಾಯಕಾರಿ ರೋಗಾಣುಗಳ ಸಂಶೋದನೆ ನಡೆಯುತ್ತಿತ್ತಂತೇ. ಈ ಪ್ರಯೋಗಾಲಯದಿಂದ ಕೇವಲ 20ಮೈಲು ದೂರದ ಮೀನು ಮಾರುಕಟ್ಟೆ ಕೊರೊನಾ ಸೋಂಕಿನ ಕೇಂದ್ರ. ಹಾಗಾಗಿ ಅದೇ ಪ್ರಯೋಗಾಲಯದಿಂದ ರೋಗಾಣು ಸೋರಿಕೆ ಆಗಿದೆ ಅಂತ ಕೂಡ ಹೇಳಲಾಗುತ್ತಿದೆ. ಇನ್ನೊಂದು ವರದಿ ಪ್ರಕಾರ ಆ ಪ್ರಯೋಗಾಲಯದಲ್ಲಿ ಸೋಂಕಿಗೆ ಔಶದಿ ಸಿಗುವ ಸಾದ್ಯತೆ ಇದೆ ಅಂತ ಇದೆ. ಪ್ರಯೋಗಾಲಯದಲ್ಲಿ ರೋಗ ಔಶದಿ ಎರಡು ಇರೋದು ಅಚ್ಚರಿಯೇನಲ್ಲ. ಆದರೆ ರೋಗವನ್ನು ಸೋರಿಕೆ ಮಾಡಿ ಔಶದಿ ಹುಡುಕುವ ಕೆಲಸ ಜೈವಿಕ ಬಯೋತ್ಪಾದನೆ. ಅಂತಹ ಕೆಲವು ಪ್ರಕರಣಗಳು ಇತಿಹಾಸದಲ್ಲಿ ದಾಕಲಾಗಿದೆ.

ಕೊರೊನಾ ಗುಣಲಕ್ಶಣಗಳು

ಕೊರೊನಾ ಸೋಂಕು ಇತರೆ ಹಲವಾರು ವೈರಲ್ ಸೋಂಕುಗಳಂತೆ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುತ್ತದೆ. ಶೀತ, ಕಪ, ಕೆಮ್ಮು, ಜ್ವರ, ಸಾಮಾನ್ಯ ಉಸಿರಾಟದ ಸಂಬಂದಿ ಸೋಂಕಿನ ಲಕ್ಶಣಗಳು ಇದರಲ್ಲೂ ಆಗುತ್ತದೆ. ಶೀತ, ಬಾರೀ ತಲೆನೋವು, ಕಪ, ಗಂಟಲು ಉರಿಯೂತ, ಜ್ವರ – ಸಾಮಾನ್ಯ ಗಂಟಲು ಶ್ವಾಸಕೋಶ ಸೋಂಕಿನ ರೀತಿಯೇ ಇರುತ್ತವೆ. ರೋಗದ ಯಾವುದೇ ಗುಣಲಕ್ಶಣ ಇಲ್ಲದೆಯೂ ವೈರಾಣು ದೇಹದಲ್ಲಿ ಇರಬಹುದಾದ ಸಾದ್ಯತೆ ಇದೆ ಅಂತ ವಿಗ್ನಾನಿಗಳು ಎಚ್ಚರಿಸಿದ್ದಾರೆ. ವೈರಾಣು ಪತ್ತೆಗೆ ವಿಶೇಶ ಪರೀಕ್ಶಾ ಸಾದನ ಇನ್ನೂ ಸಿದ್ದವಾಗಿಲ್ಲ ಹಾಗೂ ಸೋಂಕಿಗೆ ಸದ್ಯಕ್ಕೆ ಮುಂಜಾಗ್ರತಾ ಔಶದಿ (Vaccination) ಇಲ್ಲ. ಸಾರ‍್ಸ್ ರೋಗಾಣುವಿಗೆ 70% ಹೋಲುವ ಕಾರಣ ಪ್ರೋಟಿಯೇಸ್ ನಿಯಂತ್ರಕಗಳು (Protease Inhibitors), ಇತರೆ ಶ್ವಾಸಕೋಶದ ವೈರಲ್ ಸೋಂಕಿಗೆ ಬಳಸುವ ಔಶದಿಯನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.

ಮುನ್ನೆಚ್ಚರಿಕೆಯ ಕ್ರಮಗಳು

ಈಗ ಸೋಂಕು ಮುಕ್ಯವಾಗಿ ಚೀನಾದಲ್ಲಿ ಕೇಂದ್ರಿತವಾಗಿರುವ ಕಾರಣ ನಾವು ಆತಂಕಪಡುವ ಅಗತ್ಯ ಇಲ್ಲ. ಆದರೆ ಮಾಹಿತಿ ತಿಳಿದುಕೊಂಡು ಎಚ್ಚರಿಕೆ ವಹಿಸಬೇಕು ಹಾಗೂ ಬೇಕಾದ ಎಲ್ಲಾ ಸಿದ್ದತೆ ವೈಯಕ್ತಿಕವಾಗಿ ಹಾಗೂ ಸರ‍್ಕಾರದ ಮಟ್ಟದಲ್ಲಿ ಮಾಡುವಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.  ವಿವಿದ ದೇಶಗಳು ಹಾಗೂ ವಿಶ್ವ ಆರೋಗ್ಯ ಸಂಸ್ತೆಯ ಮುನ್ನೆಚ್ಚರಿಕೆಯ ನಿರ‍್ದೇಶನಗಳು ಹೀಗಿದೆ.

  • ಚೀನಾ ಹಾಗೂ ಚೀನಾ ಸುತ್ತಲಿನ ದೇಶಗಳ ಪ್ರವಾಸ ಮುಂದೂಡುವುದು
  • ವಿಮಾನನಿಲ್ದಾಣದಲ್ಲಿ ವಿಶೇಶ ಜಾಗ್ರತೆ ವಹಿಸಿ ಒಳ್ಳೆಯ ಗುಣಮಟ್ಟದ ಮುಕಗವಸು(Facemasks) ಬಳಸುವುದು
  • ಕೈಯನ್ನು ಆಲ್ಕೋಹಾಲ್ ಇರುವ ಕೈ ತೊಳೆಯುವ ವಸ್ತುಗಳಿಂದ ಅತವಾ ಒಳ್ಳೆಯ ಸೋಪುಗಳಿಂದ ಸುಮಾರು 20ಸೆಕೆಂಡ್ ಕೈತೊಳೆಯುವುದು
  • ಸೋಂಕು ಪೀಡಿತ ಪ್ರದೇಶದಲ್ಲಿ ಇದ್ದರೆ ಆಗಾಗ ಕೈ ತೊಳೆದುಕೊಳ್ಳುವುದು
  • ಕೆಮ್ಮುವಾಗ/ಸೀನುವಾಗ ಎಲ್ಲಾ ಸಮಯದಲ್ಲಿ ಕರವಸ್ತ್ರ ಮೂಗು ಬಾಯಿಗೆ ಅಡ್ಡ ಹಿಡಿಯುವುದು, ಆಮೇಲೆ ಮತ್ತೆ ಕೈ ತೊಳೆಯುವುದು
  • ಕೊಳಕಾದ ಕೈಗಳಿಂದ ಬಾಯಿ ಮೂಗು ಕಣ್ಣು ಒರೆಸದಿರುವುದು
  • ಯಾವುದೇ ರೀತಿಯ ಉಸಿರಾಟ ಸಂಬಂದಿ ಸೋಂಕು ಇರುವವರು ಸೀನುವಾಗ ಅವರ ಹತ್ತಿರ ಇರಬಾರದು ಅತವಾ ಇದ್ದರೂ ಬಟ್ಟೆಯಿಂದ ಮೂಗು ಬಾಯಿ ಮುಚ್ಚಿಕೊಳ್ಳುವುದು,
  • ಸೀನುವಾಗ ಬರುವ, ಕಣ್ಣಿಗೆ ಕಾಣದ ಸೋಂಕು ತುಂಬಿದ ಹನಿಗಳಿಂದ ದೊಡ್ಡ ಮಟ್ಟದಲ್ಲಿ ರೋಗ ಹರಡುವುದರಿಂದ ಶ್ವಾಸಕೋಶ ಸಂಬಂದಿ ಸೋಂಕು ಇದ್ದಾಗ ಮನೆಯಲ್ಲೇ ಅತವಾ ಆಸ್ಪತ್ರೆಯಲ್ಲಿ ಇರುವುದು
  • ಸೀನುವಾಗ ಬಟ್ಟೆ ಅಡ್ಡ ಹಿಡಿಯುವುದು ಹಾಗೂ ಆ ಬಟ್ಟೆಯನ್ನು ಸೋಂಕು ನಾಶವಾಗುವಂತೆ ಸ್ವಚ್ಚ ಮಾಡುವುದು, ಕೈ ತೊಳೆಯುವುದು ಮಾಡಬೇಕು.

ಹೀಗೆ ಮೇಲೆ ತಿಳಿಸಿದಂತೆ, ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬಹುದು. ಎಲ್ಲಕ್ಕಿಂತ ಮುಕ್ಯ ವಿಚಾರ ಅಂದರೆ, ಸುಳ್ಳು ಸುದ್ದಿ ನಂಬದೆ ಇರೋದು, ಸರ‍್ಕಾರ ವಿಶ್ವ ಆರೋಗ್ಯ ಸಂಸ್ತೆಯ ಪ್ರಕಟಣೆಯನ್ನು ಮಾತ್ರ ನಂಬುವುದು ಮಾಡಬೇಕು. ಸರಿಯಾಗಿ ಮಾಹಿತಿ ಪಡೆದುಕೊಂಡು ಆತಂಕವಿಲ್ಲದೆ ಆದುನಿಕ ವೈಗ್ನಾನಿಕ ಔಶದ ವ್ಯವಸ್ತೆಯಲ್ಲಿ, ವೈದ್ಯರ ಮಾರ‍್ಗದರ‍್ಶನದಲ್ಲಿ ಔಶದಿ ಉಪಚಾರ ಪಡೆಯುವುದು, ಗೊತ್ತಿಲ್ಲದೆ ಇರುವವರಿಗೆ ವಿಚಾರ ತಿಳಿಸಿ ಹೇಳುವುದು ಮಾಡಬೇಕು. ಆತಂಕ (Phobia) ಹಾಗೂ ತಪ್ಪು ಅತವಾ ಅರ‍್ದ ಮಾಹಿತಿ ಹೆಚ್ಚಿನ ತೊಂದರೆ ಮಾಡುವುದು. ಮನೆ ಮದ್ದು ಅದು ಇದು ಅಂತ ಕಾಲಹರಣ ಮಾಡದೆ ಪರೀಕ್ಶೆ ಮಾಡಿಸಿಕೊಳ್ಳುವುದು ಮಾಡಬೇಕು.

( ಮಾಹಿತಿ ಮತ್ತು ಚಿತ್ರ ಸೆಲೆ : wiki, cnn.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications