ಮಕ್ಕಳ ಕತೆ – ಸಾರ‍್ತಕ ಬದುಕು

– ವೆಂಕಟೇಶ ಚಾಗಿ.

Tree ಮರ

ಅದ್ರುಶ್ಟವನ ಎಂಬ ಕಾಡಿನಲ್ಲಿ ಹಲವಾರು ಬಗೆಯ ಮರಗಿಡಗಳು ಬೆಳೆದಿದ್ದವು. ವಿವಿದ ಜಾತಿಯ ಪಕ್ಶಿಗಳು, ಪ್ರಾಣಿಗಳು ಸುಂದರವಾದ ಜೀವನವನ್ನು ಸಾಗಿಸುತ್ತಿದ್ದವು. ಜಲಪಾತಗಳು, ನದಿಗಳು, ಬೆಟ್ಟ ಗುಡ್ಡಗಳಿಂದ ಕೂಡಿದ ಅದ್ರುಶ್ಟವನದಲ್ಲಿ ಬದುಕುವುದೆಂದರೆ ಅದು ಅದ್ರುಶ್ಟವೇ ಸರಿ. ಕಾಲಕಾಲಕ್ಕೆ ಮಳೆಯಾಗುತ್ತಿದ್ದರಿಂದ ಅದ್ರುಶ್ಟವನವು ಜೀವಿಸಲು ಯೋಗ್ಯವಾಗಿತ್ತಲ್ಲದೇ ಮರಗಿಡಗಳು ಸದಾ ಹಸಿರಿನಿಂದ ಕೂಡಿರುತ್ತಿದ್ದವು. ಆ ಕಾಡಿಗೆ ಮಾನವರು ಬರುವುದು ಅತಿ ವಿರಳವಾಗಿದ್ದರಿಂದ ಯಾವುದೇ ಜೀವಿ ಬಯ ಆತಂಕವಿಲ್ಲದೇ ಬದುಕುತ್ತಿದ್ದವು.

ಅದ್ರುಶ್ಟವನದಲ್ಲಿ ಸುಗಂದಬದ್ರ ಎಂಬ ನದಿ ಸದಾ ಕಾಲ ಹರಿಯುತ್ತಿತ್ತು. ಇದು ಸುತ್ತಮುತ್ತಲಿನ ಮರಗಿಡಗಳಿಗೆ ಸದಾಕಾಲ ನೀರುಣಿಸುತ್ತಿತ್ತು. ಇದರಿಂದಾಗಿ ಸುಗಂದಬದ್ರ ನದಿಯ ಅಕ್ಕಪಕ್ಕ ಸಾಕಶ್ಟು ಮರಗಿಡಗಳು ಬೆಳೆದಿದ್ದವು. ಎಲ್ಲಾ ಮರಗಳೂ ತಮ್ಮ ತಮ್ಮ ಕಶ್ಟ ಸುಕಗಳನ್ನು ಪರಸ್ಪರ ಹಂಚಿಕೊಳ್ಳುತ್ತಾ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದವು. ಒಂದು ದಿನ ಚಾರಣಿಗರು ಬೋಜಪತ್ರ ಎಂಬ ಮರದ ಕೆಳಗೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಾ ಹೀಗೆ ಮಾತನಾಡುತ್ತಿದ್ದರು. “ಈ ವನದಲ್ಲಿ ಎಲ್ಲಿ ನೋಡಿದರಲ್ಲೂ ಮರಗಳಿವೆ. ಮರಗಿಡಗಳು ಒಂದಕ್ಕೊಂದು ತಾಗಿಕೊಂಡು ಬೆಳೆಯುತ್ತಿವೆ. ಈ ಮರ ಎಶ್ಟು ಸುಂದರವಾಗಿದೆ. ಇದು ಈ ಕಾಡಿನ ಆಚೆಗಿರುವ ಬಯಲಿನಲ್ಲಿದ್ದರೆ ಹಲವಾರು ಜನರಿಗೆ ಈ ಮರದಿಂದ ಉಪಕಾರವಾಗುತ್ತಿತ್ತು. ಆ ಬಯಲಿನಲ್ಲಿ ಇದೇ ರೀತಿಯ ಹಲವಾರು ಮರಗಳು ಬೆಳೆಯಲು ಸಾಕಶ್ಟು ಅವಕಾಶವಿದೆ.” ಎಂದಾಗ ಬೋಜಪತ್ರ ಮರಕ್ಕೆ ಕಾಡಿನ ಆಚೆಗಿರುವ ಬಯಲಿನಲ್ಲಿ ವಾಸ ಮಾಡುವ ಬಯಕೆ ಆಯಿತು. ಹಲವಾರು ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಂಡಿತು. ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಆ ಬಯಲಿನ ಜಾಗಕ್ಕೆ ಹೋಗುವ ನಿರ‍್ದಾರ ಮಾಡಿ ದೇವರನ್ನು ಪ್ರಾರ‍್ತಿಸಿತು. ಆಗ ದೇವರು ಪ್ರತ್ಯಕ್ಶನಾಗಿ ನಿನ್ನ ಇಶ್ಟದಂತೆ ಬಯಲಿನಲ್ಲಿ ಜೀವಿಸು ಎಂದು ಹೇಳಿ ಮಾಯವಾದನು.

ಬಯಲಿನಲ್ಲಿ ವಾಸಿಸತೊಡಗಿದ ಮರಕ್ಕೆ ತುಂಬಾ ಸಂತೋಶವಾಯಿತು. ತನ್ನ ರೆಂಬೆ ಕೊಂಬೆಗಳನ್ನು ವಿಶಾಲವಾಗಿ ಚಾಚಿತು. ತಾನು ಸ್ವತಂತ್ರವಾಗಿ ಬದುಕುತ್ತಿದ್ದೇನೆ ಎಂದು ಬಾವಿಸಿ ಮನಸ್ಸಿನಲ್ಲೇ ಕುಶಿ ಪಟ್ಟಿತು.

ಹೀಗೆ ದಿನಗಳು ಕಳೆದಂತೆ ದಾರಿಯಲ್ಲಿ ಹೋಗುತ್ತಿದ್ದ ಜನರು ಬೋಜಪತ್ರ ಮರವನ್ನು ಕಂಡು ಅದರ ಕೆಳಗೆ ವಿಶ್ರಾಂತಿ ಪಡೆಯತೊಡಗಿದರು. ಮಕ್ಕಳು ರೆಂಬೆಗಳಿಗೆ ಜೋತುಬಿದ್ದು ಆಟವಾಡತೊಡಗಿದರು. ಕೆಲವರು ಅದರ ಎಲೆಗಳನ್ನು ಮೇವಿಗಾಗಿ ಇತರೆ ಕೆಲಸಗಳಿಗಾಗಿ ಕತ್ತರಿಸಿಕೊಂಡು ಹೋಗತೊಡಗಿದರು. ಕೆಲವರು ಕಟ್ಟಿಗೆಗಾಗಿ ಅದರ ರೆಂಬೆ ಕೊಂಬೆಗಳನ್ನು ಕತ್ತರಿಸತೊಡಗಿದರು. ಜೋರಾದ ಗಾಳಿಗೆ ಅದರ ಎಳೆಯ ಕಾಯಿಗಳು ಉದುರಿ ಬೀಳುತ್ತಿದ್ದವು. ಬೇಸಿಗೆಯ ಸಮಯದಲ್ಲಿ ನೀರು ಸಿಗದೇ ಕಶ್ಟ ಅನುಬವಿಸಿತು. ಇದರಿಂದಾಗಿ ಬೋಜಪತ್ರ ಮರವು ತಾನು ಅಂದುಕೊಂಡ ಕನಸುಗಳನ್ನು ನನಸಾಗಿಸಲು ಸಾದ್ಯವೇ ಇಲ್ಲವೆಂದು ನಿರ‍್ಣಯಿಸಿತು. ಒಂಟಿಯಾಗಿ ಈ ಬಯಲಿನಲ್ಲಿ ಬದುಕುವುದಕ್ಕಿಂತ ಎಲ್ಲಾ ಮರಗಳೊಂದಿಗೆ ಕಾಡಿನಲ್ಲಿ ಬದುಕುವುದು ವಾಸಿ ಎಂದು ಅಂದುಕೊಂಡಿತು. ತಾನು ಸ್ವರ‍್ಗದಂತ ಸ್ತಳವನ್ನು ಬಿಟ್ಟು ಈ ಬಯಲಿನಲ್ಲಿ ಬರಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟುಕೊಂಡಿತು. ಮತ್ತೆ ತನ್ನ ಮೂಲ ಸ್ತಳಕ್ಕೆ ಹಿಂದಿರುಗಿ ತನ್ನವರೊಂದಿಗೆ ನೂರಾರು ಕಾಲ ಬದುಕುವ ತೀರ‍್ಮಾನ ತೆಗೆದುಕೊಂಡಿತು. ಅದರಂತೆ ಮತ್ತೆ ದೇವರನ್ನು ಪ್ರಾರ‍್ತಿಸಿದಾಗ ದೇವರು ಬೋಜಪತ್ರ ಮರವನ್ನು ಮೂಲ ಸ್ತಳದಲ್ಲಿರಿಸಿದನು. ಮರವು ಪಲವತ್ತಾದ ಬೂಮಿ ಮತ್ತು ನದಿಯ ನೀರಿನ ಲಬ್ಯತೆಯಿಂದ ತನ್ನವರೊಂದಿಗೆ ಸುಕವಾಗಿ ನೂರಾರು ಕಾಲ ಬದುಕಿ ಬಾಳಿತು.

(ಚಿತ್ರಸೆಲೆ: piqsels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: