ಬುವಿಯ ಮೇಲಿನ ಸ್ವರ‍್ಗ – ಗೀತೋರ‍್ನ್

– ಕೆ.ವಿ. ಶಶಿದರ.

ಗೀತೋರ್‌ನ

ಇಲ್ಲಿ ರಸ್ತೆಗಳೇ ಇಲ್ಲ. ಮೋಟಾರು ವಾಹನಗಳ ಸದ್ದಿಲ್ಲ. ಹೊಗೆಯಿಲ್ಲದ ಪರಿಶುದ್ದ ವಾತಾವರಣ. ಅತ್ಯಂತ ಸುಂದರ ಸ್ವಚ್ಚ ಪರಿಸರ. ವರ‍್ಶದ ಹನ್ನೆರೆಡು ತಿಂಗಳುಗಳ ಕಾಲ ಹರಿವ ಕಾಲುವೆ ನೀರು. ಕಾಲುವೆಯ ಇಕ್ಕೆಲಗಳಲ್ಲಿ ಪ್ರಕ್ರುತಿ ಸೌಂದರ‍್ಯವನ್ನು ತುಂಬಿಕೊಂಡು ರಾರಾಜಿಸುವ ಮನೆಗಳು, ತಂಪಾದ ವಾತಾವರಣ. ಸೂರ‍್ಯನ ಕಿರಣಗಳು ನೆಲವನ್ನು ಮುತ್ತಿಕ್ಕುವ ಸಲುವಾಗಿ ಮರಗಿಡಗಳ ಮದ್ಯೆ ನುಸುಳಲು ಹರಸಾಹಸ ಪಡಬೇಕಾದ ಸ್ತಿತಿ. ಅಂತಹ ಒಂದು ಕಾಲ್ಪನಿಕ. ಕೊಂಚ ನಿಲ್ಲಿ, ನಾನಿಲ್ಲಿ ದೇವತೆಗಳ ಸ್ವರ‍್ಗ ಲೋಕವನ್ನು ವರ‍್ಣಿಸುತ್ತಿಲ್ಲ, ಸ್ವರ‍್ಗದಂತಹ ಸ್ತಳ ಬುವಿಯ ಮೇಲೆ ಇದ್ದರೆ ಎಶ್ಟು ಚೆನ್ನ ಎಂಬ ಅನಿಸಿಕೆ ಎಲ್ಲರದೂ ಅಲ್ಲವೆ? ನಿಜವಾಗಲೂ ಇಶ್ಟು ಚೆಲುವಾದ ಒಂದು ಹಳ್ಳಿ ಈ ದರಣಿಯಲ್ಲಿ ಅಸ್ತಿತ್ವದಲ್ಲಿದೆ ಎಂದರೆ ನಂಬಲು ಸಾದ್ಯವೆ? ನಂಬಲೇಬೇಕು ಎಂದರೆ ಆಶ್ಚರ‍್ಯವಾದೀತಲ್ಲವೆ? ಕಂಡಿತವಾಗಿಯೂ ಇದೆ. ಆದೇ ನೆದರ‍್ಲೆಂಡ್ ದೇಶದ ಒಂದು ಪುಟ್ಟ ಹಳ್ಳಿ. ಗೀತೋರ‍್ನ್. ಗೀತೋರ‍್ನನ್ನು ಕಂಡವರು “ವೆನಿಸ್ ಆಪ್ ನೆದರ‍್ಲೆಂಡ್” ಎಂದು ಈ ಪುಟ್ಟ ಹಳ್ಳಿಯನ್ನು ಹಾಡಿ ಹೊಗಳಿದ್ದಾರೆ. ವೆನಿಸ್‍ಗಿಂತಲೂ ಸ್ವಚ್ಚ ಸುಂದರ ಪರಿಸರ ಹೊಂದಿರುವ ಪುಟ್ಟ ಹಳ್ಳಿ ಗೀತೋರ‍್ನ್.

ರಸ್ತೆಯೇ ಇಲ್ಲ ಎಂದ ಮೇಲೆ ಇಲ್ಲಿಯ ಜನರ ಓಡಾಟದ ಬಗೆ ಹೇಗೆ? ಮನೆ ಮಟ್ಟುಗಳನ್ನು, ಶಾಲೆ ಕಾಲೇಜುಗಳನ್ನು ತಲುಪುವುದಾದರೂ ಹೇಗೆ? ಜನರ ಚಲನವಲನಗಳು ಹೇಗೆ? ಯಾವ ರೀತಿಯಲ್ಲಿ ಸರಕು ಸಾಗಾಣೆ ಮಾಡುತ್ತಾರೆ? ಬೈಕು, ಕಾರು, ಬಸ್ಸು, ರೈಲುಗಳ ಓಡಾಟ ಹೇಗೆ? ಎಂಬಿತ್ಯಾದಿ ನೂರಾರು ಸಂಶಯಗಳು ಉದ್ಬವಿಸುವುದು ಸಹಜ. ಏನಡಗಿದೆ ಇಲ್ಲಿ ಬನ್ನಿ ನೋಡುವ. ಕ್ರಿ.ಶ 1230 ರಲ್ಲಿ ಮೆಡಿಟರೇನಿಯನ್ ಪ್ರಾಂತದ ಕಡೆಯಿಂದ ಬಂದ ನಿರಾಶ್ರಿತರ ಮೂಲಕ ಬೆಳಕಿಗೆ ಬಂದುದೆ ಗೀತೋರ‍್ನ್. ಎಲೆಮರೆ ಕಾಯಂತಿದ್ದ ಗೀತೋರ‍್ನನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ್ದು ಹಾಲಿವುಡ್‍ನ ಚಲನಚಿತ್ರ ‘ಪ್ಯಾನ್ ಪೇರ‍್’. 1958ರಲ್ಲಿ ತೆರೆಕಂಡ ಈ ಚಿತ್ರದ ಬಹುತೇಕ ಚಿತ್ರೀಕರಣ ಗೀತೋರ‍್ನನಲ್ಲೇ ನಡೆದಿದೆ. ಅಲ್ಲಿಂದೀಚೆಗೆ ಇದು ವಿಶ್ವಕ್ಕೆಲ್ಲಾ ಚಿರಪರಿಚಿತ. ಪ್ರವಾಸಿಗರ ಅಚ್ಚುಮೆಚ್ಚಿನ ತಾಣ.

ಒವರಿಜ್ಸೆ ಪ್ರಾಂತದಲ್ಲಿರುವ ಈ ಪುಟ್ಟ ಹಳ್ಳಿಯ ಸುತ್ತಲೂ ನಾಲ್ಕು ಮೈಲಿಗಳಶ್ಟು ಕಾಲುವೆ ಇದೆ. ಕಾಲುವೆಗಳ ಮದ್ಯದಲ್ಲಿ ತೋಟದ ಮನೆ ರೀತಿಯ ಮನೆಗಳಿವೆ. ಎಲ್ಲಾ ಮನೆಯ ಮೇಲ್ಚಾವಣಿಯು ಸತತ ಮಳೆಯಿಂದ ರಕ್ಶಣೆಗಾಗಿ ಹುಲ್ಲುಹಾಸನ್ನು ಹೊಂದಿದೆ. ಇವುಗಳ ನಿರ‍್ಮಾಣ 18ನೇ ಶತಮಾನದಲ್ಲಿ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ.

ಗೀತೋರ‍್ನದ ಬಗ್ಗೆ: ಗೀತೋರ‍್ನ್ ನೆದರ‍್ಲೆಂಡ್ ರಾಜದಾನಿ ಅಂಸ್ಟಡ್ರ್ಯಾಮ್‍ನಿಂದ ಈಶಾನ್ಯಕ್ಕೆ ಕೇವಲ 55 ಕಿಲೋಮೀಟರ್ ದೂರದಲ್ಲಿದೆ. ನೆದರ‍್ಲೆಂಡ್‍ನ ‘ವೀರ‍್ರಿಬ್ಬೆನ್ ವೀಡೆನ್’ ರಾಶ್ಟ್ರೀಯ ಉದ್ಯಾನವನದ ಮದ್ಯದಲ್ಲಿರುವುದರಿಂದ ಗೀತೋರ‍್ನ್ ಸುತ್ತಲೂ ನೀರು ಹಾಗೂ ಹಸಿರು ಆವರಿಸಿಕೊಂಡಿದೆ. ಹದಿಮೂರನೆ ಶತಮಾನದಲ್ಲಿ ಪ್ರಾನ್ಸಿಸ್‍ನ ಆನುಯಾಯಿಗಳು ಇಲ್ಲಿ ಬಂದು ನೆಲೆಯೂರಿದ್ದಾಗಿ ಕೆಲವು ಕಡೆ ದಾಕಲಾಗಿದೆ. ನೀರಿನಲ್ಲಿನ ಕೊಳೆತ ಗಿಡ, ಸತ್ತ ಪ್ರಾಣಿ, ಕಸಕಡ್ಡಿಗಳನ್ನು ಸಾಗಿಸಲು ಬಹಳ ತ್ರಾಸದಾಯಕವಾದ ಹಿನ್ನೆಲೆಯಲ್ಲಿ ಪ್ರಾನ್ಸಿಸ್‍ನ ಅನುಯಾಯಿಗಳು ಕಾಲುವೆಗಳನ್ನು ನಿರ‍್ಮಿಸಿ ಜಲಸಾರಿಗೆಯ ಮೂಲಕ ಕೊಳಕನ್ನು ಸಾಗಿಸುವ ಕೆಲಸ ನಿರ‍್ವಹಿಸುತ್ತಿದ್ದರು. ಇಂದಿಗೂ ಸಹ ಕಾಲುವೆಗಳು ಹಾಗೆಯೇ ಇವೆ. ಇದೇ ಈ ಪುಟ್ಟ ಹಳ್ಳಿಯ ಪ್ರಸಿದ್ದಿಗೆ ಮೂಲ ಕಾರಣ.

ರಸ್ತೆಗಳಿಲ್ಲದ ಹಳ್ಳಿ: ಈ ಸುಂದರ ಸೊಬಗಿನ ಹಳ್ಳಿಯಲ್ಲಿ ಮಾನವನ ಅಂತಶಕ್ತಿಯೇ ಮೋಟಾರು ವಾಹನಗಳ ಓಡಾಟವನ್ನು ಸಂಪೂರ‍್ಣವಾಗಿ ಸ್ತಬ್ದಗೊಳಿಸಿದೆ. ಹಾಗಾಗಿ ಮೋಟಾರು ವಾಹನಗಳ ಹೊಗೆಯಿಂದ ಶಬ್ದದಿಂದ ಈ ಹಳ್ಳಿ ಸಂಪೂರ‍್ಣ ಮುಕ್ತ. ಇಂತಹ ಆಹ್ಲಾದಕರ ವೈವಿದ್ಯಮಯ ಹಳ್ಳಿಯ ಜನರು ತಮ್ಮ ದೈನಂದಿನ ಓಡಾಟಕ್ಕೆ ಪೂರ‍್ಣವಾಗಿ ಅವಲಂಬಿತವಾಗಿರುವುದು ಜಲಸಾರಿಗೆಯನ್ನೇ,. ಚಪ್ಪಟೆ ದೋಣಿಯನ್ನು ಇಲ್ಲಿನ ಜನರು ಹೆಚ್ಚಿಗೆ ಬಳಸುತ್ತಾರೆ. ಇದರೊಂದಿಗೆ ತೆಪ್ಪ, ಕೆನೋಯಿ, ಕಾಯಕ್, ವಿಸ್ಪರ್, ಮುಂತಾದ ಜಲಸಾರಿಗೆ ವಾಹನಗಳು ಬಳಕೆಯಲ್ಲಿದೆ. ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಿಂದ ದೂರವಾಗಿರುವ ಈ ಹಳ್ಳಿಗೆ ವಿಸ್ಪರ್ ಸಹ ಕೈ ಜೋಡಿಸಿದೆ. ವಿಸ್ಪರ್, ವಿದ್ಯುತ್ ಚಾಲಿತ ಬೋಟ್ ಅದ ಕಾರಣ ಪಿಸುಮಾತಿನಶ್ಟು ಶಬ್ದವನ್ನೂ ಹೊರ ಹಾಕುವುದಿಲ್ಲ. ಅದಕ್ಕಾಗೇ ಇದಕ್ಕೆ ‘ವಿಸ್ಪರ‍್’ ಎನ್ನುವ ಅನ್ವರ‍್ತನಾಮ. ಈ ಹಳ್ಳಿಗರು ತಮ್ಮ ಸ್ವಂತ ಬಳಕೆಯ ಕಾರುಗಳನ್ನೂ ಸಹ ಮನೆಯ ಬಳಿಗೆ ತರುವಂತಿಲ್ಲ. ಅವುಗಳನ್ನು ಹಳ್ಳಿಯ ಹೊರಗಡೆ ನಿಲ್ಲಿಸಲೇಬೇಕಾದ್ದು ಅನಿವಾರ‍್ಯ. ಕಾರುಗಳನ್ನು ಮನೆಯ ಬಳಿ ತರಲು ಇಲ್ಲಿ ರಸ್ತೆಗಳೇ ಇಲ್ಲವಲ್ಲ! ಪ್ರವಾಸಿಗರನ್ನು ಕರೆತರುವ ವಾಹನಗಳೂ ಸಹ ಹಳ್ಳಿಯ ಹೊರಗೆ ಪಾರ‍್ಕ್ ಮಾಡದೆ ಬೇರೆ ದಾರಿಯೇ ಇಲ್ಲ. ‘ಪ್ಯಾನ್ ಪೇರ‍್’ ಚಲನಚಿತ್ರ ತೆರೆಗೆ ಬಂದ ನಂತರ ಗೀತೋರ‍್ನ್ ಪ್ರಮುಕ ಆಕರ‍್ಶಣೀಯ ಕೇಂದ್ರವಾಗಿ ಪರಿವರ‍್ತನೆಗೊಂಡಿದೆ. ಇಲ್ಲಿಗೆ ಪ್ರವಾಸಿಗರ ದಂಡು ಅವ್ಯಾಹತವಾಗಿ ವರ‍್ಶದುದ್ದಕ್ಕೂ ಹರಿದು ಬರುತ್ತಿರುತ್ತದೆ.

Netherlands

ಮರದ ಸೇತುವೆಗಳು: ಮೂರು ಸಾವಿರ ಜನ ಸಂಕ್ಯೆಯಿರುವ ಈ ಹಳ್ಳಿಗೆ ಕಾಲುವೆಯೇ ಜೀವಾಳ. ನಾಲ್ಕು ಮೈಲಿಗಳಶ್ಟು ಉದ್ದವಿರುವ ಕಾಲುವೆಗೆ ಸುಮಾರು ನೂರಾಎಂಬತ್ತು ಸೇತುವೆಗಳನ್ನು ನಿರ‍್ಮಿಸಲಾಗಿದೆ. ಅಂದರೆ ಪ್ರತಿ ಮೈಲಿಗೆ ಸರಾಸರಿ 45 ಸೇತುವೆಗಳು. ಹಳ್ಳಿಯ ಸುತ್ತಲೂ ಕಾಲುವೆಯಿರುವ ಕಾರಣ ಇಶ್ಟು ಸೇತುವೆಗಳು ತೀರ ಅವಶ್ಯ. ಯಾವುದೇ ಸೇತುವೆಯ ನಿರ‍್ಮಾಣದಲ್ಲಿ ಉಕ್ಕನ್ನಾಗಲಿ ಅತವಾ ಕಬ್ಬಿಣವನ್ನಾಗಲಿ ಬಳಸಿಲ್ಲ. ದಾರಾಳವಾಗಿ ದೊರೆಯುವ ಮರದ ದಿಮ್ಮಿಗಳ ಸದ್ಬಳಕೆಯಿಂದ ಸೇತುವೆಗಳನ್ನು ನಿರ‍್ಮಿಸಿರುವುದು ಇಲ್ಲಿನ ವಿಶೇಶತೆ. ಪರಿಸರಕ್ಕೆ ಸಂದ ಗೌರವ. ಕಮಾನಾಕಾರದಲ್ಲಿರುವ ಸೇತುವೆಗಳನ್ನು ನೋಡುವುದೇ ಹಬ್ಬ. ಇದರಿಂದ ಹಳ್ಳಿಯ ಮೆರಗು ಮತ್ತೂ ಹೆಚ್ಚಿದೆ. ಇಲ್ಲಿ ನೆಲೆಸಿರುವ ಜನರು ದೈನಂದಿನ ಓಡಾಟವೇನಿದ್ದರೂ ಸೇತುವೆಯ ಮುಕಾಂತರವೆ. ಇದೇ ಈ ಹಳ್ಳಿಯ ಜನರ ಜೀವನಾಡಿ.

ಸೈಕ್ಲಿಂಗ್ ಪಾತ್: ಸೂಕ್ಶ್ಮಾಬಿರುಚಿಯ ಇಂತಹ ಹಳ್ಳಿಯಲ್ಲಿ ಪ್ರವಾಸಿಗರು ಸುತ್ತಾಡಿ ಕಣ್ತುಂಬಿಸಿಕೊಳ್ಳಲು ಇತ್ತೀಚಿನ ದಿನಗಳಲ್ಲಿ ಪರಿಸರವನ್ನು ಹಾಳುಗೆಡವದೆ ಸೈಕ್ಲಿಂಗ್ ಪಾತ್ ನಿರ‍್ಮಾಣ ಮಾಡಿದ್ದು, ನಡಿಗೆಯ ಜೊತೆ ಜೊತೆಗೆ ಸೈಕಲ್ಲುಗಳಲ್ಲಿ ಹಾಗೂ ಬೈಕ್‍ಗಳಲ್ಲಿ ಸುತ್ತಾಡಲು ಅವಕಾಶವಿದೆ. ಸೈಕ್ಲಿಂಗ್ ಪಾತ್ ಕಾಲುವೆ ಬದಿಯುದ್ದಕ್ಕೂ ಸಾಗಿರುವುದು ಸೈಕಲ್ ಸವಾರರಿಗೆ ಕುಶಿ ಕೊಡುವ ವಿಚಾರ. ಸೈಕ್ಲಿಂಗ್ ಪಾತ್‍ನಲ್ಲಿ ಚಲಾಯಿಸಲು ವಿದ ವಿದವಾದ ಸೈಕಲ್‍ಗಳಿರುವಂತೆ ವಿದ ವಿದವಾದ ಬೈಕ್‍ಗಳು ಲಬ್ಯ. ಇವುಗಳನ್ನು ದಿನ, ಗಂಟೆಯ ಆದಾರದ ಮೇಲೆ ಬಾಡಿಗೆಗೆ ಪಡೆದು ಚಲಾಯಿಸಬಹುದು.

ಗೀತೋರ‍್ನದಲ್ಲಿ ನೋಡಬೇಕಾದ್ದು: ಕಾಲ್ನಡಿಗೆಯಲ್ಲಿ ಊರು ಸುತ್ತಲು ಹೋದಲ್ಲಿ, ಬಹಳಶ್ಟು ಮ್ಯೂಸಿಯಮ್‍ಗಳು ಚರ‍್ಚ್‍ಗಳು ಗೀತೋರ‍್ನನಲ್ಲಿ ಮನತಣಿಸುತ್ತವೆ. ಹೆಟ್ ಒಲ್ಡೆ ಮಾತ್ ಊಸ್ ಮ್ಯೂಸಿಯಮ್ ಇಲ್ಲಿ ಪ್ರಸಿದ್ದಿ. ಇದರ ಒಳ ಹೊಕ್ಕರಂತೂ ನಮ್ಮನ್ನು ನೂರಾರು ವರ‍್ಶಗಳಶ್ಟು ಹಿಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಅಂದಿನ ಕಾಲದ ತೋಟದ ಮನೆಯ ನೋಟವಂತೂ ಅತಿ ಸುಂದರ, ಬವ್ಯ, ಹಾಗೂ ಅನನ್ಯ. ಹಲವಾರು ಕಲಾ ಪ್ರದರ‍್ಶನಗಳಿದ್ದು ಒಂದಕ್ಕಿಂತ ಮತ್ತೊಂದು ಸುಂದರವಾಗಿ ಆಕರ‍್ಶಣೀಯವಾಗಿದೆ. ಇದು ಅಲ್ಲಿನವರ ಕಲಾಬಿರುಚಿಗೆ ಹಿಡಿದ ಕನ್ನಡಿ. ಮಕ್ಕಳಿಗಾಗಿ ವಿಶೇಶ ಚಟುವಟಿಕೆಗಳೂ ಇಲ್ಲಿ ಲಬ್ಯ.

ಚಳಿಗಾಲದ ಗಮ್ಯಸ್ತಾನ: ಗೀತೋರ‍್ನ್ ಯುರೋಪಿಯನ್ನರ ಮೆಚ್ಚಿನ ಚಳಿಗಾಲದ ಗಮ್ಯಸ್ತಾನ. ಐಸ್ ಸ್ಕೇಟಿಂಗ್ ಪ್ರಿಯರ ಸ್ವರ‍್ಗ. ಚಳಿಗಾಲದಲ್ಲಿ ಅವ್ಯಾಹತವಾಗಿ ಸುರಿಯುವ ಹಿಮ ಹಾಗೂ ಹೆಪ್ಪುಗಟ್ಟಿದ ನೀರು ಸ್ಕೇಟಿಂಗ್ ಪ್ರಿಯರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ಇಲ್ಲಿನ ಉಶ್ಣತೆ ಚಳಿಗಾಲದಲ್ಲಿ ಕೆಲವೊಮ್ಮೆ ಸೊನ್ನೆ ಡಿಗ್ರಿಗಿಂತಲೂ ಬಹಳ ಕಡಿಮೆಯಾಗುವ ಕಾರಣ ನೀರು ಹೆಪ್ಪುಗಟ್ಟುತ್ತದೆ. ಅದರ ಉಪಯೋಗ ಸ್ಕೇಟಿಂಗ್ ಪ್ರಿಯರದು. ಗೀತೋರ‍್ನನ ಕಾಲುವೆಗಳಲ್ಲಿ ಹಾಗೂ ಸುತ್ತಲಿನ ಸರೋವರದಲ್ಲಿ ಹೆಪ್ಪುಗಟ್ಟಿದ ನೀರಿನ ಮೇಲೆ ಸ್ಕೇಟಿಂಗ್ ಮಾಡುವುದೇ ಒಂದು ರೋಚಕ ಅನುಬವ.

ಕೊನೆ ಹನಿ: ಗೀತೋರ‍್ನ್ ತನ್ನ ಸುತ್ತಲಿರುವ ಕಾಲುವೆಯಿಂದಾಗಿ, ಹಸಿರು ಪರಿಸರದಿಂದಾಗಿ, ಮಾಲಿನ್ಯ ರಹಿತದಿಂದಾಗಿ, ಶುದ್ದ ಮುಕ್ತ ವಾತಾವರಣದಿಂದಾಗಿ, ಅತ್ಯಲ್ಪ ಜನಸಂದಣಿಯಿಂದಾಗಿ ವಿಶ್ವ ಮಾನ್ಯತೆ ಪಡೆದಿದೆ. ಇಂತಹುದೇ ಒಂದು ಟೌನ್ ಬಾರತದಲ್ಲಿದ್ದಿದ್ದರೆ……ರೆ ! ಮುಂದಿನ ಊಹೆ ನಿಮಗೆ ಬಿಟ್ಟಿದ್ದು.

(ಮಾಹಿತಿ ಸೆಲೆ: atlasobscura.com, holland.com, discoverholland.com)

(ಚಿತ್ರ ಸಲೆ: wiki, pixabay)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.