ಸಣ್ಣ ಕತೆ: ದೇವರ ಆಟ ಬಲ್ಲವರಾರು?

– .

ಜೆ. ಸಿ. ಎಸ್. ಪ್ರತಿಶ್ಟಿತ ಕಾಲೇಜಿನ ಪ್ರತಿಬಾವಂತ ಎಂಜಿನಿಯರಿಂಗ್ ವಿದ್ಯಾರ‍್ತಿ ಅಂದರೆ ಅದು ಅಬಿಶೇಕ್! ಇಶ್ಟಪಟ್ಟು ಇನ್ಪರ‍್ಮೇಶನ್ ಸೈನ್ಸ್ ವಿಬಾಗವನ್ನು ಆಯ್ಕೆ ಮಾಡಿಕೊಂಡು ಅದ್ಯಯನದ ಆಳಕ್ಕೆ ಇಳಿದು ಓದುತ್ತಿರುವವ. ಈ ವಿಬಾಗದಲ್ಲಿ ಹೊಸದನ್ನು ಏನಾದರೂ ಕಂಡು ಹಿಡಿದು ವಿಶ್ವ ವಿಕ್ಯಾತನಾಗಬೇಕೆಂಬ ಹಂಬಲದವನು. ಆತನ ಕೊನೆಯ ವರ‍್ಶದ ಎಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲನ್ನು ಬಾಚಿಕೊಂಡವನು. ಈತನ ಅಂತಿಮ ವರ‍್ಶದ ಎಂಜಿನಿಯರಿಂಗ್ ಪದವಿಯ ಕಡೆಯ ದಿನಗಳಲ್ಲಿ ಪ್ರಕ್ಯಾತ ಅಮೇರಿಕನ್ ಮಲ್ಟಿ ನ್ಯಾಶನಲ್ ಸಂಸ್ತೆ ಅವನ ಅಪಾರ ಪ್ರತಿಬೆಯನ್ನು ಕಂಡು, ಅತ್ಯಾಕರ‍್ಶಕ ಸಂಬಳದೊಂದಿಗೆ ಅವನನ್ನು ದೊಡ್ಡ ಹುದ್ದೆಗೆ ಕೈ ಬೀಸಿ ಕರೆಯಿತು.

ಅಬಿಶೇಕ್ ಕಡು ಬಿಸಿಲಿನ ರಾಯಚೂರು ಜಿಲ್ಲೆಯ ಒಂದು ಹಳ್ಳಿಯವನು. ಇವರ ಅಪ್ಪ, ಚಿಕ್ಕಪ್ಪ ಮತ್ತು ದೊಡ್ಡಪ್ಪ ಇರುವ ದೊಡ್ಡ ಕೂಡು ಕುಟುಂಬ. ಇವರದ್ದು ಒಟ್ಟು ಅರವತ್ತು ಎಕರೆ ಜಮೀನು, ಹತ್ತಾರು ಬೋರ್‌ವೆಲ್ ಕೊರೆಸಿ ನೀರಾವರಿ ಮಾಡಿಕೊಂಡಿದ್ದರು. ಸಾಕಶ್ಟು ಕ್ರುಶಿ ಆದಾಯವುಳ್ಳ ಸಿರಿವಂತ ಕುಟುಂಬ. ಅಬಿಶೇಕ್ ಗೆ ಮೂರು ಜನ ಅಕ್ಕಂದಿರು, ಒಬ್ಬಳು ತಂಗಿಯಾದರೆ ತನ್ನ ದೊಡ್ಡಪ್ಪನಿಗೆ ಮೂರು ಗಂಡು ಮಕ್ಕಳ ಜೊತೆಗೆ ಒಬ್ಬಳು ಕಿರಿಯ ಮಗಳು. ಚಿಕ್ಕಪ್ಪನಿಗೆ ನಾಲ್ಕು ಜನ ಗಂಡು ಮಕ್ಕಳು. ಇವರೆಲ್ಲಾ ತಕ್ಕ ಮಟ್ಡಿಗೆ ಪಿಯುಸಿ, ಪದವಿ ಎಂದು ಓದಿಕೊಂಡು ಎಲ್ಲರೂ ಕ್ರುಶಿಯನ್ನು ಅವಲಂಬಿಸಿ ಉತ್ತಮ ಆದಾಯ ತೆಗೆಯುತ್ತಿದ್ದರು ಒಂದು ರೀತಿಯಲ್ಲಿ ಅಬಿಶೇಕ್ ಅವರ ಕುಟುಂಬ ಇಲ್ಲಿ ಸಿರಿವಂತ ಕುಟುಂಬ.

ಎಲ್ಲವೂ ಚೆನ್ನಾಗಿಯೇ ನಡೆದಿತ್ತುಇತ್ತ ಅಬಿಶೇಕನಿಗೆ ಲಕ್ಶ ಲಕ್ಶದಲ್ಲಿ ಸಂಬಳ, ಅತ್ಯಂತ ಚಾಣಕ್ಶನಾದ ಅಬಿಶೇಕ್ ಆ ಕಂಪನಿಯಲ್ಲಿ ಎಲ್ಲರ ಕಣ್ಮಣಿಯಾಗಿದ್ದ. ಕೆಲವು ದಿನಗಳ ರಜೆಯ ಮೇಲೆ ಊರಿಗೆ ಹೋಗುವುದಾದರೆ ತನ್ನದೇ ಸ್ವಂತ ಆಡಿ ಕಾರನ್ನು ತಾನೇ ಚಲಾಯಿಸಿಕೊಂಡು ಹೋಗುತಿದ್ದ. ಹಾಗೆ ಹೋಗುವಾಗ ತನ್ನ ಅಣ್ಣ ತಮ್ಮಂದಿರಿಗೆ ಅಕ್ಕತಂಗಿಯರಿಗೆ ಅವರ ಮಕ್ಕಳಿಗೆ ಅರ‍್ದ ಬೆಂಗಳೂರನ್ನೇ ಕರೀದಿ ಮಾಡಿಕೊಂಡು ಹೋಗಿ, ಎಲ್ಲರಿಗೂ ಉಡುಗೊರೆ ಕೊಟ್ಟು ಸಂಬ್ರಮಿಸುತಿದ್ದ. ಈತ ಎಶ್ಟು ಬುದ್ದಿವಂತನೋ ಅಶ್ಟೇ ಸರಳ ಸ್ವಬಾವದ ಕರುಣಾಳು. ತೊಂದರೆ ಎಂದು ಬಂದವರಿಗೆ ಆತ ಸಹಾಯ ಮಾಡದೆ ಹಾಗೆ ಕಳಿಸುತ್ತಿರಲಿಲ್ಲ. ಆತನಿಗೆ ತಂದೆ, ತಾಯಿ ಮತ್ತು ಹಿರಿಯ ಜೀವಿಗಳನ್ನು ಕಂಡರೆ ಅಶ್ಟೆ ಗೌರವ ಮತ್ತು ಬಕ್ತಿ. ಅವರನ್ನೆಂದು ಪಾದ ಮುಟ್ಟಿ ನಮಸ್ಕರಿಸದೇ ಇರುತ್ತಿರಲಿಲ್ಲ, ಅಶ್ಟರ ಮಟ್ಟಿಗೆ ಆತ ಸರಳ ಸಜ್ಜನ ಎಂದರೂ ತಪ್ಪಿಲ್ಲ. ಈತನ ಕಂಪನಿಯವರು ಕೆಲಸದಲ್ಲಿನ ಈತನ ಚಾಣಕ್ಶತೆ ಮತ್ತು ಸಮರ‍್ಪಣ ಬಾವ ಕಂಡು, ಇನ್ನೂ ಹೆಚ್ಚಿನ ಸಂಬಳ ಬತ್ಯೆಯೊಂದಿಗೆ ತಮ್ಮ ಅಮೇರಿಕಾದ ಮೂಲ ಕಂಪನಿಗೆ ಮ್ಯಾನೇಜರ್ ಹುದ್ದೆಗೆ ನೇಮಕ ಮಾಡಿ ತಮ್ಮದೆ ಸ್ವಂತ ಕರ‍್ಚಿನಲ್ಲಿ ವೀಸಾ ಮಾಡಿಸಿ ವರ‍್ಗಾಯಿಸಿದರು.

ನಿತ್ಯ ರಾತ್ರಿ (ಅಂದರೆ ಅಮೇರಿಕಾದಲ್ಲಿ ಬೆಳಗಿನ ಸಮಯ) ತನ್ನ ಮನೆಗೆ ವಿಡಿಯೋ ಕಾಲ್ ಮಾಡಿ ಕೆಲ ಹೊತ್ತು ಎಲ್ಲರ ಜೊತೆಗೆ ಮಾತನಾಡಿ ಕುಶಿ ಪಡಿಸುತಿದ್ದ. ಆಗ ಅವರಪ್ಪಏ ಅಬೀ ನಿಮ್ಮ ದೊಡ್ಡಪ್ಪನ ಹಿರಿ ಮಗಳಿಗೆ ಗಂಡು ಗೊತ್ತಾಗಿದೆ, ಅವನು ಹೈದ್ರಾಬಾದಿನ ಪ್ರತಿಶ್ಟಿತ ಕಂಪನಿಯಲ್ಲಿ ಎಂಜಿನಿಯರ್. ಅವರು ಯುಗಾದಿ ಮುಗಿದು ಒಂದು ತಿಂಗಳೊಳಗೆ ಮದುವೆ ಇಟ್ಕೊಬೇಕು ಅಂತ ಇದಾರೆ, ಮದುವೆ ಗೊತ್ತಾದ್ರೆ ನೀನು ರಜಾ ಹಾಕ್ಕೊಂಡು ಇಂಡಿಯಾಕ್ಕೆ ಬಂದುಬಿಡು ಏನು‌…?” ಎಂದರೆ ಅಬಿ ಅಶ್ಟೆ ಗೌರವದಿಂದಕಂಡಿತ ಅಪ್ಪಾಜಿ ನಾನು ಎರಡು ತಿಂಗಳು ರಜೆ ತೆಗೆದುಕೊಂಡು ಬಂದು ನಮ್ಮ ಅಕ್ಕನ ಎಲ್ಲ ಕಾರ‍್ಯ ಶಾಸ್ತ್ರ ಮುಗಿಸಿ ಅಮೇರಿಕಾಕ್ಕೆ ವಾಪಾಸಾಗ್ತೀನಿ ಆಯ್ತಎಂದು ಬರವಸೆ ನೀಡಿದ್ದ. ದಿನ ಕಳೆಯಿತುದೊಡಪ್ಪನ ಮಗಳು ಅಮ್ರುತಾಳನ್ನು ವರನಿಗೆ ತೋರಿಸುವ ಶಾಸ್ತ್ರ, ಮನೆ ನೋಡುವ ಶಾಸ್ತ್ರ, ಕಡೆಗೆ ನಿಶ್ಚಿತಾರ‍್ತವೂ ಮುಗಿದಿತ್ತು. ಅಮೇರಿಕಾದಲ್ಲಿದ್ದ ಅಬಿಗೆ ಮನೆಯಲ್ಲಿ ನಡೆದ ಇಂಚಿಂಚು ಸುದ್ದಿ ವಿಡಿಯೋ ಕಾಲ್ ಮೂಲಕ ತಲುಪುತಿತ್ತು. ಅಬಿ ಕೆಲಸದ ನಡುವೆಯೂ ಮನೆಯಲ್ಲಿ ನಡೆದ ಶಾಸ್ತ್ರದ ವಿಡಿಯೋವನ್ನು ನೋಡಿ ಸಂತೋಶ ಪಡುತ್ತಿದ್ದ. ಆತನಿಗೆ ಬಹಳ ಸಂತೋಶವಾಗಿತ್ತು ಅಮ್ರುತಾ ವಯಸ್ಸಿನಲ್ಲಿ ಇವನಿಗಿಂತ ಮೂರು ವರ‍್ಶಕ್ಕೆ ದೊಡ್ಡವಳು. ಸಣ್ಣವರಿದ್ದಾಗ ಕಣ್ಣಾ ಮುಚ್ಚಾಲೆ, ಜೂಟಾಟ, ಮರಕೋತಿಯಾಟ ಆಡಿ ಬೆಳೆದವರು. ಎಶ್ಟೋ ಬಾರಿ ಸಣ್ಣಪುಟ್ಟ ಕಾರಣಗಳಿಗೆ ಜಗಳ ಆಡಿ ಕಚ್ಚಾಡಿದ್ದು ಉಂಟು. “ಬಾಲ್ಯದ ಸವಿ ನೆನಪುಗಳಿವುಅಮ್ರುತ ನಿಜಕ್ಕೂ ಅದ್ರುಶ್ಟವಂತೆ ಒಳ್ಳೆಯ ವರನೆ ಸಿಕ್ಕ” ‌ ಈ ಸಂತಸದಲ್ಲಿ, ಅಂದು ವೀಕೆಂಡ್ ಆದ್ದರಿಂದ ಕಾರನ್ನು ಏರಿ, ವಿಂಡೋ ಗ್ಲಾಸ್ ಏರಿಸಿ, ಕಣ್ಣಿಗೆ ಕೂಲಿಂಗ್ ಗ್ಲಾಸ್ ದರಿಸಿ, ಏಸಿ ಆನ್ ಮಾಡಿ ನೂರೈವತ್ತು ಕಿಲೋಮಿಟರ್ ವೇಗದಲ್ಲಿ ಕಾರು ಓಡಿಸಿಕೊಂಡು ಪ್ಲೋರಿಡಾ ಸಿಟಿಯಿಂದ ನೂರು ಕಿಲೋಮಿಟರ್ ದೂರದ ಒಂದು ಪ್ರತಿಶ್ಟಿತ ರೆಸ್ಟೋರೆಂಟ್ ಗೆ ಕೇವಲ ನಲವತ್ತು ನಿಮಿಶದ ಡ್ರೈವಿಂಗ್ ನಲ್ಲಿ ಬಂದು ತಲುಪಿದ್ದ. ಆ ರೆಸ್ಟೋರೆಂಟ್ ಬಹು ವಿಶಾಲವಾಗಿದ್ದು ಅಲ್ಲಿ ಬೇರೆ ಬೇರೆ ದೇಶದ ನಾಗರೀಕರು ಅಮೇರಿಕಾದಲ್ಲಿ ಕೆಲಸ ಕಂಡುಕೊಂಡು ಬಂದವರು ಇಲ್ಲಿ ಸೇರಿ ರಜಾ ದಿನವನ್ನು ಎಂಜಾಯ್ ಮಾಡುತಿದ್ದರು. ಅವರೊಡನೆ ಈ ಅಬಿಯೂ ಒಂದು ಟೇಬಲ್‌ನಲ್ಲಿ ಕುಳಿತುಕೊಂಡಿದ್ದ. ಕೆಲ ಹೊತ್ತಿನ ನಂತರ ಬಹುಶಹ ಅಮೇರಿಕಾದ ಪ್ರಜೆ ಎಂದು ಕಾಣುತ್ತದೆಯು ಬ್ಲಡಿ ಇಂಡಿಯನ್ ಯು ಹ್ಯಾವ್ ಸ್ಟೋಲನ್ ಅವರ್ ಜಾಬ್ಸ್ಎಂದು ಬಾಯಿಗೆ ಬಂದಂತೆ ಬೈಯುತ್ತ ಒಂದು ಮೂಲೆಯ ಟೇಬಲ್‌ನಲ್ಲಿ ಕುಳಿತಿದ್ದ ನಾಲ್ಕು ಜನ ಇಂಡಿಯನ್ಸ್ ಕಡೆಗೆ ತರಳಿ ಏಕಾ ಏಕಿ ಅವರ ಮೇಲೆ ಎರಗಿ ಮುಕ ಮೂತಿ ನೋಡದೆ ಹಿಗ್ಗಾ ಮುಗ್ಗ ಬಾರಿಸತೊಡಗಿದ. ಅವರ ಮುಕ ಮೂತಿಯೆಲ್ಲ ರಕ್ತ ಸಿಕ್ತವಾಗಿತ್ತು ಅಶ್ಟರಲ್ಲೆ ಆ ರೆಸ್ಟೋರೆಂಟ್ ನ ಬಾಡಿಗಾರ್‌ಡ್ ಬಂದು ಓಡಿ ಹೋಗುತಿದ್ದ ಅವನನ್ನು ಪ್ರಯಾಸಪಟ್ಟು ಹಿಡಿದರು. ಅವನ ಸೊಂಟದಲ್ಲಿ ಲೋಡೆಡ್ ಗನ್ ಇತ್ತು ಅದನ್ನು ಕಿತ್ತುಕೊಂಡು ಕೂಡಲೆ ಪೋಲಿಸ್‌ಗೆ ಪೋನ್ ಮಾಡಿ ಅವರಿಗೊಪ್ಪಿಸಿದರು. ಗಾಯಾಳುಗಳನ್ನು ಕೂಡಲೆ ಅಂಬುಲೆನ್ಸ್ ಕರೆಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಕಲಿಸಿದರು. ಇವೆಲ್ಲವನ್ನೂ ಮೌನವಾಗಿ ನೋಡುತಿದ್ದ ಅಬಿ. ಇತ್ತೀಚಿಗೆ ಅಮೇರಿಕಾದಲ್ಲೂ ಜನಾಂಗೀಯ ದ್ವೇಶ ಹುಟ್ಟುಕೊಳ್ಳುತ್ತಿದೆ. ಅದೂ ಬಾರತೀಯರ ಮೇಲೆ ಎಂದು ಯೋಚಿಸಿದ. ತನಗೆ ಬೇಕಾದ ತಿನಿಸು ಆರ‍್ಡರ್ ಮಾಡಿ ತಿಂದು ಅಶ್ಟೆ ಮೌನವಾಗಿ ಎದ್ದು ಹೋದ.

ಇತ್ತ ಅಮ್ರುತಳ ಮದುವೆ ದಿನ ನಿಗದಿ ಆಗಿದೆ. ಸರಿಯಾಗಿ ಮದುವೆಗೆ ಎರಡು ತಿಂಗಳು ಉಳಿದಿದೆ. ಅಬಿ ಮುಂಗಡವಾಗಿ ತನ್ನ ಕಂಪನಿಯ ಮುಕ್ಯಸ್ತರಿಗೆ ರಜೆಗಾಗಿ ಅರ‍್ಜಿ ಸಲ್ಲಿಸಿ ಒಪ್ಪಿಗೆಗಾಗಿ ಕಾಯತೊಡಗಿದ. ಆತ ಎರಡು ತಿಂಗಳು ರಜೆ ಕೋರಿ ಅರ‍್ಜಿ ಸಲ್ಲಿಸಿದ್ದರಿಂದ, ಅದು ದೀರ‍್ಗ ರಜೆಯ ಬೇಡಿಕೆಯಾದ್ದರಿಂದ ಕಂಪನಿ ಮುಕ್ಯಸ್ತರಿಗೆ ರಜೆ ಕೊಡುವ ತಿರ‍್ಮಾನಕ್ಕೆ ಸಮಯ ಬೇಕಿತ್ತು. ಆ ದಿನ ಅಬಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ. ಏಕೋ ಏಕತಾನತೆ ಕಾಡುತಿತ್ತು. ಮನಸ್ಸು ಯಾಕೋ ನಿಂತಲ್ಲಿ ನಿಲ್ಲುತ್ತಿಲ್ಲ. ಏನೋ ಕಸಿವಿಸಿ, ತಳಮಳ. ಬೇಸರದಲ್ಲಿ ಹಾಗೆ ಬೆಡ್ ಮೇಲೆ ಉರುಳಿದ್ದ. ಮಂಪರು ನಿದ್ದೆ ಆವರಿಸಿ ಬಿಟ್ಟಿದೆ. ಎಶ್ಟೋ ಹೊತ್ತಿನಿಂದ ಮೊಬೈಲ್ ರಿಂಗಣಿಸುತ್ತಿದೆ ಅದರ ಪರಿವೆ ಇಲ್ಲದೆ ಅಬಿ ನಿದ್ದೆಗೆ ಜಾರಿದ್ದ. ಆದರೆ ಮೊಬೈಲ್ ಬಡಿದುಕೊಳ್ಳುತ್ತಲೇ ಇತ್ತು. ನಡುರಾತ್ರಿಯಲ್ಲಿ ತಟ್ಟನೆ ಎಚ್ಚರವಾಯ್ತು, ರಿಂಗ್ ಆಗುತಿದ್ದ ಮೊಬೈಲ್ ನೋಡಿದ. ಅದು ವಿಡಿಯೋ ಕಾಲ್ ಆಗಿತ್ತು. ಅಮ್ಮ ಬಿಕ್ಕಿ ಬಿಕ್ಕಿ ಅಳುತಿದ್ದಾಳೆ. “ಅಮ್ಮ ಯಾಕೆ ಅಳ್ತಿದ್ದಿಏನಾಯ್ತಮ್ಮ…?” ಎಂದು ಉದ್ವೇಗದಿಂದ ಕೇಳಿದ…” ಮಗನೆ ಎಲ್ಲ ಮುಗ್ದು ಹೊಯ್ತಪ್ಪನಮ್ಮ ಪಾಲಿಗೆ ದೇವರು ಕ್ರೂರಿ ಆಗ್ಬಿಟ್ಟ“. “ಅಮ್ಮ ಯಾಕಮ್ಮ? ಏನಾಯ್ತಮ್ಮ? ಯಾಕೆ ಹೀಗೆ ಒಗಟಾಗಿ ಮಾತಾಡ್ತಿದ್ದಿ…?”. ಅಮ್ಮನ ದುಕ್ಕ ನಿಲ್ಲುತ್ತಿಲ್ಲ. “ಅಕ್ಕ ಅಮ್ರುತಕ್ಕ ನೀನಾದ್ರೂ ಹೇಳು.. ಏನಾಯ್ತಕ್ಕ…? ” ಅಬಿ ಏನು ಹೇಳ್ಲಪ್ಪ ಈ ದುರಂತನಾ…? “ಅಕ್ಕ ಏನಾಯ್ತು ಹೇಳಕ್ಕ…” ಎಂದಾಗ ಅಮ್ರುತ ನಡೆದ ಗಟನೆ ವಿವರಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಈ ವಿಶಯ ಕೇಳುತಿದ್ದಂತೆ ಅಬಿಯ ಮೇಲೆ ಸಿಡಲೆರಗಿದಂತಾಯ್ತು.

ಅಬಿಯವರ ಮನೆತನದಲ್ಲಿ ಯಾವುದೇ ಶುಬ ಕಾರ‍್ಯ ಗೊತ್ತಾದರೆ ಮನೆಯ ಪ್ರತಿ ಗಂಡಸರು ಬೆಟ್ಟದ ಮಲ್ಲಯ್ಯನಲ್ಲಿಗೆ ತೆರಳಿ ವಿಶೇಶ ಪೂಜೆ ಸಲ್ಲಿಸುವುದು, ದೇವಳಕ್ಕೆ ಕಾಣಿಕೆ ಸಮರ‍್ಪಿಸಿ ಬರುವುದು ಸಂಪ್ರದಾಯ. ಈ ಸಂದರ‍್ಬದಲ್ಲಿ ಅವರೊಡನೆ ಮನೆಯ ಹೆಂಗಸರು ಪೂಜೆಗೆ ತೆರಳುವಂತಿಲ್ಲ ಇದು ತಲಾತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯ. ಅದರಂತೆ ಮನೆಯ ಚಿಕ್ಕವರಾದಿಯಾಗಿ ಹಿರಿ ತಲೆಯವರೆಗೆ ಎಲ್ಲಾ ಗಂಡಸರು ದೊಡ್ಡ ವಾಹನದಲ್ಲಿ ಮಲ್ಲಯ್ಯನ ಬೆಟ್ಟಕ್ಕೆ ತೆರಳಿದೇವರಿಗೆ ಪೂಜೆ ಸಲ್ಲಿಸಿಕೊಂಡು ವಾಹನದಲ್ಲಿ ಬೆಟ್ಟ ಇಳಿಯುತಿದ್ದಾರೆ. ಆ ಬೆಟ್ಟ ನೂರೈವತ್ತರಿಂದ ಇನ್ನೂರು ಮೀಟರ್ ಎತ್ತರವಿದೆ, ಕೆಳಗಡೆ ಕ್ರುಶ್ಣೆಯ ಹಿನ್ನೀರು. ಇದ್ದಕ್ಕಿದ್ದಂತೆ ಇಳಿಜಾರಿನಲ್ಲಿ ವೇಗ ಪಡೆದುಕೊಂಡ ವಾಹನ ಡ್ರೈವರ‌್‌ನ ಹಿಡಿತಕ್ಕೆ ಸಿಗಲಿಲ್ಲ. ಬ್ರೇಕ್ ಒತ್ತಿದರೂ ಬ್ರೇಕ್ ಹಿಡಿಯುತ್ತಿಲ್ಲ. ಓಹ್ ಹೋ ಬ್ರೇಕ್ ಪೇಲ್ ಆಗಿದೆ. ಡ್ರೈವರ್ ಹೇಗಾದರು ಮಾಡಿ ವೇಗವಾಗಿ ಚಲಿಸುತ್ತಿರುವ ವಾಹನದ ವೇಗ ತಗ್ಗಿಸಿ ಯಾವುದಾದರೂ ತಡೆಗೊಡೆಗೆ ಗುದ್ದಿ ನಿಲ್ಲಿಸುವ ಹರ ಸಾಹಸದಲ್ಲಿದ್ದ. ಆದರೆ ವಿದಿಯ ಆಟ ಬೇರೆಯೇ ಆಗಿತ್ತು, ತಿರುವಿನಲ್ಲಿ ಒಂದು ಬಂಡೆ ಕಲ್ಲಿಗೆ ಗುದ್ದಿಸಿ ನಿಲ್ಲಿಸುವ ಪ್ರಯತ್ನ ಮಾಡಿದ. ಗುದ್ದಿದ ವಾಹನದ ವೇಗ ಕಡಿಮೆಯಾಗದೇ, ಬಂಡೆಯೇರಿ ಕೆಳಗಿನ ಕ್ರುಶ್ಣೆಯ ಆಳವಾದ ನೀರಿಗೆ ಅದು ಉರುಳಿತು. ವಾಹನದಲ್ಲಿದ್ದವರ ಕೂಗಾಟಚೀರಾಟ ಮುಗಿಲು ಮುಟ್ಟಿತ್ತು. ಅಬಿ ಮನೆತನದವರ ಒಂದು ಗಂಡು ಕುಡಿಯೂ ಉಳಿಯದಂತೆ ಸಾವನ್ನಪ್ಪಿದ್ದರು. ಸತ್ತವರ ಹೆಣ ಇಪ್ಪತ್ತ ನಾಲ್ಕು ಗಂಟೆಯ ನಂತರ ಕ್ರುಶ್ಣೆಯ ಹಿನ್ನೀರಿನಲ್ಲಿ ತೇಲುತಿದ್ದವು.

ನಮ್ಮ ಮನೆತನದಲ್ಲಿ ನನ್ನೊಬ್ಬನನ್ನು ಹೊರತು ಪಡಿಸಿ ಎಲ್ಲ ಗಂಡು ಕುಡಿಗಳು ಅಸ್ತಂಗತರಾಗಿದ್ದಾರೆ. ಊರಲ್ಲಿನ ಮನೆಯ ವ್ಯವಹಾರಗಳು, ಕ್ರುಶಿ, ಹಸುಕರುಗಳ ಜವಾಬ್ದಾರಿ, ಮನೆಯ ಹೆಣ್ಣು ಮಕ್ಕಳ ಮದುವೆ ಇವೆಲ್ಲ ಜವಾಬ್ದಾರಿ ಇನ್ನು ನನ್ನ ಮೇಲೆ. ನನ್ನೊಳಗಿನ ಎಂಜಿನಿಯರ್‌ಗೆ ತಿಲಾಂಜಾಲಿ ಇಟ್ಟು ಅಮೇರಿಕಾ ತೊರೆದು ಊರು ಸೇರುವ ಒಂದು ನಿರ‍್ದಾರಕ್ಕೆ ಬಂದ. ತಾನು ಕೆಲಸ ಮಾಡುತ್ತಿರುವ ಕಂಪನಿಗೆ ರಾಜಿನಾಮೆ ಸಲ್ಲಿಸಿ, ವೀಸಾ ಪಾಸ್ಪೋರ‍್ಟ್ ರೆಡಿಮಾಡಿಕೊಂಡು ಏರ್ ಟಿಕೆಟ್ ಬುಕ್ ಮಾಡಿಕೊಂಡು ಆ ದಿನ ಏರ‍್ಪೊರ್‌ಟಿಗೆ ಕೊಂಡೊಯ್ಯುವ ಬಸ್ ಏರಿ ಹೊರಟಅಂದು ಬಹಳಶ್ಟು ಬಾರತೀಯರು ಇಂಡಿಯಾಕ್ಕೆ ತೆರಳಲು ಏರ್ ಟಿಕೆಟ್ ಬುಕ್ ಮಾಡಿದ್ದರಂತೆ ಕಾಣುತ್ತದೆ. ಅಬಿ ಪಯಣಿಸುತಿದ್ದ ಬಸ್ಸಲ್ಲಿ ಬಹಳಶ್ಟು ಬಾರತೀಯರೆ ಪ್ರಯಾಣಿಸುತಿದ್ದರು. ಬಸ್ ವೇಗ ಪಡೆದುಕೊಂಡು ಏರ‍್ಪೋರ‍್ಟ್ ಕಡೆಗೆ ನುಗ್ಗುತ್ತಿದೆ, ಇದ್ದಕ್ಕಿದಂತೆ ಮೂರು ಜನ ಅಮೇರಿಕನ್ನರು ದುತ್ತನೆ ಎದ್ದು ಹೋಗಿ ಡ್ರೈವರ್ ತಲೆಗೆ ಪಿಸ್ತೂಲ್ ಗುರಿ ಮಾಡಿ ವೇಗ ತಗ್ಗಿಸದಂತೆ ಆರ‍್ಡರ್ ಮಾಡಿದರು. ಮತ್ತೋರ‍್ವ ಬಸ್ಸಿನ ಬಾಗಿಲ ಬೋಲ್ಟ್ ಬದ್ರ ಪಡಿಸಿ ಪಿಸ್ತೂಲನ್ನು ಬಾರತೀಯ ಪ್ರಯಾಣಿಕರ‌ ಕಡೆ ತೋರಿಸಿದ. ಮತ್ತೊರ‍್ವಯು ಬ್ಲಡಿ ಇಂಡಿಯನ್ ಯೂ ಹ್ಯಾವ್ ಸ್ಟೋಲನ್ ಅವರ್ ಜಾಬ್ಸ್ಎಂದು ಜೋರಾಗಿ ಕೂಗಾಡುತ್ತ ಪ್ರಯಾಣಿಕರ ಮೇಲೆ ಪಿಸ್ತೂಲಿನಿಂದ ಎರ‍್ರಾ ಬಿರ‍್ರಿ ಗುಂಡು ಹಾರಿಸತೊಡಗಿದಅದರಲ್ಲೊಂದು ಗುಂಡು ಅಬಿಯ ಹ್ರುದಯ ಸೀಳಿಕೊಂಡು ಹೋಗಿತ್ತು. ಕ್ಶಣಾರ‍್ದದಲ್ಲಿ ಅಬಿಯ ಪ್ರಾಣ ಪಕ್ಶಿ ಹಾರಿ ಹೋಗಿತ್ತು. ಅಬಿಯ ಮನೆತನದ ಕೊನೆಯ ಗಂಡು ಕುಡಿಯು ನಶಿಸಿ ಹೋಗಿತ್ತು. ಅಬಿಯೊಳಗಿನ ಎಂಜಿನಿಯರ್ ಮರೆಯಾಗುವುದಿರಲಿ ವಾಸ್ತವದಲ್ಲಿ ಆ ಎಂಜಿನಿಯರ್ ಇಲ್ಲವಾಗಿದ್ದ. ಈಗ ಅಕ್ಶರಶಹ ಅನಾತರಾಗಿದ್ದು ಅಬಿ ಊರಿನ ಅವನ ಮನೆತನದ ಎಲ್ಲ ಹೆಣ್ಣುಮಕ್ಕಳು!

ಅಮೇರಿಕಾದ ಎಲ್ಲಾ ಮಾದ್ಯಮಗಳು ಜನಾಂಗೀಯ ದ್ವೇಶದಿಂದ ಐದು ಬಾರತೀಯರನ್ನು ದುಶ್ಕರ‍್ಮಿಗಳು ಗುಂಡಿಟ್ಟು ಹತ್ಯೆ ಮಾಡಿದರು ಎಂದು ವರದಿ ಮಾಡಿದವು.

(ಚಿತ್ರ ಸೆಲೆ: needpix)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: