“ಟ್ರೀ ಆಪ್ ಆಡಮ್” – ಅರಿವಿನ ಮರ!

– ಕೆ.ವಿ. ಶಶಿದರ.

The Tree of Knowledge, Adam's tree. ಬೈಬಲ್ ಕಾಲದ 'ಟ್ರೀ ಆಪ್ ಆಡಮ್', ಗ್ನಾನದ ಮರ

ತುಂಬಾ ಹಳೇ ಕಾಲದ ಮರವೊಂದು ಇರಾಕಿನ್ ಎಲ್ ಗುರ‍್ನಾದಲ್ಲಿದೆ. ಇದು ಎಶ್ಟು ಹಳೆಯದೆಂದರೆ ಬೈಬಲ್‌ನಲ್ಲಿ ಹೇಳಲಾದ ಅರಿವಿನ ಮರ (The Tree of Knowledge) ಇದೇ ಎಂದು ಮಂದಿ ಇಂದಿಗೂ ನಂಬುತ್ತಾರೆ. ಇದು ದೇವ ಮರವಾದ ಕಾರಣ ಇಶ್ಟು ವರ‍್ಶಗಳ ಕಾಲ ಉಳಿಯಲು ಸಾದ್ಯವಾಗಿದೆ ಎನ್ನುವ ನಂಬಿಕೆ ಹಲವು ಮಂದಿಯಲ್ಲಿದೆ. ಇದು ನಿಜವೋ ಅಲ್ಲವೋ ಎಂಬ ವಿಶ್ಲೇಶಣೆ ಬೇಡ. ಅದಕ್ಕೆ ಸಮಂಜಸ ಉತ್ತರ ಹುಡುಕುವುದು ಸಾಹಸವೇ ಸೈ. ಮರದ ಮುಂದೆ “ಟ್ರೀ ಆಪ್ ಆಡಮ್” ಎಂದು ಹೇಳುವ ಪಲಕ ಇದೆ.

ಈವ್ ತಿಂದ ಹಣ್ಣು ಇದೇ ಮರದ್ದು ಅಂತೆ!

ಇರಾಕ್ ದೇಶದ ದಕ್ಶಿಣದಲ್ಲಿನ ಎಲ್ ಗುರ‍್ನಾದ ಬಳಿ ಟೈಗ್ರೆಸ್ ನದಿಯು ಯೂಪ್ರೇಟಸ್ ನದಿಯನ್ನು ಸೇರುವ ಸ್ತಳದಲ್ಲಿ, ಈಡನ್ ಕೈತೋಟ ಇತ್ತು ಎಂದು ಬೈಬಲ್ ಸಂಪ್ರದಾಯದವರು ನಂಬಿದ್ದರು. ಅಲ್ಲಿ ಹಳೆಯ ಪುರಾತನ ಮರದ ಕೊಳೆತ ಕಾಂಡವು ಒಂದು ಸಣ್ಣ ಕಟ್ಟೆಯ ಮೇಲಿದೆ. ಬೈಬಲ್‌ನಲ್ಲಿ ಹೇಳುವಂತೆ ಈವ್‍ ತಿಂದ ಹಣ್ಣು ಇದೇ ಮರದ್ದು ಎನ್ನು ದಂತಕತೆ ಸಹ ಪ್ರಚಲಿತದಲ್ಲಿದೆ. ಈ ಮರವನ್ನು ಕಾಪಾಡಲು ಸುತ್ತಲೂ ಬೇಲಿ ಹಾಕಲ್ಪಟ್ಟಿದೆ.adam's trree

“ಟ್ರೀ ಆಪ್ ಆಡಮ್” ಮರವು ಒಂದು ದೊಡ್ಡ ಬಾರೆ ಹಣ್ಣಿನ (ಜಿಜಿಪಸ್ ಲೋಟಸ್) ಮರ. ಇರಾಕ್ ದೇಶದಲ್ಲಿ ಇಂತಹ ಮರಗಳು ಸಾಮಾನ್ಯವಾಗಿವೆ. ವರ‍್ಶಕ್ಕೆ ಎರಡು ಬಾರಿ ಹಳದಿ ಬಣ್ಣದ ಹಣ್ಣನ್ನು ಬಿಡುತ್ತವೆ. ಸ್ತಳೀಯರು ಇದನ್ನು ನಬುಕ್ಕೊ ಎಂದು ಗುರುತಿಸುವುದರ ಜೊತೆಗೆ ಪವಿತ್ರವೆಂದು ಪರಿಗಣಿಸುತ್ತಾರೆ. ಬಹಳಶ್ಟು ವರ‍್ಶಗಳ ಕಾಲ ಈ ಮರವು ಕಡೆಗಣಿಸಲ್ಪಟ್ಟಿತ್ತು. ಇತ್ತೀಚೆಗೆ ಅದರ ಆರೈಕೆಯ ಉಸ್ತುವಾರಿಯನ್ನು ಸರ‍್ಕಾರವು ದಾರ‍್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ವರ‍್ಗಾಯಿಸಿದೆ.

ಈ ಮರದ ಹಿಂದೆ ಹಲವು ಕತೆಗಳಿವೆ

ಈ ಮರದ ಹುಟ್ಟನ್ನು ತಿಳಿಸುವ ಹಲವು ಕತೆಗಳನ್ನು ಸುಮೇರಿಯನ್ ಹಾಗೂ ಬ್ಯಾಬಿಲೋನಿಯನ್ ಬರಹಗಳಲ್ಲಿ ಕಾಣಬಹುದು. ಈ ಗ್ನಾನ ಮರದ ಕತೆಯು ಬೈಬಲ್‍ಗಿಂತಲೂ ಹಳೆಯದಾಗಿರಬಹುದು ಎಂದೂ ಅಂದಾಜಿಸಲಾಗಿದೆ. ಪ್ರಾಚೀನ ಮೆಸಪಟೋಮಿಯಾದ ಉತ್ಕನನದ ಸಮಯದಲ್ಲಿ ಅಲ್ಲಿ ಮಣ್ಣಿನ ಮುದ್ರೆ ದೊರಕಿದ್ದು, ಅದು ಕ್ರಿಸ್ತ ಪೂರ‍್ವ ನಾಲ್ಕು ಮಿಲಿಯನ್ ವರ‍್ಶಗಳಶ್ಟು ಹಳೆಯದ್ದಾಗಿದೆ. ಅದರ ಮೇಲಿನ ಚಿತ್ರದಲ್ಲಿ ಒಬ್ಬ ಪುರುಶ ಮತ್ತು ಮಹಿಳೆ ಮರದಲ್ಲಿನ ಸೇಬನ್ನು ಕೀಳುತ್ತಿರುವ ಚಿತ್ರಣ ಇದೆ. ಅದೇ ಆಡಮ್ ಮತ್ತು ಈವ್ ಎಂದು ನಂಬಿದ್ದಾರೆ ಅಲ್ಲಿಯ ಜನ. ಅದರಲ್ಲಿರುವ ಮರವೇ ಇದು ಎಂಬ ನಂಬಿಕೆ ಅವರದ್ದು.

ಕೋರಿಕೆಗಳನ್ನು ಪೂರೈಸುವ ಮರ!

ಈ ಮರವು ಮದ್ಯಪ್ರಾಚ್ಯದಲ್ಲಿರುವ ಮರಗಳ ಆರಾದನೆಯ ಬಹು ದೇವತಾ ಸಂಪ್ರದಾಯಗಳಿಗೆ ನೇರ ಕೊಂಡಿಯಿದ್ದಂತಿದೆ. ಹಾಗಾಗಿ ಹಳೆಯದಾಗಿ ಇನ್ನೇನು ತನ್ನ ಆಯಸ್ಸನ್ನು ಮುಗಿಸಲಿರುವ ಈ ಪವಿತ್ರ ಮರದ ಪಕ್ಕದಲ್ಲಿ ಹೊಸ ಸಸಿಯನ್ನು ನೆಡುವ ಮೂಲಕ, ಇದರ ಪಾವಿತ್ರ್ಯತೆಯನ್ನು ಮುಂದುವರೆಸುತ್ತಿದ್ದಾರೆ. ಹಾಗಾಗಿ ಈ ವೇದಿಕೆಯಲ್ಲಿ ಹಲವಾರು ಮರಗಳಿವೆ. ಹಲವು ಮರಗಳು ಕೊಳೆಯುವ ಸ್ತಿತಿಯಲ್ಲಿವೆ. ಇದರಲ್ಲಿ ಯಾವುದು ಮೂಲ ಪವಿತ್ರ ಮರ ಎಂದು ತಿಳಿಯಲು ನಿರ‍್ದಿಶ್ಟ ಮಾರ‍್ಗ ಇಲ್ಲದಂತಾಗಿದೆ. ಇದರ ವೀಕ್ಶಣೆಗೆ ಬರುವ ಯಾತ್ರಿಗಳು, ಮರದ ಮುಂದೆ ಕುಳಿತು ಪ್ರಾರ‍್ತಿಸಿ ನಂತರ ಕೊಂಬೆಗಳಿಗೆ ಹಸಿರು ಬಣ್ಣದ ಬಟ್ಟೆಯ ತುಂಡನ್ನು ಕಟ್ಟುವುದು ವಾಡಿಕೆ. ಈ ರೀತಿ ಕಟ್ಟುವುದರಿಂದ ತಮ್ಮ ಪ್ರಾರ‍್ತನೆ ಕೈಗೂಡುತ್ತದೆ ಮತ್ತು ಇಶ್ಟಾರ‍್ತ ಪೂರೈಸುತ್ತದೆ ಎಂಬ ನಂಬಿಕೆ ಅವರದು.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: