ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು -11 ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಎಲೆ ಮನವೆ
ನಿನ್ನ ನಿಜವನರಿಯಬಲ್ಲಡೆ
ಅದೇ ಬ್ರಹ್ಮಜ್ಞಾನ
ಅದೇ ಕೇವಲ ಮುಕ್ತಿ. (986/229)

ಎಲೆ=ಏನನ್ನಾದರೂ ಕುರಿತು ಇಲ್ಲವೇ ಯಾರನ್ನಾದರೂ ಉದ್ದೇಶಿಸಿ ಮಾತನಾಡುವಾಗ ಬಳಸುವ ಪದ; ಮನ=ಮನಸ್ಸು/ಚಿತ್ತ;

ನಿಜ+ಅನ್+ಅರಿಯ+ಬಲ್ಲಡೆ; ನಿಜ=ದಿಟ/ಸತ್ಯ/ವಾಸ್ತವ; ಅರಿ=ತಿಳಿ/ಕಲಿ; ಅರಿಯಬಲ್ಲಡೆ=ತಿಳಿದುಕೊಳ್ಳುವೆಯಾದರೆ/ಅರಿತುಕೊಳ್ಳುವಂತಾದರೆ;

ಅದೇ=ಅಂತಹ ತಿಳುವಳಿಕೆಯೇ; ಬ್ರಹ್ಮ=ಇಹಲೋಕದಲ್ಲಿನ ಸಕಲ ಜೀವಿಗಳ ಹುಟ್ಟಿಗೆ ಕಾರಣನಾದ ಪರಮಾತ್ಮ/ದೇವರು; ಜ್ಞಾನ=ಅರಿವು/ತಿಳುವಳಿಕೆ;

‘ಬ್ರಹ್ಮಜ್ಞಾನ’ ಎಂದರೆ ದೇವರ ಅವತಾರದ ಹಿನ್ನೆಲೆ, ದೇವರು ಮಾಡುವ ಪವಾಡ ಮತ್ತು ದೇವರ ಮಹಿಮೆಯನ್ನು ಬಣ್ಣಿಸುವ ಸಂಗತಿಗಳನ್ನು ಮನನ ಮಾಡಿಕೊಂಡು, ಜಗತ್ತಿನ ಎಲ್ಲ ಆಗುಹೋಗುಗಳಿಗೆ ದೇವರೇ ಕಾರಣನೆಂಬ ಅರಿವನ್ನು ಪಡೆಯುವುದು;

ಕೇವಲ=ಅಪ್ಪಟ/ಪರಿಪೂರ‍್ಣ; ಮುಕ್ತಿ=ಹುಟ್ಟು ಸಾವಿನ ತಿರುಗುಣಿಯಿಂದ ಜೀವ ಇಲ್ಲವೇ ಆತ್ಮ ಬಿಡುಗಡೆಯನ್ನು ಹೊಂದುವುದು. ಮುಕ್ತಿಯನ್ನು ಪಡೆದ ಜೀವಿಯು ಮತ್ತೆ ಯಾವುದೇ ಹುಟ್ಟನ್ನು ಪಡೆದು ಈ ಲೋಕಕ್ಕೆ ಬರುವುದಿಲ್ಲವೆಂಬ ನಂಬಿಕೆಯು ಜನಮನದಲ್ಲಿದೆ.

ಶಿವಶರಣಶರಣೆಯರು ದೇವರ ಅವತಾರ, ಪವಾಡ ಮತ್ತು ಮಹಿಮೆಯನ್ನು ಬಣ್ಣಿಸುವ ಸಂಗತಿಗಳನ್ನು ನಿರಾಕರಿಸಿದ್ದರು. ಪುನರ್ ಜನ್ಮ , ಕರ‍್ಮ ಸಿದ್ದಾಂತ ಮತ್ತು ವಿದಿ ಬರಹದಿಂದ ಇಹಲೋಕದಲ್ಲಿ ಜೀವಿಗಳ ಬದುಕು ನಡೆಯುತ್ತಿದೆಯೆಂಬ ತತ್ವವನ್ನು ಅಲ್ಲಗಳೆದು , ಪ್ರತಿಯೊಬ್ಬ ವ್ಯಕ್ತಿಗೂ ‘ನಿನ್ನ ನಿಜವನರಿಯಬಲ್ಲಡೆ’ ಎಂದು ಕರೆ ನೀಡಿದ್ದಾರೆ;

ವ್ಯಕ್ತಿಯು ತನ್ನ ನಿಜವನ್ನು ಅರಿಯುವುದೆಂದರೆ ‘ತನ್ನನ್ನು ಒಳಗೊಂಡಂತೆ ಎಲ್ಲ ಮಾನವರ ಬದುಕಿನ ಆಗುಹೋಗುಗಳಿಗೆ ನಿಸರ‍್ಗದಲ್ಲಿ ನಡೆಯುವ ಸಂಗತಿಗಳು ಮತ್ತು ವ್ಯಕ್ತಿಗಳ ಒಳಿತು ಕೆಡುಕಿನ ನಡೆನುಡಿಗಳೇ ಕಾರಣವೆಂಬ ವಾಸ್ತವವನ್ನು ಅರಿತುಕೊಳ್ಳುವುದು’. ಈ ಬಗೆಯ ಅರಿವನ್ನು ವ್ಯಕ್ತಿಯು ಪಡೆದಾಗ , ತನ್ನ ಉಳಿವು ಅಳಿವಿಗೆ ಕಾರಣವಾಗಿರುವ ನಿಸರ‍್ಗವನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ಮತ್ತು ತನ್ನ ಒಳಿತಿನ ಜತೆಜತೆಗೆ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳುವ ಎಚ್ಚರವನ್ನು ವ್ಯಕ್ತಿಯು ಹೊಂದುತ್ತಾನೆ. ಇಂತಹ ಎಚ್ಚರದಿಂದ ಬಾಳಲು ತೊಡಗಿದಾಗ ಮಾನವರು ಹಸಿವು, ಬಡತನ ಮತ್ತು ಸಂಕಟಗಳಿಂದ ಬಿಡುಗಡೆಯನ್ನು ಹೊಂದುತ್ತಾರೆ.

ಅಲ್ಲಮನು ವ್ಯಕ್ತಿಯ ಒಳ್ಳೆಯ ನಡೆನುಡಿಗಳನ್ನು ‘ಬ್ರಹ್ಮಜ್ಞಾನ’ ಎಂದು ಮತ್ತು ತಪ್ಪು ತಿಳುವಳಿಕೆಯಿಂದ ಮಾನಸಿಕವಾಗಿ ಬಿಡುಗಡೆಯನ್ನು ಪಡೆಯುವುದನ್ನು ‘ಮುಕ್ತಿ’ ಎಂದು ಕರೆದಿದ್ದಾನೆ.

ಕಾಯದ ಸಂಗದ ಜೀವ ಉಳ್ಳನ್ನಕ್ಕರ
ಎಂದೂ ಭವ ಹಿಂಗದು ಗುಹೇಶ್ವರ. (323/163)

ಕಾಯ=ಮಯ್/ದೇಹ/ಶರೀರ; ಸಂಗ=ಕೂಡುವಿಕೆ/ಹೊಂದಿಕೆ/ಸೇರಿಕೆ; ಜೀವ=ಪ್ರಾಣ/ಉಸಿರು; ಉಳ್ಳ್=ಇರುವುದು; ಅನ್ನಕ್ಕರ=ವರೆಗೆ/ತನಕ;

ಕಾಯದ ಸಂಗದ ಜೀವ ಉಳ್ಳನ್ನಕ್ಕರ=ದೇಹದೊಡನೆ ಉಸಿರು ಬೆರೆತು ವ್ಯಕ್ತಿಯು ಜೀವಂತನಾಗಿರುವ ತನಕ;

ಎಂದೂ=ಯಾವಾಗಲೂ/ಸದಾಕಾಲ/ಯಾವ ಸಮಯದಲ್ಲಿಯೂ; ಭವ=ಈ ಲೋಕದಲ್ಲಿ ವ್ಯಕ್ತಿಯ ಜೀವನದಲ್ಲಿ ಉಂಟಾಗುವ ನೋವು ನಲಿವು ಮತ್ತು ಒಳಿತು ಕೆಡುಕು;

ಹಿಂಗು=ಬಿಟ್ಟುಹೋಗು/ಹೊರಟುಹೋಗು/ಇಲ್ಲವಾಗು; ಹಿಂಗದು=ಇಲ್ಲವಾಗುವುದಿಲ್ಲ; ಗುಹೇಶ್ವರ=ಶಿವ/ಈಶ್ವರ/ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ;

ವ್ಯಕ್ತಿಯು ಜೀವಂತವಾಗಿರುವ ತನಕ ಅವನ ಮಯ್ ಮನದಲ್ಲಿ ಎಲ್ಲ ಬಗೆಯ ಒಳಿತು ಕೆಡುಕಿನ ಒಳಮಿಡಿತಗಳು ತುಡಿಯುತ್ತಿರುತ್ತವೆ ಮತ್ತು ಅವನ ಬದುಕಿನಲ್ಲಿ ಒಂದಲ್ಲ ಒಂದು ಬಗೆಯ ನೋವು ನಲಿವುಗಳು ಇದ್ದೇ ಇರುತ್ತವೆ. ಆದ್ದರಿಂದ ಸಾವು ಬರುವ ತನಕ ವ್ಯಕ್ತಿಯು ತನ್ನ ಮನದಲ್ಲಿ ಮೂಡುವ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಜೀವನದ ಉಂಟಾಗುವ ಎಡರು ತೊಡರುಗಳನ್ನು ಸಮಚಿತ್ತದಿಂದ ಎದುರಿಸಿ ಬಾಳಬೇಕೆಂಬುದನ್ನು ಅರಿತುಕೊಳ್ಳಬೇಕು;

ಕೋಪ ತಾಪವ ಬಿಟ್ಟು
ಭ್ರಾಂತಿ ಭ್ರಮೆಯಂ ಬಿಟ್ಟು
ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. (1137/242)

ಕೋಪ=ಸಿಟ್ಟು/ಆಕ್ರೋಶ/ಮುನಿಸು; ತಾಪ=ಸಂಕಟ/ನೋವು/ವೇದನೆ; ಬಿಡು=ತೊರೆ/ತ್ಯಜಿಸು; ಬಿಟ್ಟು=ಹೋಗಲಾಡಿಸಿಕೊಂಡು/ಇಲ್ಲವಾಗಿಸಿಕೊಂಡು/ತೊರೆದು/ತ್ಯಜಿಸಿ;

ಭ್ರಾಂತಿ=ತಪ್ಪು ತಿಳುವಳಿಕೆ; ಭ್ರಮೆ=ಇರುವುದನ್ನು ಇಲ್ಲವೆಂದೂ, ಇಲ್ಲದ್ದನ್ನು ಇದೆಯೆಂದೂ ನಂಬುವುದು;

ಜಂಗಮ+ಆಗಬೇಕು; ಜಂಗಮ=ಸಹ ಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಡೆನುಡಿಗಳಲ್ಲಿ ಶಿವನನ್ನು ಕಾಣುವವನು/ಜನಮನದಲ್ಲಿ ಒಳ್ಳೆಯ ನಡೆನುಡಿಗಳಿಗೆ ಪ್ರೇರಣೆಯಾಗುವಂತಹ ಸಾಮಾಜಿಕ ಅರಿವು ಮತ್ತು ಎಚ್ಚರವನ್ನು ಮೂಡಿಸುವವನು; ಕಾಣ್=ನೋಡು/ತಿಳಿ; ಕಾಣಿರೆ=ಅರಿತುಕೊಳ್ಳಿರಿ/ತಿಳಿದುಕೊಳ್ಳಿರಿ;

ಮರುಳು=ದಡ್ಡ/ತಿಳಿಗೇಡಿ;

ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ಬಾಳಬೇಕಾದರೆ, ತನ್ನ ಮಯ್ ಮನದಲ್ಲಿ ನಾನಾ ಕಾರಣಗಳಿಂದಾಗಿ ಮೂಡಿಬರುವಂತಹ ಕೋಪವನ್ನು ಹತೋಟಿಯಲ್ಲಿಟ್ಟುಕೊಂಡು, ತನ್ನನ್ನು ಮತ್ತು ಇತರರನ್ನು ಸಂಕಟಕ್ಕೆ ಇಲ್ಲವೇ ದುರಂತಕ್ಕೆ ದೂಡುವಂತಹ ಪ್ರಸಂಗ ಉಂಟಾಗದಂತೆ ತಡೆಗಟ್ಟಬೇಕು. ಜಾತಿ , ಮತ ಮತ್ತು ದೇವರ ಬಗೆಗೆ ಪರಂಪರಾಗತವಾಗಿ ತನ್ನ ಮನದಲ್ಲಿ ನೆಲೆಗೊಂಡಿರುವ ಬಹುಬಗೆಯ ತಪ್ಪು ಕಲ್ಪನೆಗಳನ್ನು ಹೊರಹಾಕಬೇಕು. ಆಗ ಮಾತ್ರ ಜಂಗಮನಾದ ವ್ಯಕ್ತಿಯು ಅರಿವಿನ ಹಾದಿಯಲ್ಲಿ ಹೇಗೆ ಮುನ್ನಡೆಯುತ್ತಿರುತ್ತಾನೆಯೋ ಅಂತೆಯೇ ಅರಿವನ್ನು ಪಡೆದ ವ್ಯಕ್ತಿಯ ಬದುಕು ಒಳಿತಿನ ಹಾದಿಯಲ್ಲಿ ಸಾಗುತ್ತಿರುತ್ತದೆ ಎಂಬ ಇಂಗಿತವನ್ನು ಈ ಸಾಲುಗಳು ಸೂಚಿಸುತ್ತಿವೆ.

‘ಜಂಗಮ’ ಎಂಬ ಪದ ಇಲ್ಲಿ ಒಂದು ರೂಪಕವಾಗಿ ಬಳಕೆಯಾಗಿದೆ. ‘ಜಂಗಮ’ ಎಂಬ ಪದಕ್ಕೆ ಒಂದೇ ಕಡೆಯಲ್ಲಿ ನೆಲೆಯಾಗಿ ನಿಲ್ಲದೆ, ಸದಾಕಾಲ ಸಂಚರಿಸುತ್ತಿರುವುದು ಎಂಬ ತಿರುಳಿದೆ. ಮಾನವ ಸಮುದಾಯವು ಜಾತಿ, ಮತ, ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಕಟ್ಟುಪಾಡುಗಳಿಗೆ ಮತ್ತು ನಂಬಿಕೆಗಳಿಗೆ ವ್ಯಕ್ತಿಯು ಅಂಟಿಕೊಳ್ಳದೆ, ಅವುಗಳಿಂದ ಮಾನಸಿಕವಾಗಿ ಹೊರಬಂದು ಒಳ್ಳೆಯ ನಡೆನುಡಿಗಳಿಂದ ಜೀವನವನ್ನು ಮುನ್ನಡೆಸುವಂತಾಗಬೇಕು ಎಂಬ ತಿರುಳಿನಲ್ಲಿ ‘ಜಂಗಮ’ ಪದ ಬಳಕೆಯಾಗಿದೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks