ಕೆರಿಬಿಯನ್‌ನಲ್ಲಿ ಶಂಕ ಚಿಪ್ಪುಗಳಿಂದಾದಂತಿರುವ ದ್ವೀಪ

– ಕೆ.ವಿ. ಶಶಿದರ.

Conch Shells ಶಂಕ ಧ್ವೀಪ

ಈ ದ್ವೀಪ ನಿಜಕ್ಕೂ ಶಂಕದ ಆಕಾರದಲ್ಲಿ ಇಲ್ಲ. ಆದರೆ ಈ ದ್ವೀಪದಲ್ಲಿ ಎಲ್ಲೇ ಹೆಜ್ಜೆ ಇಟ್ಟರೂ ಅಲ್ಲೆಲ್ಲಾ ಶಂಕವೇ ಕಾಲಿಗೆ ಸಿಗುತ್ತದೆ. ವಿಚಿತ್ರ ಎನಿಸಿತೇ? ಹೌದು ಇದೊಂದು ವಿಚಿತ್ರ ದ್ವೀಪ. ಈ ದ್ವೀಪದಲ್ಲಿ ಶಂಕದ ಪರ‍್ವತವೇ ಇದೆ. ಶಂಕ ದ್ವೀಪವನ್ನು ತಾಂತ್ರಿಕವಾಗಿ ಗಮನಿಸಿದಲ್ಲಿ ಇದರಲ್ಲಿ ದ್ವೀಪದ ಯಾವುದೇ ಲಕ್ಶಣಗಳು ಇಲ್ಲ. ಬದಲಿಗೆ ಇದು ಅನೇಕ ವರ‍್ಶಗಳ ಕಾಲ ಮೀನುಗಾರರಿಂದ ತ್ಯಜಿಸಲ್ಪಟ್ಟ ಅಸಂಕ್ಯಾತ ಶಂಕ ಚಿಪ್ಪುಗಳ ಬ್ರುಹತ್ ರಾಶಿ ಪರ‍್ವತವೆಂದೇ ಪರಿಗಣಿಸಬಹುದು. ಎಶ್ಟು ವರ‍್ಶಗಳ ಕಾಲ ರಾಶಿ ಹಾಕಿದರೆ ಇಶ್ಡು ಬ್ರುಹತ್ ಶಂಕ ಪರ‍್ವತ ನಿರ‍್ಮಿಸಲು ಸಾದ್ಯ? ಇದರ ಮೂಲ ಹುಡುಕುತ್ತಾ ಹೋದಾಗ ಕಂಡು ಬಂದಿದ್ದು ನೂರಾರು ವರ‍್ಶ ಹಿಂದಿನ ಪಳೆಯುಳಿಕೆಗಳು. ಕೆರೇಬಿಯನ್ನಲ್ಲಿರುವ ಬ್ರಿಟೀಶ್ ವರ‍್ಜಿನ್ ದ್ವೀಪಗಳಲ್ಲಿ ಎರಡನೇ ದೊಡ್ಡದಾದ ಅನೆಗಡಾದ ಪೂರ‍್ವದಲ್ಲಿದೆ ಈ ಶಂಕ ದ್ವೀಪ. ಇದು ಪ್ರಸಿದ್ದಿಯಾಗಿರುವುದು ಪ್ರಮುಕ ಪ್ರವಾಸಿ ತಾಣ ಎಂದು. ಇದರಲ್ಲಿನ ಆಕರ‍್ಶಣೆ ರಾಶಿ ರಾಶಿ ಶಂಕುವಿನಿಂದ. ಶಂಕದಲ್ಲಿನ ಮಾಂಸವನ್ನು ಉಪಯೋಗಿಸಿದ ನಂತರ ಉಳಿಯುವ ಶಂಕದ ಚಿಪ್ಪುಗಳನ್ನು ಇಲ್ಲಿ ಸುರಿಯಲಾಗಿದೆ. ಅನಾದಿ ಕಾಲದಿಂದಲೂ ಶಂಕದ ಮಾಂಸ ಇಲ್ಲಿ ಎಶ್ಟು ಜನಪ್ರಿಯವಾಗಿತ್ತು ಎಂಬುದಕ್ಕೆ ಇಲ್ಲಿರುವ ಶಂಕಗಳು ಮೂಕ ಸಾಕ್ಶಿಯಾಗಿವೆ.

ಮೀನುಗಾರರಿಗೆ ಅತ್ಯಂತ ನಿದಾನಗತಿಯಲ್ಲಿ ಚಲಿಸುವ, ತಿನ್ನಬಹುದಾದ ಶಂಬುಕವನ್ನು ಹಿಡಿಯುವುದು ಅತಿ ಸುಲಬ. ಇದು ಅನೆಗಡಾದ ಪೂರ‍್ವದಲ್ಲಿ ಹೇರಳವಾಗಿ ಲಬ್ಯವಿದ್ದ ಹಿನ್ನೆಲೆಯಲ್ಲಿ ಮೀನುಗಾರರು ಅಲ್ಲಿನ ಸಮುದ್ರದಲ್ಲಿ ಇಳಿದು ಇವುಗಳನ್ನು ಸಂಗ್ರಹಿಸಿ, ಅವುಗಳ ಮಾಂಸವನ್ನು ತೆಗೆದು, ದೊಡ್ಡ, ಚಿಕ್ಕ ಚಿಪ್ಪುಗಳನ್ನು ಒಂದೇ ಸ್ತಳದಲ್ಲಿ ಎಸೆದ ಕಾರಣ, ಈ ಪರ‍್ವತ ನಿರ‍್ಮಾಣವಾಗಿದೆ. ಶಂಕ ದ್ವೀಪದ ಸ್ರುಶ್ಟಿಗೆ ಇದೇ ಮೂಲ ಕಾರಣ ಎನ್ನುತ್ತಾರೆ ಇತಿಹಾಸಕಾರರು. ಕೆರಿಬಿಯನ್ನರ ಪಾಕ ಪದ್ದತಿಯಲ್ಲಿ ಅತಿ ಹೆಚ್ಚು ಬಳಕೆಯಾಗುವುದು ಈ ಶಂಕ. ಶಂಕ ಈ ಪ್ರದೇಶದ ಸಮುದ್ರದಲ್ಲಿ ಹೇರಳವಾಗಿ ದೊರಕುತ್ತಿದ್ದ ಕಾರಣ, ಅದನ್ನೇ ಮೂಲವಾಗಿಸಿಕೊಂಡು ವೈವಿದ್ಯತೆಯ ಕಾದ್ಯ ತಯಾರಿಕೆಯಲ್ಲಿ ಇಲ್ಲಿನ ಜನರು ಪ್ರಾವೀಣ್ಯತೆಯನ್ನು ಸಂಪಾದಿಸಿದ್ದಾರೆ.

ಶಂಕಚಿಪ್ಪುಗಳಿಂದ ಕೆಲವು ಬೆರಗುಗೊಳಿಸುವ ನೆನಪಿನ ಕಾಣಿಕೆಯನ್ನು ತಯಾರು ಮಾಡುವಲ್ಲೂ ಪ್ರವೀಣರಾಗಿದ್ದಾರೆ ಇಲ್ಲಿಯವರು. ಈ ನೆನಪಿನ ಕಾಣಿಕೆಯ ವಿವಿದ ನಮೂನೆಗಳನ್ನು ಮನೆಗಳಲ್ಲಿ ಜೋಪಾನ ಮಾಡಲು ಹಾಗೂ ಮತ್ತೆ ಕೆಲವನ್ನು ಆಬರಣಗಳ ತಯಾರಿಕೆಯಲ್ಲಿ ಉಪಯೋಗಿಸಿ ಪ್ರವಾಸಿಗರಿಗೆ ಮಾರಲಾಗುತ್ತದೆ. ಇದೊಂದು ಉದ್ಯಮವಾಗಿ ಬೆಳೆದಿದೆ. ಶಂಕಗಳಿಂದ ಇಶ್ಟೆಲ್ಲಾ ಉಪಯೋಗವಿದ್ದರೂ, ನೆನಪಿನ ಸ್ಮಾರಕಗಳ ಮತ್ತು ಆಬರಣಗಳ ತಯಾರಿಕೆಯಲ್ಲಿ ರಾಶಿ ರಾಶಿ ಬಿದ್ದಿರುವ ಶಂಕಗಳು ಉಪಯೋಗಕ್ಕೆ ಬರುವುದಿಲ್ಲ. ಇವುಗಳಲ್ಲಿ ಉಪಯೋಗಿಸುವುದು ಮೀನುಗಾರರಿಂದ ಕರೀದಿಸಿದ ಹೊಸ ಶಂಕಗಳನ್ನು ಮಾತ್ರ. ಏಕೆಂದರೆ, ಶಂಕ ದ್ವೀಪದಲ್ಲಿ ಪರ‍್ವತದಂತಿರುವ ಶಂಕದ ರಾಶಿ ದೂರದಿಂದ ಬೆರಗುಗೊಳಿಸುವಶ್ಟು ಚಂದ ಕಂಡರೂ, ಹತ್ತಿರದಿಂದ ನೋಡಿದರೆ ಬಹಳ ಕೆಟ್ಟದಾಗಿದೆ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ. ಈ ದ್ವೀಪದಲ್ಲಿ ರಾಶಿ ಬಿದ್ದಿರುವ ಬಹುತೇಕ ಶಂಕಗಳು ವಿರೂಪಗೊಂಡಿವೆ. ಇದಕ್ಕೆ ಮೂಲ ಕಾರಣ ಶಂಕದಲ್ಲಿನ ಮಾಂಸವನ್ನು ಪೂರ‍್ಣವಾಗಿ ತೆಗೆಯಲು ಮಾಡಿರುವ ಬಲ ಪ್ರಯೋಗ. ಚಿಪ್ಪಿನ ಮೂಗಿನಲ್ಲಿ ರಂದ್ರವನ್ನು ಕೊರೆದು, ಅಲ್ಲಿಂದ ಮಾಂಸವನ್ನು ಹೊರತೆಗೆಯುವುದು ಅವರ ಪದ್ದತಿ. ರಂದ್ರ ಕೊರೆದಲ್ಲಿ ಅದು ಒಳಗಿರುವ ಮಾಂಸವನ್ನು ಸಡಿಲಗೊಳಿಸುತ್ತದೆ. ಹಾಗಾಗಿ ದೋಶಪೂರಿತ ಶಂಕಗಳಿಂದ ನೆನಪಿನ ಕಾಣಿಕೆ ತಯಾರಿಸಿದರೆ ಅದನ್ನು ಮಾರಾಟ ಮಾಡಲು ಸಾದ್ಯವಿಲ್ಲದ ಕಾರಣ ಇಲ್ಲಿ ಎಸೆಯಲಾಗಿದೆ.

ಇಲ್ಲಿನ ಶಂಕದ ರಾಶಿಯಲ್ಲಿ ಕೆಳಗಿನ ಶಂಕವನ್ನು ಹೆಕ್ಕಿ ತೆಗೆದ ವಿಜ್ನಾನಿಗಳು, ರೇಡಿಯೋ ಕಾರ‍್ಬನ್ ಡೇಟಿಂಗ್ ಬಳಸಿ ಅದರ ವಯೋಮಾನವನ್ನು ಗಣಕಿಸಿದಾಗ, ಕ್ರಿಸ್ತ ಶಕ 1245 ರ ಆಸುಪಾಸಿನದ್ದು ಎಂದು ಅಂದಾಜಿಸಿದ್ದಾರೆ. ಅಂದಲ್ಲಿ ಇಲ್ಲಿನ ಶಂಕ ಪರ‍್ವತಕ್ಕೆ ಬಹಳಶ್ಟು ವರ‍್ಶಗಳ ಇತಿಹಾಸ ಇದೆ ಎಂದಾಯಿತು. ಆರಾವಾಕ್ ಜನರು ಸಾವಿರಾರು ವರ‍್ಶಗಳ ಹಿಂದೆ ಅನೆಗಡಾದಲ್ಲಿ ವಾಸವಾಗಿದ್ದರು ಎನ್ನುವ ಅಂಶವನ್ನು ಈ ಶಂಕ ಸಮಾದಿಗಳು ಪುಶ್ಟೀಕರಿಸುತ್ತವೆ ಎಂದು ತಜ್ನರು ಅಬಿಪ್ರಾಯ ಪಟ್ಟಿದ್ದಾರೆ. ಈ ಶಂಕ ಪರ‍್ವತದ ನಿರ‍್ಮಾಣದಲ್ಲಿ ಆದುನಿಕ ಮೀನುಗಾರರ ಕೊಡುಗೆಯನ್ನು ಅಲ್ಲೆಗೆಳೆಯುವಂತಿಲ್ಲ. ಸುಮಾರು 200 ವರ‍್ಶಗಳಿಂದ ಇದನ್ನು ಬೆಳೆಸಲು ಅವರು ಬಹಳಶ್ಟು ಶ್ರಮ ಪಟ್ಟಿದ್ದಾರೆ!!! ಶಂಕಗಳ ರಾಶಿ ದಿನೇ ದಿನೇ ಹೆಚ್ಚುತ್ತಿರುವುದರಿಂದ ಶಂಕಹುಳುವಿನ ಜಾತಿಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅದರಲ್ಲೂ ಕೆರಿಬಿಯನ್ ದ್ವೀಪಗಳ ಆಸುಪಾಸಿನಲ್ಲಿ ಇದರ ಅಸ್ತಿತ್ವಕ್ಕೆ ಬೆದರಿಕೆ ಇದೆ ಎಂದು ಪರಿಗಣಿಸಲಾಗಿದೆ.

(ಮಾಹಿತಿ ಸೆಲೆ: odditycentral.com)

(ಚಿತ್ರ ಸೆಲೆ: wiki)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: