ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ! – ಒಂದು ಚಿಂತನೆ

– .

sleeping, ನಿದ್ದೆ

ಚಿಂತೆ ಇಲ್ಲದವನು ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ. ಆತನ ಮೆದುಳಿನ ಕ್ರಿಯೆಯ ಮೇಲೂ ಕೂಡಾ ಯಾವುದೇ ಒತ್ತಡವಿಲ್ಲದೆ ನಿರಾಳವಾಗಿ ಇರುತ್ತಾನೆ. ಈತನ ಜೀವನದಲ್ಲಿ ಅದೆಂತಹದ್ದೇ ಸಮಸ್ಯೆ ಇರಲಿ, ನೋವಿರಲಿ ಅವೆಲ್ಲವನ್ನು ಅಲ್ಲಲ್ಲಿಯೇ ಬಿಟ್ಟು ಹೆಚ್ಚು ವರ‍್ತಮಾನದಲ್ಲಿ ಜೀವಿಸುತ್ತಾನೆ ಮತ್ತು ಹೆಚ್ಚು ವಾಸ್ತವದಲ್ಲಿ ಬದುಕುತ್ತಾನೆ. ಆದ್ದರಿಂದ ಚಿಂತೆ ಇರದವನು ಸಂತೆಯಲ್ಲೂ ನಿದ್ದೆ ಮಾಡುತ್ತಾನೆ.

ಸಂಕಶ್ಟಗಳು ಬಂದಿವೆ ಎಂದು, ಸಮಸ್ಯೆ ಉಲ್ಬಣಗೊಂಡಿದೆ ಎಂದು, ಈ ಕಶ್ಟ,ನೋವುಗಳು ನನ್ನ ಜೀವನದ ನಂಟು ಎಂದು, ಅದೇ ಚಿಂತೆಯ ಗುಂಗಿನಲ್ಲಿ ಬಿದ್ದು ಬಿಟ್ಟರೆ ಆತನಿಗೆ ಸಂತೆಯಲ್ಲಿ ನಿದ್ದೆ ಮಾಡುವುದಿರಲಿ, ಕುಂತಲ್ಲಿ, ನಿಂತಲ್ಲಿ ನೆಮ್ಮದಿಯಿಲ್ಲದೆ ಚಡಪಡಿಕೆಗೆ ಒಳಗಾಗಿ ಮಾನಸಿಕ ಕ್ಶೋಬೆ ಎದುರಿಸುತ್ತಾನೆ. ಇದರಿಂದ ಶೀಗ್ರ ಕೋಪ, ಕಾರಣವಿಲ್ಲದೆ ಜಗಳವಾಡುವುದು, ಮಾನಸಿಕ ಅಸ್ವಸ್ತತೆಯನ್ನು ಅನಬವಿಸವುದು ಸಾಮಾನ್ಯವಾಗಿ ಬಿಡುತ್ತದೆ. ಇದರಿಂದ ಕೌಟಂಬಿಕ ನೆಮ್ಮದಿ ಹಾಳಾಗುತ್ತದೆ, ನೆರೆಹೊರೆಯವರೊಡನೆ ಸೌಹಾರ‍್ದ ಬದುಕಿಗೂ ಕಲ್ಲು ಬೀಳುತ್ತದೆ.

”ಕಶ್ಟ ಮನುಶ್ಯರಿಗೆ ಬರದೆ ಮರಕ್ಕೆ ಬರುತ್ತ” ಎಂಬ ಗಾದೆಯಂತೆ. ಮನುಶ್ಯನಾಗಿ ಹುಟ್ಟಿದ ಮೇಲೆ ಕಶ್ಟ ನೋವು, ಸುಕ ಸಂತೋಶ ಇವೆಲ್ಲ ಒಂದೆ ನಾಣ್ಯದ ಎರಡು ಮುಕವಿದ್ದಂತೆ. ಇವುಗಳನ್ನು ನಾವು ಸಮಾನವಾಗಿ ಸ್ವೀಕರಿಸಿ ಹೆಚ್ವು ವರ‍್ತಮಾನದಲ್ಲಿ ಬದುಕುವುದನ್ನು ರೂಡಿಸಿಕೊಳ್ಳಬೇಕು. ಉದಾಹರಣೆಗೆ; ನೀವು ಊಟ ಮಾಡುವಾಗ ಊಟವನ್ನಶ್ಟೆ ಮಾಡಿ ಜೊತೆ ಜೊತೆಗೆ ವಿಡಿಯೋ ಗೇಮ್ ಆಡಲು ಹೋಗಬೇಡಿ. ನೀವು ತಾಜ್ ಮಹಲ್ ನೋಡುವಾಗ ತಾಜ್ ಮಹಲಿನ ಕುರಿತು, ಅದರ ಇತಿಹಾಸದ ಕುರಿತು ಯೋಚಿಸಿ. ಆ ಮಹಲಿನ ರೂಪುರೇಶೆ, ಅದರ ವಿನ್ಯಾಸ ಕಲಾವಂತಿಕೆ, ಕುಸುರಿ ಕೆಲಸದ ಬಗ್ಗೆ ಆಲೋಚಿಸಿ. ಅದು ಬಿಟ್ಟು ತಾಜ್ ಮಹಲಿಗೆ ಹೋಗಿ ಕುಳಿತು ನಾಳೆ ಮರಳಿ ಪ್ಲೈಟ್ ಹತ್ತಿ ಊರಿಗೆ ಹಿಂತಿರುಗುವ ಬಗ್ಗೆ ಆಲೋಚಿಸ ಬೇಡಿ. ಈ ಚಿಂತೆಗಳು ದುಬಾರಿಯಾಗಿ ನಿಮ್ಮ ಪ್ರಸ್ತುತ ಸಂತೋಶವನ್ನು ಹಾಳುಗೆಡವಿ ಬಿಡುತ್ತವೆ. ನೀವು ಅಶ್ಟು ವೆಚ್ಚ ಮಾಡಿಕೊಂಡು ತಾಜ್ ಮಹಲ್ ನೋಡಲು ಹೋಗಿದ್ದು ವ್ಯರ‍್ತವಾಗಿ ಬಿಡುತ್ತದೆ. ವರ‍್ತಮಾನದಲ್ಲಿ, ವಾಸ್ತವದಲ್ಲಿ ಬದುಕುವವನಿಗೆ ಪ್ರತಿ ಕ್ಶಣವೂ ಸಂತೋಶ ನೀಡುತ್ತದೆ ಮತ್ತು ಚಿಂತೆ ಇರದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತು ಅನ್ವಯಿಸುತ್ತದೆ.

‘ಚಿಂತೆ ಇದ್ದವನಿಗೂ ಸಂತೆಯಲ್ಲಿ ನಿದ್ದೆ’- ಇದು ಸಹಜ ಜೀವನದಲ್ಲಿ ಸಾದ್ಯವಿಲ್ಲ ಎಂದು ನನ್ನ ಅನಿಸಿಕೆ. ತಲೆಯಲ್ಲಿ ಚಿಂತೆ ಎಂಬ ಇಲಿ ಓಡಾಟ ನಡೆಸಿದರೆ ಕಣ್ಣಿಗೆ ನಿದ್ದೆ ಸುಳಿಯುವುದಿಲ್ಲ. ನಿದ್ದೆ ಮಾಡಿದರೂ ಅದು ನಿದ್ದೆ ಮಾಡುವವನಂತೆ ನಟನೆಯಾಗುತ್ತದೆ ವಿನಹ ಅದು ಸಹಜ ನಿದ್ದೆ ಆಗಲು ಸಾದ್ಯವಿಲ್ಲ. ಹೊರಳಾಟ, ನರಳಾಟ ಇದ್ದದ್ದೆ. ಅಕಸ್ಮಾತ್ ಚಿಂತೆ ಇದ್ದವನು ಸಂತೆಯಲ್ಲಿ ನಿದ್ದೆ ಮಾಡುತಿದ್ದಾನೆ ಎಂದರೆ ಆತ ಯಾವುದೋ ನಶೆಯ ಮೊರೆ ಹೋಗಿದ್ದಾನೆ ಎಂದರ‍್ತ, ನಶೆ ಇಳಿಯುವವರೆಗೆ ಆತ ಮೈ ಮರೆತು ಸಂತೆಯಲ್ಲಿ ನಿದ್ದೆ ಮಾಡುತ್ತ ಬಿದ್ದಿರುತ್ತಾನೆ. ಪದೇ ಪದೇ ಚಿಂತೆಯ ನೆಪ ಮಾಡಿಕೊಂಡು ನಶೆಯ ಗುಂಗಿಗೆ ಬಿದ್ದು ಹಾಳಾಗಿ ಹೋಗುತ್ತಾನೆ.

ಆದ್ದರಿಂದ ಏನೇ ಕಶ್ಟ ಇರಲಿ, ನೋವಿರಲಿ ಆ ಕ್ಶಣಕ್ಕೆ ಯೋಚಿಸಿ ಅಲ್ಲಿಯೇ ಬಿಟ್ಟು ಬಿಡಿ. ನೀವು ಆ ಕ್ಶಣದ ವರ‍್ತಮಾನದಲ್ಲಿ ಏನು ಮಾಡುತ್ತಿರುತ್ತೀರೋ ಅದನ್ನಶ್ಟೆ ಆಲೋಚಿಸಿ ಮತ್ತು ಅದರಲ್ಲೆ ಸಂಪೂರ‍್ಣವಾಗಿ ತೊಡಗಿಸಿಕೊಳ್ಳಿ ಆಗ ನೀವು ಹೆಚ್ಚು ಸಂತೋಶವಾಗಿರುತ್ತೀರಿ ಮತ್ತು ನೀವು ಸಂತೆಯಲ್ಲೂ ಗಾಡವಾಗಿ ನಿದ್ದೆ ಮಾಡುತಿದ್ದೀರಿ ಎಂದರೆ ನೀವು ಹೆಚ್ಚು ವರ‍್ತಮಾನದಲ್ಲಿ ಬದುಕುತ್ತೀದ್ದಿರಿ ಎಂದರ‍್ತ.

(ಚಿತ್ರ ಸೆಲೆ: pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: