ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು -12 ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ನಿನಗೆ ನೀನೆ ಗುರುವಲ್ಲದೆ
ನಿನ್ನಿಂದಧಿಕಮಪ್ಪ ಗುರುವುಂಟೆ. (1157/244)

ಗುರು+ಅಲ್ಲದೆ; ಗುರು=ಮಕ್ಕಳಿಗೆ ವಿದ್ಯೆಯನ್ನು ಕಲಿಸಿ, ತಿಳುವಳಿಕೆಯನ್ನು ಹೇಳಿ, ಅವರ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸುವ ವ್ಯಕ್ತಿ; ನಿನ್ನ+ಇಂದ+ಅಧಿಕಮ್+ಅಪ್ಪ; ನಿನ್ನಿಂದ=ನಿನಗಿಂತಲೂ; ಅಧಿಕ=ಹೆಚ್ಚಾದುದು/ಉತ್ತಮವಾದುದು/ಮೇಲಾದುದು;

ಅಪ್ಪ=ಆಗಿರುವ ; ಗುರು+ಉಂಟೆ; ಉಂಟು=ಇರುವುದು; ಉಂಟೇ=ಇದೆಯೇ/ಇದ್ದಾರೆಯೇ;

ವ್ಯಕ್ತಿಯು ತನ್ನ ಜೀವನವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಂಡು ಮುನ್ನಡೆಸುವ ಜವಾಬ್ದಾರಿಯನ್ನು ತಾನೇ ಹೊತ್ತಿರಬೇಕು ಎಂಬುದನ್ನು “ ನಿನಗೆ ನೀನೇ ಗುರು; ನಿನಗಿಂತ ದೊಡ್ಡವರಾದ ಮತ್ತೊಬ್ಬ ಗುರುವಿಲ್ಲ “ ಎಂಬ ನುಡಿಗಳು ಸೂಚಿಸುತ್ತಿವೆ.

ಜೀವನದಲ್ಲಿ ‘ಯಾವುದು ಸರಿ-ಯಾವುದು ತಪ್ಪು; ಯಾವುದು ನಿಜ-ಯಾವುದು ಸುಳ್ಳು; ಯಾವುದು ನೀತಿ-ಯಾವುದು ಅನೀತಿ’ ಎಂಬ ಅರಿವನ್ನು ವ್ಯಕ್ತಿಯು ಪಡೆದುಕೊಳ್ಳಬೇಕು. ಆಗ ವ್ಯಕ್ತಿಯು ತನ್ನ ಮಯ್ ಮನದಲ್ಲಿ ಸದಾಕಾಲ ಮೂಡಿಬರುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ , ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯತನದಿಂದ ಜೀವನವನ್ನು ನಡೆಸಲು ಅರಿವು ಎಂಬುದೇ ಗುರುವಾಗಿ , ವ್ಯಕ್ತಿಯನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯುತ್ತದೆ.

ನಿಮ್ಮನರಿದ ಶರಣಂಗೆ
ಪೂಜೆಯ ಹಂಬಲ ದಂದುಗವೇಕೆ. (425/171)

ನಿಮ್ಮನ್+ಅರಿದ; ನಿಮ್ಮನ್ನು=ಶಿವನನ್ನು/ದೇವರನ್ನು; ಅರಿ=ತಿಳಿ/ಕಲಿ; ಅರಿದ=ತಿಳಿದ; ಶರಣಂಗೆ=ಶರಣನಿಗೆ; ಶರಣ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ನಂಬಿ ನಡೆದುಕೊಳ್ಳುತ್ತಿರುವ ವ್ಯಕ್ತಿ; ಪೂಜೆ=ಶಿವನ ವಿಗ್ರಹವನ್ನು ಹೂವು ಹಣ್ಣು ಉಡುಗೆ ತೊಡುಗೆಗಳಿಂದ ಸಿಂಗರಿಸಿ, ದೂಪ ದೀಪಗಳಿಂದ ಆರತಿಯನ್ನು ಬೆಳಗಿಸುವುದು/ಶಿವನನ್ನು ಒಲಿಸಿಕೊಳ್ಳಲು ಮಾಡುವ ಬಹುಬಗೆಯ ಆಚರಣೆಗಳು; ಹಂಬಲ=ಹೆಚ್ಚಾದ ಬಯಕೆ/ಕಾತರ/ಆಸೆ; ದಂದುಗ+ಏಕೆ; ದಂದುಗ=ಕೆಲಸ/ಕಾರ‍್ಯ/ಆಚರಣೆ; ಏಕೆ=ಯಾವುದಕ್ಕಾಗಿ;

ಕಲ್ಲು, ಮಣ್ಣು, ಮರ , ಲೋಹದಿಂದ ಮಾಡಿದ ವಿಗ್ರಹ ರೂಪಿಯಾದ ಶಿವನಿಗೆ ಮಾಡುವ ಯಾವುದೇ ಬಗೆಯ ಆಚರಣೆಯನ್ನಾಗಲಿ ಇಲ್ಲವೇ ದೇವರ ಪೂಜೆಯನ್ನಾಗಲಿ ಶಿವಶರಣಶರಣೆಯರು ದೊಡ್ಡದೆಂದು ಪರಿಗಣಿಸಿರಲಿಲ್ಲ. ಏಕೆಂದರೆ ವ್ಯಕ್ತಿಯು ತನಗೆ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ಸಾಮಾಜಿಕ ನಡೆನುಡಿಗಳಲ್ಲಿ ಅವರು ಶಿವನನ್ನು ಕಾಣುತ್ತಿದ್ದರು. ಆದ್ದರಿಂದ ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ ದೇವರ ಪೂಜೆಯ ಅಗತ್ಯವಿಲ್ಲ ಎಂಬ ಶಿವಶರಣಶರಣೆಯರ ನಿಲುವನ್ನು ಈ ನುಡಿಗಳು ಸೂಚಿಸುತ್ತಿವೆ.

ವ್ರತಗೇಡಿ ವ್ರತಗೇಡಿ ಎಂಬವ ತಾನೆ ವ್ರತಗೇಡಿ. (182/153)

ವ್ರತ+ಕೇಡಿ; ವ್ರತ=ಶಾಸ್ತ್ರದ ಹೊತ್ತಿಗೆಗಳಲ್ಲಿ ಹೇಳಿರುವಂತೆ ಕಟ್ಟುನಿಟ್ಟಾದ ಕ್ರಮದಲ್ಲಿ ಮಾಡುವ ದೇವರ ಪೂಜೆ; ಜಪ, ತಪ, ಉಪವಾಸ, ದೇಹ ದಂಡನೆ ಮುಂತಾದ ಕಟ್ಟುಪಾಡುಗಳ ಮೂಲಕ ಮಾಡುವ ಆಚರಣೆ; ಕೇಡು=ನಾಶ/ಅಳಿವು; ಕೇಡಿ=ಹಾಳು ಮಾಡುವವನು; ವ್ರತಗೇಡಿ=ವ್ರತವನ್ನು ಹಾಳು ಮಾಡುವವನು/ತಪ್ಪು ತಪ್ಪಾಗಿ ಆಚರಿಸುವವನು; ಎಂಬವ=ಎಂದು ಹೇಳುವವನು; ತಾನೆ=ಆ ವ್ಯಕ್ತಿಯೇ;

ದೇವರನ್ನು ಪೂಜಿಸಲು ಶಾಸ್ತ್ರಗಳಲ್ಲಿ ಹೇಳಿರುವ ಮತ್ತು ಹಿಂದಿನಿಂದಲೂ ಜನಸಮುದಾಯದ ಆಚರಣೆಯಲ್ಲಿ ನಡೆದುಬಂದಿರುವ ಕಟ್ಟಲೆಗಳನ್ನು ಹಾಗೂ ಸಂಪ್ರದಾಯಗಳನ್ನು ದೊಡ್ಡದೆಂದು ನಂಬಿರುವ ವ್ಯಕ್ತಿಗೆ ಪೂಜೆಯಲ್ಲಿ ಬಳಸಬೇಕಾದ ವಸ್ತುಗಳು ಮತ್ತು ಪೂಜೆಯನ್ನು ಮಾಡುವ ಆಚರಣೆಗಳು ದೊಡ್ಡದಾಗುತ್ತವೆಯೇ ಹೊರತು, ನಿಜ ಜೀವನದಲ್ಲಿ ವ್ಯಕ್ತಿಗಳ ಒಳ್ಳೆಯ ನಡೆನುಡಿಗಳು ದೊಡ್ಡದಾಗುವುದಿಲ್ಲ. ಆದ್ದರಿಂದಲೇ ಪೂಜೆಯ ಪ್ರತಿಯೊಂದು ಹಂತದಲ್ಲಿಯೂ ‘ ಮಡಿ ಮಡಿ “ ಎಂದು ಬಡಬಡಿಸುತ್ತಾ, ಎಲ್ಲಿ ಮಯ್ಲಿಗೆ ಆಗುವುದೋ ಎಂಬ ಆತಂಕದಿಂದ ಕೂಡಿರುತ್ತಾನೆ.

ವ್ಯಕ್ತಿಯು ತನಗೆ ಒಳಿತನ್ನು ಮಾಡಿಕೊಳ್ಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗೆ ನೆರವಾಗುವಂತಹ ನಡೆನುಡಿಗಳ ಆಚರಣೆಯೇ ಶಿವಶರಣಶರಣೆಯರ ಪಾಲಿನ ವ್ರತವಾಗಿತ್ತು. ಆದ್ದರಿಂದಲೇ ಬಹಿರಂಗದಲ್ಲಿ ಮಾಡುತ್ತಿರುವ ಯಾವುದೇ ಬಗೆಯ ಪೂಜೆಯ ಆಚರಣೆಗಳನ್ನು ಅವರು ಒಳ್ಳೆಯ ನಡೆನುಡಿಗಳಿಗಿಂತ ದೊಡ್ಡದೆಂದು ನಂಬಿರಲಿಲ್ಲ.

ಇತರರ ನಡೆನುಡಿಗಳಲ್ಲಿ ಕಂಡು ಬರುವ ಒಳ್ಳೆಯದನ್ನು ಕಡೆಗಣಿಸಿ, ಸದಾಕಾಲ ಅವರ ತಪ್ಪುಗಳನ್ನೇ ಹುಡುಕಿ ತೆಗೆತೆಗೆದು ಎತ್ತಿ ಆಡುತ್ತಿರುವ ವ್ಯಕ್ತಿಯು ತಾನೇ ಕೆಟ್ಟ ನಡೆನುಡಿಗಳಿಂದ ಕೂಡಿರುತ್ತಾನೆ ಎಂಬ ಇಂಗಿತವನ್ನು ಕೂಡ “ ವ್ರತಗೇಡಿ ವ್ರತಗೇಡಿ ಎಂಬವ ತಾನೆ ವ್ರತಗೇಡಿ ” ಎಂಬ ಮಾತುಗಳಲ್ಲಿ ಕಾಣಬಹುದು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks