ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 14ನೆಯ ಕಂತು

ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಕೈಯಲ್ಲಿ ಕರಸ್ಥಲ
ಮನದಲ್ಲಿ ಪರಸ್ಥಲ
ತನುವೆಲ್ಲ ಹುಸಿಸ್ಥಲ
ಶರಣನೆಂತೆಂಬೆ. (643/187)

ಕೈ+ಅಲ್ಲಿ; ಕರ=ಕಯ್; ಸ್ಥಲ=ನೆಲೆ/ಜಾಗ; ಕರಸ್ಥಲ=ಶಿವಶರಣಶರಣೆಯರು ತಮ್ಮ ಅಂಗಯ್ ಮೇಲೆ ಇಟ್ಟುಕೊಂಡು ಪೂಜಿಸುವ ಲಿಂಗ/ಇಶ್ಟಲಿಂಗ;

ಮನ+ಅಲ್ಲಿ; ಮನ=ಮನಸ್ಸು/ಚಿತ್ತ; ಪರ=ಬೇರೆ/ಅನ್ಯ/ಇತರ; ಪರಸ್ಥಲ=ಬೇರೊಂದು ಕಡೆಯಲ್ಲಿರುವುದು ಚಂಚಲಗೊಂಡಿರುವುದು;

ತನು+ಎಲ್ಲ; ತನು=ದೇಹ/ಮಯ್/ಶರೀರ; ಹುಸಿ=ಸುಳ್ಳು; ಹುಸಿಸ್ಥಲ=ಸುಳ್ಳಿನಿಂದ ಕೂಡಿರುವುದು;

ಶರಣನ್+ಎಂತು+ಎಂಬೆ; ಶರಣ=ಶಿವನನ್ನು ಪೂಜಿಸುವವನು/ಶಿವನನ್ನು ಒಲಿದವನು; ಎಂತು=ಯಾವ ರೀತಿ/ಯಾವ ಬಗೆ; ಎಂಬೆ=ಎನ್ನುವೆ/ಹೇಳುವೆ; ಎಂತೆಂಬೆ=ಹೇಗೆ ತಾನೆ ಹೇಳುವೆ/ಯಾವ ರೀತಿಯಲ್ಲಿ ಹೇಳಲಿ;

ಅಂಗಯ್ ಮೇಲೆ ಲಿಂಗವನ್ನು ಇಟ್ಟುಕೊಂಡು ಪೂಜಿಸುತ್ತಿರುವ ವ್ಯಕ್ತಿಯ ಮನವು ಚಂಚಲತೆಗೆ ಒಳಗಾಗಿ ಕೆಟ್ಟ ಸಂಗತಿಗಳನ್ನು ಕುರಿತು ಆಲೋಚಿಸುತ್ತಿದ್ದರೆ ಮತ್ತು ನಿತ್ಯ ಜೀವನದಲ್ಲಿ ಅವನ ವ್ಯವಹಾರಗಳೆಲ್ಲವೂ ಸುಳ್ಳು ಹಾಗೂ ವಂಚನೆಯಿಂದಲೇ ಕೂಡಿದ್ದರೆ, ಅಂತಹವನನ್ನು ಶರಣನೆಂದು ಕರೆಯಲಾಗುವುದಿಲ್ಲ.

ಏಕೆಂದರೆ ಶರಣನಾದವನು ತನ್ನ ಮನದಲ್ಲಿ ಮೂಡುವ ಒಳ್ಳೆಯ ಮತ್ತು ಕೆಟ್ಟ ತುಡಿತಗಳಲ್ಲಿ , ಕೆಟ್ಟದ್ದನ್ನು ಹತ್ತಿಕ್ಕಿಕೊಂಡು ನಿತ್ಯ ಜೀವನದಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ನಿಜದ ನಡೆನುಡಿಗಳಿಂದ ಬಾಳಬೇಕು.

ಶಿವನ ಪೂಜೆಯನ್ನು ಮಾಡುವ ವ್ಯಕ್ತಿಯು ಸಾಮಾಜಿಕವಾಗಿ ಒಳ್ಳೆಯ ನಡೆನುಡಿಯುಳ್ಳವನಾಗಿರಬೇಕು ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.

ಪ್ರಣತೆಯೂ ಇದೆ ಬತ್ತಿಯೂ ಇದೆ
ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ
ಗುರುವಿದೆ ಲಿಂಗವಿದೆ
ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ. (78/144)

ಪ್ರಣತೆ=ಹಣತೆ/ಮಣ್ಣಿನ ದೀಪ; ಬತ್ತಿ=ದೀಪದಲ್ಲಿ ಇಡುವುದಕ್ಕಾಗಿ ಹತ್ತಿಯ ಎಳೆಗಳನ್ನು ಹೊಸೆದು ಮಾಡಿದ ವಸ್ತು;

ಜ್ಯೋತಿ=ಬೆಳಕು/ಕಾಂತಿ/ಪ್ರಕಾಶ; ಬೆಳಗುವಡೆ=ದೀಪ ಹೊತ್ತಿಕೊಂಡು ಬೆಳಕನ್ನು ನೀಡಬೇಕಾದರೆ;

ತೈಲ+ಇಲ್ಲದೆ; ತೈಲ=ಎಳ್ಳು, ಕಡಲೆಕಾಯಿ ಮುಂತಾದ ಕಾಳುಗಳನ್ನು ಅರೆದು ತೆಗೆದ ಎಣ್ಣೆ; ಪ್ರಭೆ=ಬೆಳಕು/ಕಾಂತಿ/ಪ್ರಕಾಶ/ಕಿರಣ; ತಾನ್+ಎಲ್ಲಿಯದೊ; ತಾನ್=ಅದು; ತಾನೆಲ್ಲಿಯದೊ=ಯಾವ ರೀತಿಯಲ್ಲಿ ಅದು ಬೆಳಕನ್ನು ಚೆಲ್ಲುತ್ತದೆ/ಬೀರುತ್ತದೆ;

ಗುರು+ಇದೆ; ಗುರು=ಜನಸಮುದಾಯದ ಮನದಲ್ಲಿ ಅರಿವನ್ನು ಮೂಡಿಸಿ, ವ್ಯಕ್ತಿಗಳ ನಡೆನುಡಿಗಳನ್ನು ತಿದ್ದಿ ತೀಡಿ, ಅವರಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುವ ವ್ಯಕ್ತಿ; ಲಿಂಗ+ಇದೆ; ಲಿಂಗ=ಶಿವನ ಸಂಕೇತವಾದ ವಿಗ್ರಹ ;

ಶಿಷ್ಯ=ಗುರುವಿನ ಮೂಲಕ ವಿದ್ಯೆಯನ್ನು ಕಲಿಯುವವನು; ಸುಜ್ಞಾನ=ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದು ನೀತಿ-ಯಾವುದು ಅನೀತಿ; ಯಾವುದು ದಿಟ-ಯಾವುದು ಸಟೆ ಎಂಬುದನ್ನು ಮನದಟ್ಟು ಮಾಡಿಕೊಂಡು, ಒಳ್ಳೆಯ ರೀತಿಯಲ್ಲಿ ಬಾಳಲು ಅಗತ್ಯವಾದ ಅರಿವು/ತಿಳುವಳಿಕೆ;

ಅಂಕುರಿಸದ+ಅನ್ನಕ್ಕರ; ಅಂಕುರ=ಮೊಳಕೆ/ಚಿಗುರು; ಅಂಕುರಿಸು=ಮೊಳಕೆಯೊಡೆಯುವುದು/ಚಿಗುರೊಡೆಯುವುದು; ಅನ್ನಕ್ಕರ=ಅಲ್ಲಿಯ ವರೆಗೆ/ಅಲ್ಲಿಯ ತನಕ; ಭಕ್ತಿ=ಒಳ್ಳೆಯ ನಡೆನುಡಿಗಳಿಂದ ಶಿವನನ್ನು ಪೂಜಿಸುವುದು; ಎಲ್ಲಿಯದೊ=ಎಲ್ಲಿ ಇರುವುದು/ಇರುವುದಕ್ಕೆ ಹೇಗೆ ತಾನೆ ಆಗುತ್ತದೆ;

ಹಣತೆಯಲ್ಲಿ ಬತ್ತಿ ಮತ್ತು ಎಣ್ಣೆಯನ್ನು ಹಾಕಿ, ಬೆಂಕಿಯ ಕುಡಿಯನ್ನು ತಾಕಿಸಿದಾಗ ಜ್ಯೋತಿಯು ಬೆಳಗುತ್ತದೆ. ಇವುಗಳಲ್ಲಿ ಯಾವುದೊಂದು ಇಲ್ಲದಿದ್ದರೂ ಬೆಳಕು ಕಂಗೊಳಿಸುವುದಿಲ್ಲ. ದೀಪ ಬೆಳಗುವ ಈ ಸಂಗತಿಯನ್ನು ಒಂದು ರೂಪಕವನ್ನಾಗಿ ಬಳಸಿಕೊಂಡು ಲಿಂಗ, ಗುರು ಮತ್ತು ಶರಣರ ನಡುವಣ ನಂಟಿನ ರೀತಿಯನ್ನು ಮತ್ತು ಶರಣನ ವ್ಯಕ್ತಿತ್ವ ರೂಪುಗೊಳ್ಳುವ ಬಗೆಯನ್ನು ತಿಳಿಸಲಾಗಿದೆ.

ಶಿವಶರಣನ ಮಯ್ ಮನದಲ್ಲಿ ಒಳ್ಳೆಯ ಅರಿವು ಮೂಡದಿದ್ದರೆ, ಆತ ಮಾಡುವ ಲಿಂಗಪೂಜೆಯಿಂದ ಇಲ್ಲವೇ ಗುರುಸೇವೆಯಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಶಿವಶರಣನು ಒಳ್ಳೆಯ ಅರಿವನ್ನು ಪಡೆಯುವುದರ ಮೂಲಕ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂಬ ಎಚ್ಚರವನ್ನು ಹೊಂದಿರಬೇಕು ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ.

ಬಲ್ಲತನವನೇರಿಸಿಕೊಂಡು
ಅಲ್ಲದಾಟವನಾಡಿದಡೆ
ಬಲ್ಲತನಕ್ಕೆ ಭಂಗವಾಯಿತ್ತು. (329/164)

ಬಲ್ಲತನ+ಅನ್+ಏರಿಸಿಕೊಂಡು; ಬಲ್ಲತನ=ಶಕ್ತಿ/ಕಸುವು/ಅರಿವು/ತಿಳುವಳಿಕೆ; ಅನ್=ಅನ್ನು; ಏರು=ಆಯ್ದುಕೊಳ್ಳುವುದು/ಆರಿಸಿಕೊಳ್ಳುವುದು; ಏರಿಸಿಕೊಂಡು=ಆಯ್ದುಕೊಂಡು/ಆರಿಸಿಕೊಂಡು;

ಬಲ್ಲತನವನೇರಿಸಿಕೊಂಡು=ವ್ಯಕ್ತಿಯು ತನ್ನನ್ನು ತಾನೆ ಎಲ್ಲರಿಗಿಂತಲೂ ದೊಡ್ಡವನು/ತಿಳಿದವನು/ಎಲ್ಲರನ್ನೂ ಮುನ್ನಡೆಸಬಲ್ಲ ಶಕ್ತಿಯಿರುವವನು ಎಂದು ಮನದಲ್ಲಿ ಅಂದುಕೊಂಡು;

ಅಲ್ಲದ+ಆಟ+ಅನ್+ಆಡಿದಡೆ; ಅಲ್ಲ=ಬೇಡ/ಆಗದಿರುವುದು; ಆಟ=ಕೆಲಸ/ಕಾರ‍್ಯ/ವ್ಯವಹಾರ; ಆಡಿದಡೆ=ಮಾಡತೊಡಗಿದರೆ; ಅಲ್ಲದಾಟ=ಬೇಡದ ಕೆಲಸ/ಮಾಡಬಾರದ  ಕಾರ‍್ಯ; ಅಲ್ಲದಾಟವನಾಡಿದಡೆ=ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ಕೆಟ್ಟ ಕೆಲಸಗಳನ್ನು ಮಾಡತೊಡಗಿದರೆ;

ಬಲ್ಲತನಕ್ಕೆ=ವ್ಯಕ್ತಿಯು ಹೊಂದಿರುವ ಅರಿವಿನ ಇಲ್ಲವೇ ದೊಡ್ಡತನದ ವ್ಯಕ್ತಿತ್ವಕ್ಕೆ ; ಭಂಗ+ಆಯಿತ್ತು; ಭಂಗ=ಅಪಮಾನ/ಸೋಲು/ಪರಾಜಯ/ತೇಜಸ್ಸು ಹಾನಿಗೊಳ್ಳುವುದು/ಕುಂದು; ಆಯಿತ್ತು=ಉಂಟಾಗುವುದು;

ರಾಜ್ಯವನ್ನಾಳುವ ಆಡಳಿತಗಾರರಲ್ಲಿ, ಜಾತಿ ಮತ ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳ ನೇತಾರರು, ಗುರುಗಳು ಹಾಗೂ ದೇವ ಮಾನವರಲ್ಲಿ ಮತ್ತು ಕುಟುಂಬವನ್ನು ನಡೆಸುವ ಹೊಣೆಯನ್ನು ಹೊತ್ತಿರುವ ಹಿರಿಯರಲ್ಲಿ ಕೆಲವರು ಇತರರಿಗಿಂತ ತಾವೇ ದೊಡ್ಡವರೆಂದು, ಎಲ್ಲವನ್ನು ಬಲ್ಲವರೆಂದು, ಯಾವುದೇ ಬಗೆಯ ಕೆಲಸವನ್ನು ಮಾಡಬಲ್ಲ ಮತ್ತು ಎಲ್ಲರನ್ನೂ ಮುನ್ನಡೆಸಬಲ್ಲ ಶಕ್ತಿಯುಳ್ಳವರೆಂದು ಅಹಂಕಾರದಿಂದ ಮೆರೆಯುತ್ತಿರುತ್ತಾರೆ.

ಜವಾಬ್ದಾರಿಯುತವಾದ ಹುದ್ದೆಗಳಲ್ಲಿರುವ ಇಂತಹ ವ್ಯಕ್ತಿಗಳು ತಮ್ಮ ಹೊಣೆಗಾರಿಕೆಯನ್ನು ಮರೆತು, ಕಪಟತನದಿಂದ ಮತ್ತು ಕ್ರೂರತನದಿಂದ ಜನಸಮುದಾಯದ ಬದುಕಿನ ನೆಮ್ಮದಿಯನ್ನು ಹಾಳು ಮಾಡುವಂತಹ ಕೆಟ್ಟ ಕೆಲಸಗಳನ್ನು ಮಾಡತೊಡಗಿದಾಗ, ಅವರ ಹಿರಿತನ ಇಲ್ಲವೇ ವ್ಯಕ್ತಿತ್ವ ಕುಗ್ಗಿ ಹಾಳಾಗುವುದರ ಜತೆಗೆ ಜನರ ಮತ್ತು ಸಮಾಜದ ಬದುಕು ದುರಂತಕ್ಕೆ ಗುರಿಯಾಗುತ್ತದೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: