ಹಾಲು ಹೋಳಿಗೆ

– ಸವಿತಾ.

haalu holige, milk sweet dish, ಹಾಲು ಹೋಳಿಗೆ

ಬೇಕಾಗುವ ಸಾಮಾನುಗಳು

  • ಹಾಲು – 4 ಲೋಟ
  • ಗೋಡಂಬಿ – 20
  • ಬಾದಾಮಿ – 20
  • ಹಸಿ ಕೊಬ್ಬರಿ ತುರಿ – 1/2 ಲೋಟ
  • ಗಸಗಸೆ – 1/4 ಲೋಟ
  • ಅಕ್ಕಿ – 1/4 ಲೋಟ
  • ಕೇಸರಿ – 6 ದಳ
  • ಒಣ ದ್ರಾಕ್ಶಿ – 10
  • ಏಲಕ್ಕಿ – 2
  • ಜಾಯಿಕಾಯಿ ಪುಡಿ – ಸ್ವಲ್ಪ
  • ಸಕ್ಕರೆ – 8 ಚಮಚ
  • ಗೋದಿ ಹಿಟ್ಟು – 1 ಲೋಟ
  • ಮೈದಾ ಹಿಟ್ಟು – 1/4 ಲೋಟ
  • ಚಿರೋಟಿ ರವೆ – 1/4 ಲೋಟ
  • ಎಣ್ಣೆ – ಸ್ವಲ್ಪ

ಮಾಡುವ ಬಗೆ

ಗೋದಿ ಹಿಟ್ಟು, ಮೈದಾ ಮತ್ತು ಚಿರೋಟಿ ರವೆಗೆ ಕಾದ ಎಣ್ಣೆ, ಸ್ವಲ್ಪ ನೀರು ಸೇರಿಸಿ ಪೂರಿ ಹಿಟ್ಟಿನ ಹದಕ್ಕೆ ನಾದಿ ಒಂದು ಗಂಟೆ ಕಾಲ ನೆನೆಯಲು ಇಡಬೇಕು.

ಅಕ್ಕಿ ನಾಲ್ಕು ತಾಸು ನೀರಲ್ಲಿ ನೆನೆಸಿ ಇಡಿ. ಬಾದಾಮಿ, ಗೋಡಂಬಿ ಮತ್ತು ಗಸಗಸೆ ಕೂಡ ನೆನೆಯಲು ಇಡಬೇಕು. ನೆನೆಸಿದ ಸಾಮಾನುಗಳೊಂದಿಗೆ, ಹಸಿ ಕೊಬ್ಬರಿ ತುರಿ ಸೇರಿಸಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ.

ಒಂದು ಪಾತ್ರೆಯಲ್ಲಿ ಎರಡು ಲೋಟ ನೀರು ಬಿಸಿ ಮಾಡಿ, ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಹಾಲು ಸೇರಿಸಿ ಮತ್ತೇ ಕುದಿಸಿ. ಗಂಟು ಆಗದಂತೆ ಕೈ ಯಾಡಿಸುತ್ತ ಇರಬೇಕು. ಸ್ವಲ್ಪ ಒಣ ದ್ರಾಕ್ಶಿ, ಕೇಸರಿ ದಳ, ಸಕ್ಕರೆ ಸೇರಿಸಿ ಚೆನ್ನಾಗಿ ತಿರುಗಿಸಿ. ಹಾಲು ಗಟ್ಟಿಯಾಗಿ ಕೀರ್ ನಂತೆ ಆಗುತ್ತದೆ. ಆಗ ಒಲೆ ಆರಿಸಿ ಇಳಿಸಿ. ಏಲಕ್ಕಿ, ಜಾಯಿಕಾಯಿ ಪುಡಿ ಮಾಡಿ ಹಾಕಿ.

ಕಲೆಸಿ ಇಟ್ಟ ಹಿಟ್ಟು ಇನ್ನೊಮ್ಮೆ ನಾದಿಕೊಂಡು, ಸ್ವಲ್ಪ ಹಿಟ್ಟು ಹಿಡಿದು ಪೂರಿ ಮಾಡಿ ಕಾದ ಎಣ್ಣೆ ಯಲ್ಲಿ ಕರಿದು ತೆಗೆಯಿರಿ. ತಟ್ಟೆಗೆ ಕರಿದ ಪೂರಿ ಅರ‍್ದ ಮಡಚಿ ಇಟ್ಟು, ಮೇಲೆ ಬಿಸಿ ಬಿಸಿ ಬಿಸಿ ಹಾಲಿನ ಕೀರು ಸುರುವಿ. ಈಗ ಹಾಲು ಹೋಳಿಗೆ ಸವಿಯಲು ಸಿದ್ದ. ಬಡಿಸುವಾಗ ಪೂರಿ ಇಟ್ಟು, ಕೀರು ಬಿಸಿ ಮಾಡಿ ಹಾಕಿ ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: