ಅಲ್ಲಮನ ವಚನಗಳ ಓದು – 13ನೆಯ ಕಂತು

– ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಅಯ್ಯಾ ಸತ್ಯವ ನುಡಿಯದ
ಸದಾಚಾರದಲ್ಲಿ ನಡೆಯದ
ಸದ್ಭಕ್ತಿಯ ಹಿಡಿಯದ
ನಿಜ ಮುಕ್ತಿಯ ಪಡೆಯದ
ಸತ್ಕ್ರಿಯವ ಸಾರದ
ಸಮ್ಯಜ್ಞಾನವ ಮುಟ್ಟದ
ಸುಡು ಸುಡು
ಈ ವೇಷದ ಭಾಷೆಯ ನೋಡಿ
ಗುಹೇಶ್ವರಲಿಂಗವು ನಗುತ್ತೈದಾನೆ
ಕಾಣಾ ಚೆನ್ನಬಸವಣ್ಣಾ.

ಜನರಲ್ಲಿ ಅರಿವನ್ನು ಮೂಡಿಸಿ ಅವರನ್ನು ಒಳ್ಳೆಯ ದಾರಿಯಲ್ಲಿ ಕರೆದೊಯ್ಯುವ ಗುಣವಂತನಂತೆ, ಗುರುವಿನಂತೆ, ದೇವ ಮಾನವನಂತೆ ಉಡುಗೆಯನ್ನು ಉಟ್ಟು, ತೊಡುಗೆಯನ್ನು ತೊಟ್ಟು ಮತ್ತು ಸತ್ಯ ನೀತಿ ನ್ಯಾಯದ ನುಡಿಗಳನ್ನಾಡುತ್ತ, ತನ್ನ ನಿಜ ಜೀವನದಲ್ಲಿ ಒಂದಾದರೂ ಒಳ್ಳೆಯ ಗುಣವನ್ನು ಹೊಂದಿರದ ವ್ಯಕ್ತಿಯ ಬೂಟಾಟಿಕೆಯ ವ್ಯಕ್ತಿತ್ವವನ್ನು ಈ ವಚನದಲ್ಲಿ ಕಟುವಾಗಿ ಟೀಕಿಸಲಾಗಿದೆ.

( ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಸತ್ಯ=ನಿಜ/ವಾಸ್ತವ/ದಿಟ; ನುಡಿ=ಮಾತನಾಡು/ಹೇಳು; ನುಡಿಯದ=ಹೇಳದ;

ಸತ್ಯವ ನುಡಿಯದ=ಜೀವನದಲ್ಲಿನ ವಾಸ್ತವ ಸಂಗತಿಗಳನ್ನು ಹೇಳದೆ ಇಲ್ಲಸಲ್ಲದ ಸಂಗತಿಗಳನ್ನು ಹೇಳಿ ಜನರನ್ನು ಮರುಳು ಮಾಡುವುದು/ಸುಳ್ಳನ್ನು ಹೇಳುವುದು;

ಸದಾಚಾರ+ಅಲ್ಲಿ; ಸದಾಚಾರ=ಒಳ್ಳೆಯ ವರ‍್ತನೆ; ನಡೆ=ಆಚರಣೆ/ನಡವಳಿಕೆ; ನಡೆಯದ=ನಡೆದುಕೊಳ್ಳದ/ಆಚರಿಸದ;

ಸದಾಚಾರದಲ್ಲಿ ನಡೆಯದ=ಸಹಮಾನವರ ಜತೆಯಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳದಿರುವುದು/ಜನರಿಗೆ ಕೇಡನ್ನುಂಟುಮಾಡುವ ರೀತಿಯಲ್ಲಿ ಕೆಟ್ಟದ್ದಾಗಿ ವರ‍್ತಿಸುವುದು;

ಸದ್ಭಕ್ತಿ=ಒಳ್ಳೆಯ ನಡೆನುಡಿಗಳಿಂದ ದೇವರನ್ನು ಪೂಜಿಸುವುದು; ಹಿಡಿ=ಕಯ್ಗೊಳ್ಳುವುದು/ಅನುಸರಿಸುವುದು ; ಹಿಡಿಯದ=ಅನುಸರಿಸಿದ ;

ಸದ್ಭಕ್ತಿಯ ಹಿಡಿಯದ=ದೇವರನ್ನು ಒಲಿಸಿಕೊಳ್ಳಲು ಒಳ್ಳೆಯ ನಡೆನುಡಿಗಳನ್ನು ಅನುಸರಿಸಿ ಬಾಳಬೇಕೆಂಬುದನ್ನು ತಿಳಿಯದಿರುವುದು;

ನಿಜ=ಸಹಜವಾದ/ತನ್ನ/ಸ್ವಂತದ; ಮುಕ್ತಿ=ಬಿಡುಗಡೆ/ವಿಮೋಚನೆ; ಪಡೆ=ಹೊಂದು/ಗಳಿಸು/ಸಂಪಾದಿಸು; ಪಡೆಯದ=ಗಳಿಸದ/ಹೊಂದದ;

ನಿಜ ಮುಕ್ತಿಯ ಪಡೆಯದ=ತನ್ನ ಮಯ್ ಮನವನ್ನು ಆವರಿಸಿಕೊಂಡಿರುವ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳಲ್ಲಿ, ಕೆಟ್ಟದ್ದನ್ನು ಬಿಡದಿರುವುದು;

ಸತ್ಕ್ರಿಯ=ಒಳ್ಳೆಯ ಕೆಲಸ/ಕಾರ‍್ಯ; ಸಾರು=ಸಮೀಪಿಸು/ಹತ್ತಿರಕ್ಕೆ ಬರುವುದು; ಸಾರದ=ಸಮೀಪಿಸದ/ಹತ್ತಿರಕ್ಕೆ ಬರದೆ ದೂರವಿರುವುದು ;

ಸತ್ಕ್ರಿಯವ ಸಾರದ=ಒಳ್ಳೆಯ ಕೆಲಸಗಳಿಂದ ದೂರವಿರುವುದು/ಒಂದಾದರೂ ಒಳ್ಳೆಯ ಕೆಲಸವನ್ನು ಮಾಡದಿರುವುದು;

ಸಮ್ಯಕ್ ಜ್ಞಾನ>ಸಮ್ಯಜ್ಞಾನ: ಸಮ್ಯಕ್ ಜ್ಞಾನ=ಸರಿಯಾದ ತಿಳುವಳಿಕೆ/ಒಳ್ಳೆಯ ಅರಿವು; ಮುಟ್ಟು=ತಲುಪು/ಸೇರು/ಹೊಂದು;

ಸಮ್ಯಜ್ಞಾನವ ಮುಟ್ಟದ=ಸರಿಯಾದ ತಿಳುವಳಿಕೆಯನ್ನು ಹೊಂದದಿರುವುದು;

ಸುಡು=ಬೆಂಕಿಯಲ್ಲಿ ಬೇಯಿಸು; ಸುಡು ಸುಡು=ಜನಸಮುದಾಯವನ್ನು ಮತ್ತು ಸಮಾಜವನ್ನು ವಂಚಿಸುವ ವ್ಯಕ್ತಿಯ ಕೆಟ್ಟ ನಡೆನುಡಿಗಳನ್ನು ಕಂಡಾಗ ಉಂಟಾಗುವ ಕೋಪ, ಹತಾಶೆ ಮತ್ತು ಆಕ್ರೋಶವನ್ನು ಕಾರುವಾಗ ಈ ಬಗೆಯ ಪದಗಳು ಹೊರಹೊಮ್ಮುತ್ತವೆ. “ ಅವನ ಜನ್ಮಕ್ಕೆ ಬೆಂಕಿಹಾಕ “ ಎಂಬ ಬಯ್ಗುಳ ಜನಸಮುದಾಯದಲ್ಲಿ ಬಳಕೆಯಲ್ಲಿದೆ;

ವೇಷ=ಉಡುಗೆ ತೊಡುಗೆ/ಸೋಗು/ತೋರಿಕೆಯ ರೂಪ; ಭಾಷೆ=ಮಾತು/ನುಡಿ; ನೋಡು=ಕಾಣು;

ಈ ವೇಷದ ಭಾಷೆಯ ನೋಡಿ=ಅಂತರಂಗದ ಮಯ್ ಮನದಲ್ಲಿ ಒಳ್ಳೆಯತನವಿಲ್ಲದೆ, ಬಹಿರಂಗದಲ್ಲಿ ಒಳ್ಳೆಯವನಂತೆ ತೊಟ್ಟಿರುವ ಉಡುಗೆ ತೊಡುಗೆಯನ್ನು ನೋಡಿ ಮತ್ತು ಆಡುವ ಮಾತುಗಳನ್ನು ಕೇಳಿ;

ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ; ಲಿಂಗ=ಶಿವ/ಈಶ್ವರ; ನಗುತ್ತ+ಐದಾನೆ; ಐದಾನೆ=ಇದ್ದಾನೆ;

ಗುಹೇಶ್ವರಲಿಂಗವು ನಗುತ್ತೈದಾನೆ=ಗುಹೇಶ್ವರನು ಇಂತಹ ಬೂಟಾಟಿಕೆಯ, ನಯವಂಚಕತನದ , ಒಳಗೊಂದು ಹೊರಗೊಂದು ಬಗೆಯ ನಡೆನುಡಿಯನ್ನುಳ್ಳ ವ್ಯಕ್ತಿಯನ್ನು ಕಂಡು “ ಇವನದು ಒಂದು ಜೀವನವೇ “ ಎಂದು ಅಣಕಿಸುವಂತೆ ನಗುತ್ತಿದ್ದಾನೆ. ಅಂದರೆ ಕಪಟತನದ ನಡೆನುಡಿಯನ್ನು ಗುಹೇಶ್ವರನು ಒಪ್ಪುವುದಿಲ್ಲ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ; ಕಾಣಾ=ವಿಚಾರಿಸಿ ನೋಡು/ತಿಳಿ/ಅರಿ ;

ಚನ್ನಬಸವಣ್ಣ=ಹನ್ನೆರಡನೆಯ ಶತಮಾನದಲ್ಲಿದ್ದ ಒಬ್ಬ ಶಿವಶರಣ; ಕಾಣಾ ಚೆನ್ನಬಸವಣ್ಣ=ಅಲ್ಲಮನು ಚೆನ್ನಬಸವಣ್ಣನೊಡನೆ ಮಾತನಾಡುತ್ತಿರುವ ರೀತಿಯಲ್ಲಿ ವಚನ ರಚನೆಗೊಂಡಿದೆ.)

( ಚಿತ್ರ ಸೆಲೆ : lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: