ಕೊರೊನಾ, ಕಾರುಗಳು ಜೋಪಾನ!

ಜಯತೀರ‍್ತ ನಾಡಗವ್ಡ.

ಕೊರೊನಾ-ಕಾರು, corona-caru

ಕೊರೊನಾ ಹೆಮ್ಮಾರಿ ಎಲ್ಲೆಡೆ ಹಬ್ಬಿದೆ. ಜಗತ್ತಿಗೆ ಜಗತ್ತೇ ನಿಂತು ಹೋದಂತಿದೆ. ಈ ಹೊತ್ತಿನಲ್ಲಿ ಎಲ್ಲರೂ ಮನೆಯಲ್ಲಿಯೇ ಇರುವುದು ಒಳ್ಳೆಯದು. ನಮ್ಮ ಬಂಡಿಗಳು ಕೂಡ ಮನೆಯ ಮುಂದೆ/ನಮ್ಮ ಗ್ಯಾರೇಜ್ ಗಳಲ್ಲಿ ನಿಂತಿವೆ. ಹೆಚ್ಚಿನ ಹೊತ್ತು ನಮ್ಮ ಬಂಡಿಗಳು ನಿಂತಲ್ಲಿಯೇ ನಿಂತರೆ ಬಂಡಿಯ ಹದುಳತೆ (health) ಮೇಲೆ ಅದು ಕೆಟ್ಟ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ನಮ್ಮ ಬಂಡಿಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿಸುವುದು ಈ ಬರಹದ ಉದ್ದೇಶ.

ಬ್ಯಾಟರಿ ಉಳಿಸಿಕೊಳ್ಳಿ

ಸಾಮಾನ್ಯವಾಗಿ ಬಂಡಿಗಳನ್ನು ಹೆಚ್ಚು ದಿನ ಒಂದೇ ಜಾಗದಲ್ಲಿ ನಿಲ್ಲಿಸಿದರೆ, ಅವುಗಳ ಮಿಂಕಟ್ಟುಗಳು(Battery) ಮೊದಲು ಕೆಡುತ್ತವೆ. ದಿನದಿಂದ ದಿನಕ್ಕೆ ಬ್ಯಾಟರಿಗಳು ತಮ್ಮಲ್ಲಿನ ಮಿಂಚನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ ಮತ್ತು ಬಂಡಿಯು ಶುರುವಾಗದೇ ಕೆಟ್ಟು ನಿಲ್ಲಬಹುದು.ಇದನ್ನು ತಡೆಯಲು, ದಿನಾಲೂ 10-15 ನಿಮಿಶ ನಿಮ್ಮ ಬಂಡಿಯನ್ನು ಶುರು ಮಾಡಿ ನಿಲ್ಲಿಸಿ. ಇದರಿಂದ ಮಿಂಕಟ್ಟುಗಳು ಮತ್ತೆ ಕಸುವು ಪಡೆದು ಮುಂಚಿನಂತಿರುತ್ತವೆ. ಇದು ಸಾದ್ಯವಾಗದೇ ಇದ್ದಲ್ಲಿ ಮಿಂಕಟ್ಟಿನ ಕಳೆತುದಿಯನ್ನು(Negative Terminal) ಬೇ‍ರ‍್ಪಡಿಸಿ(Disconnect) ಇಡುವುದು ಒಳ್ಳೆಯದು ಎಂದು ಅರಿವಿಗರ ಅನಿಸಿಕೆ.

ಕೈ ತಡೆತವನ್ನು ಹಾಕಬೇಡಿ

ಹಲವಾರು ಬಂಡಿ ತಯಾರಕರು, ಬಂಡಿ ನಿಲ್ಲಿಸಿದಾಗ ಅದಕ್ಕೆ ಕೈ ತಡೆತವನ್ನು(Hand Brake) ಹಾಕಿ ನಿಲ್ಲಿಸಿ ಎನ್ನುತ್ತಾರೆ. ಇದು ಸರಿಯೇ, ಆದರೆ ಹೀಗೆ ಬಂಡಿಗಳನ್ನು ದಿನಗಟ್ಟಲೇ ಕೈ ತಡೆತ ಹಾಕಿ ನಿಲ್ಲಿಸಿದರೆ ಅದು ಸಿಲುಕಿ ಹಾಕಿಕೊಳ್ಳುವ(Jamming) ಸಾದ್ಯತೆ ಉಂಟು. ಇದರಿಂದ ಹೊರಬರಲು ಹೀಗೆ ಮಾಡಿ. ಇಳಿಜಾರು ಜಾಗದಲ್ಲಿ ಬಂಡಿ ನಿಲ್ಲಿಸಬೇಕಾಗಿ ಬಂದರೆ ಹಿಂಬದಿ ಹಲ್ಲುಗಾಲಿಯಲ್ಲಿ(Reverse Gear) ಬಂಡಿ ನಿಲ್ಲಿಸಿ, ಎತ್ತರದ ಜಾಗದಲ್ಲಿ ನಿಲ್ಲಿಸಬೇಕಾಗಿ ಬಂದರೆ ಮೊದಲನೇ ಹಲ್ಲುಗಾಲಿ(gear) ಏರಿಸಿ ನಿಲ್ಲಿಸಿ, ಇನ್ನೂ ಸಮತಟ್ಟಾದ ಜಾಗವಿದ್ದರೆ ಅಲ್ಲೂ ಕೂಡ ಮೊದಲನೇ ಹಲ್ಲುಗಾಲಿ ಏರಿಸಿ ನಿಲ್ಲಿಸಿ. ಬಂಡಿಗೆ ತಡೆತ ಇಲ್ಲದೇ ಇರುವುದರಿಂದ ಅದು ಅತ್ತಿತ್ತ ಕದಲದಂತೆ ಗಾಲಿಗಳಿಗೆ ಅಡ್ಡಲಾಗಿ ಕಲ್ಲು/ಇಟ್ಟಿಗೆಗಳನ್ನು ನಿಲ್ಲಿಸಿದರೆ ಆಯಿತು.

ಬಂಡಿಯ ಕ್ಯಾಬಿನ್ ಹಸನು ಮಾಡಿ

ಹಲವಾರು ದಿನಗಳ ಕಾಲ ಬಂಡಿ ನಿಂತಲ್ಲಿಯೇ ನಿಂತಿದ್ದರೆ ಕಸ ದೂಳು ಬಂಡಿಯ ಒಳಬಾಗದಲ್ಲಿ ಸೇರಿಕೊಂಡಿರುವ ಸಾದ್ಯತೆ ಹೆಚ್ಚಿರುತ್ತದೆ. ಬಂಡಿಯ ಕ್ಯಾಬಿನ್ ಅನ್ನು ಕಸಕಡ್ದಿ, ದೂಳುಗಳಿಂದ ದೂರವಾಗಿಸಿ ಚೆನ್ನಾಗಿ ಹಸನುಗೊಳಿಸಿ. ಒಳಗಡೆ ಮಣ್ಣು, ರಾಡಿ ತುಂಬಿದ್ದರೆ ಅದನ್ನು ಹಾಗೇ ಉಳಿಸದೇ ಹಸನು ಮಾಡಿ. ಒಳಗಡೆ ಕೆಟ್ಟ ವಾಸನೆ ಬರುತ್ತಿದ್ದರೆ, ಕಳೆಯೇರಿಸುಕ(Freshner) ಸಿಂಪಡಿಸಬಹುದು. ಹೀಗೆ ಹಸನು ಮಾಡುವಾಗ ಕೈಗವಸು(Gloves) ಬಳಸಿದರೆ ಒಳ್ಳೆಯದು. ಹಸನು ಮಾಡುವುದು ಮುಗಿದ ನಂತರ ಈ ಕೈಗವಸುಗಳನ್ನು ಬಿಸಾಡಿ ಚೆನ್ನಾಗಿ ಕೈ ತೊಳೆದುಕೊಳ್ಳಿ. ನಿಮ್ಮ ಬಳಿ ಸೋಂಕು ನಿವಾರಕಗಳಿದ್ದರೆ(Disinfectant) ಅದನ್ನು ಬಂಡಿಯ ಒಳಗೆ-ಸುತ್ತಲೂ ಸಿಂಪಡಿಸಬಹುದು.

ಕಾರಿನ ಹೊರಬಾಗವನ್ನೂ ಕಾಪಾಡಿಕೊಳ್ಳಿ

ದಿನಗಟ್ಟಲೇ ಬಂಡಿಯನ್ನು ಹೊರಗೆ ನಿಲ್ಲಿಸಿದರೆ ಅದರ ಮೇಲೆ ಒಣಗಿದ ಎಲೆ, ಇತರೆ ಕಸ ಬಿದ್ದಿರುತ್ತದೆ. ಅದನ್ನು ತೆಗೆದುಹಾಕಿ ಸರಿಯಾಗಿ ನೀರು ಹಾಕಿ ಸೋಪಿನಿಂದ ಒರೆಸಿರಿ. ನಿಮ್ಮದೇ ಸ್ವಂತ ಗ್ಯಾರೇಜ್ ಇದ್ದರೆ ಕಾರನ್ನು ಅಲ್ಲಿ ನಿಲ್ಲಿಸಿ, ಇಲ್ಲವೇ ನೆರಳಿರುವ ಜಾಗದಲ್ಲಿ ನಿಲ್ಲಿಸಿ. ಒಂದು ವೇಳೆ ನೆರಳಿಲ್ಲದೇ ತೆರೆದ ವಾತಾವರಣದಲ್ಲಿ ನಿಲ್ಲಿಸಬೇಕಾಗಿ ಬಂದರೆ, ಬಂಡಿಯನ್ನು ಹೊದಿಕೆಯಿಂದ ಮುಚ್ಚಬೇಕು. ದಿನವಿಡೀ ಬಂಡಿ ಬಿಸಿಲಲ್ಲಿ ನಿಂತುಕೊಂಡರೆ ದಿನೇದಿನೇ ಅದರ ಬಣ್ಣ ಮಾಸಿಹೋಗುತ್ತದೆ.

ಕಾರು ಸಾಗಲಿ ಮುಂದೆ ಹೋಗಲಿ

ಕಡಲತೀರದಲ್ಲಿ ಕಾಣುವ ಹಡಗಿಗಿಂತ ಓಡಾಡುವ ಹಡಗೇ ಚೆಂದವಂತೆ, ಯಾಕೆಂದರೆ ಅದೇ ಹಡಗಿನ ಕೆಲಸ – ಮಂದಿ -ಸರಕು ಹೊತ್ತು ಸಾಗುವುದು. ನಮ್ಮ ಕಾರು ಬಂಡಿಗಳು ಇದಕ್ಕೆ ಹೊರತಾಗಿಲ್ಲ. ಆದರೆ ಈ ಹೊತ್ತಿನಲ್ಲಿ ಬಂಡಿಗಳನ್ನು ಹೊರತೆಗೆದು ಸುತ್ತಾಡುವುದು ಒಳ್ಳೆಯದಲ್ಲ, ಆದರೂ ಬಂಡಿಯ ಎಲ್ಲ ಏರ‍್ಪಾಟುಗಳು ಸರಿಯಾಗಿ ಇರುವಂತೆ ನೋಡಿಕೊಳ್ಳಲೇಬೇಕು. ದಿನವೊಮ್ಮೆ ಬಂಡಿಯನ್ನು ಶುರು ಮಾಡಿ, ಅದರ ಗಾಳಿಪಾಡುಕ(Air Conditioner) ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಕಚಿತಪಡಿಸಿಕೊಳ್ಳಿ. ಯಾವುದೇ ಏರ‍್ಪಾಟು, ಅನಗತ್ಯ ಸದ್ದುಗಳು ಬರುತ್ತಿದ್ದರೆ, ಯಾಕೆ-ಏನು ಎಂದು ಸ್ವಲ್ಪ ತಿಳಿದುಕೊಳ್ಳಿ. ನಿಂತ ಜಾಗದಲ್ಲೇ ಬಂಡಿಯನ್ನು ತುಸು ಹಿಂದೆ ಮುಂದೆ ಕದಲಿಸಿ, ಇದು ಟಯರ್ ಗಳು ಹಾಳಾಗದಂತೆ ತಡೆಯಬಲ್ಲುದು.

ಕೊನೆಯದಾಗಿ ಹೇಳಬೇಕೆಂದರೆ, ಸಾದ್ಯವಾದರೆ ಬಂಡಿಯ ಉರುವಲು ಚೀಲವನ್ನು(Fuel Tank) ಪೂರ‍್ತಿಯಾಗಿ ತುಂಬಿಸಿಡಿ. ಅರೆತುಂಬಿದ ಉರುವಲು ಚೀಲದ ಒಳಗಿರುವ ಉರುವಲಿನ ಮೇಲೆ, ಗಾಳಿ ತುಂಬಿ, ಉರುವಲು ಇಂಗಿ ಹೋಗುವುದಲ್ಲದೇ ಒಳಬಾಗಗಳು ತುಕ್ಕು ಹಿಡಿಯಬಹುದು.

( ಮಾಹಿತಿ ಸೆಲೆ : carandbike.com, autocarindia.com )
( ಚಿತ್ರ ಸೆಲೆ : iol.co.za )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: