ಮಾತನ್ನು ಬೇರೆಯಾಗಿ ತಿಳಿದರೆ…?

– ಪ್ರಿಯದರ‍್ಶಿನಿ ಶೆಟ್ಟರ್.

embarrassment, ಪೇಚು

ನವೆಂಬರ್- ಎಂದಾಕ್ಶಣ ನಮಗೆಲ್ಲಾ ನೆನಪಾಗುವುದು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ. ನಾವು ಪ್ರಾತಮಿಕ ಶಾಲೆಯಲ್ಲಿರುವಾಗ ಓದಿದ್ದು ಕನ್ನಡ ಮಾದ್ಯಮದಲ್ಲಿ. ಆಗ ನಮ್ಮ ಇಂಗ್ಲಿಶ್ ಅಶ್ಟಕ್ಕಶ್ಟೇ. ನಾವು ಚಿಕ್ಕವರಿದ್ದಾಗ, ಅಂದರೆ ಅದೇ ತಾನೆ ಪ್ರಾತಮಿಕ ಶಾಲೆಗೆ ಸೇರಿದಾಗ ಅಕ್ಶರಗಳನ್ನು, ಶಬ್ದಗಳನ್ನು, ವಾಕ್ಯಗಳನ್ನು ಕೂಡಿಸಿ ಓದಲು, ಬರೆಯಲು, ಅರ‍್ತ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದುದು ಒಂದು ಸುಂದರ ಅನುಬವ. ಕೆಲವೊಮ್ಮೆ ಕೆಲವು ಪದಗಳನ್ನು ಅಪಾರ‍್ತ ಮಾಡಿಕೊಂಡಾಗ ಆಗುವ ಎಡವಟ್ಟುಗಳು, ನಾವು ದೊಡ್ಡವರಾದಂತೆ ತಮಾಶೆಯ ವಿಶಯಗಳಾಗುತ್ತವೆ.

ನಾನು ನನ್ನ ಬಾಲ್ಯದಲ್ಲಿ ಆಳ್ವಾಸ್ ನುಡಿಸಿರಿ ಎಂದರೆ – ‘ಆಳ್ವಾಸ್’ ಎನ್ನುವುದು ಒಂದು ಸಂಗೀತ ವಾದ್ಯವಿರಬಹುದು, ಅದನ್ನು ನುಡಿಸುತ್ತಾರೆ ಎಂದೇ ತಿಳಿದಿದ್ದೆ! ಇತ್ತೀಚೆಗೆ ಹೆಚ್ಚು ಪ್ರಚಲಿತವಾಗಿರುವ ಕಳಸಾ ಬಂಡೂರಿಯ ಬಗ್ಗೆ ಕೇಳಿದಾಗ, ಒಂದೂರಿನಲ್ಲಿ ಒಂದು ಗುಡಿಯಿದೆ, ‘ಕಳಸಾ’ ಎಂದರೆ ಗುಡಿಯ ಕಳಸವಿರಬಹುದು ಎಂದುಕೊಂಡಿದ್ದೆ!

ಒಮ್ಮೆ ಮಮ್ಮಿ ನನಗೆ ‘ತರುಣ್ ಬಾರತ’ ಪತ್ರಿಕೆಗೆ ಇಂಗ್ಲಿಶ್‍ನಲ್ಲಿ ಏನೆನ್ನುತ್ತಾರೆಂದು ಕೇಳಿದಾಗ ನಾನು ‘ಯಂಗ್ ಇಂಡಿಯಾ’ ಎನ್ನುವುದರ ಬದಲು ‘ಹ್ಯಾಂಡ್‌ಸಮ್ ಇಂಡಿಯಾ’ ಅಂದಿದ್ದೆ! ನಮ್ಮ ನೆರೆಮನೆಯವರೊಮ್ಮೆ ಹೇಳುತ್ತಿದ್ದರು – ಅವರು ತಮ್ಮ ಮಗಳಿಗೆ “ಅನಿಲದ ಬೆಲೆ ಗಗನಕ್ಕೆ ಎಂದರೆ ಏನು?” ಎಂದು ಕೇಳಿದರಂತೆ. ಆಗ ಅವಳು “ಅನಿಲ ಎಂಬುವವನು ಸ್ಪೇಸ್‍ಗೆ ಹೋಗಿದ್ದಾನೆ” ಅಂದಳಂತೆ!! ಎಂತಹ ಊಹೆ…

ನನಗಾಗ ಐದಾರು ವರ‍್ಶವಿರಬಹುದು. ಒಂದಿನ ಮಮ್ಮಿ ಪಾತ್ರೆಗಳನ್ನು ತೊಳೆದು ನನ್ನ ಕೈಯ್ಯಲ್ಲಿ ಕೆಲ ತಟ್ಟೆಗಳನ್ನು ಕೊಟ್ಟು, “ಅಂದರ್ ಲೇಕರ್ ಚಲ್” ಎಂದರು. ನಾನು ಆ ತಟ್ಟೆಗಳನ್ನು ಅಡುಗೆ ಮನೆಗೆ ಒಯ್ದು ನೆಲದ ಮೇಲೆ ಚೆಲ್ಲಿದ ಶಬ್ದ ಕೇಳಿ ಎಲ್ಲರೂ ಓಡಿ ಬಂದಿದ್ದರು! ನನಗೆ ಮಮ್ಮಿ ಅವನ್ನೆಲ್ಲ ಒಳಗೆ ತಗೊಂಡು ಹೋಗಿ ಚಲ್ಲಲು ಹೇಳಿದ್ದಾರೆ ಎಂದುಕೊಂಡಿದ್ದೆ!

ನನ್ನ ತಂಗಿ ಮೇಗ ಎಲ್.ಕೆ.ಜಿ.ಯಲ್ಲಿರುವಾಗ ಒಮ್ಮೆ ಶಿಕ್ಶಕರ ದಿನಾಚರಣೆಯಂದು ಶಾಲೆಯಿಂದ ಮದ್ಯಾಹ್ನ ಮನೆಗೆ ಬಂದು ನನ್ನ ಅಮ್ಮನಿಗೆ-“ಅಮ್ಮ ಇಂದು ಶಾಲೆಯಲ್ಲಿ ನಮ್ಮ ಟೀಚರ್ ಕೇಕ್ ಕೊಟ್ಟರು” ಎಂದಳಂತೆ. ಆಗ ಅಮ್ಮ “ಇಂದು ಶಾಲೆಯಲ್ಲಿ ಏನು ವಿಶೇಶ?” ಎಂದಾಗ, ಅವಳು “ಇವತ್ತು ನಮ್ಮ ಟೀಚರ್‍ದ ದಿನಾ ಇತ್ತು!” ಎಂದಾಗ ನಾವೆಲ್ಲ ಬಿದ್ದೂ ಬಿದ್ದೂ ನಕ್ಕಿದ್ದೆವು. ಇನ್ನು ಅವಳ ಇಂಗ್ಲಿಶ್ ಅಂತೂ… ಅದರ ಬಗ್ಗೆ ಹೇಳದಿರುವುದೇ ಒಳಿತು. ಅರಳು ಹುರಿದಂತೆ ಸ್ವಲ್ಪವೂ ಹಿಂಜರಿಕೆಯಿಲ್ಲದೆ ತಪ್ಪುತಪ್ಪಾಗಿ ಬಾಯಿಗೆ ಬಂದಂತೆ ಬಾಯ್ತುಂಬಾ ಇಂಗ್ಲಿಶ್ ಮಾತಾಡುತ್ತಿದ್ದಳು!

ಮೇಗಾ ಒಂದು ದಿನ ಮಮ್ಮಿಗೆ ಚಹಾ ತಂದು ಕೊಟ್ಟಳು. ಮಮ್ಮಿ ಅದನ್ನು ಕುಡಿಯದೇ ಇರುವುದನ್ನು ಗಮನಿಸಿ “ಮಮ್ಮಿ ಟೀ ವಿಲ್ ಬಿಕಮ್ ಡ್ರೈ” ಎಂದಳು. ನಾನು ‘ಚಹಾ ಏಕೆ ಒಣಗುತ್ತದೆ?’ ಎಂದು ಯೋಚಿಸುತ್ತಿದ್ದೆ. ಆಮೇಲೆ ಅರ‍್ತವಾಯಿತು ‘ಚಹಾ ಆರಿಹೋಗುತ್ತದೆ’ ಎಂದು!

‘ಎನಿಮಲ್ ಹಸ್ಬಂಡರಿ’ ಎಂದರೆ ಏನು ಎಂದು ಮಮ್ಮಿಗೆ ಕೇಳಿದಾಗ, ಅವರು ಹೇಳಿದ್ದು – ‘ಗಂಡನನ್ನು ಪ್ರಾಣಿಯಂತೆ ನೋಡಿಕೊಳ್ಳುವುದು’ ಎಂದು! ಮಮ್ಮಿ ಮಾತ್ರವಲ್ಲ ನಮ್ಮ ಟೀಚರ್ ಎನಿಮಲ್ ಹಸ್ಬಂಡರಿ ಬಗ್ಗೆ ಹೇಳುವಾಗ ಇದೇ ರೀತಿ ಹೇಳಿದ್ದರು. ಪಾಟ ಶುರುವಾದ ಮೇಲೆಯೇ ಇದರ ನಿಜವಾದ ಅರ‍್ತ ನಮಗೆ ಗೊತ್ತಾಗಿದ್ದು. ಇಂಗ್ಲಿಶ್ ಅದ್ಯಾಪಕಿಯಾಗಿರುವ ಮಮ್ಮಿ ನನಗೆ ಮತ್ತು ನನ್ನ ತಂಗಿಗೆ -“ಯಾರಾದರೂ ನಿಮ್ಮ ತಾಯಿ ಏನು ಮಾಡುತ್ತಾರೆ ಎಂದು ಕೇಳಿದರೆ ಇಂಗ್ಲಿಶ್ ಅದ್ಯಾಪಕಿ ಎಂದು ಮಾತ್ರ ಹೇಳಬಾರದು!!” ಎಂದು ಹೇಳುತ್ತಿದ್ದರು.

ನಾವಾಗ ಏಳನೇ ತರಗತಿ ಇರಬಹುದು. ಒಮ್ಮೆ ನಮ್ಮ ಹಿಂದಿ ಟೀಚರ್ “ಮೈ ಸಾಗರ ಹೂಂ” ಎಂಬ ಸಮುದ್ರ ತನ್ನ ಕತೆಯನ್ನು ತಾನೇ ಹೇಳುವುದರ ಕುರಿತಾದ ಪಾಟ ಮಾಡುತ್ತಿದ್ದರು. ಅವರು ಮಾತಿನ ಮದ್ಯೆ “ಇಸ್ ಸಂಸಾರ್ ಮೇ…”ಎಂದು ಹೇಳಿದಾಗ, ನಮ್ಮಲ್ಲಿ “ಟೀಚರ್ ಯಾಕೆ ‘ಸಂಸಾರ’ ಎನ್ನುತ್ತಿದ್ದಾರೆ? ಹಾಗೆಂದರೇನು?” ಎಂದು ಗುಸುಗುಸು ಶುರುವಾಯಿತು! ಅದನ್ನು ಕೇಳಿಸಿಕೊಂಡ ಟೀಚರ್ “ಸಂಸಾರ್ ಎಂದರೆ ‘ಜೀವನ’ ಈ ಪಾಟದಲ್ಲಿ ಸಮುದ್ರವು ತನ್ನ ಜೀವನದ ಕತೆ ಹೇಳುತ್ತಿದೆ” ಎಂದರು.

ಒಮ್ಮೆ ನಾನು ಪಿ.ಯು.ಸಿ.ಯಲ್ಲಿದ್ದಾಗ ಮನೆಯಲ್ಲಿ ನನ್ನ ಹೊರತು ಎಲ್ಲರಿಗೂ ಮೂರ‍್ನಾಲ್ಕು ದಿನ ರಜೆಯಿದ್ದ ಕಾರಣ ನಾವೆಲ್ಲ ಟ್ರಿಪ್ ಪ್ಲ್ಯಾನ್ ಮಾಡಿದೆವು. ನಾನು ಎರಡು ದಿನ ಕಾಲೇಜ್ ಬಂಕ್ ಮಾಡಬೇಕೆಂದುಕೊಂಡಿದ್ದೆ. ಪಪ್ಪ ನನಗೆ “ಕ್ಲಾಸ್ ಮಿಸ್ ಆಗಬಹುದೇನೋ” ಎಂದಾಗ ನಾನು “ಇರಲಿ ವಾಪಸ್ ಬಂದ ಮೇಲೆ ಮೇಕಪ್ ಮಾಡಿಕೊಳ್ಳುತ್ತೇನೆ” ಅಂದೆ. ಆಗ ಮೇಗ “ಕಾಲೇಜ್‍ಗೆ ಯಾಕೆ ಮೇಕಪ್ ಮಾಡಿಕೊಂಡು ಹೋಗುತ್ತೀ?” ಎಂದು ಕೇಳಬೇಕೆ?!

(ಚಿತ್ರ ಸೆಲೆ: pxfuel.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: