ಅಲ್ಲಮನ ವಚನಗಳ ಓದು – 14ನೆಯ ಕಂತು

– ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ನಾನು ಘನ ತಾನು ಘನವೆಂಬ
ಹಿರಿಯರುಂಟೆ ಜಗದೊಳಗೆ
ಹಿರಿದು ಕಿರಿದೆಂದಲ್ಲಿ ಏನಾಯಿತ್ತು
ಹಿರಿದು ಕಿರಿದೆಂಬ ಶಬ್ದವಡಗಿದರೆ
ಆತನೆ ಶರಣ ಗುಹೇಶ್ವರಾ.

ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ವ್ಯಕ್ತಿಗೆ ಹಿರಿಯತನವೆಂಬುದು ಅಯ್ದು ಕಾರಣಗಳಿಂದ ದೊರೆಯುತ್ತದೆ. ಇತರರಿಗಿಂತ ವಯಸ್ಸಿನಲ್ಲಿ ದೊಡ್ಡವನಾದ, ತಿಳುವಳಿಕೆಯಿಂದ ಕೂಡಿದ , ಜವಾಬ್ದಾರಿಯುತವಾದ ಗದ್ದುಗೆಯಲ್ಲಿರುವ, ಸಂಪತ್ತನ್ನು ಹೊಂದಿರುವ ಇಲ್ಲವೇ ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಯನ್ನು ಹಿರಿಯನೆಂದು ಜನರು ಒಪ್ಪಿಕೊಂಡು ಒಲವು ನಲಿವಿನಿಂದ ಕಾಣುತ್ತಾರೆ. ಆದ್ದರಿಂದ ಹಿರಿಯರು ಎನಿಸಿಕೊಂಡವರು ಯಾವುದೇ ಬಗೆಯ ಅಹಂಕಾರಕ್ಕೆ ಒಳಗಾಗದೆ, ಎಲ್ಲರೊಡನೆ ಒಂದಾಗಿ ಜತೆಗೂಡಿ, ಎಲ್ಲರನ್ನು ಸಮಾನವಾಗಿ ಕಾಣುತ್ತ, ಎಲ್ಲರ ಒಳಿತಿಗಾಗಿ ಬಾಳಬೇಕು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಘನ=ಉತ್ತಮವಾದುದು/ದೊಡ್ಡದು/ಹೆಚ್ಚು; ಘನ+ಎಂಬ; ಎಂಬ=ಎನ್ನುವ/ಎಂದು ಹೇಳಿಕೊಳ್ಳುವ; ಹಿರಿಯರು+ಉಂಟೆ; ಹಿರಿಯರು=ವಯಸ್ಸಿನಲ್ಲಿ/ತಿಳುವಳಿಕೆಯಲ್ಲಿ /ಗದ್ದುಗೆಯಲ್ಲಿ/ಸಂಪತ್ತಿನಲ್ಲಿ/ಒಳ್ಳೆಯ ನಡೆನುಡಿಯಲ್ಲಿ ದೊಡ್ಡವರು;

ಉಂಟೆ=ಇರುವರೇ/ಇದ್ದಾರೆಯೇ; ಹಿರಿಯರುಂಟೆ=ಹಿರಿಯರು ಇದ್ದಾರೆಯೇ; ಜಗದ+ಒಳಗೆ; ಜಗ=ಜಗತ್ತು/ಪ್ರಪಂಚ/ಇಳೆ; ಜಗದೊಳಗೆ=ಜಗತ್ತಿನಲ್ಲಿ;

ನಾನು ಘನ ತಾನು ಘನ= “ ನಾನೇ ಎಲ್ಲವನ್ನೂ ತಿಳಿದವನು/ನಾನೇ ಎಲ್ಲರಿಗಿಂತಲೂ ದೊಡ್ಡವನು/ನನ್ನಿಂದಲೇ ಈ ಜಗತ್ತಿನಲ್ಲಿ ಎಲ್ಲವೂ ನಡೆಯುತ್ತಿದೆ“  ಎಂಬ ಅಹಂಕಾರದ ಒಳಮಿಡಿತಗಳಿಂದ ಕೂಡಿರುವ ವ್ಯಕ್ತಿ;

ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ=ಜಗತ್ತಿನಲ್ಲಿ ಅಹಂಕಾರದ ನಡೆನುಡಿಗಳಿಂದ ಕೂಡಿರುವ ವ್ಯಕ್ತಿಯು ಎಂದೆಂದಿಗೂ ಹಿರಿಯನಾಗಲಾರ. ಏಕೆಂದರೆ ಇಂತಹ ವ್ಯಕ್ತಿಯು ಇತರರ ಒಳ್ಳೆಯ ನಡೆನುಡಿಗಳನ್ನು ಕಡೆಗಣಿಸುತ್ತಾನೆ. ತನ್ನನ್ನು ತಾನೇ ಹೊಗಳಿಕೊಂಡು ಮೆರೆಯುತ್ತ , ಇತರರ ಬಗ್ಗೆ ಅಸೂಯೆ, ಅಸಹನೆ ಮತ್ತು ಕ್ರೂರತನದಿಂದ ನಡೆದುಕೊಳ್ಳುತ್ತಾನೆ;

ಹಿರಿದು=ದೊಡ್ಡದು; ಕಿರಿದು+ಎಂದ+ಅಲ್ಲಿ; ಕಿರಿದು=ಚಿಕ್ಕದು; ಎಂದ=ಹೇಳುವ; ಎಂದಲ್ಲಿ=ಹೇಳುವ ನೆಲೆಯಲ್ಲಿ; ಏನ್+ಆಯಿತ್ತು; ಏನ್=ಯಾವುದು; ಆಯಿತ್ತು=ಆದುದು;

ಹಿರಿದು ಕಿರಿದೆಂದಲ್ಲಿ ಏನಾಯಿತ್ತು=ಹಿರಿದು ಕಿರಿದು ಎಂದು ತಾರತಮ್ಯ ಮಾಡುವ ನೆಲೆಯಲ್ಲಿ ಯಾವುದೇ ಬಗೆಯ ಒಳಿತಿನ ಕೆಲಸಗಳು ನಡೆಯುವುದಿಲ್ಲ. ಏಕೆಂದರೆ ಕುಟುಂಬದಲ್ಲಾಗಲಿ ಇಲ್ಲವೇ ಸಾಮಾಜಿಕ ನೆಲೆಯಲ್ಲಾಗಲಿ ವ್ಯಕ್ತಿಗಳ ನಡುವೆ “ ನಾನು ದೊಡ್ಡವನು-ಅವನು ಚಿಕ್ಕವನು; ನಾನು ಮೇಲು-ಅವನು ಕೀಳು “ ಎಂಬ ತಾರತಮ್ಯ ಉಂಟಾದಾಗ, ನಾನು ದೊಡ್ಡವನು ಅಂದುಕೊಂಡ ವ್ಯಕ್ತಿಯು ಉಳಿದವರನ್ನು ತನ್ನ ಅಡಿಯಾಳುಗಳನ್ನಾಗಿ ಮಾಡಿಕೊಂಡು ದಬ್ಬಾಳಿಕೆಯ ನಡೆನುಡಿಗಳಿಂದ ಕಿರುಕುಳವನ್ನು ಕೊಡತೊಡಗುತ್ತಾನೆ. ಆಗ ವ್ಯಕ್ತಿಗಳ ನಡುವಣ ಒಲವು ನಲಿವಿನ ನಂಟು ಮುರಿದುಬಿದ್ದು , ಎಲ್ಲರ ನೆಮ್ಮದಿಯ ಹಾಳಾಗುತ್ತದೆ. ಆದ್ದರಿಂದ ಹಿರಿದು ಕಿರಿದೆಂಬ ತಾರತಮ್ಯದ ನಡೆನುಡಿಯು ಜೀವನದಲ್ಲಿ ಯಾರಿಗೂ ಒಳಿತನ್ನು ಉಂಟುಮಾಡುವುದಿಲ್ಲ;

ಹಿರಿದು+ಕಿರಿದು+ಎಂಬ;ಶಬ್ದ+ಅಡಗಿದಡೆ;ಶಬ್ದ=ಮಾತು/ಪದ/ನುಡಿ; ಅಡಗು=ಮರೆಯಾಗು/ಕೊನೆಗೊಳ್ಳು/ಇಲ್ಲವಾಗು; ಅಡಗಿದಡೆ=ಅಡಗಿದರೆ/ಇಲ್ಲವಾದರೆ/ಕೊನೆಗೊಂಡರೆ; ಆತನೆ=ಅಂತಹ ವ್ಯಕ್ತಿಯೇ;ಶರಣ=ಒಳ್ಳೆಯ ನಡೆನುಡಿಗಳಿಂದ ತನ್ನ ಬದುಕನ್ನು ರೂಪಿಸಿಕೊಂಡು,ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವನು/ಶಿವನನ್ನು ಪೂಜಿಸುವವನು/ಶಿವನಿಗೆ ಒಲಿದವನು;

ಗುಹೇಶ್ವರ=ಶಿವ/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಬಳಕೆಯಾಗಿರುವ ಅಂಕಿತನಾಮ;

ಹಿರಿದು ಕಿರಿದೆಂಬ ಶಬ್ದವಡಗಿದಡೆ ಆತನೆ ಶರಣ=ನಾನೇ ದೊಡ್ಡವನು ಇತರರು ಕೀಳು ಎಂಬ ಅಹಂಕಾರದ ನಡೆನುಡಿಗಳನ್ನು ಬಿಟ್ಟು, ನಾನು ಯಾರಿಗಿಂತಲೂ ಮೇಲು ಅಲ್ಲ, ಕೀಳು ಅಲ್ಲ ಎಂಬ ಅರಿವನ್ನು ಪಡೆದುಕೊಂಡು , ಸಮಾನತೆಯಿಂದ ಎಲ್ಲರೊಡನೆ ಒಂದಾಗಿ ಬಾಳುವ ವ್ಯಕ್ತಿಯು ಶರಣನ ವ್ಯಕ್ತಿತ್ವವನ್ನು ಪಡೆಯುತ್ತಾನೆ.)

( ಚಿತ್ರ ಸೆಲೆ : lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: