ಇರುವ ಬಾಗ್ಯವ ನೆನೆದು

– .

greediness, life, happiness, ಬದುಕು, ನೆಮ್ಮದಿ, ಅತಿ ಆಸೆ

ಇರುವ ಬಾಗ್ಯವ ನೆನೆದು
ಬಾರೆದೆಂಬುದನು ಬಿಡು
ಹರುಶಕ್ಕಿದೆ ದಾರಿ
– ಡಿವಿಜಿ

ಡಿ. ವಿ. ಗುಂಡಪ್ಪನವರು ಬದುಕಿನ ಬಗ್ಗೆ ಸರಳವಾಗಿ ತಮ್ಮ ಪದ್ಯದ ಸಾಲಿನಲ್ಲಿ ಹೇಳಿದ್ದಾರೆ. ಇರುವ ಬಾಗ್ಯವನ್ನೆ ನೆನೆದು ನಾವು ಸಂತಸದ ಜೀವನ ಮಾಡಬೇಕು. ಬರುವುದಿಲ್ಲ ಎನ್ನುವ ಬಾಗ್ಯಕ್ಕಾಗಿ ದೇವರಲ್ಲಿ ಮೊರೆಯಿಟ್ಟು ಮನಸ್ಸನ್ನು ಹೈರಾಣಾಗಿಸಿ ಇರುವ ಸಂತೋಶವನ್ನು ಕಳೆದುಕೊಳ್ಳುವುದರಲ್ಲಿ ಏನು ಅರ‍್ತವಿದೆ? ಇದ್ದದ್ದರಲ್ಲಿಯೇ ತ್ರುಪ್ತನಾಗುವುದರಲ್ಲಿ ಹರುಶವಡಗಿದೆ.

ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬ್ರುಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂದನ ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ‍್ಮರ ಇಂದು ಇಲ್ಲಿಗೂ ಹಾಯಿತೆ

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಎಂಬ ಗೋಪಾಲ ಕ್ರಿಶ್ಣ ಅಡಿಗರ ಬಾವಗೀತೆಯ ಕಡೆಯ ಸಾಲು ಕೂಡ ಮನುಶ್ಯನ ಲಾಲಸೆಯ ಬಗ್ಗೆ ಅವನ ಅತ್ರುಪ್ತ ಜೀವನದ ಬಗ್ಗೆ ಎತ್ತಿ ಹೇಳುತ್ತದೆ.

ನಮಗೆ ದೇವರು ದಯಪಾಲಿಸಿದ್ದರಲ್ಲಿಯೇ ತ್ರುಪ್ತರಾಗಿ ಜೀವನ ನಡೆಸಿದರೆ ಬದುಕು ನಿಜಕ್ಕೂ ಸ್ವರ‍್ಗ. ಇನ್ನೂ ದೇವರು ನಮಗೆ ಸಾಕಶ್ಟು ದಯಪಾಲಿಸಿ, ಅದನ್ನು ಅವಿವೇಕದಿಂದ ಹಾಳುಮಾಡಿಕೊಂಡು ಬೇಕಾಬಿಟ್ಟಿ ಜೀವನ ಮಾಡಿ, ನಂತರ ನಾವು ದೇವರಲ್ಲಿ ಕಾಪಾಡು… ಕಾಪಾಡು ಎಂದು ಮೊರೆಯಿಟ್ಟರೆ ಅದು ಅಕ್ಶಮ್ಯ ಅಪರಾದ. ಮನುಶ್ಯ ಜನ್ಮ ಒಂದು ಸೀಮಿತ ಅವದಿಯ ಸುಂದರ ಸ್ರುಶ್ಟಿ. ಈ ಸೀಮಿತ ಅವದಿಯ ಬದುಕಿನ ಸ್ತರಗಳಲ್ಲಿ ಬಾಲ್ಯ, ಹರೆಯ, ಮುಪ್ಪು ಮತ್ತು ಮುಕ್ತಿ ಸಾಲಾಗಿ ಬರುತ್ತವೆ. ಬದುಕಿನ ಆಯಾ ಸ್ತರಗಳನ್ನು ನಾವು ವಿವೇಕದಿಂದ ಸದುಪಯೋಗ ಮಾಡಿಕೊಂಡು ಬದುಕಿದರೆ, ಆ ಬದುಕೊಂದು ಸುಂದರ ಕಾಂಡ. ಅತ್ರುಪ್ತರಂತೆ ಬೇಕಾಬಿಟ್ಟಿ ಬದುಕು ನಡೆಸಿ, ನನಗೆ ದೇವರು ಮೋಸ ಮಾಡಿದ, ನನ್ನ ಬದುಕು ಮೂರಾಬಟ್ಟೆ ಮಾಡಿದ ಎಂದು ದೇವರನ್ನು ಹಳಿಯುವುದರಲ್ಲಿ ಯಾವುದೇ ಅರ‍್ತವಿಲ್ಲ. ನಮ್ಮ ಅಂತರಾತ್ಮದ ವಿವೇಕಯುತ ವಿವೇಚನೆಯ ಸೂಕ್ಶ್ಮ ನಡಿಗೆಯೇ ನಮಗೆ ಹಸನಾದ ಬದುಕು ತರಬಲ್ಲದು. ಎಚ್ಚರ ತಪ್ಪಿದ ಬದುಕು ನಮ್ಮನ್ನು ಪ್ರಪಾತಕ್ಕೆ ತಳ್ಳಬಲ್ಲುದು. ಆಗ ನಮ್ಮ ಅದ್ರುಶ್ಟವನ್ನು ಹಳಿಯುತ್ತ, ದೇವರೇ ಕಾಪಾಡು ಎಂದು ಮೊರೆಯಿಡುತ್ತ ಬದುಕುವುದರಲ್ಲಿ ಅರ‍್ತವಿಲ್ಲ.

ಮಾನವ ಜನ್ಮ ದೊಡ್ಡದು
ಇದ ಹಾನಿ ಮಾಡಲು ಬೇಡಿ
ಹುಚ್ಚಪ್ಪಗಳಿರಾ

ಎಂದು ಪುರಂದರ ದಾಸರು ತಮ್ಮ ದಾಸ ವಾಣಿಯಲ್ಲಿ ಮನುಶ್ಯ ಜನ್ಮ ಬಹಳ ಶ್ರೇಶ್ಟವಾದದ್ದು ಎಂದು ತಿಳಿ ಹೇಳುವುದರ ಜೊತೆಗೆ, ಇದನ್ನು ಹಾನಿ ಮಾಡಿಕೊಳ್ಳಬೇಡಿ ಎಂದು ನಮಗೆ ಎಚ್ಚರಿಸಿದ್ದಾರೆ.

ಈ ಪ್ರಪಂಚದ ಎಲ್ಲ ಜೀವ ಚೇತನಗಳಲ್ಲಿ ಮನುಶ್ಯ ಜನ್ಮ ಅತ್ಯಂತ ಶ್ರೇಶ್ಟವಾದದ್ದು. ಅಂತಹ ತೀಕ್ಶ್ಣಮತಿ ಜೀವ ಚೇತನವಾದ ಮಾನವ ಜೀವ ಸ್ವಾರ‍್ತಕ್ಕೆ ಬದುಕಿ ಇತರ ಜೀವ ರಾಶಿಗಳನ್ನು, ನಮ್ಮ ಪರಿಸರವನ್ನು ಕಡೆಗಣಿಸುವುದು ಬೇಡ. ನಮಗೆ ಬದುಕಲು ಯೋಗ್ಯವಾದ ಈ ಬೂಗ್ರಹವನ್ನು ನಾವು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾಗುತ್ತದೆ. ಎಚ್ಚರ ತಪ್ಪಿ ಬೇಕಾಬಿಟ್ಟಿ ಬಳಕೆ ಮಾಡಿಕೊಂಡರೆ, ಸಕಲ ಜೀವ ರಾಶಿಗಳೊಂದಿಗೆ ಮನುಕುಲವಶ್ಟೆ ಅಲ್ಲ, ಇಡಿ ಬೂ ಮಂಡಲವೇ ನಾಶವಾಗಿ ಮನುಶ್ಯರು ಅಸ್ತಿತ್ವದಲ್ಲಿದ್ದರು ಎಂಬುದು ಚರಿತ್ರೆಯಾಗುವ ಕಾಲ ದೂರವಿಲ್ಲ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: