ಒಳ್ಳೆಯದನ್ನು ಸ್ವೀಕರಿಸದಿದ್ದರೆ…!?

ಒಬ್ಬ ಶಿಕ್ಶಕರು ಇದ್ದರು. ಅವರು ತಾವು ಬೆಳಗಿನ ಜಾವ ವಾಕಿಂಗ್ ಹೋಗುವಾಗ, ಮನೆಗೆ ಮರಳುವಾಗ , ಹಾಗೆಯೇ ಕೆಲಸಕ್ಕೆ ಹೋಗುವಾಗ, ಕೆಲಸದಿಂದ ಹಿಂದಿರುಗುವಾಗ ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ ಮುಳ್ಳಿನ ಕಂಟಿಯನ್ನೋ ಅತವಾ ರಕ್ಶಣೆಗೆ ಕಟ್ಟಿಗೆಗಳನ್ನು ಕಟ್ಟಿ ಗಿಡಗಳನ್ನು ರಕ್ಶಣೆ ಮಾಡುತ್ತಿದ್ದರು. ತಮ್ಮ ಸೈಕಲ್ಗೆ ಎರಡು ಚೀಲಗಳನ್ನು ತೂಗು ಹಾಕಿ ಅದರಲ್ಲಿ ನಾಲ್ಕೈದು ಬಾಟಲುಗಳಲ್ಲಿ ನೀರು ತುಂಬಿಕೊಂಡು ಸಾದ್ಯವಾದಶ್ಟು ಗಿಡಗಳಿಗೆ ನೀರನ್ನು ಉಣಬಡಿಸುತ್ತಿದ್ದರು. ದಾರಿಯಲ್ಲಿ ಸಂಚರಿಸುವ ಜನಗಳಿಗೆ ಇವರು ಪರಿಚಿತರಾಗಿದ್ದರೂ ಸಹ ಯಾರೂ ಸಹಾಯಕ್ಕೆ ಬರುತ್ತಿರಲಿಲ್ಲ . “ತುಂಬಾ ಒಳ್ಳೆಯ ಕೆಲಸ ಸರ್ ಮಾಡಿ ಮಾಡಿ” ಎಂದಶ್ಟೇ ನುಡಿದು ತಮ್ಮ ಹಾದಿ ಹಿಡಿಯುತ್ತಿದ್ದರು. ಕೆಲವರಂತೂ ” ಈ ಮಾಸ್ತರ್‌ಗೆ ತಲೆ ಸರಿ ಇರಲಿಕ್ಕಿಲ್ಲ. ಮಾಡೋಕೆ ಬೇರೆ ಕೆಲಸ ಇಲ್ಲ ಅನಿಸುತ್ತೆ” ಎಂದು ಅಂದುಕೊಳ್ಳುತ್ತಿದ್ದರು. ವಿಪರ‍್ಯಾಸವೆಂದರೆ ದನಗಾಯಿಗಳು, ಕುರಿಗಾಯಿ ಹುಡುಗರು ಗಿಡಗಳನ್ನು ಎಲೆಗಳನ್ನು ಮುರಿದುಹಾಕುತ್ತಿದ್ದರೂ ಯಾರೂ ಗಮನ ಹರಿಸುತ್ತಿರಲಿಲ್ಲ. ಆದರೆ ಶಿಕ್ಶಕರು ಮಾತ್ರ ತಮ್ಮ ಕೆಲಸವನ್ನು ಮುಂದುವರಿಸಿದ್ದರು.

ಒಬ್ಬಾತ ತನ್ನ ಮನೆಯ ಮುಂದಿನ ಚರಂಡಿಯನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುತ್ತಿದ್ದ. ಅವನ ಓಣಿಯ ಕೊನೆಯವರೆಗೂ ಸ್ವಚ್ಚಗೊಳಿಸುವುದು ಅವನಿಗೆ ಹವ್ಯಾಸವಾಗಿಬಿಟ್ಟತ್ತು. ಕೆಲವರು ಅವನನ್ನು ಕಂಡು ಹಾಸ್ಯ ಮಾಡಿದರೆ ಮತ್ತೆ ಕೆಲವರು ತಮ್ಮ ಮನೆಯ ಮುಂದಿನ ಚರಂಡಿಯನ್ನು ಸ್ವಚ್ಚವಾಗಿಸಬೇಕು ಎಂದು ತಾಕೀತು ಹಾಕುತ್ತಿದ್ದರು. ಆದರೆ ಯಾರು ಕೂಡ ಅವನೊಂದಿಗೆ ಕೈಜೋಡಿಸುತ್ತಿರಲಿಲ್ಲ. ಕೆಲವರಂತೂ ಅವನನ್ನು ವಿಚಿತ್ರವಾಗಿ ನೋಡುತ್ತಿದ್ದರು.

ದಾರಿಯಲ್ಲಿ ಒಂದು ನಾಯಿಗೆ ಅಪಗಾತವಾಗಿ ಸತ್ತುಹೋಗಿತ್ತು. ಅಪಗಾತಕ್ಕೆ ಕಾರಣವಾದ ಗಾಡಿಯವನು ನಾಯಿಗೆ ಏನಾಯಿತು ಎಂದು ಗಮನಿಸದೆ ತನ್ನ ಪಾಡಿಗೆ ತಾನು ಹೊರಟುಹೋಗಿದ್ದ. ಎರಡು ಕಾಲು ಕಳೆದುಕೊಂಡು ನಾಯಿ ಪ್ರಾಣಬಿಟ್ಟಿತ್ತು. ಅನೇಕ ಜನರು ಈ ದ್ರುಶ್ಯ ನೋಡಿಯೂ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ತಕ್ಶಣಕ್ಕೆ ನಾಯಿಗೆ ಏನಾದರೂ ಚಿಕಿತ್ಸೆ ನೀಡಿದ್ದರೆ ಕಂಡಿತ ಬದುಕುತ್ತಿತ್ತು. ಆದರೆ ಸಮಯ ಮೀರಿತ್ತು. ವಾಹನಗಳು ನಾಯಿಯ ಮೇಲೆ ಅತವಾ ಪಕ್ಕದಲ್ಲಿ ಹಾದು ಹೋಗುತ್ತಿದ್ದವು. ಸಂಜೆಯಾದರೂ ನಾಯಿ ಅಲ್ಲೇ ಬಿದ್ದಿತ್ತು. ಒಬ್ಬಾತ ಹಳ್ಳಿಯವ ನಾಯಿಯ ಸ್ತಿತಿಯನ್ನು ಕಂಡು ಒಂದು ದಾರದಿಂದ ಅದನ್ನು ಕಟ್ಟಿ ದಾರಿಯ ಪಕ್ಕಕ್ಕೆ ಎಳೆದು ತನ್ನ ಕೈಯಲ್ಲಿದ್ದ ಸಲಾಕೆಯಿಂದ ಗುಂಡಿಯನ್ನು ತೋಡಿ ಅದರಲ್ಲಿ ನಾಯಿಯನ್ನು ಮುಚ್ಚಿ ಮಣ್ಣು ಹಾಕಿದ್ದ. ಅವನು ಮಾಡುತ್ತಿದ್ದ ಕೆಲಸವನ್ನು ವಿಶೇಶ ಎಂಬಂತೆ ಜನ ನೋಡುತ್ತಿದ್ದರು. ಬಿಟ್ಟಿ ಸಲಹೆ ನೀಡಿದ್ದೂ ಉಂಟು. ಮತ್ತೆ ಕೆಲವರು ನಾಯಿಯನ್ನು ಊರ ಹೊರಗೆ ಎಳೆದು ಒಯ್ಯಲು ತಾಕೀತು ಮಾಡಿದ್ದು ಉಂಟು.

ಈ ಮೇಲಿನ ಕೆಲವು ಉದಾಹರಣೆಗಳನ್ನು ಗಮನಿಸಿದಾಗ ಒಂದು ಪ್ರಶ್ನೆ ನಮ್ಮ ಮನದಲ್ಲಿ ಒಂದು ಪ್ರಶ್ನೆ ಮೂಡದೇ ಇರದು -“ಒಳ್ಳೆಯದನ್ನು ನಾವೇಕೆ ಸ್ವೀಕರಿಸುವುದಿಲ್ಲ..?” ಇಲ್ಲಿ ಸ್ವಪ್ರೇರಣೆಯಿಂದ ಸಮಾಜಸೇವೆ ಮಾಡುತ್ತಿರುವವರು ನಮಗೆ ರೋಲ್ ಮಾಡಲ್ ಆಗಬಹುದು. ನಮಗೂ ಈ ಕೆಲಸಗಳನ್ನು ಮಾಡುವ ಸಾಮರ‍್ತ್ಯ ಇದೆ, ಆದರೆ ನಮ್ಮಲ್ಲಿರುವ ಹಿಂಜರಿಕೆ, ಅಹಂ, ಯಾರು ಏನೆಂದುಕೊಳ್ಳುತ್ತಾರೋ ಎಂಬ ಬಯ, ನಾನೇಕೆ ಮಾಡಬೇಕು? ಅದರಿಂದ ನನಗೇನು ಲಾಬ? ಎಂಬ ಸ್ವಾರ‍್ತ. ಹೀಗೆ ಹಲವಾರು ಕಾರಣಗಳು ನಮ್ಮನ್ನು ಇಂತಹ ಕಾರ‍್ಯಗಳಿಂದ ದೂರವಾಗಿಸುತ್ತವೆ. ಅನ್ಯಾಯವನ್ನು ತಡೆಯುವುದೇ ಆಗಿರಬಹುದು, ಯಾವುದಾದರೂ ಸಮಾಜಸೇವಾ ಕೆಲಸವಾಗಿರಬಹುದು ಇಂತಹ ಸಂದರ‍್ಬಗಳಲ್ಲಿ ನಮ್ಮನ್ನು ನಾವು ದೂರವಾಗಿಸಿಕೊಳ್ಳುತ್ತೇವೆ. ಕಂಡು ಕಾಣದಂತೆ, ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದುಬಿಡುತ್ತೇವೆ. ಮೇಲಿನ ಉದಾಹರಣೆಗಳಲ್ಲಿರುವ ವ್ಯಕ್ತಿಗಳ ಮನೋಬಾವ ನಮ್ಮಲ್ಲಿ ಏಕೆ ಇಲ್ಲ? ಒಳ್ಳೆಯದನ್ನು ನಾವೇಕೆ ಸ್ವೀಕರಿಸುವುದಿಲ್ಲ? ಒಳ್ಳೆಯ ಕೆಲಸವನ್ನು ಮಾಡಲು ನಾವೇಕೆ ಹಿಂಜರಿಯುತ್ತೇವೆ? ಯಾವುದು ಒಳ್ಳೆಯದು? ಹೀಗೆ ಹಲವಾರು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾಗಿದೆ. ನಾಗರಿಕ ಸಮಾಜದಲ್ಲಿ ಮೇಲಿನ ಉದಾಹರಣೆಗಳಲ್ಲಿ ಬರುವಂತಹ ವ್ಯಕ್ತಿಗಳು ಹೆಚ್ಚಾಗಬೇಕು. ಸ್ವಸ್ತ ಸಮಾಜಕ್ಕೆ ಸ್ವಸ್ತ ಮನಸ್ಸುಳ್ಳ ಜನ ಬೇಕೆ ಹೊರತು ಸ್ವಾರ‍್ತಿಗಳಲ್ಲ. ಒಳ್ಳೆಯದನ್ನು ಪ್ರೋತ್ಸಾಹಿಸೋಣ. ಒಳ್ಳೆಯ ಕಾರ‍್ಯಕ್ಕೆ ಕೈಜೋಡಿಸೋಣ . ಒಳ್ಳೆಯ ಕಾರ‍್ಯವನ್ನು ದೈರ‍್ಯದಿಂದ ಮಾಡೋಣ. ಏನಂತೀರಿ…?

(ಚಿತ್ರ ಸೆಲೆ: en.wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಬರಹ ಚೆನ್ನಾಗಿದೆ… ದಿನನಿತ್ಯದ ಸಹಜ ಉದಾಹರಣೆಗಳೊಂದಿಗೆ ವರ್ಣಿಸಿರುವ ರೀತಿ ಉತ್ತಮ…ಸ್ವಲ್ಪವಾದರೂ ಒಳ್ಳೆಯದನ್ನು ಮಾಡುವುದಕ್ಕೆ ಮನುಷ್ಯನಿಗೆ ಪ್ರೇರೇಪಣೆ ಆಗಲಿ. ಮುಂದೆಯಾದರೂ ಒಳ್ಳೆಯದನ್ನು ಮಾಡುವುದಕ್ಕೆ ಹಿಂಜರಿಯದಿರೊಣ..

ಅನಿಸಿಕೆ ಬರೆಯಿರಿ: