ಸಾಬುದಾನಿ ವಡೆ

– ಸವಿತಾ.

ಸಾಬುದಾನಿ, ಸಬ್ಬಕ್ಕಿ, ವಡೆ, sabbakki, sabudani, vade

 

ಬೇಕಾಗುವ ಸಾಮಾನುಗಳು

  • ಸಾಬುದಾನಿ – 1 ಬಟ್ಟಲು
  • ಆಲೂಗಡ್ಡೆ – 2/3
  • ಹಸಿ ಮೆಣಸಿನಕಾಯಿ – 4
  • ಶೇಂಗಾ (ಕಡಲೆ ಬೀಜ) – 1/2 ಬಟ್ಟಲು
  • ಜೀರಿಗೆ – 1/2 ಚಮಚ
  • ಅರಿಶಿಣ – 1/4 ಚಮಚ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ಎಣ್ಣೆ – ಕರಿಯಲು

ಮಾಡುವ ಬಗೆ

ಸಾಬುದಾನಿ ತೊಳೆದು ಮೇಲೆ ಒಂದು ಇಂಚು ಇರುವಶ್ಟು ನೀರು ಹಾಕಿ ನಾಲ್ಕು ಗಂಟೆ ನೆನೆಯಲು ಇಡಬೇಕು. ಕಡಲೆ ಬೀಜ ಹುರಿದು ಸ್ವಲ್ಪ ಆರಿದ ನಂತರ ಒಂದು ಬಟ್ಟೆಯಲ್ಲಿ ಹಾಕಿ ಗಂಟು ಹಾಕಿ, ಮೇಲೆ ಲಟ್ಟಣಿಗೆ ಅತವಾ ಕಲ್ಲಿನಿಂದ ಉರುಳಾಡಿಸಿ. ಕಡಲೆ ಬೀಜ ಒಡೆದು ಸಿಪ್ಪೆ ಹೊರಗೆ ಬರುತ್ತದೆ. ಕಡಲೆಬೀಜದಿಂದ ಸಿಪ್ಪೆ ಬೇರ್ಪಡಿಸಿದ ಮೇಲೆ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.

ಕುಕ್ಕರ್‌ನಲ್ಲಿ ಆಲೂಗಡ್ಡೆ ಕುದಿಸಿ ಇಳಿಸಿ. ನಂತರ ಸಿಪ್ಪೆ ತೆಗೆದು ಆಲೂಗಡ್ಡೆ ಕಿವುಚಿ ಪಾತ್ರೆಗೆ ಹಾಕಿಕೊಳ್ಳಿ. ಮೊದಲೇ ಮಾಡಿಟ್ಟುಕೊಂಡ ಕಡಲೆಬೀಜದ ಪುಡಿ ಸೇರಿಸಿ. ನೆನೆಸಿಟ್ಟ ಸಾಬುದಾನಿ ನೀರು ಇಂಗಿರುತ್ತದೆ. ಅದನ್ನೂ ಪಾತ್ರೆಗೆ ಸೇರಿಸಿ. ಹಸಿ ಮೆಣಸಿನಕಾಯಿ ಸ್ವಲ್ಪ ಉಪ್ಪು ಜೀರಿಗೆ ಕುಟ್ಟಿ ಪಾತ್ರೆಗೆ ಹಾಕಿಕೊಳ್ಳಿ. ಸ್ವಲ್ಪ ಅರಿಶಿಣ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು, ಬೇಕಾದರೆ ಇನ್ನೂ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಕೈಯಿಂದ ಉಂಡೆ ಮಾಡಿ ಸ್ವಲ್ಪ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ.

ಬಿಸಿ ಬಿಸಿ ಸಾಬುದಾನಿ ವಡೆ ಹಾಗೇ ತಿನ್ನಬಹುದು; ಮೊಸರು ಇಲ್ಲವೇ ಮಜ್ಜಿಗೆ ಜೊತೆ ಕೂಡ ಸವಿಯಬಹುದು.

ಸಾಬುದಾನಿ ವಡೆ ಹೆಚ್ಚಾಗಿ ಸಂಕಶ್ಟಿ, ನವರಾತ್ರಿ, ಏಕಾದಶಿ ಉಪವಾಸ ಇದ್ದಾಗ ತಿನ್ನಲಿಕ್ಕೆ ಮಾಡುತ್ತಾರೆ. ಇದು ಮೂಲತಹ ಮಹಾರಾಶ್ಟ್ರದ ಸಾಂಪ್ರದಾಯಿಕ ತಿಂಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks