ಕಿರುಗತೆ : ಗೆಳತಿಯರು

–  ಕೆ.ವಿ. ಶಶಿದರ.

ಗೆಳತಿ, friend

ಕೊರೋನಾ ಲಾಕ್ ಡೌನ್ ನಿಮಿತ್ತ ಮನೆಯಿಂದಲೇ ಕೆಲಸ ನಿರ‍್ವಹಿಸುತ್ತಿದ್ದ ತಮೋಗ್ನ, ಬೇಸರವಾಯಿತೆಂದು ಮುಕಪುಟದಲ್ಲಿ(facebook) ಹಾಗೇ ಬ್ರೌಸ್ ಮಾಡಲು ಪ್ರಾರಂಬಿಸಿದಳು. ಅಚಾನಕ್ಕಾಗಿ ಅವಳು ಆ ಡಿಪಿ ಗಮನಿಸಿದಳು. ಅದು ಬಾರತಿಯದೇ ಎಂದು ಮನಸ್ಸು ತಕ್ಶಣ ಗುರುತಿಸಿತು. ಅವಳನ್ನು ನೋಡಿ ಎಶ್ಟು ವರ‍್ಶವಾಯಿತು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕಿದಳು. ಆಕೆಗೆ ತನ್ನ ಗತಕಾಲದ, ವಿದ್ಯಾರ‍್ತಿ ಜೀವನದ ನೆನಪುಗಳು ಮರುಕಳಿಸಿತು.

ಸುಮಾರು ಹದಿನೈದು ವರ‍್ಶಗಳ ಹಿಂದೆ ತಾನು ಮತ್ತು ಬಾರತಿ ಒಂದೇ ಹಾಸ್ಟೆಲ್ ನಿಂದ ಕೊನೆಯ ಬಾರಿ ‘ಟಾ ಟಾ’ ಮಾಡಿ ಬೇರೆ ಬೇರೆ ದಿಕ್ಕಿನಲ್ಲಿ ನಡೆದು ಹೋಗಿದ್ದು ನೆನಪಾಯಿತು. ಅಂದಿನಿಂದ ಇಂದಿನವರೆಗೂ ಮತ್ತೆ ಬೇಟಿಯಾಗಲು ಆಸ್ಪದವೇ ಸಿಕ್ಕಿರಲಿಲ್ಲ. ಅಲ್ಲಿ ಅವಳು, ಇಲ್ಲಿ ದೂರದ ಅಮೆರಿಕಾದಲ್ಲಿ ತಾನು. ಇಲ್ಲಿಗೆ ಬಂದ ನಂತರ ಇಲ್ಲಿನ ಕೆಲಸದ ಒತ್ತಡದಲ್ಲಿ ಮೈ ತುರಿಸಿಕೊಳ್ಳಲು ಸಹ ಸಮಯ ಇರುತ್ತಿರಲಿಲ್ಲ. ಕೊರೋನಾ ಬಂದು ಕೊಂಚ ಬಿಡುವಿನ ಸಮಯ ದಯಪಾಲಿಸಿದ್ದು ನೆಮ್ಮದಿ ಸಿಕ್ಕಿತ್ತು. ಓದು ಮುಗಿದ ನಂತರ, ಅಲ್ಲೇ ಐದು ವರ‍್ಶ ಅಲ್ಲಿನ ಕಂಪನಿಯಲ್ಲಿ ಕೆಲಸ ನಿರ‍್ವಹಿಸಿ, ನಂತರ ಹೊಸ ಅಸೈನ್ಮೆಂಟ್ ಮೇಲೆ ಯುಎಸ್ ಗೆ ಬಂದಿದ್ದು, ಇಲ್ಲೇ ಅವನ ಪರಿಚಯವಾಗಿದ್ದು, ಆ ಪರಿಚಯ ಪ್ರಣಯಕ್ಕೆ ತಿರುಗಿದ್ದು, ಅಪ್ಪ ಅಮ್ಮ ಅಸ್ತು ಎಂದಿದ್ದು, ಜೀವನ ಸಂಗಾತಿಗಳಾಗಿದ್ದು, ಎಲ್ಲಾ ಕಳೆದು ಹದಿನೈದು ವರ‍್ಶಗಳಲ್ಲಿ ನಡೆದು ಹೋಗಿತ್ತು.

ಆಗ ಹಾಸ್ಟೆಲ್ ನಲ್ಲಿ ಕಳೆದ ದಿನಗಳು, ಅಲ್ಲಿ ತಾನು ಮತ್ತು ಬಾರತಿ ಕ್ಲಾಸಿನ ಒಳಗೂ ಹೊರಗೂ ಮಾಡುತ್ತಿದ್ದ ಕುಚೇಶ್ಟೆ, ಎಲ್ಲಾ ಕಣ್ಣ ಮುಂದೆ ಸುಳಿಯಿತು. ಬಾರತಿಗೆ ಅಚ್ಚರಿ ನೀಡಲು ಇದೇ ತಕ್ಕ ಸಮಯ. ಅವಳ ವಾಲ್ಗೆ ಹೋಗಿ ಅವಳನ್ನೇ ಕಿಚಾಯಿಸುವ ಎಂದು ಅವಳ ಮುಕಪುಟ ತೆರೆದು ಅನಾಮಿಕಳಾಗಿ ಬರೆಯತೊಡಗಿದಳು. ತಾನು ಮತ್ತು ಅವಳು ಜಂಟಿಯಾಗಿ ಮಾಡಿದ ಹಲವಾರು ಜೋಡಿ ಕೆಲಸಗಳನ್ನು  ನೆನಪಿಸಿದಳು. ಕಾಲೇಜಿನ ಹೀರೋಗಳಿಗೆ ಮಣ್ಣು ಮುಕ್ಕಿಸಿದ್ದು, ನಾಟಕ, ಆಟ, ಪಾಟ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದು, “ಬಲೇ ಜೋಡಿ” “ಹಾಸ್ಟೆಲ್ ಸಿಸ್ಟರ‍್ಸ್” “ಟ್ವಿನ್ ಸಿಸ್ಟರ‍್ಸ್” ಏನೆಲ್ಲಾ ಬಿರುದು ಬಾವಲಿಗಳಿಂದ ನಮ್ಮನ್ನು ಗುರುತಿಸುತ್ತಿದ್ದರು, ಅದರಿಂದ ಎಲ್ಲರ ಗೌರವ ಸಂಪಾದಿಸಿದ್ದು ಎಲ್ಲವನ್ನೂ ವಿಶದವಾಗಿ ಅದರಲ್ಲಿ ಬರೆದಳು.

ಕೊನೆಯಲ್ಲಿ “ಏ ಗುಲ್ಡು, ಈಗ್ಲಾದ್ರು ಗೊತ್ತಾಯ್ತಾ??? ನಾನ್ಯಾರು ಅಂತ” ಎಂದು ತನ್ನ ಹೆಸರನ್ನು ಹಾಕದೆ ಅವಳನ್ನೇ ಪ್ರಶ್ನಿಸಿದ್ದಳು ತಮೋಗ್ನ. ಎಲ್ಲವನ್ನು ಮತ್ತೊಮ್ಮೆ ಓದಿ, ಸರಿಯಿದೆ ಅನಿಸಿದ ಕೂಡಲೇ ಅದನ್ನು ಪೋಸ್ಟ್ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಳು. ಮನದಲ್ಲಿ ಏನೋ ಒಂದು ರೀತಿಯ ಸಂತೋಶ ಮನೆ ಮಾಡಿತ್ತು. ಅನಿರ‍್ವಚನೀಯ ಆನಂದ ಅವಳನ್ನು ಮುತ್ತಿತ್ತು. ಅವಳು ಗೆಳತಿಯ ಬಗ್ಗೆಯೇ ತನ್ನೆಲ್ಲಾ ಯೋಚನೆಗಳನ್ನು ಕೇಂದ್ರೀಕರಿಸಿದ್ದಳು. ಅತ್ಯುತ್ತಮ ಗೆಳತಿಯನ್ನು ಹುಡುಕಲು ನೆರವಾಗಿದ್ದಕ್ಕೆ “ತ್ಯಾಂಕ್ಸ್ ಕೊರೋನಾ” ಎಂದು ಹೇಳುವುದನ್ನು ತಮೋಗ್ನ ಮರೆಯಲಿಲ್ಲ.  ಇನ್ನೊಂದೆರೆಡು ಗಂಟೆಗಳಲ್ಲಿ ಅಲ್ಲಿ ಬೆಳಗಾಗುತ್ತೆ. ಅವಳು ತನ್ನ ಮುಕಪುಟ ತೆರೆದಾಗ ನನ್ನ ಪೋಸ್ಟ್ ನೋಡಿ ಕುಶಿಪಡುತ್ತಾಳೆ. ತನ್ನೆಲ್ಲಾ ಕೆಲಸ ಬಿಟ್ಟು ನನ್ನ ಪೋಸ್ಟ್ ಗೆ ಕೂಡಲೇ ಉತ್ತರಿಸುತ್ತಾಳೆ. ‘ಸಾದ್ಯವಾದರೆ ಅಲ್ಲಿಯವರೆಗೆ ಎದ್ದಿದ್ದು ಅವಳಿಗೆ ಮಾರುತ್ತರ ನೀಡಬೇಕು’ ಎನ್ನುತ್ತಾ ಹಾಗೇ ಸೋಪಾದ ಮೇಲೆ ಒರಗಿದಳು.

ಅವಳೆಣಿಕೆಯಂತೆ ಸರಿಯಾಗಿ ಎರಡು ಗಂಟೆಯ ನಂತರ ತಮೋಗ್ನಳ ಮೊಬೈಲ್ನಲ್ಲಿ ಪಾಪ್ ಅಪ್ ಮೆಸೇಜ್ ಬಂತು. ಅದು ಬಾರತಿಯದೇ ಎಂದು ಕಾತ್ರಿಯಾಗಿ ತಿಳಿಯಿತು. ಆತುರಾತುರದಿಂದ ಅದನ್ನು ತೆರೆದಳು. ಆ ಕ್ಶಣದಲ್ಲಿ ನೂರಾರು ಬಾವನೆಗಳು ಮನದಲ್ಲಿ ಓಡಿತ್ತು.  “ನಮಸ್ತೆ ಮೇಡಂ. ನಾನು ಬಾರತಿ. ಆದರೆ ನನ್ನ ಮುಕಪುಟದ ಡಿಪಿಯಲ್ಲಿರುವ ಬಾರತಿ ನಾನಲ್ಲ!!!” ತಮೋಗ್ನಳಿಗೆ ಶಾಕ್ ಆಯಿತು. ಓದನ್ನು ಮುಂದುವರೆಸಿದಳು “ಅದು ನನ್ನ ಗೆಳತಿಯ ಪೋಟೋ. ಆ ಬಾರತಿ ಸಹ ನನ್ನ ಆಪ್ತ ಗೆಳತಿ. ನಾವಿಬ್ಬರೂ ಒಂದೇ ಬಳ್ಳಿಯ ಎರಡು ಹೂಗಳಿದ್ದಂತೆ ಹತ್ತಾರು ವರ‍್ಶ ಜೊತೆಗಿದ್ದೆವು.  ಅವಳು, ಅವರಮ್ಮನಿಗೆ ಕೊರೋನಾ ಕಾಯಿಲೆ ಅಂಟಿದ ಕಾರಣ ಅವರ ಸೇವೆಗೆ ಟೊಂಕ ಕಟ್ಟಿ ನಿಂತಿದ್ದಳು. ಅವರಮ್ಮ ಬಚಾವಾದರು. ಇವಳಿಗೆ ಅಂಟಿತು. ಯಾವ ಚಿಕಿತ್ಸೆ ಪಲಿಸದೆ, ಈಗ್ಗೆ ತಿಂಗಳ ಮುನ್ನ, ಬಾರತಿ ಬಲಿಯಾದಳು…”

ತಮೋಗ್ನಳಿಗೆ ಮುಂದೆ ಓದಲಾಗಲಿಲ್ಲ. ಕಣ್ಣೀರು ಅಡ್ಡಿ ಪಡಿಸಿತು. ಕೊರೋನಾಗೆ ಹೇಳಿದ್ದ ತ್ಯಾಂಕ್ಸ್ ಅನ್ನು ಹಿಂದಕ್ಕೆ ಪಡೆದಳು.

( ಚಿತ್ರ ಸೆಲೆ : nytimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: