‘ಅಮ್ಮ…’ ಎಂದರೆ ಅಶ್ಟೇ ಸಾಕೇ!?

– ಸಂಜೀವ್ ಹೆಚ್. ಎಸ್.

ಅಮ್ಮ, Mother

ನಮ್ಮ ಆಟ-ಪಾಟ ಶುರುವಾಗುವುದು ಮನೆಯಿಂದಲೇ. ಕೇವಲ ಆಟ-ಪಾಟ ಅಶ್ಟೇ ಅಲ್ಲ ಊಟ ಕೂಡ ಶುರುವಾಗುವುದು ಮನೆಯಿಂದಲೇ ಅಲ್ಲವೇ? ಹಾಗಾಗಿಯೇ ಮನೆಯನ್ನು ಮೊದಲ “ಪಾಕಶಾಲೆ” ಎಂದು ಕೂಡ ಕರೆಯಬಹುದು.

ನಮ್ಮ-ನಿಮ್ಮೆಲ್ಲರ ಆಹಾರದ ಬಗೆಗಿನ ಅರಿವು ಮತ್ತು ಜ್ನಾನ ಮೊಳಕೆ ಒಡೆಯುವುದು ಅಡುಗೆಮನೆಯ ಯಜಮಾನಗಿತ್ತಿ ನಮ್ಮ ಅಮ್ಮಂದಿರಂದಲೇ. ಅಮ್ಮನ ಬಗ್ಗೆ ಬರೆಯಬೇಕೆಂದರೆ ಪುಟಗಳು ಸಾಲಲ್ಲ, ಪದಗಳು ಸಿಗಲ್ಲ. ಮಾತ್ರು ಪರಮ ದೇವತೆ. ನಮಗೆಲ್ಲಾ ಅನ್ನ ಇಟ್ಟ “ಅನ್ನಪೂರ‍್ಣೇಶ್ವರಿ”, ಆರೋಗ್ಯ ಕರುಣಿಸಿದ “ಆರೋಗ್ಯೇಶ್ವರಿ”. ಗರ‍್ಬಾವಸ್ತೆಯಲ್ಲಿಯೇ ತಾಯಿ ಮಗುವಿಗೆ ಆಹಾರ ಹಂಚಿಕೊಳ್ಳುತ್ತಾಳೆ. ಮಗುವಿನ ಜನನದ ನಂತರ ಎದೆ ಹಾಲನ್ನು ಕುಡಿಸುವ ಮೂಲಕ ಮೊದಲ ಆಹಾರವಿಟ್ಟ ಗುರುವಾಗುತ್ತಾಳೆ ಅಮ್ಮ.

ಮನೆಮಂದಿಯ ಆರೋಗ್ಯವನ್ನು ಕಾಪಾಡುವ, ವ್ರುದ್ದಿಸುವ, ಬಲಶಾಲಿಗಳನ್ನಾಗಿ, ಬುದ್ದಿಶಾಲಿಗಳನ್ನಾಗಿ ಮಾಡುವ ಅತ್ಯಂತ ಮಹತ್ತರವಾದ ಜವಾಬ್ದಾರಿಯ ಹೊಣೆಹೊತ್ತ ಉತ್ತಮ “ಆಹಾರ ತಜ್ನರು” ಅಮ್ಮಂದಿರು ಎಂದರೆ ಅತಿಶಯೋಕ್ತಿಯಲ್ಲ. ಮನೆಯ ಯಾವುದೇ ವ್ಯಕ್ತಿಗೆ ಯಾವುದೇ ರೀತಿಯ ಕಾಯಿಲೆ ಬಂದರೆ ಅದಕ್ಕೆ ತಕ್ಕುದಾದ ಆಹಾರ ಒದಗಿಸುವವರು ಇವರು. ಶೀತ ನೆಗಡಿ ಕೆಮ್ಮು ಬಂದರೆ ಬಿಸಿ ನೀರು ಕುಡಿಸಿ, ಶುಂಟಿ ಕಶಾಯ ಮಾಡಿಕೊಡುವುದು ಉದಾಹರಣೆಯಶ್ಟೇ. ಮೊದಲ ಹಂತದಲ್ಲಿಯೇ ರೋಗರುಜಿನಗಳ ಜೊತೆ ಹೊಡೆದಾಡಲು ಸಹಕರಿಸುವ ಆಹಾರ ಪದ್ದತಿಗಳನ್ನು ಅನುಸರಿಸುವ ಹಾಗೆ ಮಾಡುವವರು ಇದೆ “ಆಹಾರ ವಿಜ್ನಾನಿಗಳು”.

ಅಮ್ಮಂದಿರ ಆಹಾರದ ಬಗೆಗಿನ ಜ್ನಾನ ಮತ್ತು ಅರಿವು ಬಹಳ, ಇವರ ಸಾಮಾನ್ಯ ಜ್ನಾನ ಅಶ್ಟಿಶ್ಟಲ್ಲ. ಜಗತ್ತಿನಾದ್ಯಂತ ಆಹಾರ ಕ್ಶೇತ್ರದಲ್ಲಿ ನಡೆಯುತ್ತಿರುವ ಉನ್ನತ ಪ್ರಯೋಗಗಳು ಅಮ್ಮಂದಿರ ಸಾಮಾನ್ಯ ಜ್ನಾನದ ಮುಡಿಗಟ್ಟಿನ ಮೇಲೆ ನಿಂತಿರುವಂತದ್ದು. ಪ್ರಸ್ತುತ ಜಗತ್ತಿನಲ್ಲಿ ಆಹಾರ ತಂತ್ರಜ್ನಾನ ಕ್ಶೇತ್ರ ಎಶ್ಟೇ ಶರವೇಗದಲ್ಲಿ ಮುನ್ನುಗ್ಗುತ್ತಿದ್ದರು ಅದಕ್ಕೆಲ್ಲ ಅಡಿಪಾಯ ಇಟ್ಟವರು ಅಮ್ಮಂದಿರು. ಇವರ‍್ಯಾರು ಆಹಾರ ವಿಜ್ನಾನ ತಂತ್ರಜ್ನಾನವನ್ನು ಶಾಲೆಯಲ್ಲಿ, ಯೂನಿವರ‍್ಸಿಟಿಯಲ್ಲಿ ಓದಿ ಡಿಗ್ರಿಯನ್ನೊ, ಮಾಸ್ಟರ‍್ ಡಿಗ್ರಿಯನ್ನೊ, ಪಿಎಚ್ಡಿಯನ್ನೊ ಪಡೆದ ಪದವೀದರರೊ ಅತವಾ ಡಾಕ್ಟರ್‌ಗಳೊ ಅಲ್ಲ. ಆದರೂ ಇವರು ಯಾವ ಡಾಕ್ಟರ‍್ ಗಳಿಗಿಂತಲೂ ಕಮ್ಮಿ ಇಲ್ಲ.

ಅಮ್ಮಂದಿರನ್ನು ಮೀರಿಸುವ ಆಹಾರ ವಿಜ್ನಾನಿಗಳು ಪ್ರಪಂಚದಲ್ಲಿ ಮತ್ತೊಬ್ಬರಿಲ್ಲ ನೋಡಿ. ಅಮ್ಮಂದಿರು ಮಾಡುವ ಪ್ರಯೋಗಗಳು ವಿಶಿಶ್ಟ ಮತ್ತು ವಿಬಿನ್ನ, ಇವರು ಮಾಡುವ ಪ್ರಯೋಗಗಳ ಮೂಲದಿಂದಲೇ ಹಲವು ಆವಿಶ್ಕಾರಗಳು ಹುಟ್ಟಿಕೊಂಡಿರುವುದು. ಯಾವುದೇ ವ್ಯಕ್ತಿ ಆಹಾರ ವಿಜ್ನಾನ-ತಂತ್ರಜ್ನಾನ ಕ್ಶೇತ್ರದಲ್ಲಿ ಸಾದನೆ ಮಾಡಿದ್ದಲ್ಲಿ ಅವರಿಗೆ ಅಡುಗೆಮನೆಯ ಅಮ್ಮಂದಿರ ಪ್ರಬಾವ ನೂರಕ್ಕೆ ನೂರರಶ್ಟು ಇದ್ದೇ ಇರುತ್ತದೆ.

ಯಾವ ಪಟ್ಯಪುಸ್ತಕವನ್ನು ಓದದ ಅಮ್ಮಂದಿರು ರುತುಚಕ್ರಕ್ಕೆ ಹೊಂದಿಕೊಳ್ಳುವ ಹಾಗೆ ಆಹಾರ ಪದ್ದತಿ ಮತ್ತು ಆಹಾರ ಕ್ರಮಗಳನ್ನು ಅನುಸರಿಸಿ ಅನುಶ್ಟಾನಗೊಳಿಸುವ ಅವರ ಜ್ನಾನ ಮತ್ತು ಬುದ್ದಿವಂತಿಕೆಗೆ ನಾವೆಲ್ಲರೂ ತಲೆದೂಗಲೇಬೇಕು. ಮನೆಯಲ್ಲಿ ಅಮ್ಮಂದಿರು ಇಲ್ಲದಿದ್ದರೆ ನಮ್ಮ ಆಹಾರ ಪದ್ದತಿ ಅದೋಗತಿಗೆ ಇಳಿದುಬಿಡುತ್ತದೆ ಇದನ್ನು ನಾವು ನೀವೆಲ್ಲಾ ಅನುಬವಿಸಿದ್ದೇವೆ ಅಲ್ಲವೇ? ನಮ್ಮ ಹೊಟ್ಟೆ ಮತ್ತು ನಾಲಿಗೆ ಸರಿದಾರಿಗೆ ಬರಲು ಮತ್ತೆ ಅದೇ ಅಮ್ಮ ಅಡುಗೆ ಮನೆಗೆ ಹಿಂದಿರುಗಬೇಕು.

ಆಹಾರ ಸಮತೋಲನಕ್ಕೆ ಬೇಕಾಗಿರುವ ಆಹಾರ ಪಿರಮಿಡ್ಡನ್ನು ಬಹಳ ಅಚ್ಚುಕಟ್ಟಾಗಿ ನಮ್ಮ ಮನೆಯಂಗಳಕ್ಕೆ ಅನುಶ್ಟಾನಗೊಳಿಸಿರುವ ಅಮ್ಮಂದಿರು ಯಾವ “ಪೌಶ್ಟಿಕ ತಜ್ನರಿಗೂ” ಕಮ್ಮಿ ಇಲ್ಲ. ಮೂರು ಹೊತ್ತು ಬಿಸಿಬಿಸಿಯಾಗಿ, ರುಚಿರುಚಿಯಾಗಿ ವಿವಿದ ವಿಶಿಶ್ಟ ಬಗೆಯ ಆಹಾರವಿತ್ತು ನಮ್ಮ ನಾಲಿಗೆಯನ್ನು ಮತ್ತು ಮನಸ್ಸನ್ನು ಆನಂದಮಯಗೊಳಿಸುವವರು ಅಮ್ಮಂದಿರು. ಯಾವುದೇ ಕಾಗದ ಪತ್ರಗಳನ್ನು ಬರೆದಿಟ್ಟುಕೊಳ್ಳದೇ ಮನೆಯಲ್ಲಿರುವ ದಿನಸಿ ಲೆಕ್ಕಾಚಾರ ಮಾಡಿ ಮೂರು ಹೊತ್ತು ವಿವಿದ ಬಕ್ಶ್ಯ ಬೋಜನ ಗಳಿಂದ ನಮ್ಮನ್ನು ಸಂತ್ರುಪ್ತಿ ಪಡಿಸುವ ದಿನನಿತ್ಯದ ಆಹಾರ ನಿರ‍್ವಹಣೆಯಲ್ಲಿ ಇವರದ್ದು ಎತ್ತಿದ ಕೈ. ಒಂದು ವೇಳೆ ಸಮಯವಲ್ಲದ ಸಮಯದಲ್ಲಿ ಹೋಟೆಲ್ಗಳಲ್ಲಿ ನಮಗೆ ಆಹಾರ ಸಿಗದೇ ಇದ್ದರೂ ಮನೆಯಲ್ಲಿ ಮಾತ್ರ ಯಾವುದೇ ಸಮಯದಲ್ಲಾದರೂ ಕ್ಶಣಾರ‍್ದದಲ್ಲಿ ನಮ್ಮ ಹೊಟ್ಟೆತುಂಬಿಸುವ ಕೆಲಸ ಮಾಡುವವರು ಅಮ್ಮಂದಿರು ಮಾತ್ರ.

ಸಂಪನ್ಮೂಲಗಳ ಬಳಕೆ ವಿಚಾರದಲ್ಲಿ ಇವರನ್ನು ಮೀರಿಸುವವರು ಇನ್ನೊಬ್ಬರಿಲ್ಲ, ಎಂಟಾಣಿ ಕೊತ್ತಂಬರಿ ಸೊಪ್ಪು ಕೂಡ ಹಾಳಾಗದ ಹಾಗೆ ಪ್ರತಿಯೊಂದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಇವರ ಪಾತ್ರ ದೊಡ್ಡದು, ಯಾವ ಆಹಾರ ಎಶ್ಟು ದಿನ ಬಾಳಿಕೆ ಬರುತ್ತದೆ ಅದನ್ನು ಹೇಗೆ ಶೇಕರಣೆ ಮಾಡಬೇಕು, ಎಶ್ಟು ದಿನದೊಳಗೆ ಅದನ್ನು ಉಪಯೋಗಿಸಬೇಕು ಎಲ್ಲವೂ ಅಮ್ಮಂದಿರಿಗೆ ಕರಗತವಾಗಿರುತ್ತದೆ, ಇದನ್ನೇ ನಾವು ಆಹಾರ ಸಂರಕ್ಶಣೆ ಎಂದು ವೈಜ್ನಾನಿಕವಾಗಿ ಕರೆಯುತ್ತೇವೆ.

ಯಾವ ಆಹಾರ ದೇಹಕ್ಕೆ ಹಾನಿಕಾರಕ, ಪಿತ್ತಕಾರಕ, ವಿಶಕಾರಕ, ಆಹಾರ ಸೇವಿಸುವ ಸಮಯ ಸಂದರ‍್ಬದ ಬಗೆಗಿನ ಅರಿವು ಮತ್ತು ಜ್ನಾನ ಎಲ್ಲವೂ ಇವಳಿಗೆ ಚೆನ್ನಾಗಿ ಗೊತ್ತು ಇದಕ್ಕೆ ಆಹಾರ ಸುರಕ್ಶತೆ ಎಂದು ವೈಜ್ನಾನಿಕವಾಗಿ ನಾಮಕರಣ ಮಾಡಿದ್ದೇವೆ. ಇನ್ನು ಆಹಾರ ತ್ಯಾಜ್ಯ ವಿಲೇವಾರಿ ವಿಚಾರಕ್ಕೆ ಸಂಬಂದಿಸಿದಂತೆ ಇವರ ಸಾಮಾನ್ಯ ಜ್ನಾನ, ಕಾಳಜಿ ಮತ್ತು ಸಮಯ ಪ್ರಜ್ನೆಯನ್ನು ಇಡೀ ವಿಶ್ವವೇ ಆದಾರವಾಗಿ ಇಟ್ಟುಕೊಂಡು ಜಾಗತಿಕವಾಗಿ ತ್ಯಾಜ್ಯ ವಿಲೇವಾರಿ ಎಡೆಗೆ ವೈಜ್ನಾನಿಕ ರೀತಿಯಲ್ಲಿ ಮಹತ್ತರ ಹೆಜ್ಜೆಯಿಟ್ಟಿದೆ.

ದಾನ್ಯಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು, ಸಾಂಬಾರ್ ಪುಡಿ ಮಾಡಿಟ್ಟುಕೊಳ್ಳುವುದು, ಹಪ್ಪಳ ತಯಾರಿಕೆ, ಉಪ್ಪಿನಕಾಯಿ ಹೀಗೆ ಹಲವಾರು ಆಹಾರ ಪದಾರ‍್ತಗಳನ್ನು ಮತ್ತೊಂದು ರೂಪಕ್ಕೆ ಬದಲಿಸಿ ಅವುಗಳನ್ನು ಮೌಲ್ಯವರ‍್ದಿತ ಪದಾರ‍್ತಗಳನ್ನಾಗಿ ಮಾಡಿ ಶೇಕರಣೆ ಮಾಡಿಟ್ಟುಕೊಳ್ಳುವುದು ಆಹಾರ ಸಂಸ್ಕರಣೆ ಎಂಬ ಆದುನಿಕ ಪದ ಪ್ರಯೋಗಕ್ಕೆ ಹಿಡಿದ ಕನ್ನಡಿಯಾಗಿದೆ. ಆಹಾರ ಸರಪಳಿ ಮತ್ತು ಆಹಾರ ತಯಾರಿಕಾ ಕಂಪನಿಗಳಲ್ಲಿ ಅನುಸರಿಸುವ ಎಲ್ಲಾ ವಿದಾನಗಳು ಮತ್ತು ನಿಯಮಗಳು ಮೊದಲು ಹುಟ್ಟಿಕೊಂಡಿರುವುದು ಅಮ್ಮಂದಿರ ಸೆರಗಿನ ಅಂಚಿನಿಂದ. ಇಂದು ನಾವುಗಳು ಅನುಸರಿಸುತ್ತಿರುವ ನೀತಿ ನಿಯಮಗಳು, ನೈರ‍್ಮಲ್ಯ ಮಾನದಂಡಗಳು ಅನಾದಿ ಕಾಲದಿಂದಲೂ ನಮ್ಮ ಅಡಿಗೆ ಮನೆಯ ಅಮ್ಮಂದಿರು ಪಾಲಿಸಿಕೊಂಡು ಬಂದಿರುವ ವಿದಾನಗಳು ಅಶ್ಟೇ, ಇವುಗಳನ್ನೇ ಅಲ್ಲಿಂದ ಬಳುವಳಿಯಾಗಿ ಪಡೆದುಕೊಂಡು ಅದನು‌ ದೊಡ್ಡ ಮಟ್ಟದಲ್ಲಿ ಅನುಶ್ಟಾನಗೊಳಿಸಿ ಆದುನಿಕ ಸ್ಪರ‍್ಶ ಕೊಟ್ಟು ಸುಣ್ಣಬಣ್ಣ ಬೆಳಿದಿದ್ದೇವೆ ಅಶ್ಟೇ. ಒಟ್ಟಾರೆ ಆಹಾರ ಜ್ನಾನ-ವಿಜ್ನಾನ-ತಂತ್ರಜ್ನಾನದ ಅಶ್ಟು ಉದ್ದಳತೆಯನ್ನು ಅಮ್ಮಂದಿರು ತಮ್ಮ ಸೆರಗಿನ ಅಂಚಿನಲ್ಲಿ ಕಟ್ಟಿಟ್ಟು ಕೊಂಡಿದ್ದಾರೆ.

ಯಾವುದೇ ಸ್ತಳೀಯ ಮತ್ತು ದೇಶಿಯ ಆಹಾರ ಪದ್ದತಿ ಮತ್ತು ಕ್ರಮಗಳನ್ನು ಉಳಿಸಿ-ಬೆಳೆಸಿ ಮತ್ತೊಂದು ಪೀಳಿಗೆಗೆ ಬಳುವಳಿಯಾಗಿ ಕೊಟ್ಟು ಹೋಗುವಲ್ಲಿ ಅಮ್ಮಂದಿರ ಪಾತ್ರ ಬಹುದೊಡ್ಡದು. ಕೈಯಲ್ಲಿ ಸೌಟು ಹಿಡಿದು ತನ್ನ ಒಡಲೊಳಗಿನ ಜ್ನಾನದಿಂದ ಜಗತ್ತಿಗೆ ದಾರಿ ತೋರಿಸುತ್ತಿರುವ ಅಮ್ಮಂದಿರಿಗೆ ಈ ಅಂಕಣ ಅರ‍್ಪಣೆ.

(ಚಿತ್ರ ಸೆಲೆ: pixabay

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: