ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

–  ಸಿ.ಪಿ.ನಾಗರಾಜ.

ಚೆನ್ನಬಸವಣ್ಣ, Chenna Basavanna

ನಾವೇ ಹಿರಿಯರು ನಾವೇ ದೇವರೆಂಬರು
ತಮ್ಮ ತಾವರಿಯರು
ಅದ್ಭುತ ಮನಭುಂಜಕರ ಮೆಚ್ಚ
ನಮ್ಮ ಕೂಡಲಚೆನ್ನಸಂಗಮದೇವ. (927-388)

ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಅರಿವಿನಲ್ಲಿ ದೊಡ್ಡವರು/ಜಾತಿಯಲ್ಲಿ ಮೇಲಿನವರು; ದೇವರ್+ಎಂಬರು; ದೇವರು=ಜೀವನದಲ್ಲಿನ ಎಡರುತೊಡರುಗಳನ್ನು ನಿವಾರಿಸಿ , ತಮಗೆ ಒಳಿತನ್ನು ಮಾಡಿ ಕಾಪಾಡುವ ವ್ಯಕ್ತಿಯನ್ನು/ಶಕ್ತಿಯನ್ನು ‘ ದೇವರು ‘ ಎಂದು ಜನಸಮುದಾಯ ನಂಬಿಕೊಂಡಿದೆ;

ನಾವೇ ದೇವರು=ಈ ಜಗತ್ತಿನ ಆಗುಹೋಗುಗಳಿಗೆ ನಾವೇ ಕಾರಣರು/ನಮ್ಮಿಂದಲೇ ಎಲ್ಲವೂ ನಡೆಯುತ್ತಿದೆ; ಎಂಬರು=ಎನ್ನುವವರು/ಎಂದು ಹೇಳಿಕೊಳ್ಳುವವರು; ತಮ್ಮ=ತಮ್ಮನ್ನು; ತಾವ್+ಅರಿಯರು; ಅರಿ=ತಿಳಿ/ಗ್ರಹಿಸು; ಅರಿಯರು=ತಿಳಿಯರು;

“ ತಮ್ಮ ತಾವು ಅರಿಯುವುದು “ ಎಂದರೆ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಿಸರ‍್ಗದ ಆಗುಹೋಗು ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟಿದೆ. ಆದ್ದರಿಂದಲೇ ತನ್ನನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಸದಾಕಾಲ ಇದ್ದೇ ಇರುತ್ತವೆ ಎಂಬ ವಾಸ್ತವವನ್ನು ವ್ಯಕ್ತಿಯು ಅರಿತುಕೊಂಡು, ಜೀವನದ ಉದ್ದಕ್ಕೂ ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯವನಾಗಿ ಬಾಳಬೇಕೆಂಬ ಎಚ್ಚರವನ್ನು ಹೊಂದಿರುವುದು;

ತಮ್ಮ ತಾವರಿಯರು=ಒಳ್ಳೆಯ ರೀತಿಯಲ್ಲಿ ಬಾಳುವುದಕ್ಕೆ ಅಗತ್ಯವಾದ ಸಾಮಾಜಿಕ ವಾಸ್ತವವನ್ನು ಅರಿತಿಲ್ಲದವರು/ಮಾನವನ ಬದುಕಿನ ಇತಿಮಿತಿಗಳನ್ನು ತಿಳಿದಿಲ್ಲದವರು;

ನಾವೇ ಹಿರಿಯರು ನಾವೇ ದೇವರೆಂಬರು ತಮ್ಮ ತಾವರಿಯರು=ನಾವೇ ಹಿರಿಯರು ನಾವೇ ದೇವರು ಎಂದು ಹೇಳಿಕೊಳ್ಳುವ ವ್ಯಕ್ತಿಗಳ ಮನದಲ್ಲಿ ತಿಳಿಗೇಡಿತನ, ಕಪಟತನ ಮತ್ತು ಅಹಂಕಾರ ತುಂಬಿರುತ್ತದೆಯೇ ಹೊರತು ಒಳ್ಳೆಯ ಅರಿವು ಇರುವುದಿಲ್ಲ. ಏಕೆಂದರೆ ಇಂತಹ ವ್ಯಕ್ತಿಗಳು ನಿಸರ‍್ಗ ಸಹಜವಾದ ವಿದ್ಯಮಾನಗಳನ್ನು ಮತ್ತು ಮಾನವನೇ ಕಟ್ಟಿಕೊಂಡಿರುವ ಸಾಮಾಜಿಕ ಕಟ್ಟುಪಾಡುಗಳ ವಾಸ್ತವವನ್ನು ಅರಿತಿರುವುದಿಲ್ಲ.

ಅದ್ಭುತ=ಅಚ್ಚರಿಯನ್ನು ಉಂಟುಮಾಡುವ ವಸ್ತು/ವ್ಯಕ್ತಿ/ಸಂಗತಿ; ಮನ=ಮನಸ್ಸು/ಚಿತ್ತ; ಭುಂಜಕ=ತಿನ್ನುವವನು/ಕಬಳಿಸುವವನು; ಮನಭುಂಜಕ=ಮನದಲ್ಲಿಯೇ ಬಹುಬಗೆಯ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿರುವ ವ್ಯಕ್ತಿ; ಅದ್ಭುತ ಮನಭುಂಜಕರು=ತಮ್ಮ ಬಗ್ಗೆ ತಾವೇ ಇಲ್ಲಸಲ್ಲದ ಊಹೆಗಳನ್ನು ಮಾಡಿಕೊಂಡು ಜನಸಮುದಾಯ ಮತ್ತು ಸಮಾಜದ ಮುಂದೆ ತಮ್ಮ ವ್ಯಕ್ತಿತ್ವವನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತ, ಕಟ್ಟುಕತೆಗಳ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುವವರು/ತಲ್ಲೀನರಾಗಿರುವವರು;

ಮೆಚ್ಚು=ಒಪ್ಪು/ಪ್ರೀತಿಸು/ಒಲಿ; ಮೆಚ್ಚ=ಒಪ್ಪುವುದಿಲ್ಲ/ಒಲಿಯುವುದಿಲ್ಲ ; ಕೂಡಲಚೆನ್ನಸಂಗಮದೇವ=ಶಿವ/ಚೆನ್ನಬಸವಣ್ಣನ ವಚನಗಳ ಅಂಕಿತನಾಮ.

ಅದ್ಭುತ ಮನಭುಂಜಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ=ತಮ್ಮ ವ್ಯಕ್ತಿತ್ವದ ಇತಿಮಿತಿಗಳನ್ನು ಅರಿಯದೆ ಮೆರೆಯುತ್ತಿರುವ ತಿಳಿಗೇಡಿಗಳನ್ನು ದೇವರು ಮೆಚ್ಚುವುದಿಲ್ಲ;

ಪಾಪಂಗಳು ಕೆಟ್ಟಲ್ಲದೆ
ನಿಮ್ಮ ಭಕ್ತರಾಗರಯ್ಯಾ
ಕೂಡಲಚೆನ್ನಸಂಗಮದೇವಾ. (51-301)

ಪಾಪ=ಕೆಟ್ಟ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಗಳಿಸಿಕೊಳ್ಳುವುದು; ಪುಣ್ಯ=ಒಳ್ಳೆಯ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಪಡೆದುಕೊಳ್ಳುವುದು; ಒಳ್ಳೆಯ ನಡೆನುಡಿಯಿಂದ ವ್ಯಕ್ತಿಗೆ ‘ ಪುಣ್ಯ’ ಬಂದು ಜೀವನದಲ್ಲಿ ಒಲವು ನಲಿವು ನೆಮ್ಮದಿಯು ದೊರಕುವುದೆಂದೂ, ಕೆಟ್ಟ ನಡೆನುಡಿಯಿಂದ ‘ ಪಾಪ ’ ತುಂಬಿಕೊಂಡು ಸಾವು ನೋವು ಉಂಟಾಗುವುದೆಂಬ ನಂಬಿಕೆಯು ಜನಸಮುದಾಯದ ಮನದಲ್ಲಿ ನೆಲೆಗೊಂಡಿದೆ;

ಪಾಪಂಗಳು=ಪಾಪಗಳು/ಕೆಟ್ಟ ಕೆಲಸಗಳು; ಕೆಟ್ಟ+ಅಲ್ಲದೆ; ಕೆಡು=ನಾಶವಾಗು/ಇಲ್ಲವಾಗು; ಅಲ್ಲದೆ=ಹಾಗೆ ಮಾಡದೆ; ಪಾಪಂಗಳು ಕೆಟ್ಟಲ್ಲದೆ=ಪಾಪಗಳು ನಾಶವಾಗದೆ; ನಿಮ್ಮ=ದೇವರಾದ ಶಿವನ; ಭಕ್ತರ್+ಆಗು+ಅರ್+ಅಯ್ಯಾ; ಭಕ್ತ=ಒಳಿತಿನ ನಡೆನುಡಿಗಳನ್ನೇ ದೇವರೆಂದು ನಂಬಿ ಬಾಳುತ್ತಿರುವವನು; ಭಕ್ತರಾಗರ್=ಭಕ್ತರಾಗುವುದಿಲ್ಲ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ; ಕೂಡಲಚೆನ್ನಸಂಗಮದೇವ=ಶಿವ/ಈಶ್ವರ;

ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ಪಾಲಿಗೆ ಶಿವನ ಸಂಕೇತವಾದ ಲಿಂಗವೆಂಬುದು ”ಕಲ್ಲು/ಮರ/ಮಣ್ಣು/ಲೋಹ” ದಿಂದ ಮಾಡಿದ ವಿಗ್ರಹವಾಗಿರಲಿಲ್ಲ. ಒಳ್ಳೆಯ ನಡೆನುಡಿಗಳನ್ನೇ ದೇವರೆಂದು ನಂಬಿದ್ದರು. ಆದ್ದರಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆದ ಪಾಪಿಗಳು ತಮ್ಮ ಕೆಟ್ಟತನವನ್ನು ಬಿಟ್ಟು ಒಳ್ಳೆಯ ಗುಣವಂತರಾಗದ ಹೊರತು ಶಿವಪೂಜೆಗೆ ಯೋಗ್ಯರಾಗುವುದಿಲ್ಲ ಎಂಬ ನಿಲುವನ್ನು ಹೊಂದಿದ್ದರು.

ಬರುಮಾತಿನ ಬಳಕೆಯ ಬಳಸಿ
ಹಿರಿಯರಾದೆವೆಂಬ ಮೂಕೊರೆಯರನೇನೆಂಬೆ
ಕೂಡಲಚೆನ್ನಸಂಗಮದೇವಾ. (1633-501)

ಬರು=ಬರಿದು/ಏನೂ ಇಲ್ಲದಿರುವುದು/ಪೊಳ್ಳು; ಮಾತು=ನುಡಿ/ಸೊಲ್ಲು; ಬರುಮಾತು=ಕೆಲಸಕ್ಕೆ ಬಾರದ ಮಾತು/ನಡೆಯಲ್ಲಿ ಕಂಡು ಬರದ ನುಡಿ; ಬಳಕೆ=ಉಪಯೋಗಿಸುವಿಕೆ; ಬಳಸಿ=ಆಡುತ್ತ/ನುಡಿಯುತ್ತ;

ಬರು ಮಾತಿನ ಬಳಕೆ=ಮಾನವ ಸಮುದಾಯ ಉಳಿದು ಬೆಳೆದು ಬಾಳುವುದಕ್ಕೆ ಅಗತ್ಯವಾದ ‘ ಅನ್ನ-ಬಟ್ಟೆ-ವಸತಿ-ವಿದ್ಯೆ-ಕೆಲಸ-ಆರೋಗ್ಯ’ ವನ್ನು ಉತ್ಪಾದಿಸುವ ಮತ್ತು ವಿತರಿಸುವ ಕಸುಬುಗಳಲ್ಲಿ ಯಾವುದೊಂದನ್ನೂ ಮಾಡದೆ, ಸದಾಕಾಲ ಕೆಲಸಕ್ಕೆ ಬಾರದ ಮಾತುಗಳನ್ನು ಸತ್ಯ, ನೀತಿ, ನ್ಯಾಯ ಮತ್ತು ದೇವರ ಹೆಸರಿನಲ್ಲಿ ದೊಡ್ಡದಾಗಿ ಆಡುತ್ತಿರುವುದು/ಯಾವೊಂದು ದುಡಿಮೆಯನ್ನು ಮಾಡದೆ ಸುಂದರವಾಗಿ ಮಾತನಾಡುತ್ತಿರುವುದು;

ಬರು ಮಾತಿನ ಬಳಕೆಯ ಬಳಸಿ=ಪೊಳ್ಳು ಮಾತನಾಡುವುದನ್ನೇ ತಮ್ಮ ಜೀವನದ ಕಸುಬನ್ನಾಗಿ ಮಾಡಿಕೊಂಡು;

ಹಿರಿಯರ್+ಆದೆವು+ಎಂಬ; ಹಿರಿಯರು=ಅರಿವಿನಲ್ಲಿ ದೊಡ್ಡವರು/ತುಂಬಾ ತಿಳಿದವರು/ಎಲ್ಲರಿಗಿಂತಲೂ ಮೇಲಾದವರು; ಆದೆವು=ಆಗಿದ್ದೇವೆ/ಆಗಿರುವೆವು; ಎಂಬ=ಎಂದು ಹೇಳಿಕೊಳ್ಳುವ; ಮೂಕೊರೆಯರ್+ಅನ್+ಏನ್+ಎಂಬೆ; ಮೂಗು+ಕೊರೆಯ=ಮೂಕೊರೆಯ; ಮೂಗು=ಉಸಿರಾಡಲು ಮತ್ತು ವಾಸನೆಯನ್ನು ಗ್ರಹಿಸುವ ಒಂದು ಅಂಗ/ಕಣ್ಣು,ಕಿವಿ,ನಾಲಗೆ,ಮೂಗು,ತೊಗಲು ಎಂಬ ಅಯ್ದು ಇಂದ್ರಿಯಗಳಲ್ಲಿ ಒಂದು; ಕೊರೆ=ಅಯ್ಬು/ಕುಂದು/ಲೋಪ;

ಮೂಕೊರೆಯ=ವ್ಯಕ್ತಿಯ ಮೂಗಿನ ಆಕಾರ ಸರಿಯಾಗಿಲ್ಲದಿರುವುದು /ಅಪ್ಪಚ್ಚಿಯಾದಂತಿರುವ ಮೂಗುಳ್ಳವನು; ಅನ್=ಅನ್ನು; ಏನ್=ಯಾವುದು; ಎಂಬೆ=ಹೇಳುವೆ; ಏನೆಂಬೆ=ಏನೆಂದು ತಾನೆ ಕರೆಯಲಿ; ಕೂಡಲಚೆನ್ನಸಂಗಮದೇವಾ=ಶಿವ/ಈಶ್ವರ ;

ಏನೆಂಬೆ ಕೂಡಲಚೆನ್ನಸಂಗಮದೇವಾ=ದುಡಿಮೆಯನ್ನು ಮಾಡದೆ ಕೇವಲ ಮಾತಿನ ಮೋಡಿಯಲ್ಲೇ ಜೀವನವನ್ನು ನಡೆಸುತ್ತಿರುವ ವ್ಯಕ್ತಿಗಳನ್ನು ಶಿವಶರಣಶರಣೆಯರು ನಿರಾಕರಿಸಿದ್ದರು. ಏಕೆಂದರೆ ಅವರ ಪಾಲಿಗೆ ಒಳ್ಳೆಯ ಕಾಯಕವೇ ಹಿರಿಯತನದ ವ್ಯಕ್ತಿತ್ವಕ್ಕೆ ಸಂಕೇತವಾಗಿತ್ತು;

‘ ಮೂಕೊರೆಯರು ‘ ಎಂಬ ಪದವನ್ನು ಒಂದು ಬಯ್ಗುಳವಾಗಿ ಬಳಸಲಾಗಿದೆ. ಬಯ್ಗುಳದ ಪದಗಳು ಮಾತಿನ ಸನ್ನಿವೇಶಕ್ಕೆ ತಕ್ಕಂತೆ ಎರಡು ಬಗೆಯ ತಿರುಳುಗಳಲ್ಲಿ ಬಳಕೆಗೊಳ್ಳುತ್ತವೆ. ಈ ವಚನದ ನುಡಿಯಲ್ಲಿ ಬಯ್ಗುಳವು ರೂಪಕದ ತಿರುಳಿನಲ್ಲಿ ಬಳಕೆಯಾಗಿದೆ.

ಮೂಕೊರೆಯ :

1. ಚಪ್ಪಟೆಯಾದ ಇಲ್ಲವೇ ಅಪ್ಪಚ್ಚಿಯಾದಂತಿರುವ ಮೂಗಿನ ವ್ಯಕ್ತಿ. (ನೇರವಾದ ತಿರುಳು)

2. ಸಮಾಜಕ್ಕೆ ಒಳಿತನ್ನು ಮಾಡದ ವ್ಯಕ್ತಿ/ದುಡಿಮೆಯನ್ನು ಮಾಡದೆ ಇತರರಿಗೆ ಹೊರೆಯಾಗಿ
ಬಾಳುತ್ತಿರುವ ವ್ಯಕ್ತಿ. (ರೂಪಕದ ತಿರುಳು)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: