ಮೋಳಿಗೆ ಮಾರಯ್ಯನ ವಚನದಿಂದ ಆಯ್ದ ಸಾಲುಗಳ ಓದು

–  ಸಿ.ಪಿ.ನಾಗರಾಜ.

ಮೋಳಿಗೆ ಮಾರಯ್ಯ, Molige Marayya

ಆದ್ಯರ ವಚನವ ನೋಡಿ
ಓದಿ ಹೇಳಿದಲ್ಲಿ ಫಲವೇನಿ ಭೋ
ತನ್ನಂತೆ ವಚನವಿಲ್ಲ
ವಚನದಂತೆ ತಾನಿಲ್ಲ. (1498/1522)

ಆದ್ಯ=ಮೊದಲನೆಯ/ಆದಿಯ; ಆದ್ಯರು=ಮೊದಲಿನವರು/ಪೂರ‍್ವಿಕರು/ಹಿಂದಿನವರು; ವಚನ=ಶಿವಶರಣಶರಣೆಯರು ರಚಿಸಿರುವ ಸೂಳ್ನುಡಿ; ಹೇಳಿದ+ಅಲ್ಲಿ; ಹೇಳು=ಇತರರಿಗೆ ತಿಳಿಸುವುದು; ಹೇಳಿದಲ್ಲಿ=ಹೇಳುವುದರಿಂದ; ಫಲ+ಏನಿ; ಫಲ=ಪ್ರಯೋಜನ/ಪರಿಣಾಮ; ಏನ್=ಯಾವುದು;

ಏನಿ=ವ್ಯಕ್ತಿಯನ್ನು ಒಲವು ನಲಿವಿನಿಂದ ಮಾತನಾಡಿಸುವಾಗ “ಏನ್ರಿ” ಎಂಬ ಬಹುವಚನ ರೂಪದ ಪದವನ್ನು ಬಳಸಲಾಗುತ್ತದೆ. ಮಾತಿನ ಸನ್ನಿವೇಶದಲ್ಲಿ ಉಚ್ಚಾರಣೆಗೊಳ್ಳುವಾಗ “ಏನ್ರಿ” ಎಂಬುದು “ಏನಿ” ಎಂದಾಗಿದೆ:

ಭೋ=ಕೇಳುವಂತಹವರಾಗಿ/ಗಮನವಿಟ್ಟು ಆಲಿಸಿ; ವ್ಯಕ್ತಿಯು ಇತರರಿಗೆ ಗುರುತರವಾದ ಸಂಗತಿಯೊಂದನ್ನು ಹೇಳುವಾಗ, ಅವರ ಗಮನವನ್ನು ತನ್ನತ್ತ ಸೆಳೆದುಕೊಳ್ಳಲೆಂದು ಎತ್ತರದ ದನಿಯಲ್ಲಿ ಹೇಳುವ ಪದ;

ತನ್ನ+ಅಂತೆ; ಅಂತೆ=ಹಾಗೆ/ಆ ಬಗೆಯಲ್ಲಿ; ತನ್ನಂತೆ=ತನ್ನ ಬದುಕಿನಂತೆ/ತನ್ನ ನಡೆನುಡಿಯಂತೆ; ವಚನ+ಇಲ್ಲ; ವಚನ+ಅಂತೆ; ವಚನದಂತೆ=ವಚನದಲ್ಲಿ ಹೇಳಿರುವಂತಹ ಒಳ್ಳೆಯ ನಡೆನುಡಿ; ತಾನ್+ಇಲ್ಲ; ತಾನಿಲ್ಲ=ತನ್ನ ಜೀವನವಿಲ್ಲ/ತನ್ನ ನಡೆನುಡಿಗಳಿಲ್ಲ;

ಹಿರಿಯರಾದ ಶರಣಶರಣೆಯರು ಹೇಳಿರುವ ವಚನವನ್ನು ವ್ಯಕ್ತಿಯು ಓದುವುದರಿಂದ ಇಲ್ಲವೇ ಅದರ ತಿರುಳನ್ನು ಇತರರ ಮುಂದೆ ಹಾಡಿ ಹೊಗಳುವುದರಿಂದ ಯಾವ ಪ್ರಯೋಜನವೂ ಇಲ್ಲ. ವಚನದಲ್ಲಿ ಹೇಳಿರುವ ಒಳ್ಳೆಯ ನಡೆನುಡಿಗಳನ್ನು ವ್ಯಕ್ತಿಯು ಅರಿತುಕೊಂಡು, ಅವನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಾಳುವಂತಾದಾಗ ಮಾತ್ರ ವಚನಕ್ಕೆ ಮತ್ತು ವ್ಯಕ್ತಿಗೆ ಇಬ್ಬರಿಗೂ ಬೆಲೆ ಬರುತ್ತದೆ.

ಶಿವಶರಣಶರಣೆಯರು ರಚಿಸಿರುವ ವಚನವನ್ನು ‘ ಸೂಳ್ನುಡಿ ‘ ಎಂದು ಕರೆಯುತ್ತಾರೆ. ಸೂಳ್ ಮತ್ತು ನುಡಿ ಎಂಬ ಎರಡು ಪದಗಳು ಸೇರಿ “ ಸೂಳ್ನುಡಿ “ ಎಂದಾಗಿದೆ. ‘ ಸೂಳ್ ‘ ಎಂದರೆ ಸರದಿ ಇಲ್ಲವೇ ವ್ಯಕ್ತಿಯ ಪಾಲಿಗೆ ದೊರೆತ ಅವಕಾಶ. ನುಡಿ ಎಂದರೆ ಮಾತು/ಸೊಲ್ಲು. ಸರದಿಯ ಪ್ರಕಾರ ಆಡಿದ ಮಾತಿಗೆ ಸೂಳ್ನುಡಿ ಎಂದು ಹೆಸರು.

ಹನ್ನೆರಡನೆಯ ಶತಮಾನದಲ್ಲಿ ನಡೆದ ಸಾಮಾಜಿಕ ಆಂದೋಲನದ ಸಮಯದಲ್ಲಿ ಶಿವಶರಣಶರಣೆಯರು ತಮ್ಮ ವ್ಯಕ್ತಿಗತ ನಡೆನುಡಿಗಳನ್ನು ಒರೆಹಚ್ಚಿ ನೋಡಿಕೊಳ್ಳುವಾಗ ಮತ್ತು ಸಮಾಜದ ಅರೆಕೊರೆಗಳನ್ನು ಕುರಿತು ಒಬ್ಬರು ಮತ್ತೊಬ್ಬರೊಡನೆ ವಿಚಾರವನ್ನು ವಿನಿಮಯ ಮಾಡಿಕೊಳ್ಳುವಾಗ ಆಡಿದ ನುಡಿಗಳೇ ವಚನಗಳಾಗಿ ರೂಪಗೊಂಡಿವೆ.

ಮಾತಿನಲ್ಲಿ ಭಕ್ತಿ
ಮನದಲ್ಲಿ ಕತ್ತರಿ
ಭಕ್ತಿಯಲ್ಲಿ ಬಲೆ
ಚಿತ್ತದಲ್ಲಿ ಕತ್ತಲೆಯಿಪ್ಪವರಿಗೆಲ್ಲಿಯದೊ
ಭಕ್ತಿಶೀಲ. (1810/1554)

ಮಾತು+ಅಲ್ಲಿ; ಮಾತು=ನುಡಿ/ಸೊಲ್ಲು; ಭಕ್ತಿ=ದೇವರನ್ನು ಪೂಜಿಸಲು ಇಲ್ಲವೇ ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಮಾತಿನಲ್ಲಿ ಭಕ್ತಿ=ಸತ್ಯ,ನೀತಿ,ನ್ಯಾಯದ ನುಡಿಗಳನ್ನು ಬಾಯ್ತುಂಬ ಆಡುವುದು;

ಮನ+ಅಲ್ಲಿ; ಮನ=ಮನಸ್ಸು/ಚಿತ್ತ;

ಕತ್ತರಿ=ಈ ಪದ ಎರಡು ತಿರುಳುಗಳಲ್ಲಿ ಬಳಕೆಯಾಗುತ್ತದೆ. 1. ಏನನ್ನಾದರೂ ಕತ್ತರಿಸುವುದಕ್ಕಾಗಿ ಬಳಸುವ ಇಕ್ಕುಳದ ಆಕಾರದಲ್ಲಿರುವ ಉಪಕರಣ. 2.ಕಪಟತನ/ಮೋಸ/ವಂಚನೆ;

ಮನದಲ್ಲಿ ಕತ್ತರಿ=ಇತರರನ್ನು ವಂಚಿಸಿ ಕೇಡನ್ನು ಬಗೆಯುವ ಆಲೋಚನೆಯನ್ನು ಮನದಲ್ಲಿ ಹೊಂದಿರುವುದು;

ಭಕ್ತಿ+ಅಲ್ಲಿ; ಬಲೆ=ಈ ಪದ ಎರಡು ತಿರುಳುಗಳಲ್ಲಿ ಬಳಕೆಯಾಗುತ್ತದೆ. 1. ಹಕ್ಕಿ ಮೀನು ಮುಂತಾದ ಜೀವಿಗಳನ್ನು ಹಿಡಿಯಲು ನೂಲಿನಿಂದ ಹೆಣೆದಿರುವ ವಸ್ತು.2.ಮೋಸ/ವಂಚನೆ/ಕಪಟತನ;

ಭಕ್ತಿಯಲ್ಲಿ ಬಲೆ=ದೇವರಲ್ಲಿ ಒಲವು ಉಳ್ಳವನಂತೆ ನಟಿಸುತ್ತಾ, ಇತರರನ್ನು ಮರುಳು ಮಾಡಿ ತನ್ನತ್ತ ಸೆಳೆದುಕೊಳ್ಳುವುದು;

ಚಿತ್ತ+ಅಲ್ಲಿ; ಚಿತ್ತ=ಮನಸ್ಸು; ಕತ್ತಲೆ+ಇಪ್ಪ+ಅವರಿಗೆ+ಎಲ್ಲಿಯದೊ; ಕತ್ತಲೆ=ಈ ಪದ ಎರಡು ತಿರುಳುಗಳಲ್ಲಿ ಬಳಕೆಯಾಗಿದೆ. 1.ತಿಮಿರ/ಮಬ್ಬು. 2.ಅರಿವು ಇಲ್ಲದಿರುವುದು; ಇಪ್ಪ=ಇರುವ; ಅವರಿಗೆ=ಅಂತಹ ವ್ಯಕ್ತಿಗಳಿಗೆ; ಇಪ್ಪವರಿಗೆ=ಇರುವ ವ್ಯಕ್ತಿಗಳಿಗೆ; ಎಲ್ಲಿಯದೊ=ಯಾವ ರೀತಿಯಲ್ಲಿ ತಾನೆ ಇರುವುದು/ಬರುವುದು;

ಚಿತ್ತದಲ್ಲಿ ಕತ್ತಲೆ=ಮನದಲ್ಲಿ ಒಳ್ಳೆಯ ಆಲೋಚನೆಗಳಿಲ್ಲದೆ, ಕೆಟ್ಟ ಒಳಮಿಡಿತಗಳೇ ತುಂಬಿರುವುದು;

ಶೀಲ=ಒಳ್ಳೆಯ ನಡತೆ/ಸದಾಚಾರ; ಭಕ್ತಿಶೀಲ=ಒಳ್ಳೆಯ ನಡೆನುಡಿ/ಒಳ್ಳೆಯ ಗುಣ;

ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನೇ ತುಂಬಿಕೊಂಡು, ಬಾಯಲ್ಲಿ ಮಾತ್ರ ಸತ್ಯ,ನೀತಿ,ನ್ಯಾಯದ ಮಾತುಗಳನ್ನಾಡುತ್ತಾ, ದೇವರಲ್ಲಿ ಒಲವು ಉಳ್ಳವರಂತೆ ನಟಿಸುತ್ತಿರುವ ವ್ಯಕ್ತಿಗಳು ನಯವಂಚಕರೇ ಹೊರತು ಗುಣವಂತರಲ್ಲ.

ಇದಿರಿಗೆ ಬೋಧಿಸಿ ಹೇಳುವ
ಹಿರಿಯರೆಲ್ಲರೂ ಹಿರಿಯಪ್ಪರೆ
ನುಡಿದಂತೆ ನಡೆದು
ನಡೆದಂತೆ ನುಡಿದು
ನಡೆನುಡಿ ಸಿದ್ಧಾಂತವಾಗಿಯಲ್ಲದೆ
ಅರುಹಿರಿಯರಾಗಬಾರದು. (2009/1576)

ಇದಿರು=ಮುಂದುಗಡೆ/ಎದುರುಗಡೆ; ಇದಿರಿಗೆ=ಇತರರಿಗೆ/ಎದುರು ಇರುವವರಿಗೆ; ಬೋಧ=ತಿಳುವಳಿಕೆ/ವಿಚಾರ/ಅರಿವು; ಬೋಧಿಸಿ ಹೇಳುವ=ತಿಳಿಯುವಂತೆ ವಿವರಿಸುವ/ಮನದಟ್ಟು ಮಾಡಿಸುವ; ಹಿರಿಯರ್+ಎಲ್ಲರೂ; ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಅರಿವಿನಲ್ಲಿ ದೊಡ್ಡವರು; ಹಿರಿಯರ್+ಅಪ್ಪರೆ; ಅಪ್ಪರೆ=ಆಗುತ್ತಾರೆಯೇ; ಹಿರಿಯರಪ್ಪರೆ=ಹಿರಿಯರಾಗುತ್ತಾರೆಯೆ/ಹಿರಿಯರು ಎನಿಸಿಕೊಳ್ಳುವುದಕ್ಕೆ ಯೋಗ್ಯರಾಗುತ್ತಾರೆಯೆ;

ನುಡಿದ+ಅಂತೆ; ನುಡಿ=ಮಾತು/ಸೊಲ್ಲು; ನಡೆ=ವರ‍್ತನೆ/ನಡತೆ;

ನುಡಿದಂತೆ ನಡೆದು=ಹಿರಿಯರಾದವರು ಸತ್ಯ,ನೀತಿ,ನ್ಯಾಯದ ಸಂಗತಿಗಳನ್ನು ಇತರರಿಗೆ ತಾವು ಹೇಳುವಂತೆಯೇ, ಅವನ್ನು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ಬಾಳುವುದು;

ನಡೆದಂತೆ ನುಡಿದು=ಹಿರಿಯರಾದವರು ತಾವು ಮೊದಲು ಒಳ್ಳೆಯ ಕೆಲಸವನ್ನು ಮಾಡುತ್ತ, ಆ ರೀತಿಯ ಕೆಲಸವನ್ನು ಮಾಡಬೇಕೆಂದು ಇತರರಿಗೆ ಅನಂತರ ಹೇಳುವುದು;

ಸಿದ್ಧಾಂತ+ಆಗಿ+ಅಲ್ಲದೆ; ಸಿದ್ಧಾಂತ=ಯಾವುದೇ ಒಂದು ವಿಚಾರವನ್ನು ಎಲ್ಲರಿಗೂ ತಿಳಿಯುವಂತೆ ಹೇಳುವ ತತ್ವ/ನಿಲುವು/ನಿರ‍್ಣಯ;

ನಡೆನುಡಿ ಸಿದ್ಧಾಂತವಾಗುವುದು=ವ್ಯಕ್ತಿಯು ತನ್ನ ಜೀವನದ ವ್ಯವಹಾರಗಳಲ್ಲಿ ಆಡುವ ಒಳ್ಳೆಯ ನುಡಿ ಮತ್ತು ಮಾಡುವ ಒಳ್ಳೆಯ ಕೆಲಸಗಳು ಒಂದಕ್ಕೊಂದು ಜತೆಗೂಡಿ ಇರುವುದು;

ಅಲ್ಲದೆ=ಹೊರತುಪಡಿಸಿ; ಆಗಿಯಲ್ಲದೆ=ಆ ರೀತಿಯಲ್ಲಿ ಇರದೆ; ಅರುಹಿರಿಯರ್+ಆಗಬಾರದು; ಅರುಹಿರಿಯರು=ಒಳ್ಳೆಯ ಅರಿವನ್ನು ಹೊಂದಿ, ಒಳ್ಳೆಯ ಬದುಕನ್ನು ನಡೆಸುತ್ತಿರುವ ಹಿರಿಯರು; ಆಗಬಾರದು=ಆಗಲಾರರು/ಆಗುವುದಿಲ್ಲ;

ಇತರರ ಮುಂದೆ ಸತ್ಯ,ನೀತಿ,ನ್ಯಾಯದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನು ಆಡಿದ ಮಾತ್ರಕ್ಕೆ ವ್ಯಕ್ತಿಗಳು ಹಿರಿಯರಾಗುವುದಿಲ್ಲ. ನಡೆಯೊಂದು ರೀತಿ, ನುಡಿಯೊಂದು ರೀತಿಯಲ್ಲಿದ್ದರೆ ಅಂದರೆ ಬಾಯಲ್ಲಿ ನಿಜವನ್ನು ನುಡಿಯುತ್ತ, ನಿತ್ಯ ಜೀವನದ ವ್ಯವಹಾರದಲ್ಲಿ ಕೆಟ್ಟ ಕೆಲಸವನ್ನು ಮಾಡುತ್ತಿರುವವರು ಹಿರಿಯರಲ್ಲ.

ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಹ ಮಾತನ್ನು ಆಡುವವರು ಮತ್ತು ಆಡಿದ ಮಾತಿಗೆ ತಕ್ಕಂತೆ ಕೆಲಸಗಳನ್ನು ಮಾಡುವವರು ಮಾತ್ರ ಅರಿವುಳ್ಳ ಹಿರಿಯರು ಎನಿಸಿಕೊಳ್ಳುತ್ತಾರೆ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: