ಐಸ್ಲ್ಯಾಂಡ್ : ನೈಸರ‍್ಗಿಕ ವಿಸ್ಮಯಗಳ ಆಗರ (ಬಾಗ-2)

– ಕೆ.ವಿ. ಶಶಿದರ.

Blue Lagoon, ಬ್ಲೂ ಲಗೂನ್

ಹಿಂದಿನ ಬರಹದಲ್ಲಿ ಐಸ್ಲ್ಯಾಂಡ್ ನ ಬೆರಗು ಮೂಡಿಸುವ ಕೆಲವು ಸುತ್ತಾಟದ ತಾಣಗಳ ಬಗ್ಗೆ ತಿಳಿಸಲಾಗಿತ್ತು. ಮತ್ತೊಂದಶ್ಟು ತಾಣಗಳ ಬಗ್ಗೆ ಮಾಹಿತಿ ಈ ಬರಹದಲ್ಲಿ

5. ನೀಲಿ ನೀರ‍್ಗಲ್ಲ ಕೊಳಗಳು ಅತವ ಬೂಶಾಕದ ಕೊಳಗಳು

ಐಸ್ಲ್ಯಾಂಡಿನ ಬಿಸಿನೀರಿನ ಬುಗ್ಗೆಗಳು ಬಹಳ ವಿಶೇಶ. ಇದರಲ್ಲಿ ಮುಳುಗೇಳುವುದೇ ಅತ್ಯಂತ ಆಹ್ಲಾದಕರ ವಿಶಯ. ಇಲ್ಲಿ ಅಸಂಕ್ಯಾತ ನೈಸರ‍್ಗಿಕ ಬಿಸಿ ನೀರಿನ ಬುಗ್ಗೆಗಳಿವೆ. ಇದರೊಡನೆ ಅನೇಕ ಮಾನವ ನಿರ‍್ಮಿತ ಬೂಶಾಕ ಕೊಳಗಳು ನಂಬಲಾಗದಂತಹ ಸ್ತಳಗಳಲ್ಲಿವೆ. ಅವುಗಳ ನೋಟವೇ ಅದ್ಬುತ. ನ್ಯಾಶನಲ್ ಜಿಯಾಗ್ರಪಿಕ್‍ನವರು ಹೆಸರಿಸಿರುವ ವಿಶ್ವದ 25 ಅದ್ಬುತಗಳಲ್ಲಿ ಐಸ್ಲ್ಯಾಂಡಿನ ‘ಬ್ಲೂ ಲಗೂನ್’ ಅವುಗಳಲ್ಲಿ ಹೆಚ್ಚು ಪ್ರಸಿದ್ದ. ಬ್ಲೂ ಲಗೂನ್ ಕೊಳವು ಜ್ವಾಲಾಮುಕಿಯ ಲಾವಾದಿಂದ ಒರಟಾಗಿರುವ ಮೈದಾನದ ಮದ್ಯದಲ್ಲಿದೆ. ಇದು ಹಾಲು ಬಿಳುಪಿನ ಕೊಳ. ಕೊಳದ ಸಿಹಿ ನೀರು ಮತ್ತು ಸಮುದ್ರದ ಉಪ್ಪುನೀರಿನಿಂದ, ಇದರ ನೀರು ಮಿಶ್ರಿತವಾಗಿದೆ. ಈ ನೀರಿನಲ್ಲಿ ಸಿಲಿಕಾ ಮತ್ತು ಕನಿಜಗಳ ಅಸಾದಾರಣ ಮಿಶ್ರಣವಿದೆ. ಹಾಗಾಗಿ ಈ ನೀರು ಹಲವು ಚರ‍್ಮ ರೋಗಗಳಿಗೆ ಉತ್ತಮ ದಿವ್ಯೌಶದ. ಸೋರಿಯಾಸಿಸ್‍ನಂತಹ ಚರ‍್ಮದ ಕಾಯಿಲೆ ಇರುವವರಿಗೂ ಇದು ಉಪಯುಕ್ತ. ಬ್ಲೂ ಲಗೂನ್‍ನಲ್ಲಿ ವಿಶ್ವ ದರ‍್ಜೆಯ ಆದುನಿಕ ಸೌಲಬ್ಯಗಳಾದ ನೀರಿನ ಮಸಾಜ್‍ಗಳು, ಸ್ಟೀಮ್ ರೂಮುಗಳು, ವಿಶ್ರಾಂತಿ ಗ್ರುಹಗಳ ಸಾಲುಗಳು ಇವೆ. ಬ್ಲೂ ಲಗೂನ್ ನಂತಹ ಸಕಲ ಸೌಲಬ್ಯವನ್ನು ಹೊಂದಿರುವ ಅನೇಕ ಬೂಶಾಕದ ಈಜುಕೊಳಗಳು ಐಸ್ಲ್ಯಾಂಡಿನಾದ್ಯಂತ ಸಾಕಶ್ಟಿವೆ. ರಾಜದಾನಿಯೊಂದರಲ್ಲೆ 14 ಬೂಶಾಕದ ಈಜುಕೊಳಗಳಿವೆ. ಇದು ಸ್ತಳೀಯರ ಜೀವನಕ್ಕೆ ಪ್ರಾತಮಿಕ ಉದ್ಯೋಗ ಕಲ್ಪಿಸಿದೆ. ಆರ‍್ತಿಕತೆಗೆ ಮೂಲ ಸಹ ಹೌದು.

6. ಗೀಸರ‍್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ಗೀಸರ್

ರೋಮಾಂಚಕ ಗೀಸರ್‌ಗಳಿಗೆ ಐಸ್ಲ್ಯಾಂಡ್ ಹೆಸರುವಾಸಿ. ಐಸ್ಲ್ಯಾಂಡ್ ‘ಗ್ರೇಟ್ ಗೀಸರ್’ನ ನೆಲೆ. ಇದರ ಆದಾರದ ಮೇಲೆ ಅಲ್ಲಿರುವ ಎಲ್ಲಾ ಗೀಸರ್‌ಗಳನ್ನು ಹೆಸರಿಸಿರುವುದು. ಗ್ರೇಟ್ ಗೀಸರ್ ಸಕ್ರಿಯವಾಗಿದ್ದಾಗ ಅದರಿಂದ ಹೊರಹೊಮ್ಮುವ ಬಿಸಿನೀರು 150 ರಿಂದ 200 ಮೀಟರ‍್ನಶ್ಟು ಎತ್ತರಕ್ಕೆ ಚಿಮ್ಮಿತ್ತಂತೆ. ಇದರ ಕೊನೆಯ ಚಟುವಟಿಕೆ 2016ರಲ್ಲಿ ಕಂಡು ಬಂದಿತ್ತು. ಸದ್ಯದಲ್ಲಿ ಗ್ರೇಟ್ ಗೀಸರ್ ಸಕ್ರಿಯವಾಗಿಲ್ಲ. ಹಾಗೆಂದಲ್ಲಿ ಪೂರ‍್ಣ ನಿಶ್ಕ್ರಿಯವಾಗಿದೆ ಎಂದು ಅರ‍್ತವಲ್ಲ. ಯಾವುದೇ ಸಮಯದಲ್ಲಾದರೂ ಸಕ್ರಿಯವಾಗಬಹುದು. ಮೊದಲಿನಂತೆ ಬಿಸಿ ನೀರನ್ನು ಆಕಾಶಕ್ಕೆ ಚಿಮ್ಮಬಹುದು ಎಂಬ ಆಶಾಬಾವನೆ ಅವರಲ್ಲಿದೆ. ಗ್ರೇಟ್ ಗೀಸರ್ ಪಕ್ಕದಲ್ಲೇ ಮತ್ತೊಂದು ಗೀಸರ್ ಇದೆ. ಅದೇ ಸ್ಟ್ರೊಕ್ಕೂರ್. ಇದರಿಂದ ಬಿಸಿನೀರು ನಿಗದಿತ ಸಮಯಕ್ಕೆ ಲಯಬದ್ದವಾಗಿ ಹೊರ ಹೊಮ್ಮುತ್ತದೆ. ಇದು 30 ರಿಂದ 40 ಮೀಟರ್ (100 ರಿಂದ 130 ಅಡಿ) ಎತ್ತರವನ್ನು ಮುಟ್ಟುತ್ತದೆ. ನೋಡುಗರಿಗೆ ಇದೂ ಸಹ ಅತ್ಯಂತ ಪ್ರಬಾವಶಾಲಿ ಮನಸೂರೆಗೊಳ್ಳುವ ದ್ರುಶ್ಯ. ಮತ್ತೊಂದು ಸಣ್ಣ ಗೀಸರ್ ಬೂಶಾಕದ ಕೊಳದ ಪಕ್ಕದ ಪ್ರದೇಶದಲ್ಲಿದೆ. ಇದನ್ನು ಸೀಕ್ರೆಟ್ ಲಗೂನ್ ಎನ್ನುತ್ತಾರೆ. ಇದರ ಸುತ್ತಲಿರುವ ಬಿಸಿನೀರಿನಲ್ಲಿ ವಿಶ್ರಮಿಸುತ್ತಾ, ಇದರಿಂದ ಹೊರ ಚಿಮ್ಮುವ ಬಿಸಿನೀರನ  ಬುಗ್ಗೆಯ ಜಳಕವನ್ನು ಆಸ್ವಾದಿಸಬಹುದು. ಐಸ್ಲ್ಯಾಂಡ್ನಲ್ಲಿ ಹಲವಾರು ಸಕ್ರಿಯ ಬೂಶಾಕದ ಪ್ರದೇಶಗಳಿವೆ. ಇವು ಅನೇಕ ನೀರ‍್ಗುಳ್ಳೆಯ ಬುಗ್ಗೆಗಳು, ಜ್ವಾಲಾಮುಕಿಯ ಬಿಸಿ ಅನಿಲಗಳು ಹೊರ ಬರುವ ಸಣ್ಣ ಸಣ್ಣ ರಂದ್ರಗಳು: ಪ್ಯೂಮರೋಲ್ಸ್ ಹಾಗೂ ಇತರೆ ಜ್ವಾಲಾಮುಕಿಯ ಬೆರಗುಗೊಳಿಸುವ ಚಟುವಟಿಕೆಗಳನ್ನು ಹೊಂದಿದೆ. ನೈಸರ‍್ಗಿಕ ಶಕ್ತಿಯನ್ನು ಪೋಲು ಮಾಡದೆ ಸಂಪೂರ‍್ಣ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ, ಐಸ್ಲ್ಯಾಂಡ್ ದೇಶವು ತನ್ನ ವಿದ್ಯುತ್ ಶಕ್ತಿಯನ್ನು ಬೂಶಾಕ ವಿದ್ಯುತ್ ಸ್ತಾವರಗಳಿಂದ ಪಡೆಯುತ್ತಿದೆ.

7. ಜಲಪಾತಗಳು

ಐಸ್ಲ್ಯಾಂಡಿಗೆ ಬೇಟಿ ನೀಡುವವರು ಹಲವು ನೈಸರ‍್ಗಿಕ ಆಕರ‍್ಶಣೆಗಳಲ್ಲಿ ನೋಡಲು ಹಾತೊರೆಯುವುದು, ಕಣ್ಮನ ಸೆಳೆಯುವ ಅಲ್ಲಿನ ಅದ್ಬುತ ಜಲಪಾತಗಳನ್ನು. ಇಲ್ಲಿರುವ ಜಲಪಾತಗಳ ಸಂಕ್ಯೆ ಪ್ರವಾಸಿಗರನ್ನು ಆಶ್ಚರ‍್ಯಗೊಳಿಸುತ್ತದೆ. ಎಲ್ಲವೂ ಅತಿ ಎತ್ತರದಿಂದ ದುಮ್ಮಿಕ್ಕುವ ಜಲಪಾತಗಳಲ್ಲ. ಬಹಳಶ್ಟು ಜಲಪಾತಗಳು ಕಿರುಜಲಪಾತಗಳು. ಇವುಗಳನ್ನು ನೋಡಲು ಹೋಗಬೇಕಿರುವ ಹಾದಿ ಬಲು ಸುಲಬ. ಐಸ್ಲ್ಯಾಂಡಿನ ಬೇರೆಲ್ಲಾ ಅದ್ಬುತಗಳಂತೆ ಇವು ಸಹ ಅಕ್ಕಪಕ್ಕದಲ್ಲೇ ಇರುವ ಕಾರಣ ವೀಕ್ಶಕರಿಗೆ ಅಲ್ಲಿಗೆ ತಲುಪಲು ಅನುಕೂಲ. ಜಲಪಾತಗಳನ್ನು ನೋಡಿ ಆನಂದಿಸುವ ಉತ್ಸಾಹಿ ಮನಸುಗಳಿಗೆ ಐಸ್ಲ್ಯಾಂಡ್ ಅತ್ಯುತ್ತಮ ತಾಣ. ಐಸ್ಲ್ಯಾಂಡಿನಲ್ಲಿ 1,332 ಕಿಲೋಮೀಟರ್‌ನಶ್ಟು ಉದ್ದದ ರಿಂಗ್ ರಸ್ತೆಯಿದೆ. ಇದು ಇಡೀ ಐಸ್ಲ್ಯಾಂಡನ್ನು ಸುತ್ತುವರೆದಿದೆ. ಈ ಮಾರ‍್ಗದಲ್ಲಿ ಪ್ರವಾಸಿಗರು ಎಲ್ಲೇ ನಿಲ್ಲಲಿ, ಅಲ್ಲೊಂದು ಸುಂದರವಾದ ಬವ್ಯವಾದ ನಯನ ಮನೋಹರ ಜಲಪಾತ ಕಂಡುಬರುತ್ತದೆ. ದಕ್ಶಿಣ ಐಸ್ಲ್ಯಾಂಡಿನ ಸೆಲ್ಜಲ್ಯಾಂಡ್ಪಾಸ್ ಹಾಗೂ ಸ್ಕೊಗಪಾಸ್ ಅತ್ಯಂತ ಪ್ರಸಿದ್ದಿ ಪಡೆದ ಜಲಪಾತಗಳು. ಇವೂ ಸಹ ರಿಂಗ್ ರಸ್ತೆ ಪಕ್ಕದಲ್ಲೇ ಇವೆ. ಹೆಚ್ಚೆಂದರೆ ಇವುಗಳ ಅಂತರ ಅರ‍್ದ ಗಂಟೆಯ ಪ್ರಯಾಣದಶ್ಟು. ಇಶ್ಟು ಸನಿಹದಲ್ಲಿ ಇವೆರೆಡು ಇರುವ ಕಾರಣ, ಇವುಗಳು ದುಮ್ಮಿಕ್ಕುವ ಎತ್ತರ ಸರಿ ಸುಮಾರು 200 ಅಡಿಗಳಶ್ಟಿದೆ. (60ಮೀಟರ್). ಸೆಲ್ಜಲ್ಯಾಂಡ್ಪಾಸ್ ಜಲಪಾತ ತೆಳ್ಳನೆ ನೀರಿನ ಪದರವನ್ನು ಹೊಂದಿದ್ದು, ಬೇಸಿಗೆಯಲ್ಲಿ ನೀರು ಮತ್ತೂ ಕಡಿಮೆಯಾಗುತ್ತದೆ, ಅದೇ ಸ್ಕೊಗಪಾಸ್ ಇದಕ್ಕೆ ವ್ಯತಿರಿಕ್ತವಾಗಿದೆ. ಇದು ಹೆಚ್ಚು ಅಗಲವಿದ್ದು, ಹೆಚ್ಚು ದ್ರುಡವಾಗಿದೆ. ಪ್ರವಾಸಿಗರು ಕೊಂಚ ಕಶ್ಟಪಟ್ಟರೆ ಇದರ ಮೇಲೆ ಏರಲು ಸಾದ್ಯವಿದೆ. ಮತ್ತೊಂದು ದೈತ್ಯ ಜಲಪಾತ ಗುಲ್ ಪಾಸ್, ಐಸ್ಲ್ಯಾಂಡ್ ರಾಜದಾನಿ ರಿಕ್ಜೆವಿಕ್‌ನಿಂದ ಕೇವಲ ಎರಡು ಗಂಟೆಗಳ ಪ್ರಯಾಣದಶ್ಟು ದೂರದಲ್ಲಿದೆ. ಐಸ್ಲ್ಯಾಂಡ್ ಮತ್ತು ಯುರೋಪಿನ ಅತ್ಯಂತ ಶಕ್ತಿಯುತ ಜಲಪಾತ ಡೆಟ್ಟಿಪಾಸ್. ಸ್ವರ‍್ಟಿಪಾಸ್ ಎಂಬ ಜಲಪಾತ ಬಸಲ್ಟ್‌ನ ಕಪ್ಪು ಕಂಬಗಳ ಮೇಲಿಂದ ದುಮುಕುವುದನ್ನು ನೋಡಲೇ ಚಂದ. ಐಸ್ಲ್ಯಾಂಡಿನ ಎರಡನೇ ಅತಿ ಎತ್ತರದ ಜಲಪಾತ, ಸ್ವರ‍್ಟಿಪಾಸ್ ಜಲಪಾತದಿಂದ ಒಂದು ಗಂಟೆಯ ಹಾಗೂ ರಾಜದಾನಿಯಿಂದ ಮತ್ತೊಂದು ಗಂಟೆ ಹೆಚ್ಚಿನ ಹಾದಿ. ಇದರೊಂದಿಗೆ ಅನ್ವೇಶಿಸಲು ಹಲವು ರೋಮಾಂಚಕ ಸಣ್ಣ ಪುಟ್ಟ ಅಬ್ಬಿಗಳು ಐಸ್ಲ್ಯಾಂಡ್ ತುಂಬಾ ತುಂಬಿವೆ.

8. ಜ್ವಾಲಾಮಕಿಗಳು

ಐಸ್ಲ್ಯಾಂಡಿನಲ್ಲಿ 32 ಸಕ್ರಿಯ ಜ್ವಾಲಾಮುಕಿಗಳಿವೆ. ಒಂದಲ್ಲಾ ಒಂದು ಜ್ವಾಲಾಮುಕಿಯ ಸ್ಪೋಟ, ನಾಲ್ಕೈದು ವರ‍್ಶಗಳಲ್ಲಿ ಒಮ್ಮೆ ಸಂಬವಿಸುತ್ತದೆ. ಇತ್ತೀಚಿನ ಜ್ವಾಲಾಮುಕಿಯ ಸ್ಪೋಟ ದಾಕಲಾಗಿರುವುದು 2015ರ ಪೆಬ್ರವರಿ 28ರಂದು. ಅಂದಿನ ದಿನ ನೀರ‍್ಗಲ್ಲ ಕೊಳದ ಅಡಿಯಲ್ಲಿರುವ ಬರೋರ‍್ಬಂಗಾ ಜ್ವಾಲಾಮುಕಿ ಸ್ಪೋಟಗೊಂಡಿತ್ತು. ಈಗ್ಗೆ ನಾಲ್ಕು ವರ‍್ಶದ ಹಿಂದೆ ಈ ಸ್ಪೋಟ ಸಂಬವಿಸಿದ ಕಾರಣ, ಮುಂದಿನ ಸ್ಪೋಟ ಯಾವ ಸಮಯದಲ್ಲಾದರೂ ಗಟಿಸುವ ಸಾದ್ಯತೆ ನಿಚ್ಚಳವಾಗಿದೆ. ಜ್ವಾಲಾಮುಕಿಯ ಸ್ಪೋಟವನ್ನು ಕಣ್ಣಾರೆ ವೀಕ್ಶಿಸಲು ಸಾಕಶ್ಟು ಅದ್ರುಶ್ಟಶಾಲಿಯಾಗಿರಬೇಕು. ನೈಸರ‍್ಗಿಕ ಶಕ್ತಿಯ ಬಲಾಡ್ಯತೆಯನ್ನು ಮನಗಾಣುವ ಉದ್ದೇಶದಿಂದ ಸಕ್ರಿಯ ಜ್ವಾಲಾಮುಕಿಯ ಬಳಿ ನಿಲ್ಲುವುದೇ ಒಂದು ಸುಂದರ ಬಯಂಕರ ಅನುಬವ. ಸಕ್ರಿಯ ಜ್ಬಾಲಾಮುಕಿಯ ಜೀವಂತ ಸ್ಪೋಟ ಕಾಣದಿದ್ದರೂ ಅದರ ಬಳಿ ನಿಂತಾಗ, ಅದರಿಂದ ಆದ ಅನಾಹುತದ ದ್ರುಶ್ಯವನ್ನು ಕಣ್ಣಾರೆ ಕಾಣಬಹುದು. ಜ್ವಾಲಾಮುಕಿಯ ಬಳಿ ಇರುವ ಗನೀಕ್ರುತ ಲಾವಾ ಹರಿವುಗಳು, ಉಗಿ ನೆಲಗಳು, ಲಾವಾದಿಂದ ನಿರ‍್ಮಿತವಾದ ಗುಹೆಗಳು ಮುಂತಾದವುಗಳ ಪಳೆಯುಳಿಕೆಗಳನ್ನು ಕಂಡು ಅದರ ತೀವ್ರತೆಯನ್ನು ಅರಿಯಬಹುದು. ಸುಪ್ತವಾಗಿರುವ ಜ್ವಾಲಾಮುಕಿಯ ಹೊಟ್ಟೆಯ ಪ್ರದೇಶಕ್ಕೆ ಇಳಿದು ಅದರ ಬವ್ಯತೆಯನ್ನು ಮನಗಾಣಬಹುದು.

2010ರಲ್ಲಿ ಏಯೈಪಿಯಾತ್ಲಯೋಕಿತಲ್(Eyjafjallajökull) ಜ್ವಾಲಾಮುಕಿಯು ಸ್ಪೋಟಗೊಂಡಿತ್ತು. ಈ ಪರಿಣಾಮದಿಂದಾಗಿ ಮ್ಯಾಗ್ನಿ ಮತ್ತು ಮಾಯ್ ಎಂಬ ಹೊಸ ಬ್ರುಹತ್ ಕುಳಿಗಳು ರೂಪುಗೊಂಡವು. ಇವು ವಿಶಾಲವಾಗಿರುವ ಕಾರಣ  ಪ್ರವಾಸಿಗರು ಇದರಲ್ಲಿ ಇಳಿದು ‘ಪಾದಯಾತ್ರೆ’ ಮಾಡುವುದರ ಜೊತೆಗೆ ಅಲ್ಲಿರುವ ಗೋಡೆಗಳನ್ನು ಮುಟ್ಟಿ ಹೊಸ ಅನುಬವವನ್ನು ತಮ್ಮದಾಗಿಸಿಕೊಳ್ಳಬಹುದು. ಐಸ್ಲ್ಯಾಂಡಿನ ಎಲ್ಲಾ ಜ್ವಾಲಾಮುಕಿಗಳು ಮಾರಕವಲ್ಲ. ಮಾರಕ ಜ್ವಾಲಾಮುಕಿ ಎಂದು ಅನ್ವರ‍್ತನಾಮ ಹೊಂದಿರುವ ಜ್ವಾಲಾಮುಕಿ ಕಟ್ಲಾ. ಇದರ ಬುಡದಲ್ಲಿ ಇರುವ ಐಸ್ ಗುಹೆಗಳು ಬಹಳ ವಿಶ್ವಪ್ರಕ್ಯಾತ. ಪ್ರವಾಸಿಗರ ವೀಕ್ಶಣೆಗೆ ಇದು ಸದಾ ತೆರೆದಿರುತ್ತದೆ. ನೂರಾರು ವರುಶಗಳಿಂದ ಮಂಜುಗಡ್ಡೆಯಲ್ಲಿ ಸಿಲುಕಿರುವ ಜ್ವಾಲಾಮುಕಿ ಸ್ಪೋಟದ ಬೂದಿ, ಗುಹೆಯಲ್ಲಿನ ಗೋಡೆಯ ಪದರಗಳಲ್ಲಿ ನಿಚ್ಚಳವಾಗಿ ಕಾಣುತ್ತದೆ.

ಐಸ್ಲ್ಯಾಂಡಿನ ಅತಿ ಎತ್ತರದ ಪರ‍್ವತ ಹ್ವನ್ನಾಡಾಲ್ಶುನುಕುರ್‌ನಲ್ಲಿ ಜ್ವಾಲಾಮುಕಿಯಿದ್ದು, ಅಲ್ಲಿಗೆ ಬಹಳಶ್ಟು ಪ್ರವಾಸಿಗರು ಚಾರಣ ಮಾಡುತ್ತಾರೆ. ಇದೂ ಸಹ ಅನನ್ಯ. ಐಸ್ಲ್ಯಾಂಡಿನ ಎಲ್ಲಾ ಜ್ವಾಲಾಮುಕಿಗಳು ಸಕ್ರಿಯವಾಗಿಲ್ಲ. ಜ್ವಾಲಾಮುಕಿಯ ಸ್ಪೋಟ ನೈಸರ‍್ಗಿಕ ಕ್ರಿಯೆ ಆದ ಕಾರಣ ಅದರ ಸ್ಪೋಟಕ್ಕೆ ನಿಗದಿತ ಸಮಯವಿಲ್ಲ. ಯಾವ ಗಳಿಗೆಯಲ್ಲಿ ಅವು ಸ್ಪೋಟಿಸುತ್ತವೆಯೋ ದೇವರೇ ಬಲ್ಲ.

(ಚಿತ್ರ ಸೆಲೆ: wikimedia.org, pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: