ತಿರುಗುಬಾಣ ಎಂಬ ಬೆರಗು!

ಶ್ವೇತ ಹಿರೇನಲ್ಲೂರು.

ತಿರುಗುಬಾಣ, Boomerang

ನನ್ನ ಮಗನಿಗೆ ಒರಿಗಾಮಿ ಕಾಗದ ಮಡಚುವ ಕಲೆ ಅಚ್ಚು ಮೆಚ್ಚು. ಒರಿಗಾಮಿ ಮಾಡುವ ಕಾಗದದ ಒಂದು ಕಟ್ಟು ಇಟ್ಟುಕೊಂಡು ಯಾವುದಾದರೂ ಒರಿಗಾಮಿ ಮಾಡುವ ವಿದಾನದ ಚಿತ್ರವನ್ನು ಯೂಟ್ಯೂಬ್ ನಲ್ಲಿ ಹಾಕಿಕೊಡು ಎಂದು ಕೇಳುತ್ತಿರುತ್ತಾನೆ. ಒರಿಗಾಮಿ ತಿರುಗುಬಾಣ (boomerang) ಮಾಡುವುದನ್ನು ನೋಡಿ ಇದನ್ನು ಮಾಡುತ್ತೇನೆ ಎಂದು ಕುಳಿತ. ಅದನ್ನು ಮಾಡಿ ಮುಗಿಸಿದ ಮೇಲೆ ‘ಅಮ್ಮ ಈ ತಿರುಗುಬಾಣ ಒಮ್ಮೆ ಎಸೆದರೆ ಮತ್ತೆ ಹೇಗೆ ಹಿಂದೆ ತಿರುಗಿ ಬರುತ್ತೆ?’ ಎಂದು ಕೇಳಿದ. ಹಿಂದೆ ಜಂಗಲ್ ಬುಕ್ ನ ಮೌಗ್ಲಿ, ಕೈಯಲ್ಲೊಂದು ತಿರುಗುಬಾಣವನ್ನಿಟ್ಟುಕೊಂಡು ತಿರುಗುತ್ತ ಇರುವುದನ್ನು ನೋಡಿ ಕುಶಿಪಡುತ್ತಿದ್ದೆನಶ್ಟೇ, ಅದು ಏಕೆ ತಿರುಗಿ ಬರುತ್ತದೆ ಎಂಬ ಪ್ರಶ್ನೆ ನನ್ನ ಮನಸಲ್ಲಿ ಮೂಡಿರಲಿಲ್ಲ.

ಹಳಮೆಯರಿಗರ ಅನಿಸಿಕೆಯ ಪ್ರಕಾರ ಈ ಬಾಣಗಳನ್ನು ಮೊದಲು ಉಪಯೋಗಿಸುತ್ತಿದ್ದುದು ಇಂಡಿಜೆನಸ್ ಆಸ್ಟ್ರೇಲಿಯನ್ನರು. ‘ಕೈಲಿ’ ಎಂಬ ಹಿಂತಿರುಗದ ಬಾಣಗಳನ್ನು ಸಾಂಪ್ರದಾಯಿಕವಾಗಿ ಬೇಟೆಯಾಡಲು, ಆಟ ಮತ್ತು ಮನರಂಜನೆಗಾಗಿ ಉಪಯೋಗಿಸುತ್ತಿದ್ದರು. ಯುರೋಪ್, ಈಜಿಪ್ಟ್, ಉತ್ತರ ಅಮೇರಿಕ ಮತ್ತು ದಕ್ಶಿಣ ಬಾರತದಲ್ಲಿ ಸಹ ಹಿಂತಿರುಗದ ಬಾಣಗಳನ್ನು ಉಪಯೋಗಿಸುತ್ತಿದ್ದ ಕುರುಹುಗಳು ಇದ್ದರೂ, ಈ ಬಾಣ ಆಸ್ಟ್ರೇಲಿಯಾದ ಐಕಾನ್ ಎನಿಸಿದೆ. ಹಿಂತಿರುಗದ ಬಾಣವನ್ನು ಬರಿ ಸಣ್ಣ ಸಣ್ಣ ಪ್ರಾಣಿಗಳನ್ನು ಕೊಲ್ಲಲು ಅಶ್ಟೇ ಅಲ್ಲದೆ, ದೊಡ್ಡ ಪ್ರಾಣಿಗಳಾದ ಕಾಂಗರೂ, ಎಮು ಮುಂತಾದುವನ್ನು ದೂರದಿಂದಲೇ ಗಾಯಗೊಳಿಸಿ ಅವು ಓಡಿ ಹೋಗದಂತೆ ಮಾಡಿ ಸಲೀಸಾಗಿ ಹಿಡಿಯುತ್ತಿದ್ದರು.

ಸಾಮಾನ್ಯವಾಗಿ ಮರದಿಂದ ಹಾಗು ಆನೆಯ ದಂತ ಮುಂತಾದುವುಗಳಿಂದ ಈ ಬಾಣಗಳನ್ನು ಕೆತ್ತುತ್ತಿದ್ದರು. ತಿರುಗುವ ಬಾಣವನ್ನು ಏಕೆ ತಯಾರಿಸಿದರು, ಯಾರು ತಯಾರಿಸಿದರು ಎಂಬುದರ ಬಗ್ಗೆ ಅಶ್ಟು ಸರಿಯಾಗಿ ತಿಳಿದಿಲ್ಲ. ಹಿಂತಿರುಗದ ಬಾಣವನ್ನು ಕೆತ್ತುತ್ತಿರುವಾಗ ಆಕಸ್ಮಿಕವಾಗಿ ಯಾರೋ ಈ ರೀತಿಯ ಹಿಂತಿರುಗುವ ತಿರುಗುಬಾಣವನ್ನು ಕಂಡು ಹಿಡಿದಿರಬಹುದು ಎಂಬ ಊಹೆ ಇದೆ.

ತಿರುಗುಬಾಣ ಕೈಯಲ್ಲಿ ಎಸೆಯುವ ಒಂದು ಸಲಕರಣೆ. ಇದನ್ನು ಸಾದಾರಣವಾಗಿ ಹಗುರವಾದ ಮರದಿಂದ ತಯಾರಿಸಿರುತ್ತಾರೆ. ಇದಕ್ಕೆ ಎರಡು ರೆಕ್ಕೆಗಳಿದ್ದು ಅವು 6೦-8೦ ಡಿಗ್ರಿ ಕೋನದಲ್ಲಿ ಕೂಡಿರುತ್ತವೆ. ವಿಮಾನದ ರೆಕ್ಕೆಗಳ ರೀತಿಗೆ ಹೋಲಿಸಬಹುದು. ಇದಕ್ಕೆ ಹಾರುಗೆರೆಯ (aerofoil) ರೀತಿಯ ರಚನೆ ಇರುತ್ತದೆ. ವಿಮಾನದ ರೆಕ್ಕೆಯನ್ನು ಅಡ್ಡ ವಿಬಜನೆ ಮಾಡಿದರೆ ದೊರೆಯುವ ಆಕ್ರುತಿಯ ಹಾಗೆ ಇದರ ರಚನೆ ಇರುತ್ತದೆ. ಅಂದರೆ ಇದರ ಆಕಾರ ಮುಂದಕ್ಕೆ ದುಂಡನೆಯ ಮೊನೆಯಂತಿದ್ದು, ಹಿಂಬಾಗದ ಮೊನೆ ತೆಳ್ಳಗೆ ಚೂಪಾಗಿರುತ್ತದೆ. ಹಾಗು ಈ ರೆಕ್ಕೆಗಳ ಕೆಳಬಾಗ ಚಪ್ಪಟೆಯಾಗಿದ್ದು ಮೇಲ್ಬಾಗ ದುಂಡಗೆ ಇರುತ್ತದೆ. ಕೆಳಗಿರುವ ಚಿತ್ರದಲ್ಲಿರುವಂತೆ!

ತಿರುಗುಬಾಣ, Boomerang

ಈ ರೀತಿಯ ರಚನೆ ಇರುವ ಬಾಣವನ್ನು ಹಾರಿ ಬಿಟ್ಟಾಗ, ಬಾಣದ ಮೇಲಿನ ಉಬ್ಬಿದ ದುಂಡನೆಯ ಬಾಗದಲ್ಲಿ ಗಾಳಿಯ ಒತ್ತಡ ಕಡಿಮೆ ಇರುತ್ತದೆ, ಅದೇ ರೀತಿ ಕೆಳಗಿನ ಚಪ್ಪಟೆಯ ಬಾಗದಲ್ಲಿ ಗಾಳಿಯ ಒತ್ತಡ ಹೆಚ್ಚಿರುತ್ತದೆ. ಈ ರೀತಿ ಗಾಳಿಯ ಒತ್ತಡದಲ್ಲಿ ವ್ಯತ್ಯಾಸ ಉಂಟಾದಾಗ ಗಾಳಿಯ ವೇಗ ಕೂಡ ಹೆಚ್ಚು-ಕಡಿಮೆ ಆಗುತ್ತದೆ. ಇದೇ ಗಾಳಿಕಸುವರಿಮೆ ತಿರುಗುಬಾಣವನ್ನು ಮುಂದೆ ಹೋಗುವಂತೆ ಮಾಡುತ್ತದೆ. ಈ ಬಾಣ ತಿರುಗಿ ಬರಬೇಕೆಂದರೆ ಅದರ ಆಕಾರ ಅಶ್ಟೇ ಸಾಲದು. ಅದನ್ನು ಎಸೆಯುವ ರೀತಿ ಸಹ ಅತಿಮುಕ್ಯ. ಬೂಮರಾಂಗ್ ಅನ್ನು ಲಂಬವಾಗಿ ಎಸೆಯಬೇಕು. ಇದರ ಒಂದು ರೆಕ್ಕೆ ಮೇಲೆಯೂ ಮತ್ತೊಂದು ರೆಕ್ಕೆ ಕೆಳಗೆ ಮುಕ ಮಾಡಿ, ಅದರ ಚೂಪಾದ ಮದ್ಯ ಬಾಗ ನಿಮ್ಮ ಕಡೆ ನೋಡುವಂತೆ ಇಟ್ಟುಕೊಂಡು ಸ್ವಲ್ಪ ಸುತ್ತಿಸಿ ಎಸೆಯಬೇಕು, ಕೆಳಗಿನ ಚಿತ್ರದಲ್ಲಿರುವಂತೆ.

ತಿರುಗುಬಾಣ, boomerang

ಹೀಗೆ ಬೂಮರಾಂಗ್ ಗಾಳಿಯಲ್ಲಿ ಸುತ್ತುತ್ತ ಸಾಗುವಾಗ, ಮೇಲ್ಬಾಗದ ರೆಕ್ಕೆಯು, ಕೆಳಬಾಗದ ರೆಕ್ಕೆಗಿಂತ ಹೆಚ್ಚಿನ ವೇಗದಲ್ಲಿ ಹಾರುತ್ತಿರುತ್ತದೆ. ಹಾಗೆಯೇ, ಮೇಲ್ಬಾಗದ ರೆಕ್ಕೆ ನಾವು ಎಸೆದ ದಿಕ್ಕಿನಲ್ಲಿ ಹೋಗುತ್ತಿದ್ದರೆ, ಕೆಳಬಾಗದ ರೆಕ್ಕೆಯು ಎಸೆದ ದಿಕ್ಕಿನ ವಿರುದ್ದ ಚಲಿಸುತ್ತಿರುತ್ತದೆ. ಇದರಿಂದಾಗಿ, ಮೇಲಿನ ಬಾಗವು ಕೆಳಗಿನ ಬಾಗಕ್ಕಿಂತ ಹೆಚ್ಚಿನ ಏರುವಿಕೆಯನ್ನು ಉಂಟುಮಾಡುತ್ತದೆ. ಮೇಲ್ಬಾಗದ ಹಾಗು ಕೆಳಬಾಗದ ಏರುವಿಕೆಯ ವ್ಯತ್ಯಾಸದಿಂದ ತಿರುಗುಬಲ (torque) ಉಂಟಾಗುತ್ತದೆ. ತಿರುಗುಬಲದಿಂದಾಗಿ ಬೂಮರಾಂಗ್ ಸ್ವಲ್ಪ ಸ್ವಲ್ಪವೇ ಓರೆಯಾಗಿ ಸಾಗುವಂತೆ ಮಾಡುತ್ತದೆ. ಈ ರೀತಿಯ ಬಾಗುವಿಕೆಯಿಂದ ಹಾಗು ತಿರುಗು ರಾಶಿವೇಗದಿಂದಾಗಿ (angular momentum) ಬೂಮರಾಂಗ್ ವ್ರುತ್ತಾಕಾರದಲ್ಲಿ ಚಲಿಸುತ್ತದೆ. ಇದನ್ನು ಜೈರೋಸ್ಕೋಪಿಕ್ ಪ್ರೆಸೆಶನ್ ಎನ್ನುತ್ತಾರೆ.

ಸ್ವಲ್ಪವೇ ದೂರ ಹಾರುವ ಬೂಮರಾಂಗಿನ ತಿರುಗುಬಲ ಮತ್ತು ತಿರುಗು ರಾಶಿವೇಗ ಮಾರ‍್ಪಾಡು ಆಗದೆ ಸ್ತಿರವಾಗಿ ನಿಲ್ಲುತ್ತದೆ. ಆದ್ದರಿಂದ ಸರಿಯಾಗಿ ಎಸೆದರೆ ಹಾಗು ಗಾಳಿಯು ಅದಕ್ಕೆ ಪೂರಕವಾಗಿದ್ದರೆ ಬೂಮರಾಂಗ್, ಎಸೆದವರ ಕೈಗೆ ಮರಳಿ ಬಂದು ಸೇರುತ್ತದೆ.

( ಮಾಹಿತಿ ಸೆಲೆ: todayifoundout.com, wikipedia )

( ಚಿತ್ರಸೆಲೆ : wikipedia, boomerang.org.au, britannica.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: