ಹಲವು ನಂಬಿಕೆಗಳ ಗುರುತು : ‘ನಗುವ ಬುದ್ದ’

– ಕೆ.ವಿ. ಶಶಿದರ.

laughing buddha, ನಗುವ ಬುದ್ದ

‘ಲಾಪಿಂಗ್ ಬುದ್ದ’ ಅರ‍್ತಾರ‍್ತ್ ‘ನಗುವ ಬುದ್ದ’ ಎಂದೊಡನೆಯ ಡೊಳ್ಳು ಹೊಟ್ಟೆಯ, ನಗು ಮುಕ ಹೊತ್ತು ಕುಳಿತಿರುವ ವ್ಯಕ್ತಿಯ ಚಿತ್ರಣ ಕಣ್ಣ ಮುಂದೆ ಸಹಜವಾಗಿ ಬರುತ್ತದೆ. ಇದು ವಿಶ್ವದಲ್ಲೆಲ್ಲಾ ಕಂಡು ಬರುತ್ತದೆ. ನಗುವ ಬುದ್ದ ಸಾಕಶ್ಟು ದೇಶಗಳಲ್ಲಿ ಜನಪ್ರಿಯವಾಗಿದೆ. ನಗುವ ಬುದ್ದನನ್ನು ಪಾಶ್ಚಿಮಾತ್ಯ ಬೌದ್ದ ಸಮುದಾಯದವರು ಮೈತ್ರೇಯ ಬುದ್ದ ಎಂದೂ ಉಲ್ಲೇಕಿಸುತ್ತಾರೆ. ಅಂದರೆ ‘ಬವಿಶ್ಯದ `ಬುದ್ದ’ ಎಂದು. ಇದು ಅವರ ತಪ್ಪು ಗ್ರಹಿಕೆ. ಈ ತಪ್ಪು ಗ್ರಹಿಕೆ ಮೂಲತಹ ನಗುವ ಬುದ್ದನ ಪ್ರತಿಮೆಗಳಿಂದ ಬಂದಂತೆ ಕಂಡುಬರುತ್ತದೆ. ನಗುವ ಬುದ್ದನ ಪ್ರತ್ರಿಮೆಗಳು ಯಾವಾಗಲೂ ಸುಕ, ಸಂತೋಶ ಮತ್ತು ಸಮ್ರುದ್ದಿಯನ್ನು ಸಂಕೇತಿಸುತ್ತದೆ. ನಗುವ ಬುದ್ದನನ್ನು ಸಾಮಾನ್ಯವಾಗಿ ಹತ್ತನೇ ಶತಮಾನದಲ್ಲಿನ ಚೀನೀ ಬೌದ್ದ ಜಾನಪದ ಕತೆಗಳಲ್ಲಿನ ಚಾನ್ ಬೌದ್ದ ಸಂನ್ಯಾಸಿ ಎಂದು ಕರೆಯಲಾಗುತ್ತದೆ.

ಚೀನೀ ಬೌದ್ದ ಸಂಪ್ರದಾಯದಲ್ಲಿ ನಗುವ ಬುದ್ದನ ಪ್ರತಿಮೆಗಳನ್ನು ನಗುವ ಮತ್ತು ಮುಗುಳ್ನಗುವ ಬುದ್ದನ ಮುಕದ ಸಂಕೇತವಾಗಿ ಚಿತ್ರಿತವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ. ನಗುವ ಬುದ್ದನನ್ನು ಬುಡೈ ಎಂದೂ ಕರೆಯಲಾಗುತ್ತದೆ. ಇದರರ‍್ತವೂ ಸಹ ಸುಕ ಮತ್ತು ಸಂತೋಶದ ಪ್ರತಿನಿದಿ ಎಂದು. ನಗುವ ಬುದ್ದನ ಪ್ರತಿಮೆಯ ದರ‍್ಶನವೇ ಮಾನಸಿಕ ಒತ್ತಡ, ಆರ‍್ತಿಕ ಚಿಂತೆ ಮತ್ತು ಆತಂಕವನ್ನು ಹೋಗಲಾಡಿಸಲು ಅತ್ಯಂತ ಸಹಕಾರಿ ಎಂದು ನಂಬಲಾಗಿದೆ.

ಬುಡೈ ಬುದ್ದ, ಮಕ್ಕಳ ರಕ್ಶಕ

ಚೀನೀ ಬೌದ್ದ ದರ‍್ಮದ ಜಾನಪದ ಕತೆಗಳಂತೆ, ಬುಡೈ ತನ್ನ ಸುತ್ತ ಮುತ್ತಲಿನ ಎಲ್ಲಾ ಜನರಿಗೆ, ಅದರಲ್ಲೂ ವಿಶೇಶವಾಗಿ ಮಕ್ಕಳಿಗೆ ಸಂತೋಶವನ್ನು ತರುತ್ತಾನೆ ಎಂದು ನಂಬಲಾಗಿದೆ. ಬುಡೈ ಪದವು, ನಗುವ ಬುದ್ದ ತನ್ನ ಪ್ರಯಾಣದ ಸಮಯದಲ್ಲಿ ಹೊತ್ತೊಯ್ಯುವ ಗೋಣಿಚೀಲವನ್ನು ಸಂಕೇತಿಸುತ್ತದೆ. ಈ ಗೋಣಿ ಚೀಲದಲ್ಲಿ ಒಳ್ಳೆಯ ವಸ್ತುಗಳು, ಅಂದರೆ ಅದರಲ್ಲಿ ಮಕ್ಕಳು ಇಶ್ಟಪಡುವ ವಿಶೇಶವಾದ ಸಿಹಿ ತಿಂಡಿಗಳು, ಯಾವಾಗಲೂ ತುಂಬಿರುತ್ತವೆ ಎನ್ನುವುದು ಅವರ ನಂಬಿಕೆ. ಹಾಗಾಗಿ ಬುಡೈ ಯವಾಗಲೂ ಮಕ್ಕಳನ್ನು ಸಂತೋಶವಾಗಿಡುವವನು ಮತ್ತು ರಕ್ಶಿಸುವವನು ಎಂಬ ನಂಬಿಕೆ ಇರುವುದರಿಂದ ಇದನ್ನು ಮಕ್ಕಳ ಜೊತೆ ಇರುವಂತೆಯೇ ಚಿತ್ರಿಸಲಾಗುತ್ತದೆ. ಎಲ್ಲಾ ನಗುವ ಬುದ್ದಗಳಂತೆ ಈ ಬುಡೈ ಬುದ್ದನ ಪ್ರತಿಮೆ ಸಹ ಸಂತೋಶ, ಸಂಪತ್ತು ಮತ್ತು ಔದಾರ‍್ಯವನ್ನು ಸಂಕೇತಿಸುತ್ತದೆ ಹಾಗೂ ಬಡ ಮತ್ತು ದುರ‍್ಬಲರ ರಕ್ಶಕರನ್ನು ಪ್ರತಿನಿದಿಸುತ್ತದೆ.

ನಗುವ ಬುದ್ದನಲ್ಲಿ ಅನೇಕ ವಿಬಿನ್ನ ರೂಪಗಳಿವೆ. ನಗುವ ಬುದ್ದರನ್ನು ವಿವಿದ ವಸ್ತುಗಳನ್ನು ಹೊತ್ತೊಯ್ಯುವ ವಿವಿದ ರೂಪಗಳಲ್ಲಿ ಚಿತ್ರಿಸಲಾಗಿದೆ. ಒಂದೊಂದು ರೂಪವು ಒಂದೊಂದು ಅರ‍್ತಗಳನ್ನು ಸಂಕೇತಿಸುತ್ತದೆ. ಇದರೊಂದಿಗೆ ಅವುಗಳನ್ನು ಇರಿಸಿರುವ ಸ್ತಳದ ಮೇಲೆ ಅವಲಂಬಿಸಿ ಸುಕ, ಸಂತೋಶ, ಸಮ್ರುದ್ದಿ ಮತ್ತು ಅದ್ರುಶ್ಟಗಳನ್ನು ತರುತ್ತದೆ ಎಂದು ನಂಬಲಾಗಿದೆ.

ವೂ ಲೂ ಅನ್ನು ಹೊತ್ತಿರುವ ಪ್ರತಿಮೆ

ವೂ ಲೂ ಬುದ್ದನ ಪ್ರತಿಮೆಯು ಉತ್ತಮ ಆರೋಗ್ಯ ಮತ್ತು ದೀರ‍್ಗಾಯುಶ್ಯ ಜೀವನವನ್ನು ಪ್ರತಿನಿದಿಸುತ್ತದೆ. ಬೇರೆಲ್ಲಾ ಬುದ್ದನ ಪ್ರತಿಮೆಯಂತೆ ಇದು ಇಲ್ಲದೆ, ಇದರಲ್ಲಿ ನಿಂತಂತೆ ಕಾಣುವುದೇ ವಿಶೇಶ.

ಗೋಣಿ ಚೀಲ ಹೊತ್ತುಕೊಂಡಿರುವ ಅತವಾ ಕುಳಿತಿರುವ ಪ್ರತಿಮೆ

ಗೋಣಿ ಚೀಲ ಹೊತ್ತ ಈ ಬುದ್ದನ ಪ್ರತಿಮೆ ಮಕ್ಕಳಿಗೆ ಇಶ್ಟವಾದ ತಿನಿಸುಗಳು ಮತ್ತು ಸಿಹಿತಿಂಡಿಗಳನ್ನು ತರುವುದನ್ನು ಸಂಕೇತಿಸುತ್ತದೆ. ಇದೇ ಬುದ್ದ ಚಿನ್ನದ ನಾಣ್ಯದ ಮೇಲೆ ಕುಳಿತಲ್ಲಿ ಅದು ಸಂಪತ್ತು ಮತ್ತು ಸಮ್ರುದ್ದಿಯನ್ನು ಪ್ರತಿನಿದಿಸುತ್ತದೆ.

ಡ್ರ್ಯಾಗನ್ ಆಮೆಯ ಮೇಲೆ ಕುಳಿತಿರುವ ಪ್ರತಿಮೆ

ಡ್ರ್ಯಾಗನ್ ಆಮೆಯ ಮೇಲೆ ಕುಳಿತ ಈ ನಗುವ ಬುದ್ದನ ಪ್ರತಿಮೆ ಉತ್ತಮ ವ್ರುತ್ತಿ ಜೀವನ, ವ್ರುತ್ತಿಜೀವನದಲ್ಲಿ ಸಮ್ರುದ್ದಿ ಮತ್ತು ಉತ್ತಮ ಆದಾಯದ ಸಂಕೇತವಾಗಿದೆ.

ಸುತ್ತುವರೆದ ಮಕ್ಕಳೊಂದಿಗೆ ನಗುವ ಬುದ್ದ

ಈ ನಗುವ ಬುದ್ದನ ಪ್ರತಿಮೆಯು ಕುಟುಂಬ ಕಲ್ಯಾಣವನ್ನು ಪ್ರತಿನಿದಿಸುವದು ಒಂದಾದರೆ, ಇದರ ಮತ್ತೊಂದು ಗುಣವೆಂದರೆ, ಆರೋಗ್ಯವಂತ ಮಗುವನ್ನು ಬಯಸುವ ಕುಟುಂಬವನ್ನು ಪ್ರತಿನಿದಿಸುತ್ತದೆ.

ಚೀನೀ ಬೌದ್ದ ದರ‍್ಮದಲ್ಲಿ, ಚೀನೀಯರ ಪ್ರಮುಕ ಬೌದ್ದ ದೇವಾಲಯಗಳ ಪ್ರವೇಶದ್ವಾರಗಳಲ್ಲಿ ನಗುವ ಬುದ್ದನ ಪ್ರತಿಮೆಗಳನ್ನು ಕಾಣಬಹುದು. ನಗುವ ಬುದ್ದನ ಬಗ್ಗೆ ಒಂದು ಜನಪ್ರಿಯ ಕತೆಯಿದೆ. ಅದು ಬುಡೈ ಬುದ್ದನ ಡೊಳ್ಳು ಹೊಟ್ಟೆಯನ್ನು ಸವರಿದರೆ ಹಾಗೂ ಅದರ ಮೇಲೆ ಕೈ ಉಜ್ಜಿದರೆ ಅದ್ರುಶ್ಟ ಕೂಡಿಬರುತ್ತದೆ ಎಂಬುದು. ಇದು ಬುದ್ದನ ಬೋದನೆಗಳಲ್ಲಿ ಇಲ್ಲದ ವಿಶಯ. ಬದಲಿಗೆ ಇದು ಜಾನಪದ ಸಂಪ್ರದಾಯದ ನಂಬಿಕೆಯಶ್ಟೆ.

( ಮಾಹಿತಿ ಮತ್ತು ಚಿತ್ರ ಸೆಲೆ: burmese-art.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: