ಸ್ವತಂತ್ರ ಸಿದ್ದಲಿಂಗೇಶ್ವರನ ವಚನದಿಂದ ಆಯ್ದ ಸಾಲುಗಳ ಓದು – 2ನೆಯ ಕಂತು

–  ಸಿ.ಪಿ.ನಾಗರಾಜ.

ವಚನಗಳು, Vachanas

ಜ್ಞಾನಿಯ ನಡೆ ನುಡಿ ಅಜ್ಞಾನಿಗೆ ಸೊಗಸದು
ಅಜ್ಞಾನಿಯ ನಡೆ ನುಡಿ ಜ್ಞಾನಿಗೆ ಸೊಗಸದು. (1100/475)

ಜ್ಞಾನಿ=ಒಳಿತು ಕೆಡುಕುಗಳನ್ನು ಒರೆಹಚ್ಚಿ ನೋಡಿ, ಯಾವುದು ಸರಿ-ಯಾವುದು ತಪ್ಪು; ಯಾವುದು ನೀತಿ-ಯಾವುದು ಅನೀತಿ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು ಎಂಬ ವಿವೇಕವುಳ್ಳವನು/ಅರಿವುಳ್ಳವನು/ತಿಳುವಳಿಕೆಯುಳ್ಳವನು; ನಡೆ=ವರ‍್ತನೆ/ನಡವಳಿಕೆ/ನಡತೆ; ನುಡಿ=ಮಾತು/ಸೊಲ್ಲು; ಅಜ್ಞಾನಿ=ತಿಳುವಳಿಕೆಯಿಲ್ಲದವನು/ವಿವೇಕವಿಲ್ಲದನು/ಅರಿವಿಲ್ಲದವನು ; ಸೊಗಸು=ಅಂದ/ಚೆಲುವು/ಸುಂದರವಾಗಿ ಕಾಣು/ಮೆಚ್ಚುಗೆಗೆ ಪಾತ್ರವಾದುದು; ಸೊಗಸದು=ಚೆನ್ನಾಗಿ ಕಾಣುವುದಿಲ್ಲ/ಮೆಚ್ಚುಗೆಯಾಗುವುದಿಲ್ಲ;

ಜೀವನದಲ್ಲಿ ಯಾವುದನ್ನು ಮಾಡಿದರೆ ತನ್ನ ಒಳಿತಿನ ಜತೆಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ ಎಂಬುದನ್ನು ಅರಿತುಕೊಂಡು ಬಾಳುವವನು ವಿವೇಕಿ. ಇಂತಹ ವಿವೇಕವುಳ್ಳ ವ್ಯಕ್ತಿಯ ನಡೆನುಡಿಗಳು ತಿಳಿಗೇಡಿಯಾದವನಿಗೆ ಚೆನ್ನಾಗಿ ಕಾಣುವುದಿಲ್ಲ. ಏಕೆಂದರೆ ತಿಳಿಗೇಡಿಯು ತಾನು ಹಾಳಾಗುವುದಲ್ಲದೆ, ಎಲ್ಲರನ್ನು ಹಾಳುಮಾಡುತ್ತಿರುತ್ತಾನೆ.

ತಿಳಿಗೇಡಿಯ ನಡೆನುಡಿಯಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಉಂಟಾಗುತ್ತಿರುವ ಕೇಡನ್ನು ಕಂಡು ವಿವೇಕಿಯಾದವನು ಆತನಿಂದ ದೂರವಿರುತ್ತಾನೆ.

ಏನನೋದಿ ಏನ ಕೇಳಿದರೇನು
ತಾನಾರೆಂಬುದನರಿಯದನ್ನಕ್ಕ. (1135/479)

ಏನ್+ಅನ್+ಓದಿ; ಏನ್=ಯಾವುದು; ಅನ್=ಅನ್ನು; ಓದಿ=ಬರಹ ರೂಪದಲ್ಲಿರುವುದನ್ನು ನೋಡಿ ತಿಳಿಯುವುದು; ಏನ=ಯಾವುದನ್ನು; ಕೇಳಿದರೆ+ಏನು; ಕೇಳು=ಆಲಿಸು/ಕಿವಿಗೊಡು; ತಾನ್+ಆರ್+ಎಂಬುದನ್+ಅರಿಯದ+ಅನ್ನಕ್ಕ; ತಾನ್=ವ್ಯಕ್ತಿಯು; ಆರ್=ಯಾರು; ಅರಿಯದ=ತಿಳಿಯದ; ಅನ್ನಕ್ಕ=ಆ ತನಕ/ಆ ವರೆಗೆ/ಅಲ್ಲಿಯ ವರೆಗೆ;

ವ್ಯಕ್ತಿಯು ಓದು ಬರಹವನ್ನು ಕಲಿತು, ಒಳ್ಳೆಯ ಮಾತುಗಳನ್ನು ಕೇಳಿ ತಿಳಿದ ಮಾತ್ರಕ್ಕೆ ಅರಿವು ಎಂಬುದು ದೊರಕುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ವ್ಯಕ್ತಿಯು ತಾನು ಯಾರೆಂಬುದನ್ನು ಅರಿತುಕೊಳ್ಳಬೇಕು.

“ ತಾನು ಯಾರು ಎಂಬುದನ್ನು ಅರಿಯುವುದು ” ಎಂದರೆ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಿಸರ‍್ಗದ  ಆಗುಹೋಗು ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟಿದೆ. ಆದ್ದರಿಂದಲೇ ತನ್ನನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಸದಾಕಾಲ ಇದ್ದೇ ಇರುತ್ತವೆ ” ಎಂಬುದನ್ನು ಅರಿತುಕೊಂಡು, ಜೀವನದ ಉದ್ದಕ್ಕೂ ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯವನಾಗಿ ಬಾಳಬೇಕೆಂಬ ಎಚ್ಚರವನ್ನು ಹೊಂದುವುದು . ತಾನು ಸಮಾಜದ ಒಂದು ಕೊಂಡಿ ಎಂಬುದನ್ನು ತಿಳಿದುಕೊಂಡು, ತನ್ನ ಜೀವನದ ಒಳಿತು ಕೆಡುಕು ಸಮಾಜದಲ್ಲಿ ಉಂಟಾಗುವ ಒಳಿತು ಕೆಡುಕನ್ನು ಅವಲಂಬಿಸಿದೆ ಮತ್ತು ಸಮಾಜದೊಡನೆ ನಂಟನ್ನು ಹೊಂದಿದೆ ಎಂಬ ವಾಸ್ತವವನ್ನು ಅರಿತು ಬಾಳುವುದು.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: