ಜಾರಿಬಿದ್ದ ಜಾಣರು!

– ವೆಂಕಟೇಶ ಚಾಗಿ.

ಜಾರಿ ಬೀಳು, slippery

ನಮ್ಮೂರಿಗೂ ಮಳೆಗೂ ಬಿಡಿಸಲಾಗದ ನಂಟು. ಮಳೆಗಾಲ ಶುರು ಆಯಿತೆಂದರೆ ನಮ್ಮೂರಿನಲ್ಲಿ ಜಾರುವ ಹಬ್ಬ ಪ್ರಾರಂಬವಾದಂತೆ. ಈ “ಜಾರುವ ಹಬ್ಬ” ದಲ್ಲಿ ಯಾವ ದೇವರಿಗೂ ಪೂಜೆ ಇರುವುದಿಲ್ಲ, ಬಿಸಿಬಿಸಿ ಕಜ್ಜಾಯನೂ ಇರುವುದಿಲ್ಲ. ಆದರೆ ಮನುಶ್ಯರಿಗೆ ಮಾತ್ರ ಪೂಜೆ , ಪುನಸ್ಕಾರ, ಬಿಸಿಬಿಸಿ ಕಜ್ಜಾಯ ಇರುತ್ತದೆ. ಸಾಮಾನ್ಯವಾಗಿ ನಮ್ಮ ಊರಿನ ಎಲ್ಲರೂ ಪೂಜೆಗೆ ಒಳಗಾದವರೇ! ಎಲ್ಲರೂ ಬಿಸಿಬಿಸಿ ಕಜ್ಜಾಯವನ್ನು ತಿಂದವರೇ. ಚಿಕ್ಕ ಮಕ್ಕಳಂತೂ ಮಳೆಗಾಲ ಹೋಗುವವರೆಗೂ ಪೂಜೆ-ಪುನಸ್ಕಾರ, ಪ್ರಸಾದಗಳಿಂದ ಮುಕ್ತರಾಗುವುದಿಲ್ಲ.

ನಮ್ಮೂರು ಹಳ್ಳಿಯಾದರೂ ಜನಗಳ ಕಾಟದಿಂದ ಗಿಡಮರಗಳು ಬೆಳೆದಿಲ್ಲ. ಆದರೂ ಅಲ್ಲೊಂದು ಇಲ್ಲೊಂದು ಜನರ ಜಗಳದಲ್ಲಿ ಸಿಲುಕಿಕೊಂಡ ಮರಗಳನ್ನು ಕಾಣಬಹುದು. ಸ್ವಲ್ಪ ದಿನ್ನೆಯ ಮೇಲೆ ಇರುವಂತಹ ಊರಿನಲ್ಲಿ ಯಾವುದೇ ಕಾಂಕ್ರೀಟ್ ರಸ್ತೆಗಳು, ಕಲ್ಲಿನ ರಸ್ತೆಗಳು ಇರುವುದಿಲ್ಲ. ಇದಕ್ಕೆಲ್ಲಾ ಕಾರಣ ನಮ್ಮೂರಿನ ಸ್ವಾರ‍್ತಿ, ಅಲ್ಲ ಅಲ್ಲ, ನಿಸ್ವಾರ‍್ತಿ ರಾಜಕಾರಣಿಗಳೇ. ಮಣ್ಣು ತುಂಬಾ ನುಣುಪಾಗಿರುವದರಿಂದ ಮಳೆಗಾಲ ಪ್ರಾರಂಬವಾಗುತ್ತಿದ್ದಂತೆ ಕೆಸರು ಕೆಸರು. ಎಲ್ಲೆಲ್ಲೂ ಕೆಸರೇ ಕೆಸರು. ಜಿಟಿಜಿಟಿ ಮಳೆ ಬೇರೆ. ಆಗಾಗ ಸೂರ‍್ಯನ ಬಿಸಿಲು ಬಿದ್ದರೂ ಈ ಜಿಟಿಜಿಟಿ ಮಳೆಯಿಂದಾಗಿ ಕೆಸರಿಗೆ ಜೀವ ಬರುತ್ತಿತ್ತು.

ಹೀಗೆ ಒಂದು ಸಾರಿ ನಮ್ಮೂರಿನ ರಂಗಣ್ಣ ಬಿಸಿಲು ಬಿದ್ದಿದೆ ಅಂದುಕೊಂಡು ಇಸ್ತ್ರಿ ಮಾಡಿದ ಬಟ್ಟೆ ತೊಟ್ಟುಕೊಂಡು ಟಿಪ್ ಟಾಪ್ ಆಗಿ ಸಿಟಿಗೆ ಹೋಗಲು ರೆಡಿಯಾದ. ಸಿಟಿಗೆ ಹೋಗಿ ಒಂದು ಹೊಸ ಕೊಡೆ ಕೊಂಡು ತರಲು ನಿರ‍್ದರಿಸಿದ್ದ. ಅವನಿಗೆ ಇನ್ನೂ ಕೆಲವರು ಕೊಡೆ ತರಲು ಆರ‍್ಡರ್ ಬೇರೆ ಕೊಟ್ಟಿದ್ದರು. ರಂಗಣ್ಣ ಸಿಟಿಯಿಂದ ಏನೇ ತಂದರೂ ಅದಕ್ಕೆ ಕೊಂಚ ಕಮಿಶನ್ ಪಡೆಯುತ್ತಿದ್ದ. ಅದು ಬೇರೆ ವಿಶಯ. ರಂಗಣ್ಣ ರಸ್ತೆ ಪಕ್ಕ ಬೆಳೆದಿದ್ದ ಹುಲ್ಲಿನ ಮೇಲೆ ಕಾಲಿಡುತ್ತಾ ಊರಿನ ಅಗಸಿ ಬಾಗಿಲ ಬಳಿ ಬಂದಾಗ, ಅಲ್ಲಿನ ಇಳಿಜಾರಿನಲ್ಲಿ ಮೋಸಹೋಗಿ ಸರ‍್ರ್ ಎಂದು ಜಾರಿಬಿದ್ದ. ಬಟ್ಟೆಗಳೆಲ್ಲ ಕೆಸರು ಮೆತ್ತಿಕೊಂಡು ರಂಗಣ್ಣನ ಕೊಡೆ ತರುವ ಯೋಜನೆಗೆ ಮಣ್ಣು ಹಾಕಿತ್ತು. ರಂಗಣ್ಣನ ಪರಿಸ್ತಿತಿ ಕಂಡು ಅಲ್ಲಿದ್ದ ಜನರು ಮುಸಿಮುಸಿ ನಗುತ್ತಿದ್ದರು.

ನಮ್ಮೂರಿನ ಕೆಸರು ಅದೆಶ್ಟು ಜನರಿಗೆ ಗೋಳಿಟ್ಟುಕೊಂಡಿದೆಯೋ ಲೆಕ್ಕವಿಲ್ಲ. ಕೆಸರಿನಲ್ಲಿ ಜಾಗರೂಕತೆಯಿಂದ ನಡೆದಾಡುವುದಾಗಿ ಜಂಬ ಕೊಚ್ಚಿಕೊಳ್ಳುವವರೆಲ್ಲ ಕೆಸರಿಗೆ ಬಲಿಯಾಗದೆ ಇರಲು ಸಾದ್ಯವೇ ಇಲ್ಲ. ನಾವು ಚಿಕ್ಕವರಿದ್ದಾಗ ಜಾರಿಬಿದ್ದ ಪ್ರಸಂಗಗಳಿಗೇನು ಕಡಿಮೆ ಇಲ್ಲ. ಕೆಸರಿನಲ್ಲಿ ಜಾರಿಬಿದ್ದು ಮನೆಗೆ ಬಂದಾಗ ಅಮ್ಮನಿಂದ ಅಬಿಶೇಕ ಅಪ್ಪನಿಂದ ಪೂಜೆ ಪುನಸ್ಕಾರಗಳು ಆಗುತ್ತಿದ್ದವು. ಜೊತೆಗೆ ಪ್ರಸಾದವೂ ದೊರೆಯುತ್ತಿತ್ತು. ಜಾರಿ ಬಿದ್ದ ನೋವು, ಅಪ್ಪನ ಕೈ ಏಟು ಜನ್ಮ ಜನ್ಮದಲ್ಲೂ ಮರೆಯಲಾಗಲ್ಲ. ಒಮ್ಮೆ ಹಬ್ಬ ಎಂದು ಹೊಸಬಟ್ಟೆ ತೊಟ್ಟು ಊರಿನವರಿಗೆಲ್ಲಾ ಶೋ ಕೊಡುವುದಕ್ಕೆ ರಸ್ತೆಗೆ ಕಾಲಿಟ್ಟಾಗ ಕೆಸರು ನನ್ನ ಹೊಸಬಟ್ಟೆಯನ್ನು ಬಲಿತೆಗೆದುಕೊಂಡಿದ್ದು ನನಗಿನ್ನೂ ನೆನಪಿದೆ.

ನಮ್ಮೂರ ಕೆಸರಿಗೆ ಮೇಲು ಕೀಳು, ಜಾತಿ ಗೀತಿ ಯಾವುದು ಗೊತ್ತಿಲ್ಲ. ಅಜಾಗರೂಕತೆಯಿಂದ ನಡೆಯುವವರನ್ನು ಬೀಳಿಸೋದೇ ಅದರ ಕೆಲಸ. ಹೆಂಗಸರು ನೀರು ತರುವುದಕ್ಕೆ ಹೋಗಿ ಕೆಸರಿನಲ್ಲಿ ಜಾರಿಬಿದ್ದ ಗಟನೆಗಳು ಹಲವಾರು. ಒಮ್ಮೆ ನಮ್ಮ ಪಕ್ಕದ ಮನೆ ಶಾಂತಕ್ಕ ತವರುಮನೆಯವರು ಕೊಡಿಸಿದ್ದ ಒಂದಿಶ್ಟು ಗೋಲ್ಡು ಮತ್ತೊಂದಿಶ್ಟು ರೋಲ್ಡ್ ಗೋಲ್ಡ್ ಒಡವೆಗಳನ್ನು ಹಾಕಿಕೊಂಡು, ಯಾವುದೋ ಪಂಕ್ಶನ್ ಗೆ ಹೋಗೋ ರೀತಿಯಲ್ಲಿ ರೆಡಿಯಾಗಿ ಬಾವಿನೀರು ತರಲು ಹೊರಟಳು. ಒಡವೆಗಳನ್ನು ಎಲ್ಲರಿಗೂ ತೋರಿಸುವುದಕ್ಕೆ ಅಕ್ಕಪಕ್ಕದ ಹೆಂಗಸರನ್ನೆಲ್ಲಾ ಬಾವಿ ನೀರು ತರುವುದಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ನಮ್ಮೂರಿನ ಕೆಸರಿಗೆ ಶಾಂತಕ್ಕನ ಕಂಡ್ರೆ ಪ್ರೀತಿ ಬಂತು ಅಂತ ಕಾಣುತ್ತೆ. ಅವಳ ವೈಯಾರ ಕೆಸರಿಗೆ ಇಶ್ಟ ಆಗಲಿಲ್ಲ ಅಂತ ಕಾಣುತ್ತದೆ. ಎತ್ತೆತ್ತಲೋ ನೋಡುತ್ತಾ ತನ್ನ ಗೆಳತಿಯರಿಗೆ ಒಡವೆ ತೋರಿಸುತ್ತಾ ಹೋಗುವಾಗ ಶಾಂತಕ್ಕ, ಕಾಲು ಕೆಳಗೆ ಕೆಸರಿರುವುದನ್ನು ಮರೆತಿದ್ದಳು. ಕೊನೆಗೂ ಬಾವಿ ಬಳಿಯ ಇಳಿಜಾರಿನಲ್ಲಿ ಕೆಸರು ಶಾಂತಕ್ಕಳನ್ನು ಕೆಡವಿ ಹಾಕಿತ್ತು. ಗೆಳತಿಯರು ಮುಸಿ ಮುಸಿ ನಕ್ಕರು. ಮತ್ತೆ ಕೆಲವರು ಜೋರಾಗಿ ನಕ್ಕರು. ಶಾಂತಕ್ಕಳ ಗರ‍್ವಬಂಗವಾಯಿತು!

ಆದರೂ ನಮ್ಮ ಊರಿನ ಜನರಲ್ಲಿ ಕೆಸರಲ್ಲಿ ಜಾಗರೂಕತೆಯಿಂದ ನಡೆಯುವಂತಹ ಪರಿಣಿತರೂ ಇದ್ದಾರೆ. ಅವರು ಈ ಹಿಂದೆ ಹಲವಾರು ಬಾರಿ ಕೆಸರಲ್ಲಿ ಜಾರಿ ಬಿದ್ದ ಜಾಣರೇ, ಈಗ ಜಾಣರಾಗಿದ್ದಾರೆ. ಜಾರಿ ಬಿದ್ದ ಸಂದರ‍್ಬಗಳನ್ನು ರಾಮಾಯಣ ಮಹಾಬಾರತದ ಕತೆಗಳಂತೆ ಹೇಳುವಂತಹ ಪರಿಣಿತರು ಇವರು. ಜಾರಿಬಿದ್ದ ಸಂದರ‍್ಬಗಳ ಸಂಕ್ಯೆಗಳ ಅನುಗುಣವಾಗಿ ಅವರ ಅನುಬವವನ್ನು ತಾಳೆ ಹಾಕುತ್ತಾರೆ. ನಮ್ಮೂರಿನ ರಂಗಣ್ಣನಿಗೆ ಈಗ ಸ್ವಲ್ಪ ವಯಸ್ಸಾಗಿದೆ. ರಂಗಣ್ಣನಿಗೆ ಹೆಚ್ಚು ಅನುಬವ ಆಗಿದೆ ಅಂತ ಜನರೆಲ್ಲ ಮಾತನಾಡಿಕೊಳ್ಳುತ್ತಾರೆ. ಹಲವು ಬಾರಿ ಜಾರಿಬಿದ್ದು ಈಗ ತುಂಬಾ ಜಾಣರಾಗಿದ್ದಾರೆ. ಮಳೆಗಾಲ ಎಲ್ಲರಿಗೂ ಒಂದು ಪಾಟ ಕಲಿಸದೇ ಹೋಗುವುದಿಲ್ಲ. ಗರ‍್ವದಿಂದ ನಡೆಯುವ ಎಲ್ಲರನ್ನೂ ನಮ್ಮೂರ ಕೆಸರು ಕೆಡವಿ ಹಾಕದೇ ಬಿಡುವುದಿಲ್ಲ. ಹಾಗಾಗಿ ಎಲ್ಲರೂ ತಲೆತಗ್ಗಿಸಿ ಜಾಗರೂಕತೆಯಿಂದ ನಡೆಯುತ್ತಿದ್ದಾರೆ. ಕೆಸರಿನ ಬಯದಿಂದಾಗಿ ನಮ್ಮೂರಿನ ಅನೇಕರು ಜಾರಿಬಿದ್ದ ಜಾಣರೇ ಆಗಿದ್ದಾರೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: