ಮಕ್ಕಳ ಕತೆ: ಮನೆಯ ಮಾಲೀಕ ಮತ್ತು ಹಕ್ಕಿಗಳು

– ವೆಂಕಟೇಶ ಚಾಗಿ.

ಅಲ್ಲೊಂದು ಸುಂದರವಾದ ಮನೆ. ಮನೆಯ ಮಾಲೀಕನಿಗೆ ಗಿಡ ಮರಗಳೆಂದರೆ ತುಂಬಾ ಪ್ರೀತಿ. ತನ್ನ ಮನೆಯ ಅಂಗಳದಲ್ಲಿ ಒಂದು ಚಿಕ್ಕ ಉದ್ಯಾನವನವನ್ನು ನಿರ‍್ಮಿಸಿದ್ದ. ಉದ್ಯಾನವನದಲ್ಲಿ ಚಿಕ್ಕ ಚಿಕ್ಕ ಗಿಡಗಳಿದ್ದವು. ಹೂವಿನ ಗಿಡಗಳು, ಬಳ್ಳಿಗಳು, ಚೆಂದದ ಅಲಂಕಾರಿಕ ಗಿಡಗಳು ಹಾಗೆಯೇ ನೆಲದ ಮೇಲೆ ಹಸಿರು ಹುಲ್ಲನ್ನು ಬೆಳೆಸಿದ್ದ. ಗಿಡಗಳಿಗೆ ಪ್ರತಿದಿನ ನೀರು, ಗೊಬ್ಬರ ಹಾಕುತ್ತಿದ್ದ. ಪ್ರತಿದಿನ ತನ್ನ ಉದ್ಯಾನವನ್ನು ಕಂಡು ಸಂತೋಶಪಡುತ್ತಿದ್ದ. ತಾನು ಯಾವುದಾದರೂ ಪರಸ್ತಳಕ್ಕೆ ಹೋದಾಗ ಅಲ್ಲಿ ಹೊಸದೊಂದು ಗಿಡವನ್ನು ಕಂಡರೆ ಅದನ್ನು ಕೊಂಡು ತಂದು ತನ್ನ ಮನೆಯಂಗಳದಲ್ಲಿ ನೆಟ್ಟು ಕುಶಿಪಡುತ್ತಿದ್ದ.

ಒಮ್ಮೆ ಮನೆಯ ಮಾಲೀಕನಿಗೆ ತನ್ನ ಅಂಗಳದಲ್ಲಿ ಒಂದು ಮಾವಿನ ಹಣ್ಣಿನ ಗಿಡವನ್ನು ಬೆಳೆಸಬೇಕೆಂದು ಮನಸ್ಸಾಯಿತು. ಅದಕ್ಕಾಗಿ ಅವನು ತೋಟಗಾರಿಕೆ ಇಲಾಕೆಗೆ ಹೋಗಿ ಹಣಕೊಟ್ಟು ಒಂದು ಮಾವಿನ ಸಸಿಯನ್ನು ತಂದನು. ಇತರ ಗಿಡಗಳಿಗೆ ತೊಂದರೆಯಾಗದಂತೆ ಒಂದು ಸೂಕ್ತವಾದ ಸ್ತಳದಲ್ಲಿ ನೆಟ್ಟು, ಪ್ರತಿದಿನ ಅದಕ್ಕೆ ನೀರು-ಗೊಬ್ಬರ ಹಾಕುತ್ತಾ, ವಿಶೇಶ ಆರೈಕೆ ಮಾಡತೊಡಗಿದ. ಬಿಸಿಲು ಹಾಗೂ ಯತೇಚ್ಚವಾಗಿ ನೀರು-ಗೊಬ್ಬರ ದೊರೆಯುತ್ತಿರುವುದರಿಂದ ಮಾವಿನ ಗಿಡ ಚೆನ್ನಾಗಿ ಬೆಳೆಯಿತು.

ಕೆಲವು ವರ‍್ಶಗಳ ನಂತರ ಮಾವಿನ ಗಿಡ ಬೆಳೆದು ದೊಡ್ಡ ಮರವಾಯಿತು. ಮರದ ಮೇಲೆ ಒಂದೆರಡು ಪಕ್ಶಿಗಳ ಕುಟುಂಬ ಸುಂದರವಾದ ಗೂಡನ್ನು ಕಟ್ಟಿ ವಾಸ ಮಾಡತೊಡಗಿದವು. ಮನೆಯ ಮಾಲೀಕ ಗಿಡದ ಮೇಲೆ ಪಕ್ಶಿಗಳು ಗೂಡನ್ನು ಕಟ್ಟಿರುವುದನ್ನು ಕಂಡು ಸಂತೋಶಗೊಂಡನು. ಪಕ್ಶಿಗಳ ಕಲರವ ಮನೆಯ ಮಾಲೀಕನಿಗೆ ಕಿರಿಕಿರಿ ಎನಿಸಲಿಲ್ಲ. ಸುಂದರವಾದ ತೋಟದಲ್ಲಿ ದೊಡ್ಡದಾಗಿ ಬೆಳೆದ ಮಾವಿನ ಮರವನ್ನು ಕಂಡು ಅವನಿಗೆ ಹೆಮ್ಮೆಯಾಯಿತು.

ದಿನಗಳು ಕಳೆದಂತೆ ಒಂದೆರಡು ಇದ್ದ ಪಕ್ಶಿಗಳ ಕುಟುಂಬ ಬರುಬರುತ್ತ ಹೆಚ್ಚಾಗತೊಡಗಿತು. ಒಗ್ಗಟ್ಟಿನಿಂದ ಬದುಕುವುದನ್ನು ಮರೆತ ಪಕ್ಶಿಗಳು ಪ್ರತಿದಿನ ತಮ್ಮ ಸರಹದ್ದನ್ನು ಹೆಚ್ಚಿಸಲು ತಮ್ಮ ತಮ್ಮಲ್ಲಿಯೇ ಕಚ್ಚಾಡತೊಡಗಿದವು. ತೋಟದ ಶಾಂತಿಯನ್ನು ಹಾಳು ಮಾಡತೊಡಗಿದವು. ಮದುರ ಪಕ್ಶಿಗಳ ಕಲರವ ಕೇಳಿ ಆನಂದ ಪಡುತ್ತಿದ್ದ ಮನೆಯ ಮಾಲೀಕ ಈಗ ಪಕ್ಶಿಗಳ ಜಗಳದಿಂದಾಗಿ ತುಂಬಾ ಕಿರಿಕಿರಿ ಅನುಬವಿಸತೊಡಗಿದ. ತೋಟದಲ್ಲಿ ಹಕ್ಕಿಗಳ ಅಶಾಂತಿಯ ನಡೆ ಮಾಲೀಕನಿಗೆ ಸಿಟ್ಟು ತರಿಸಿತು. ಕೊನೆಗೆ ಒಂದು ದಿನ ಮಾಲೀಕ ಮರದ ಒಂದೆರಡು ರೆಂಬೆಗಳನ್ನು ಬಿಟ್ಟು ಉಳಿದ ಕೊಂಬೆಗಳನ್ನು ಕತ್ತರಿಸಿದ. ಬಹಳಶ್ಟು ಪಕ್ಶಿಗಳು ಗಿಡದಲ್ಲಿ ತಮಗೆ ಜಾಗವಿಲ್ಲವೆಂದು ಬೇರೆ ಕಡೆಗೆ ಹಾರಿಹೋದವು. ತೋಟದಲ್ಲಿ ಮತ್ತೆ ಶಾಂತಿ ಮರಳಿತು. ಕೆಲವೇ ಹಕ್ಕಿಗಳ ಚಿಲಿಪಿಲಿ ನಾದ ಮಾಲೀಕನ ಮನಸ್ಸಿಗೆ ಮುದ ನೀಡಿತು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: