ಕವಿತೆ: ಪರಮ ಪುನೀತೆ ಸೀತೆ

– ಶ್ಯಾಮಲಶ್ರೀ.ಕೆ.ಎಸ್.

ಬೂದೇವಿಯ ಒಡಲೊಳು ಜನಿಸಿ
ಸಚ್ಚಾರಿತ್ರ್ಯೆಯ ಸ್ವರೂಪವಾಗಿ
ಸ್ತ್ರೀ ಕುಲದ ಆದರ‍್ಶ ದೇವತೆಯಾಗಿ ಅವತರಿಸಿದಳು
ಈ ವಸುದಸುತೆ

ಜನಕನ ತನುಜೆ ಜಾನಕಿಯಾಗಿ
ಮಿತಿಲೆಯ ರಾಜಕುವರಿ ಎನಿಸಿ
ಸಜ್ಜನಿಕೆಯ ಸಾಕಾರಮೂರ‍್ತಿಯಾದಳು
ಈ ಮೈತಿಲಿ

ಏಕಪತ್ನೀವ್ರತಸ್ತನ ಕೈಹಿಡಿದ ಮನದರಸಿ
ದಶರತ-ಕೌಸಲ್ಯೆಯ ಸೊಸೆಯಾಗಿ
ಪತಿಯ ವನವಾಸದ ಪಾಲು ಪಡೆದಳು
ಈ ವೈದೇಹಿ

ದಶಾನನನ ಹುನ್ನಾರಕ್ಕೆ ಬಲಿಯಾಗಿ
ಲಂಕೆಯ ಬಂದನದಲ್ಲಿ
ಪತಿಗಾಗಿ ಪರಿತಪಿಸಿದಳು
ಈ ಪತಿವ್ರತೆ

ಸಲ್ಲದ ಆರೋಪಗಳ ಎದುರಿಸಿ
ಅಗ್ನಿ ಪರೀಕ್ಶೆಗೆ ಒಳಗಾಗಿ
ಪರಿಶುದ್ದಳೆನಿಸಿ ಶ್ರೀ ರಾಮನ ಪಟ್ಟದರಸಿಯಾದಳು
ಈ ದಿವ್ಯನಾರಿ

ತನ್ನುದರದಲ್ಲಿ ಪತಿಯ ಪ್ರತಿರೂಪವಡಗಿ
ಬೆಂಬಿಡದ ಪರನಿಂದನೆಗೆ ಸಿಲುಕಿ
ಮತ್ತೆ ಪತಿಯಿಂದ ದೂರವಾಗಲ್ಪಟ್ಟಳು
ಈ ನೀತಿವಂತೆ

ಅವಳಿ ಮಕ್ಕಳಿಗೆ ಜನ್ಮ ನೀಡಿ
ಸುತರ ಶ್ರೇಯಾಬಿವ್ರುದ್ದಿಗಾಗಿ
ಕಣ್ಣೀರನ್ನು ಸಹಿಸಿದಳು
ಈ ಸಹನಾಮೂರ‍್ತಿ

ತನ್ನ ನಿರ‍್ದೋಶಿತನವ ನಿರೂಪಿಸಿ
ವೈಬೋಗವ ನಿರಾಕರಿಸಿ, ಪಾವಿತ್ರ್ಯತೆಯ ಪ್ರತೀಕವಾಗಿ
ಬೂದೇವಿಯಲ್ಲಿ ಐಕ್ಯವಾದಳು
ಈ ಪರಮ ಪುನೀತೆ ಸೀತೆ

(ಚಿತ್ರ ಸೆಲೆ: godsownweb.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: