ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

ಸಿ.ಪಿ.ನಾಗರಾಜ.

ಅಕ್ಕ ಮಹಾದೇವಿ, Akka Mahadevi

ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ
ಭಕ್ತಿಯೆಂಬುದು ಬಾಜಿಗಾರರಾಟ. (332/820)

ವ್ರತ+ನೇಮ+ಎಂಬುದು; ವ್ರತ=ದೇವರನ್ನು ಪೂಜಿಸುವಾಗ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿ ಮಾಡುವ ಆಚರಣೆಗಳು/ನೋಂಪಿ; ನೇಮ=ದೇವರ ಕರುಣೆಗೆ ಪಾತ್ರರಾಗಲು ಮಾಡುವ ಜಪ,ತಪ,ಪೂಜೆ,ಉಪವಾಸ,ಜಾಗರಣೆ ಮುಂತಾದ ನಿಯತವಾದ ಆಚರಣೆ; ಎಂಬುದು=ಎನ್ನುವುದು; ವಂಚನೆ=ಮೋಸ/ಕಪಟ; ಲುಬ್ಧ=ಅತಿಯಾಸೆ/ಹೆಬ್ಬಯಕೆ/ಲೋಭಿ/ಜಿಪುಣ ; ವಾಣಿ=ಮಾತು/ನುಡಿ/ಸೊಲ್ಲು; ಲುಬ್ಧವಾಣಿ=ಅತಿಯಾಸೆಯ ನುಡಿ; ವಂಚನೆಯ ಲುಬ್ಧವಾಣಿ=ಇತರರನ್ನು ವಂಚಿಸಲೆಂದೇ ಆಡುವ ನುಡಿ;

ಭಕ್ತಿ+ಎಂಬುದು; ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಬಾಜಿಗಾರರ+ಆಟ; ಬಾಜಿ=ಜೂಜಿಗೆ ಒಡ್ಡುವ ಹಣ, ಒಡವೆ ವಸ್ತು,ಆಸ್ತಿಪಾಸ್ತಿ; ಬಾಜಿಗಾರ=ಪಣವನ್ನು ಒಡ್ಡಿ ಜೂಜಾಡುವವನು/ಜೂಜುಕೋರ; ಆಟ=ನಟನೆ/ಸೋಗು;

“ವ್ರತ ನೇಮವನ್ನು ಮಾಡುವುದರ ಮೂಲಕ ನಿಮ್ಮ ಜೀವನದಲ್ಲಿ ಎದುರಾಗುವ ಸಂಕಟಗಳನ್ನು ನಿವಾರಿಸಿಕೊಳ್ಳಿರಿ ಹಾಗೂ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಿರಿ“ ಎಂದು ಜನರನ್ನು ಮರುಳುಮಾಡಿ ಹಣವನ್ನು ಸುಲಿಯುವವರ ಮಾತುಗಳು ವಂಚನೆಯ ನುಡಿಗಳಾಗಿವೆ. ಏಕೆಂದರೆ ವ್ಯಕ್ತಿಯ ಬದುಕಿನ ನೋವು ನಲಿವುಗಳಿಗೆ ನಿಸರ‍್ಗದಲ್ಲಿ ನಡೆಯುವ ಕ್ರಿಯೆಗಳು ಮತ್ತು ವ್ಯಕ್ತಿಯ ನಡೆನುಡಿಗಳು ಕಾರಣವೇ ಹೊರತು ದೇವರಲ್ಲ.

ವ್ರತ ನೇಮವನ್ನು ಮಾಡುವವರು ಬಹುತೇಕ ಸನ್ನಿವೇಶಗಳಲ್ಲಿ ಮಡಿ ಮಯ್ಲಿಗೆಯ ಹೆಸರಿನಲ್ಲಿ ಇತರರನ್ನು ಕೀಳಾಗಿ ಕಾಣುತ್ತಾರೆ. ಆಡಳಿತದ ಗದ್ದುಗೆಯನ್ನು ಹಿಡಿಯುವ, ಪಡೆಯುವ, ಉಳಿಸಿಕೊಳ್ಳುವ ಮತ್ತು ಸಂಪತ್ತನ್ನು ಗಳಿಸುವ ದುರಾಸೆಯುಳ್ಳವರಾಗಿರುತ್ತಾರೆ.

ಬೆಲೆಬಾಳುವ ಚಿನ್ನ ಬೆಳ್ಳಿ ವಜ್ರದ ಒಡವೆ ವಸ್ತುಗಳನ್ನು ದೇವರ ವಿಗ್ರಹಕ್ಕೆ ನೀಡುವುದರ ಮೂಲಕ ತಮ್ಮನ್ನು ತಾವು ಇತರರಿಗಿಂತ ದೊಡ್ಡವರೆಂದು ತೋರಿಸಿಕೊಳ್ಳುತ್ತ ಮೆರೆಯುವವರ ಪಾಲಿಗೆ ಬಕುತಿಯೆಂಬುದು ಪಣವನ್ನು ಒಡ್ಡಿ ಆಡುವ ಜೂಜಾಟದಂತಿರುತ್ತದೆ.

ಶಿವಶರಣಶರಣೆಯರ ಪಾಲಿನ ದೇವರು ಕಲ್ಲಿನ, ಮಣ್ಣಿನ, ಮರದ ಇಲ್ಲವೇ ಲೋಹದ ವಿಗ್ರಹವಾಗಿರಲಿಲ್ಲ. ಆದ್ದರಿಂದ ಅವರು ಯಾವುದೇ ಬಗೆಯ ವ್ರತ ನೇಮಕ್ಕಿಂತ ಮಿಗಿಲಾಗಿ ವ್ಯಕ್ತಿಯ ಒಳ್ಳೆಯ ನಡೆನುಡಿಗಳನ್ನು ದೇವರೆಂದು ತಿಳಿದು ಬಾಳುತ್ತಿದ್ದರು.

ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ
ಮರಳಿ ಸದ್ಗುಣವನರಸುವರೆ. (428/830)

ಸ್ನೇಹ+ಇದ್ದ; ಸ್ನೇಹ=ಗೆಳೆತನ/ಒಡನಾಟ; ಠಾವಿನ+ಒಳು; ಠಾವು=ಎಡೆ/ತಾಣ/ಜಾಗ/ನೆಲೆ; ಒಳು=ಅಲ್ಲಿ ; ಠಾವಿನೊಳು=ಜಾಗದಲ್ಲಿ/ತಾಣದಲ್ಲಿ; ದ್ರೋಹ+ಆದ; ದ್ರೋಹ=ವಂಚನೆ/ಮೋಸ; ಬಳಿಕ=ತರುವಾಯ/ಅನಂತರ/ಆಮೇಲೆ; ಮರಳಿ=ತಿರುಗಿ/ಮತ್ತೆ; ಸದ್ಗುಣ+ಅನ್+ಅರಸುವರೆ; ಸದ್ಗುಣ=ಒಳ್ಳೆಯ ನಡೆನುಡಿ; ಅನ್=ಅನ್ನು; ಅರಸು=ಹುಡುಕು/ತಡಕು/ಕಾಣುವುದಕ್ಕೆ ಪ್ರಯತ್ನಿಸು; ಅರಸುವರೆ=ಕಾಣಲು ಆಗುತ್ತದೆಯೆ;

ಒಲವು ನಲಿವು ಹೊಂದಾಣಿಕೆಯಿಂದ ಕೂಡಿದ ಇಬ್ಬರು ವ್ಯಕ್ತಿಗಳ ನಡುವಣ ಗೆಳೆತನದಲ್ಲಿ, ಒಬ್ಬನು ವಂಚನೆಯನ್ನು ಮಾಡಿದರೆ, ನಂಬಿಕೆಗೆ ದ್ರೋಹ ಬಗೆದವನಲ್ಲಿ ಮತ್ತೆ ಒಳ್ಳೆಯ ನಡೆನುಡಿಗಳನ್ನು ಎಂದೆಂದಿಗೂ ಕಾಣಲಾಗದು.

( ಚಿತ್ರಸೆಲೆ : srisailamonline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: