ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್

– .

ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್, Hwacheon Sancheoneo Ice Festival

ದಕ್ಶಿಣ ಕೊರಿಯಾವನ್ನು ಉತ್ತರ ಕೊರಿಯಾದಿಂದ ಬೇರ‍್ಪಡಿಸುವ ವಲಯದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಪ್ರಶಾಂತ ವಾತಾವರಣದ ಪಟ್ಟಣ ಹ್ವಾಚಿಯೋನ್. ಈ ಪಟ್ಟಣದ ಪ್ರದೇಶ ಚಳಿಗಾಲದಲ್ಲಿ, ಇಡೀ ಕೊರಿಯಾದಲ್ಲೇ, ಮೊದಲು ನೀರು ಹೆಪ್ಪುಗಟ್ಟುವ ಸ್ತಳಗಳಲ್ಲಿ ಒಂದಾಗಿದೆ. ಇದರ ಬಳಿ ಹರಿಯುವ ಬುಕಂಗಾಂಗ್ ನದಿಯ ನೀರಿನ ಮೇಲಿನ ಪದರ ದಪ್ಪನೆಯ ಮಂಜುಗಡ್ಡೆಯಿಂದ ಆವ್ರುತವಾಗುತ್ತದೆ. ಈ ನೈಸರ‍್ಗಿಕ ಬದಲಾವಣೆಯನ್ನು ಸ್ವಾಗತಿಸಲು ಐಸ್ ಪೆಸ್ಟಿವಲ್ ಅನ್ನು ನಡೆಸುತ್ತಾರೆ. ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್ ದಕ್ಶಿಣ ಕೊರಿಯಾದ ಪ್ರಸಿದ್ದ ಹಾಗೂ ದೊಡ್ಡ ಉತ್ಸವಗಳಲ್ಲಿ ಒಂದು. ಇಲ್ಲಿ ಪ್ರತಿ ವರುಶ ಜನವರಿ ತಿಂಗಳಿನಲ್ಲಿ ಲಕ್ಶಾಂತರ ಜನ ಸೇರುತ್ತಾರೆ.

ಈ ಉತ್ಸವದ ಅತ್ಯಂತ ಜನಪ್ರಿಯ ಚಟುವಟಿಕೆ ‘ಐಸ್ ಪಿಶಿಂಗ್’. ಸಾಂಚಿನಿಯೋಗೆ ಬರುವ ವೀಕ್ಶಕರಿಗೆ ಮೂರು ರೀತಿಯಲ್ಲಿ ಮೀನನ್ನು ಹಿಡಿಯುವ ಅವಕಾಶ ಕಲ್ಪಿಸಲಾಗಿದೆ. ಮಂಜುಗಡ್ಡೆಯ ಪದರದ ಒಳಗೆ ಕೈ ಹಾಕಿ ತಣ್ಣಗಿನ ನೀರಿನಲ್ಲಿರುವ ಮೀನನ್ನು ಹಿಡಿದು ಹೊರತೆಗೆಯುವುದು ಒಂದು ಬಗೆಯಾದರೆ ಹರಿಯುವ ನೀರಿನಲ್ಲಿನ ಮೀನುಗಳಿಗೆ ಆಮಿಶವೊಡ್ಡಿ ಅವುಗಳನ್ನು ಹಿಡಿಯುವುದು ಇನ್ನೊಂದು. ಕೊಳದಲ್ಲಿರುವ ಮೀನನ್ನು ಯಾವುದೇ ಪರಿಕರ ಬಳಸದೆ ಬರೀ ಕೈಯಲ್ಲಿ ಹಿಡಿಯುವ ಮೂಲಕ ಇಲ್ಲಿಗೆ ಬರುವ ಸುತ್ತಾಡುಗರು ಮಜಾ ಅನುಬವಿಸುತ್ತಾರೆ. ಪಕ್ಕದಲ್ಲೇ ಇರುವ ಆಹಾರ ಕೇಂದ್ರಗಳಲ್ಲಿ ಕೊಂಚ ಶುಲ್ಕ ಪಡೆದು ಇಲ್ಲಿ ಹಿಡಿದ ಮೀನನ್ನು ಹೋಳಾಗಿ ಕತ್ತರಿಸಿ ಇಲ್ಲವೇ ಹುರಿದು ಸವಿಯಲು ತಯಾರಿಸಿ ನೀಡುತ್ತಾರೆ.

ಯಾವುದೇ ಪರಿಕರವನ್ನು ಬಳಸದೆ ಮೀನು ಹಿಡಿಯುವುದು ಅತ್ಯಂತ ರೋಮಾಂಚಕಾರಿ ಚಟುವಟಿಕೆ. ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸ್ತಳದಲ್ಲೇ ನೋಂದಣಿ ಮಾಡಬಹುದು. ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಒಂದೊಂದು ಉತ್ಸವದ ‘ಟಿ’ ಶರ‍್ಟ್ ಮತ್ತು ಚಡ್ಡಿಗಳನ್ನು ಕೊಡಲಾಗುತ್ತದೆ. ಅದನ್ನು ದರಿಸಿ ನೀರಿಗೆ ಇಳಿಯಬೇಕು. ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಬೇರೆಯದೇ ಸರಳ ಹಾಗೂ ಪ್ರತ್ಯೇಕ ಚಟುವಟಿಕೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ. ತಣ್ಣಗಿನ ನೀರಿನಲ್ಲಿ ನಡೆಯುವ ಈ ಚಟುವಟಿಕೆಯ ನಂತರ, ಮರಗಟ್ಟಿದ್ದ ಕಾಲು ಕೈಗಳನ್ನು, ಬಿಸಿ ನೀರಿನಲ್ಲಿ ಮುಳುಗಿಸಿ ಮಾಮೂಲಿ ಉಶ್ಣತೆಗೆ ತರಲು ಅಯೋಜಕರು ಇಲ್ಲಿನ ಪ್ರಾಂಗಣದಲ್ಲಿ ಅವಕಾಶ ಕಲ್ಪಿಸಿದ್ದಾರೆ.

ಈ ಸವಾಲನ್ನು ಸ್ವೀಕರಿಸಲು ಇಶ್ಟವಿಲ್ಲದಿದ್ದಲ್ಲಿ, ಹ್ವಾಚಿಯೋನ್ ಹೊಳೆಯಲ್ಲಿ ಐಸ್ ಮೀನುಗಾರಿಕೆಯನ್ನು ಆನಂದಿಸಬಹುದು. ಇದು ಉತ್ಸವದ ಅತ್ಯಂತ ಪ್ರಮುಕ ಆಕರ‍್ಶಣೆ. ಇಲ್ಲಿನ ಐಸ್ ಕಡಿಮೆಯೆಂದರೂ ಮೂವತ್ತು ಸೆಂಟಿಮೀಟರ್ ದಪ್ಪವಿರುತ್ತದೆ. ಬೇರೆ ದೇಶಗಳಿಂದ ಬರುವ ಮಂದಿಯ ಸಲುವಾಗಿ ಈ ಉತ್ಸವದಲ್ಲಿ ಬೇರೆ ಸ್ತಳದಲ್ಲಿ ದಪ್ಪನೆಯ ಐಸ್ ತಯಾರಿಸಿ ಅವರನ್ನು ಆಕರ‍್ಶಿಸುವ ಪರಿಪಾಟ ಸಹ ಇದೆ.

ಹಿಮ(snow) ಮತ್ತು ಮಂಜಿನ ಚಟುವಟಿಕೆಗಳು ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್‍ನ ಮತ್ತೊಂದು ಪ್ರಮುಕ ಆಕರ‍್ಶಣೆ. ಬೆಟ್ಟದ ಇಳಿಜಾರಿನಲ್ಲಿ ಹಿಮದ ಮೇಲೆ ವೇಗವಾಗಿ ಜಾರುವುದು ಯುವಜನತೆಯಲ್ಲಿ ಬಹು ದೊಡ್ಡ ಆಕರ‍್ಶಣೆಯಾಗಿದೆ. ಕ್ರೀಡಾ ಉತ್ಸಾಹಿಗಳು ಮತ್ತು ಕ್ರೀಡೆಯಲ್ಲಿ ಸಕ್ರಿಯವಾಗಿ ಇರುವವರು ಇಲ್ಲಿ ಐಸ್ ಸಾಕರ್, ಐಸ್ ಹಾಕಿ, ಕರ‍್ಲಿಂಗ್ ಇನ್ನೂ ಅನೇಕ ಚಳಿಗಾಲದ ಕ್ರೀಡೆಗಳನ್ನು ಆಡಿ ನಲಿಯುತ್ತಾರೆ.

ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್‍ನ ಉತ್ಸಾಹವನ್ನು ಇಡೀ ಪಟ್ಟಣದಾದ್ಯಂತವೂ ಕಾಣಬಹುದು. ಕಾಗದದ ಮತ್ತು ಎಲ್‍ಇಡಿಯ ಸುಂದರವಾದ ಅಲಂಕಾರಿಕ ಲಾಟೀನುಗಳನ್ನು ಬಳಸಿ ಬೀದಿಗಳನ್ನು ಅಲಂಕರಿಸಲಾಗಿರುತ್ತದೆ. ಇದಲ್ಲದೆ ಪಟ್ಟಣದಲ್ಲಿ ದೊಡ್ಡ ಪ್ರಮಾಣದ ಐಸ್‍ನಲ್ಲಿ ಕೆತ್ತಲಾದ ಶಿಲ್ಪಗಳನ್ನು ಐಸ್ ಪ್ಲಾಜಾಗಳಲ್ಲಿ ಪ್ರದರ‍್ಶನಕ್ಕೆ ಇಡುತ್ತಾರೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವವರು ಕೊರಿಯಾದ ಸಾಂಪ್ರದಾಯಿಕ ಜಾನಪದ ಆಟಗಳ ಮಜಾ ಪಡೆಯಬಹುದು. ಪ್ರವಾಸಿಗರಿಗೆ ಪೋಟೋ ವಲಯ ಬಹಳ ಮೆಚ್ಚಿನ ಪ್ರದೇಶ. ತಮಗಿಶ್ಟವಾದ ಐಸ್ ಕೆತ್ತನೆಗಳ ಮುಂದೆ ವಿವಿದ ಬಂಗಿಯಲ್ಲಿ ನಿಂತು ಪೋಟೋ ಕ್ಲಿಕ್ಕಿಸಿಕೊಳ್ಳಬಹುದು.

ಉತ್ಸವದ ಮೈದಾನ ಹಾಗೂ ರೆಸ್ಟೋರೆಂಟುಗಳಲ್ಲಿ ಹುರಿದ ಹಾಗೂ ಕಚ್ಚಾ ಮೀನುಗಳು ಹೇರಳವಾಗಿ ಸಿಗುತ್ತವೆ. ಇದರ ಜೊತೆಗೆ ಟ್ಟೆಕ್ಬೊಕ್ಕಿ(ಹುರಿದ ಅಕ್ಕಿಯಲ್ಲಿ ಮಾಡಿದ) ಮೀನಿನ ಕೇಕ್ ಮತ್ತು ಹಲವು ಸ್ತಳೀಯ ತಿಂಡಿಗಳನ್ನು ಸವಿಯಬಹುದು.

(ಮಾಹಿತಿ ಮತ್ತು ಚಿತ್ರ ಸೆಲೆ: visitkorea.or.kr)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: