ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

ಸಿ.ಪಿ.ನಾಗರಾಜ.

ಅಕ್ಕ ಮಹಾದೇವಿ, Akka Mahadevi

ಹಾಡಿದಡೇನು ಕೇಳಿದಡೇನು
ತನ್ನಲುಳ್ಳ ಅವಗುಣ ಬಿಡದನ್ನಕ್ಕ. (180/804)

ಹಾಡಿದಡೆ+ಏನು; ಹಾಡು=ಕೊರಳಿನಿಂದ ಇಂಪಾದ ದನಿಯಲ್ಲಿ ರಾಗಮಯವಾಗಿ ಕಾವ್ಯವನ್ನು/ವಚನವನ್ನು/ಸಾಹಿತ್ಯದ ಸಾಲುಗಳನ್ನು ಉಚ್ಚರಿಸುವುದು; ಹಾಡಿದಡೆ=ಹಾಡಿದರೆ; ಏನು=ಯಾವುದು; ಕೇಳಿದಡೆ+ಏನು; ಕೇಳು=ಆಲಿಸು; ಕೇಳಿದಡೆ=ಕೇಳಿದರೆ ;

ತನ್ನ+ಅಲ್+ಉಳ್ಳ; ತನ್ನಲ್=ತನ್ನಲ್ಲಿ; ಉಳ್ಳ=ಇರುವ; ತನ್ನಲುಳ್ಳ=ತನ್ನಲ್ಲಿರುವ; ಅವಗುಣ=ಕೆಟ್ಟ ನಡೆನುಡಿ; ಬಿಡದ+ಅನ್ನಕ್ಕ; ಬಿಡು=ತೊರೆ/ತ್ಯಜಿಸು; ಅನ್ನಕ್ಕ=ವರೆಗೆ/ತನಕ; ಬಿಡದನ್ನಕ್ಕ=ಬಿಡದ ಹೊರತು/ತೊರೆಯದಿದ್ದರೆ;

ವ್ಯಕ್ತಿಯು ತನ್ನಲ್ಲಿರುವ ಕೆಟ್ಟ ನಡೆನುಡಿಗಳನ್ನು ಬಿಡದೆ ಸತ್ಯ ನೀತಿ ನ್ಯಾಯದ ಸಂಗತಿಗಳನ್ನು ತಿಳಿಸುವ ವಚನವನ್ನಾಗಲಿ ಇಲ್ಲವೇ ಕಾವ್ಯವನ್ನಾಗಲಿ ಹಾಡುವುದರಿಂದ, ಓದುವುದರಿಂದ, ಕೇಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ನಿತ್ಯಜೀವನದಲ್ಲಿ ವ್ಯಕ್ತಿಯು ಒಳ್ಳೆಯ ನಡೆನುಡಿಗಳಿಂದ ಬಾಳುವುದು ಎಲ್ಲಕ್ಕಿಂತ ದೊಡ್ಡದು.

ಹುಸಿಯನಾಡಿ ಲಿಂಗವ ಪೂಜಿಸಿದಡೆ
ಹೊಳ್ಳ ಬಿತ್ತಿ ಫಲವನರಸುವಂತೆ. (384/826)

ಹುಸಿ+ಅನ್+ಆಡಿ; ಹುಸಿ=ಸುಳ್ಳು/ಸಟೆ; ಅನ್=ಅನ್ನು; ಆಡು=ನುಡಿ/ಹೇಳು; ಲಿಂಗ=ಶಿವನ ವಿಗ್ರಹ/ದೇವರು; ಪೂಜೆ=ದೇವರ ವಿಗ್ರಹದ ಮುಂದೆ ಹೂವು ಹಣ್ಣನ್ನು ಸಲ್ಲಿಸಿ ದೂಪವನ್ನು ಹಾಕಿ, ದೀಪವನ್ನು ಬೆಳಗಿಸಿ , ಕಯ್ ಮುಗಿದು ಅಡ್ಡಬೀಳುವ ಆಚರಣೆ; ಪೂಜಿಸದಡೆ=ಪೂಜಿಸಿದರೆ;

ಹೊಳ್ಳು=ತಿರುಳಿಲ್ಲದ ಕಾಳು/ಜಳ್ಳು/ಒಳಗೆ ಗಟ್ಟಿಯಾದ ಬೀಜವಿಲ್ಲದ ಕಾಳು; ಬಿತ್ತು=ಬೆಳೆಯನ್ನು ಪಡೆಯಲೆಂದು ಮಣ್ಣಿನಲ್ಲಿ ಬೀಜವನ್ನು ಹಾಕುವುದು; ಫಲ+ಅನ್+ಅರಸು+ಅಂತೆ; ಫಲ=ಬೆಳೆ; ಅರಸು=ಹುಡುಕು/ತಡಕು/ಬಯಸು; ಅಂತೆ=ಹಾಗೆ/ಆ ರೀತಿ;

ಜಳ್ಳು ಕಾಳನ್ನು ಹೊಲ ಗದ್ದೆಗಳಲ್ಲಿ ಬಿತ್ತಿದವನು ಬೆಳೆಯನ್ನು/ಪಸಲನ್ನು ಕಾಣಲು ಆಗುವುದಿಲ್ಲ. ಏಕೆಂದರೆ ಜಳ್ಳು ಕಾಳು ಮೊಳಕೆಯೊಡೆದು ಸಸಿಯಾಗುವುದಿಲ್ಲ. ಅಂತೆಯೇ ಸುಳ್ಳನ್ನು ಹೇಳುವ ವ್ಯಕ್ತಿಯು ಮಾಡುವ ಶಿವಪೂಜೆಯಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ದೇವರು ಒಲಿಯುವುದು ಇಲ್ಲವೇ ಮೆಚ್ಚಿಕೊಳ್ಳುವುದು ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವ ವ್ಯಕ್ತಿಗಳನ್ನು ಮಾತ್ರ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು.

( ಚಿತ್ರಸೆಲೆ : srisailamonline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: