ನನ್ನ ತಟ್ಟೆ…

ಸಂಜೀವ್ ಹೆಚ್. ಎಸ್.

ಊಟದ ತಟ್ಟೆ, Meals Plate

“ಶರೀರ ಮಾದ್ಯಮ ಕಲು ದರ‍್ಮ ಸಾದನಂ”; ಯಾವುದೇ ರೀತಿಯ ದರ‍್ಮ ಹಾಗೂ ಕರ‍್ಮ ಸಾದನೆಗೆ ಶರೀರ ಅತ್ಯಗತ್ಯ. ಒಳ್ಳೆಯ ಶರೀರ ಹೊಂದಲು ಉತ್ತಮ ಗುಣ ಪ್ರಮಾಣದ ಆಹಾರ ಸೇವನೆ ಅವಶ್ಯಕ. ಇಂದಿನ ಬಿಡುವಿಲ್ಲದ ಜೀವನಶೈಲಿಯಲ್ಲಿ ಜನರು ತಮ್ಮ ಆಹಾರ ಹಾಗೂ ಆರೋಗ್ಯದ ವಿಚಾರವನ್ನು ನಿರ‍್ಲಕ್ಶಿಸುತ್ತಿರುವುದು ವಿಶಾದದ ಸಂಗತಿ. ಈ ಅಸಮತೋಲನ ಆಹಾರ ಸೇವನೆ ಪದ್ದತಿಯಿಂದ ಇಂದು ಆರೋಗ್ಯ ಏರುಪೇರಾಗದಿದ್ದರೂ, ಪರೋಕ್ಶವಾಗಿ ಬವಿಶ್ಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಅಕ್ಶರಶಹ ಸತ್ಯ. ಹೀಗಿರುವಾಗ, ಅನಾಹುತಗಳಿಗೆ ಆಹ್ವಾನ ನೀಡುವ ಬದಲು ನಮ್ಮ ಆಹಾರ ಪದ್ದತಿಯ ಶೈಲಿಯನ್ನು ಕೊಂಚ ಬದಲಾಯಿಸಿಕೊಳ್ಳುವುದು ಉತ್ತಮ ಪರ‍್ಯಾಯವಲ್ಲವೇ?

ಹಲವರು ಶೀರ‍್ಶಿಕೆಯನ್ನು ನೋಡಿ ಗೊಂದಲಕ್ಕೆ ಒಳಗಾಗಿರಬಹುದು; “ನನ್ನ ತಟ್ಟೆ”! – ಇದೇನಿದು ಹೀಗಿದೆ ಎಂದು. ಆದರೆ ಇದರ ಒಳಾರ‍್ತವಿಶ್ಟೇ – ಉತ್ತಮ ಆರೋಗ್ಯಕ್ಕೆ ನನ್ನ ತಟ್ಟೆಯಲ್ಲಿ ಏನೇನು ಪದಾರ‍್ತ ಎಶ್ಟರ ಮಟ್ಟಿಗೆ ಇರಬೇಕು? ಹಾಗೂ ಅದರಿಂದ ಉಂಟಾಗುವ ಉಪಯೋಗ ಹಾಗೂ ಪರಿಣಾಮಗಳೇನು ಎಂದು.

ಇಂದು ಹಲವರು, ತಿನ್ನುವುದು ಹಸಿವು ನೀಗಿಸಲೆಂದುಕೊಂಡಿದ್ದಾರೆ. ಇನ್ನು ಕೆಲವರು  ತಿನ್ನುವ ವಸ್ತುಗಳಲ್ಲೂ ಆಡಂಬರ/ಶ್ರೀಮಂತಿಕೆ ಅಳೆಯುತ್ತಾರೆ. ಆದರೆ ಇದಾವುದೂ ಸಮಂಜಸವಾದ ಸಂಗತಿ ಅಲ್ಲ. ಆಹಾರ ವಿಗ್ನಾನದ ಪ್ರಕಾರ ನಾವು ತಿನ್ನುವ ಆಹಾರ ನಮ್ಮ ದೈಹಿಕ, ಮಾನಸಿಕ, ಬೌದ್ದಿಕ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ಶರೀರಕ್ಕೆ ನೀಡುವ ಒಂದು ಬಗೆಯ ಉತ್ತಮ ರಸಗೊಬ್ಬರವಿದ್ದಂತೆ. ಈ ರಸಗೊಬ್ಬರವನ್ನು ಹಿತವಾಗಿ ಹಾಗೂ ಮಿತವಾಗಿ ಸ್ವೀಕರಿಸುವ ಅಬ್ಯಾಸ ನಾವು ರೂಡಿಸಿಕೊಂಡಲ್ಲಿ ಪಲವತ್ತಾದ  ಶಾರೀರಿಕ ಇಳುವರಿ ಪಡೆಯಬಹುದು.

ಇಂಡಿಯನ್ ಕೌನ್ಸಿಲ್ ಪಾರ‍್ ಮೆಡಿಕಲ್ ರೀಸರ‍್ಚ್ [ ICMR] ಪ್ರಕಾರ ಆಹಾರವನ್ನು ಮುಕ್ಯವಾಗಿ ನಾಲ್ಕು ವಿಬಾಗವಾಗಿ ವಿಂಗಡಿಸಲಾಗಿದೆ. ಈ ವಿಂಗಡಣೆಯ ಪ್ರಕಾರ; ದವಸ ದಾನ್ಯಗಳು, ಹಾಲು ಮತ್ತು ಮಾಂಸ ಪದಾರ‍್ತಗಳು, ಹಣ್ಣು ಮತ್ತು ತರಕಾರಿ, ಸಿಹಿ ಮತ್ತು ತೈಲ ಪದಾರ‍್ತ. ಹಾಗಾಗಿ “ನನ್ನ ತಟ್ಟೆ”ಯು ಈ ಮೇಲಿನ ಎಲ್ಲಾ ಪದಾರ‍್ತಗಳನ್ನು ಒಳಗೊಂಡಿರಬೇಕು, ಎಲ್ಲವೂ ಸಮತೋಲಿತವಾಗಿರಬೇಕು. ಆಯಾಯ ಪದಾರ‍್ತಗಳು ಅದರದೇ ಆದ ಕೆಲಸ ಮಾಡುತ್ತ ಆರೋಗ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತವೆ.

ಸಾಮಾನ್ಯವಾಗಿ ಎಲ್ಲರ ತಟ್ಟೆಯೂ ಈ ಮೇಲಿನ ಪದಾರ‍್ತಗಳನ್ನು ಒಳಗೊಂಡಿರುತ್ತದೆ ನಿಜ, ಆದರೆ ತಿನ್ನುವ ಪ್ರಮಾಣದಲ್ಲಿ ಏರುಪೇರಾಗಿರುತ್ತದೆ. ಹಾಗಿದ್ದಾಗ ಆಹಾರಬ್ಯಾಸವನ್ನು ಸರಿದೂಗಿಸಿಕೊಳ್ಳಬೇಕು. ನಮ್ಮ ಆಹಾರ ಸೇವನೆಯಲ್ಲಿ, ದವಸ ದಾನ್ಯಗಳ ಸಂಕ್ಯೆ ಸಮರ‍್ಪಕವಾಗಿರಬೇಕು. ಹಣ್ಣು ಮತ್ತು ತರಕಾರಿಗಳ ಸೇವನೆ ದಾರಾಳವಾಗಿರಬೇಕು. ಮಾಂಸದ ಅಂಶ ಮದ್ಯಮವಾಗಿರಬೇಕು. ತೈಲ ಮತ್ತು ಸಿಹಿಯ ಸೇವನೆ ಮಿತವಾಗಿರಬೇಕು. ಇದನ್ನು ನಮ್ಮ ಆಹಾರದ ಪಿರಮಿಡ್ ಎನ್ನಬಹುದು.

ಮುಕ್ಯವಾಗಿ ಮೂರು ಕೆಲಸಗಳಲ್ಲಿ ಆಹಾರದ ವಿಶೇಶ ಪಾತ್ರವಿದೆ; *ಶಕ್ತಿ ಸ್ತಾಪನೆ *ದೇಹ ನಿರ‍್ಮಾಣ *ಶರೀರ ರಕ್ಶಣೆ, ಪೋಶಣೆ ಮತ್ತು ನಿಯಂತ್ರಣ*. ಶಕ್ತಿ ಪಡೆದುಕೊಳ್ಳಲು ನಾವು ಕಾರ‍್ಬೋಹೈಡ್ರೇಟ್ ಪದಾರ‍್ತಗಳನ್ನು ಹಾಗೂ ಮಿತಿಯಾಗಿ ಪ್ರೊಟೀನ್ ಪದಾರ‍್ತಗಳನ್ನು ಸೇವಿಸಬೇಕು. ದವಸದಾನ್ಯ, ಸಿರಿದಾನ್ಯ, ಎಣ್ಣೆ ಬೀಜಗಳು, ಗೆಡ್ಡೆ ಗೆಣಸು ಹಾಗೆಯೇ ಸಿಹಿ ಮತ್ತು ಕೊಬ್ಬಿನ ಉತ್ಪನ್ನ ಇವುಗಳು ಕಾರ‍್ಬೋಹೈಡ್ರೇಟ್ ಅಂಶ ಒಳಗೊಂಡಿರುವ ಆಹಾರ ವಸ್ತುಗಳು. ಇವುಗಳು ಶರೀರದ ಅಗತ್ಯಕ್ಕೆ ಬೇಕಾಗುವಶ್ಟು ಶಕ್ತಿಯನ್ನು ಒದಗಿಸುತ್ತದೆ. ಹಾಗೆಯೇ ಮಿಕ್ಕಿರುವ ಅಂಶವು ಕೊಬ್ಬಾಗಿ ಪರಿವರ‍್ತನೆಯಾಗಿ ನಮ್ಮ ಅಡಿಪೋಸ್ ಅಂಗಾಂಶದಲ್ಲಿ ಸೇರುತ್ತದೆ. ಆದ್ದರಿಂದ ನಮ್ಮ ಅಗತ್ಯಕ್ಕೆ ಮೀರಿ ಈ ಕಾರ‍್ಬೋಹೈಡ್ರೇಟ್  ಪದಾರ‍್ತವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮವಲ್ಲ. ಮುಕ್ಯವಾಗಿ ಸಿಹಿ – ಸಕ್ಕರೆ ವಸ್ತುಗಳನ್ನು ಕೊಂಚ ಪ್ರಮಾಣದಲ್ಲಿ ಉಪಯೋಗಿಸಿದಶ್ಟೂ ಒಳಿತು. ಯಾಕೆಂದರೆ, ಸಿಹಿ ತಿನಿಸುಗಳು ನಮಗೆ ಕಾಲಿ ಕ್ಯಾಲೊರಿಗಳನ್ನು [empty calories] ನೀಡುತ್ತದೆ. ಅಂದರೆ, ಇದರಿಂದ ನಮಗೆ ಕೇವಲ ತಕ್ಕ ಮಟ್ಟಿನ ಶಕ್ತಿ ಸಿಗಬಹುದೇ ಹೊರತು ಯಾವುದೇ ರೀತಿಯ ಪೋಶಕಾಂಶ ದೊರಕುವುದಿಲ್ಲ. ಹಾಗಾಗಿ ವಿಪರೀತ ಸಕ್ಕರೆ ಸೇವನೆ ಬೊಜ್ಜಿಗೆ ದಾರಿ ಮಾಡಿಕೊಡುತ್ತದೆ.

ದೇಹ ಗಟ್ಟಿಯಾಗಿರಲು, ಪ್ರೋಟಿನ್ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸ್ವೀಕರಿಸಬೇಕು. ಇದರಲ್ಲಿ ಮುಕ್ಯವಾಗಿ ಹಾಲು, ಮೊಟ್ಟೆ, ಮೀನು-ಮಾಂಸ, ಒಣ ಹಣ್ಣು ಹಾಗೂ ಸಿರಿದಾನ್ಯಗಳು. ಇವುಗಳು ಜೈವಿಕ ಮೌಲ್ಯ ಅತಿಯಾಗಿರುವ ಪ್ರೋಟಿನ್ ಅಂಶವನ್ನು ಹಾಗೂ ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿದ್ದು, ದೇಹದ ಅಂಗಾಂಶ ಬೆಳವಣಿಗೆಗೆ ಪೂರಕವಾದ ಪೋಶಕಾಂಶಗಳನ್ನು ಒದಗಿಸುತ್ತವೆ.

ಇನ್ನುಳಿದಿರುವ ಶರೀರಿದ ರಕ್ಶಣೆ ಪೋಶಣೆ ಮತ್ತು ನಿಯಂತ್ರಣ ಕೆಲಸವನ್ನು ಜೀವಸತ್ವ ಹಾಗೂ ಕನಿಜಾಂಶ [ ವಿಟಮಿನ್ಸ್ ಹಾಗೂ ಮಿನರಲ್ಸ್ ] ಅಂಶ ಹೊಂದಿರುವ ಆಹಾರ ಉತ್ಪನ್ನಗಳು ನೆರವೇರಿಸುತ್ತವೆ. ಹಣ್ಣು ಹಂಪಲು, ಸೊಪ್ಪು, ತರಕಾರಿ ಪದಾರ‍್ತಗಳು ಈ ಕಾರ‍್ಯವನ್ನು ನಿರ‍್ವಹಿಸುತ್ತವೆ. ಮುಕ್ಯವಾಗಿ ಎದೆಬಡಿತ ನಿರ‍್ವಹಣೆ, ನೀರಿನ ಸಮತೋಲನೆ, ಉಶ್ಣತೆ ನಿರ‍್ವಹಣೆ – ಈ ರೀತಿಯಲ್ಲಿ ದೇಹವನ್ನು ಸಕ್ರಿಯವಾಗಿರಿಸಲು ಸಹಕರಿಸುತ್ತದೆ.

ಇದು ಆಹಾರ ವಿಗ್ನಾನದ ಆದಾರದ ಮೇಲೆ ರಚಿಸಲ್ಪಟ್ಟ “ನನ್ನ ತಟ್ಟೆ” ಪರಿಕಲ್ಪನೆ. ಮಕ್ಕಳಿಗೆ ಚಿಕ್ಕಂದಿನಲ್ಲೇ ಈ ಕುರಿತು ತಿಳಿಸಿದರೆ, ಮಕ್ಕಳು ಅವರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಬಹುದು. ಬಿಡುವಿರದ ಇಂದಿನ ಜೀವನಶೈಲಿಯಲ್ಲಿ ನಾವು ಆಹಾರ ಸೇವನೆಯ ವೇಳಾಪಟ್ಟಿಯನ್ನು ಅನುಸರಿಸುತ್ತಿಲ್ಲ. ಅಗತ್ಯ ಪೋಶಕಾಂಶಗಳ ಸೇವನೆಯಾಗುತ್ತಿಲ್ಲ. ಇದರಿಂದ ನಮಗರಿಯದೆ ಬಹಳಶ್ಟು ಆರೋಗ್ಯ ತೊಂದರೆಗಳನ್ನು ಅನುಬವಿಸುತ್ತಿದ್ದೇವೆ. ಉತ್ತಮ ಆರೋಗ್ಯವಿದ್ದಲ್ಲಿ ಮಾತ್ರ ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡಲು ಸಾದ್ಯ. ಆದ್ದರಿಂದ ಆಹಾರದೊಡನೆ ರಾಜಿಯಾಗದೆ ಹಿತ-ಮಿತ ಆಹಾರದೊಡನೆ ನಮ್ಮ ತಟ್ಟೆಯನ್ನು ಸಮತೋಲನಗೊಳಿಸಿ ನಮ್ಮ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳೋಣ.

( ಚಿತ್ರಸೆಲೆ : perkinselearning.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: