ಇಂಡೋನೇಶಿಯಾದ ನೀಲಿ ಜ್ವಾಲಾಮುಕಿ

– .

ನೀಲಿ ಜ್ವಾಲಾಮುಕಿ, blue volcano

ಇದೊಂದು ಕಣ್ಮನ ಸೆಳೆಯುವ ಅದ್ಬುತ ಚಿತ್ರ. ಇದು ಸುಂದರ ಹೆಣ್ಣಿನ ಚಿತ್ರವಂತೂ ಅಲ್ಲ. ಮುಗ್ದ ಮಗುವಿನ ಚಿತ್ರವೂ ಅಲ್ಲ. ಇದೊಂದು ಬಯಾನಕ ಜ್ವಾಲಾಮುಕಿಯ ಬೆಂಕಿಯ ಚಿತ್ರ. ಈ ಚಿತ್ರ ಅಶ್ಟು ವೈರಲ್ ಆಗಲು ಕಾರಣವೇನು? ಏನಿದೆ ಅದರಲ್ಲಿ ಅಂತಹ ಅದ್ಬುತ? ಜ್ವಾಲಾಮುಕಿಯ ಬೆಂಕಿ ಕೂಡ ಇತರೆ ಬೆಂಕಿಯಂತೆಯೇ ಅಲ್ಲವೆ? ಅಂತಹುದೇನಿದೆ ಇದರ ವಿಶೇಶ? ಇಲ್ಲಿ ನೋಡೋಣ ಬನ್ನಿ.

ಈ ಚಿತ್ರದಲ್ಲಿನ ಅದ್ಬುತವೆಂದರೆ, ಇದರ ಬೆಂಕಿಯ ಬಣ್ಣ ನೀಲಿ. ಈ ಚಿತ್ರ ಯಾವುದೇ ಡಿಜಿಟಲ್ ತಿದ್ದುಪಡಿ ಅತವಾ ಪಿಲ್ಟರ್ ಸಹಾಯವಿಲ್ಲದೆ ತೆಗೆದ ಚಿತ್ರಗಳು. ಈ ಅದ್ಬುತ ಚಾಯಾಚಿತ್ರವನ್ನು ತೆಗೆದವನು ಪ್ರೆಂಚ್ ಚಾಯಾಗ್ರಾಹಕ ಒಲಿವಿಯರ್ ಗ್ರನಾಲ್ಡ್. ಈ ನೀಲಿ ಬೆಂಕಿಯ ಜ್ವಾಲಾಮುಕಿ ಹೆಸರು ಕವಾಹ್ ಇಜೆನ್ ಎಂದು. ಇದು ಇರುವುದು ಇಂಡೋನೇಶಿಯಾದಲ್ಲಿ.

ಕವಾಹ್ ಇಜೆನ್ ಜ್ವಾಲಾಮುಕಿಯ ಈ ನೀಲಿ ಬೆಂಕಿಗೆ ಮೂಲ ಕಾರಣ, ಜ್ವಾಲಾಮುಕಿಯಿಂದ ಹೊರಹೊಮ್ಮುವ ಗಂದಕದ ಅನಿಲಗಳು. ಇವು ಗಾಳಿಯ ಸಂಪರ‍್ಕಕ್ಕೆ ಬಂದು, 360 ಡಿಗ್ರಿ ಸೆಲ್ಶಿಯಸ್‍ಗಿಂತ ಹೆಚ್ಚಿನ ಉಶ್ಣದಲ್ಲಿ ಉರಿದಾಗ ನೀಲಿ ಬಣ್ಣದ ಉರಿ ಕಾಣುತ್ತದೆ ಎನ್ನುತ್ತಾರೆ ವಿಗ್ನಾನಿಗಳು. ಮತ್ತೊಂದು ರೀತಿಯಲ್ಲಿ ಇದನ್ನು ಗಮನಿಸಿದರೆ, ಅತಿ ಹೆಚ್ಚು ಉಶ್ಣಾಂಶದ ಲಾವಾ ಬೂಮಿಯ ಅತಿ ದುರ‍್ಬಲ ಜಾಗದಿಂದ ಹೊರ ಹೊಮ್ಮಿದಾಗ, ವಾತಾವರಣದ ಗಾಳಿಯ ಸೇರುತ್ತದೆ. ಹೀಗೆ ಸಂಪರ‍್ಕಕ್ಕೆ ಬಂದಾಗ, ಹೆಚ್ಚಿನ ಉಶ್ಣಾಂಶದ ಕಾರಣ ಹೊತ್ತಿ ಉರಿಯುತ್ತದೆ.

ಲಾವಾದಲ್ಲಿ ಕರಗಿರುವ ಹಲವು ಕನಿಜಗಳು ಗಾಳಿಯ ಸಂಪರ‍್ಕಕ್ಕೆ ಬಂದಾಗ ವಿವಿದ ಬಣ್ಣಗಳ ಬೆಂಕಿ ಕಂಡು ಬರುತ್ತದೆ, ಇದರಲ್ಲಿ ಪ್ರಮುಕವಾಗಿ ಕೆಂಪು ಮತ್ತು ಕಿತ್ತಳೆ ಬಣ್ಣದ ಪ್ರಕಾಶಮಾನವಾದ ಬೆಂಕಿ, ಸಾಮಾನ್ಯವಾಗಿ ಎಲ್ಲಾ ಜ್ವಾಲಾಮುಕಿಗಳಲ್ಲೂ ಕಾಣುತ್ತದೆ. ಆದರೆ ಇಂಡೋನೇಶಿಯಾದಲ್ಲಿರುವ ಈ ಕವಾಹ್ ಇಜೆನ್ ಜ್ವಾಲಾಮುಕಿಯಿಂದ ಹೊರಹೊಮ್ಮುವ ಅನಿಲಗಳಲ್ಲಿ, ಹೆಚ್ಚಿನ ಪ್ರಮಾಣದ ಗಂದಕದ ಅನಿಲವಿರುವುದರಿಂದ ಹಾಗೂ ಹೆಚ್ಚಿನ ಒತ್ತಡ ಮತ್ತು ಉಶ್ಣಾಂಶದಲ್ಲಿ ಲಾವಾದೊಂದಿಗೆ ಹೊರಹೊಮ್ಮುವುದರಿಂದ, ಇಲ್ಲಿನ ಬೆಂಕಿ ನೀಲಿಯಾಗಿ ಕಾಣುತ್ತದೆ. ಇಲ್ಲಿ ಕೆಲವೊಮ್ಮೆ 600 ಡಿಗ್ರಿ ಸೆಲ್ಸಿಯಸ್ ನಶ್ಟು ಉಶ್ಣಾಂಶ ಹೊರಹೊಮ್ಮುತ್ತದೆ.

ಲಾವಾದಿಂದ ಹೊರಹೊಮ್ಮಿದ ಗಂದಕಕ್ಕೆ ಗಾಳಿಯಲ್ಲಿರುವ ಆಮ್ಲಜನಕ ಸೇರಿದಾಗ, ಬೆಂಕಿ ಹೊರಹೊಮ್ಮುತ್ತದೆ. ಗಂದಕ ಹತ್ತಿ ಉರಿಯುವಾಗ ಅದರ ಜ್ವಾಲೆ ನೀಲಿ ಬಣ್ಣದ್ದಾಗಿರುತ್ತದೆ. ಹೀಗೆ ಉರಿಯುವಾಗ್ಗೆ ಜ್ವಾಲಾಮುಕಿಯ ಉರಿಯುವ ಲಾವಾ ಬಂಡೆಗಳ  ಮೇಲೆ ಹರಿಯುವುದನ್ನು ಕಾಣಬಹುದು. ಇದನ್ನು ದೂರದಿಂದ ಕಂಡಾಗ, ಕೆಂಪು ಬಣ್ಣದ ಬದಲಾಗಿ ನೀಲಿ ಬಣ್ಣದ ಲಾವಾ ಹರಿಯುತ್ತಿರುವಂತೆ ಕಾಣಿಸುತ್ತದೆ. ಈ ಕಾರಣದಿಂದ ಈ ನೀಲಿ ಬಣ್ಣ ಸ್ಪುಟವಾಗಿ ರಾತ್ರಿ ಹೊತ್ತಿನಲ್ಲಿ ಕಾಣುತ್ತದೆ. ಹಗಲಿನಲ್ಲಿ ಬೇರೆ ಜ್ವಾಲಾಮುಕಿಯಂತೆ ಇರುತ್ತದೆಯೇ ಹೊರತು ಬಿನ್ನವಾಗಿ ಕಾಣುವುದಿಲ್ಲ.

ಜಾವಾ ದ್ವೀಪದ ಪೂರ‍್ವ ತುದಿಯಲ್ಲಿರುವ ಮೌಂಟ್ ಇಜೆನ್, ಬೂಮಿಯ ಮೇಲಿನ ಎರಡು ಅಸಾಮಾನ್ಯ ಗಟನೆಗೆ ಸಾಕ್ಶಿಯಾಗಿದೆ. ಇಲ್ಲಿನ ಜ್ವಾಲಾಮುಕಿಯ ಅದ್ಬುತ ನೀಲಿ ಜ್ವಾಲೆ ಒಂದಾದರೆ, ಒಂದು ಕಿಲೋಮೀಟರ್ ಅಗಲದ ಕಾಲ್ಡೆರಾ ಸರೋವರ ಇದರ ಅಡಿಯಲ್ಲಿ ಇದೆ. ಸರೋವರದ ನೀರು ಒಡವೆಗಳಲ್ಲಿ ಬಳಸುವ ನೀಲಿ ಹರಳಿನ ಬಣ್ಣದಿಂದ ತುಂಬಿದೆ. ಇದಕ್ಕೆ ಮೂಲ ಕಾರಣ ನೀರಿನ ಅತಿ ಹೆಚ್ಚು ಆಮ್ಲತೆ (ಅಸಿಡಿಟಿ) ಮತ್ತು ಕರಗಿರುವ ಲೋಹಗಳ ಸಾಂದ್ರತೆ. ಇದರ ಆಮ್ಲತೆ 0.5 ಪಿ.ಹೆಚ್ ನಶ್ಟಿದೆ. ಹಾಗಾಗಿ ಇದು ಅತಿ ಹೆಚ್ಚು ಆಮ್ಲತೆಯುಳ್ಳ ವಿಶ್ವದ ಅತಿ ದೊಡ್ಡ ಸರೋವರ ಎಂದೂ ಗುರುತಿಸಲ್ಪಟ್ಟಿದೆ.

ಸುಮಾರು ಮೂರು ನೂರು ಸಾವಿರ ವರ‍್ಶಗಳ ಹಿಂದೆ ಇಲ್ಲಿ ಅಗ್ನಿ ಪರ‍್ವತದ ಚಟುವಟಿಕೆ ಪ್ರಾರಂಬವಾಗಿತ್ತು. ಇದರಿಂದ ಮುಂದಿನ ದಿನಗಳಲ್ಲಿ ಹರಿದ ಲಾವಾ, ತನ್ನ ಉಶ್ಣತೆಯನ್ನು ಕಳೆದುಕೊಂಡ ನಂತರ ಕಲ್ಲಾಗಿ, ಸುಮಾರು ಹತ್ತು ಸಾವಿರ ಅಡಿಯಶ್ಡು ಎತ್ತರಕ್ಕೆ ಬೆಳೆದು ನಿಂತು ಬೆಟ್ಟವಾಗಿದೆ. ಕಳೆದ ಐವತ್ತು ಸಾವಿರ ವರ‍್ಶಗಳ ಹಿಂದಿನಿಂದ ಆಗಾಗ ಉಂಟಾದ ಅಗಾದ ಸ್ಪೋಟದಿಂದ ಸುಮಾರು ಹತ್ತು ಮೈಲಿಗಳ ಅಗಲದ ಕುಳಿ ಇಲ್ಲಿ ತೆರೆದುಕೊಂಡಿದೆ. ಈ ಸ್ಪೋಟಗಳಿಂದ ಹೊರ ಬಂದ ಲಾವಾ ಅಂದಾಜು ಇಪ್ಪತ್ತು ಕ್ಯೂಬಿಕ್ ಮೈಲಿಗಳಶ್ಟಿದೆ.

ಈ ಜ್ವಾಲಾಮುಕಿ, ಕವಾಹ್ ಇಜೆನ್, ಅಶ್ಟು ವರ‍್ಶಗಳಿಂದ ಲಾವಾ ಹೊರ ಹಾಕುತ್ತಿದ್ದರೂ ಇಂದಿಗೂ ಸಕ್ರಿಯವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: seasia.co, smithsonianmag.com, oliviergrunewald.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: