“ಆ ನಗು, ಮಗಳಿಗಾಗಿ”

– .

ತಾಯಿ ಮತ್ತು ಮಗು

ಮೂರು ವರ‍್ಶದ ಪುಟಾಣಿ ಸ್ನಿಗ್ದ ಅಮ್ಮನೊಡನೆ ಉದ್ಯಾನವನಕ್ಕೆ ಬಂದಿದ್ದಳು. ಯಾಕೋ ಏನೋ ಅಂದು ಅವಳಿಗೆ ಯಾರೊಡನೆಯೂ ಆಡುವ ಮನಸ್ಸಿರಲಿಲ್ಲ. ಅಲ್ಲೇ ಆಡುವಂತೆ ಹೇಳಿದ ಅವರಮ್ಮ ಮೂಲೆ ಹಿಡಿದು ಕುಳಿತಳು. ಸ್ನಿಗ್ದಳಿಗೆ ಬೇಸರವಾಯಿತು. ಒಬ್ಬಳೇ ಏನಾಡುವುದು? ಅಮ್ಮನ ಬಳಿ ಬಂದ ಸ್ನಿಗ್ದ, ಅಮ್ಮನನ್ನು ಆಟಕ್ಕೆ ಬರುವಂತೆ ಪೀಡಿಸಲು ಶುರು ಮಾಡಿದಳು. ಅವಳಮ್ಮನಿಗೆ ಬೇರೆ ದಾರಿಯಿರಲಿಲ್ಲ. ವಿದಿಯಿಲ್ಲದೆ ಅವಳ ಜೊತೆ ಆಡಲು ಹೊರಟಳು. ಅಮ್ಮ ತನ್ನ ಜೊತೆ ಆಡಲು ಬಂದಿದ್ದು ಮಗು ಸ್ನಿಗ್ದಳ ಮನಕ್ಕೆ ಕುಶಿ ತಂದಿತ್ತು, ಹುಮ್ಮಸ್ಸು ಹೆಚ್ಚಿಸಿತ್ತು. ಅತ್ಯಂತ ಕುಶಿಯಿಂದ ಅಮ್ಮನನ್ನು ತಬ್ಬಿ ಅಮ್ಮನ ಜೊತೆ ಆಡಲು ಪ್ರಾರಂಬಿಸಿದಳು. ಅಮ್ಮ ಜೊತೆಗಿದ್ದದ್ದು ಹತ್ತಾರು ಮಕ್ಕಳು ಸಿಕ್ಕಶ್ಟೇ ಸಂತೋಶ ಅವಳಿಗೆ. ಸ್ನಿಗ್ದಳ ಅಮ್ಮನಿಗೂ ಮನಸ್ಸು ಕೊಂಚ ಹಗುರವಾಯಿತು.

ತಿಂಗಳ ಹಿಂದೆ ಆದ ಗಟನೆ, ಸ್ನಿಗ್ದಳ ಅಮ್ಮ, ಪರಿಣಿತಾಳ ಜೀವನದಲ್ಲಿ ದೊಡ್ಡ ಆಗಾತವನ್ನೇ ತಂದಿತ್ತು. ರಸ್ತೆ ಅಪಗಾತದಲ್ಲಿ ತನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ‘ಯಜಮಾನ’ ಅಸುನೀಗಿದ್ದ. ಅತ್ಯಂತ ವೇಗವಾಗಿ ಬಂದ ಬಾರೀ ವಾಹನವೊಂದು ಅವನ ಕಾರಿಗೆ ಬಲವಾಗಿ ಗುದ್ದಿತ್ತು. ಗುದ್ದಿದ್ದ ಆ ರಬಸ ಎಶ್ಟಿತ್ತೆಂದರೆ, ಅವನು ಉಳಿಯುವ ಯಾವುದೇ ಮಾರ‍್ಗ ಇರಲಿಲ್ಲ. ಡ್ರೈವರ್ ಸೀಟಿನಲ್ಲೇ ಸ್ಟಿಯರಿಂಗಿಗೆ ತಲೆಬಡಿದು ಸತ್ತಿದ್ದ. ಅವನ ದೇಹ ಚಿದ್ರ ಚಿದ್ರವಾಗಿತ್ತು. ಆ ಗಟನೆ, ಗಂಡನ ಚಿದ್ರ ಚಿದ್ರವಾದ ಆ ದೇಹ ನೋಡಿದ ಮೇಲಂತೂ ಅವಳಿಗೆ ತಲೆ ಸುತ್ತಿ ಬಂದಿತ್ತು.

ಐದು ವರ‍್ಶಗಳ ಹಿಂದೆ ಕಂಡಿದ್ದ ಕನಸೆಲ್ಲಾ ಒಂದರೆಗಳಿಗೆಯಲ್ಲಿ ನುಚ್ಚು ನೂರಾಗಿತ್ತು. ಅವನೊಡನೆ ಆ ಎಲ್ಲಾ ಕನಸುಗಳು ಗೋರಿಯೊಳಗೆ ಹುದುಗಿ ಹೋಗಿದ್ದವು. ಮುಂದಿನ ಜೀವನದ ಕರಾಳ ದಿನಗಳು ಪರಿಣಿತಾಳ ಮುಂದೆ ಬ್ರುಹದಾಕಾರವಾಗಿ ನಿಂತಿತ್ತು. ಬಹುಶಹ ತಾನು ಒಬ್ಬಳೇ ಆಗಿದ್ದರೆ ಕತೆಯೇ ಬೇರೆಯಿತ್ತೋ ಏನೋ? ಅವಳ ಮಡಿಲಲ್ಲಿ ಪುಟ್ಟ ಸ್ನಿಗ್ದ ಇದ್ದಳು. ಅವಳ ಇರುವಿಕೆ ಅವಳ ಬೇರೆಲ್ಲಾ ಯೋಚನೆಗಳಿಗೂ ಕಡಿವಾಣ ಹಾಕಿತ್ತು. ತನಗಾಗಿ ಅಲ್ಲದಿದ್ದರೂ ಆ ಮಗುವಿಗಾಗಿ, ತನ್ನ ಕರುಳಿನ ಕುಡಿಗಾಗಿ ಬದುಕುವ ಹಂಬಲ ಮೂಡಿತ್ತು.

ಪರಿಣಿತಾ, ಮಗಳು ಸ್ನಿಗ್ದಳ ಜೊತೆ ಕುಶಿ ಕುಶಿಯಾಗಿ ಆಡುತ್ತಿದ್ದುದನ್ನು ಗಮನಿಸಿದ ಅಕ್ಕ ಪಕ್ಕದ ಮನೆಯ ಕುಹಕಿಗಳು, “ಚೇ ಏನು ಕಾಲ ಬಂತಪ್ಪಾ! ಗಂಡ ಸತ್ತು ಇನ್ನೂ ತಿಂಗ್ಳಾಗಿಲ್ಲ, ನಗುತ್ತಾ ಆಡೋದ್ ನೋಡು?’ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡಿದ್ರು. ಅಚಾನಕ್ಕಾಗಿ ಅದು ಪರಿಣಿತಾಳ ಕಿವಿಗೂ ಬಿದ್ದಿತ್ತು. ಪರಿಣಿತಾಳಿಗೆ ದುಕ್ಕ ಉಮ್ಮಳಿಸಿ ಬಂತು. ಸ್ನಿಗ್ದಳನ್ನು ಎದೆಗವಚಿಕೊಂಡು, ಅಲ್ಲಿಂದ ನೇರ ಮನೆಗೆ ಬಂದು, ಬಾಗಿಲನ್ನು ಹಾಕಿ, ಜೋರಾಗಿ ಅಳಲು ಶುರುಮಾಡಿದಳು.

“ಯಾಕೆ ಈ ಜನ ನನ್ನ ಮನದ ಬೇಗುದಿಯನ್ನು ಕೊಂಚವೂ ಅರ‍್ತ ಮಾಡಿಕೊಳ್ಳುವುದಿಲ್ಲ? ಇವರ ಮಗಳೇ ನನ್ನ ಜಾಗದಲ್ಲಿ ಇದ್ದಿದ್ದರೆ? ಬೇಡ ಯಾರಿಗೂ ಹಾಗಾಗುವುದು ಬೇಡ. ನನ್ನ ಶತ್ರವಿಗೂ ಆ ದುರ‍್ಗತಿ ಬೇಡ. ನಾನೇನು ತೊಂದರೆ ಕೊಟ್ಟೆ ಇವರುಗಳಿಗೆ? ನಾಲಿಗೆ ಹೊರಳಿದಂತೆ ಮಾತನಾಡಿದರೆ ಇವರುಗಳಿಗೇನು ಲಾಬ? ಕೊಂಚ ಹೊತ್ತು ಕಳೆಯಬಹುದು ಅಶ್ಟೆ! ಹೊರತು ಬೇರೇನು ಇಲ್ಲವಲ್ಲ? ಮಾತೆಲ್ಲಾ ಆಡಿದ ಮೇಲೆ ‘ಅಯ್ಯೋ ನಮಗ್ಯಾಕೆ ಇನ್ನೊಬ್ಬರ ಮನೆ ಸುದ್ದಿ, ಹೇಗಾದ್ರೂ ಇರ‍್ಲಿ? ನಮಗೇನು?’ ಅನ್ನುವುದಂತೂ ಸತ್ಯ. ಈ ಸಂಪತ್ತಿಗೆ ನನಗೆ ಕೇಳುವಂತೆ ಆಡಿಕೊಳ್ಳುವ ಪ್ರಮೇಯವೇನಿತ್ತು? ನನ್ನ ಹೊಟ್ಟೆಯಲ್ಲಿನ ದಾವಾಗ್ನಿಗೆ ತುಪ್ಪ ಸುರಿಯಲೇ?” ಇನ್ನೂ ಏನೆನೋ ಯೋಚನೆಗಳು ಮನದಲ್ಲಿ ಸುಳಿದವು. ಮುಕವನ್ನು ಮೊಣಕಾಲ ಮದ್ಯೆ ಇರಿಸಿಕೊಂಡು ಜೋರಾಗಿ ಅತ್ತಳು. ಸಮಾದಾನ ಪಡಿಸಲೂ ಸಹ ಯಾವೊಂದು ಜೀವವೂ ಅಲ್ಲಿರಲಿಲ್ಲ.

ಅಮ್ಮನ ಬಳಿಯಲ್ಲೇ ಇದ್ದ ಪುಟ್ಟ ಸ್ನಿಗ್ದ, ಅಮ್ಮನ ಮುಕವನ್ನು ಮೇಲೆತ್ತುತ್ತಾ “ಅಮ್ಮಾ ಇಲ್ಲಮ್ಮಾ ಇನ್ಮೇಲೆ ನಿನ್ನ ಆಟಕ್ಕೆ ಕರೆಯಲ್ಲಮ್ಮಾ. ಪ್ಲೀಸ್ ಆಳ್ಬೇಡಮ್ಮಾ” ಎನ್ನುತ್ತಾ ತಾನೂ ಸಹ ಅಳಲು ಪ್ರಾರಂಬಿಸಿದ್ದಳು. ಮಗುವಿನ ಮಾತು ಕೇಳಿದ ಪರಿಣಿತಾಳಿಗೆ ತನ್ನ ಮೇಲೆ ಬೇಸರ ಮೂಡಿತು. “ಏನೂ ಅರಿಯದ ನನ್ನ ಕಂದಮ್ಮನ ಕಣ್ಣಲ್ಲಿ ನೀರು ತರಿಸಿದೆನೆಲ್ಲಾ” ಎಂದು ತನ್ನನ್ನು ತಾನೇ ಶಪಿಸಿಕೊಂಡಳು. ಕಣ್ಣೀರನ್ನು ಒರೆಸಿಕೊಂಡು, ಮಗುವಿನ ಕಣ್ಣೀರನ್ನು ತನ್ನ ಸೆರಗಿನಿಂದ ಒರೆಸಿ, ಮುಕದಲ್ಲಿ ಬಲವಂತ ನಗು ತರಿಸಿಕೊಂಡು, ಸ್ನಿಗ್ದಳಿಗೆ ಸಿಹಿ ಮುತ್ತೊಂದನ್ನು ನೀಡಿದಳು.

ಅಮ್ಮನ ನಗು ಮುಕ ಕಂಡ ಪುಟ್ಟ ಸ್ನಿಗ್ದ, ತಾನೂ ನಗುತ್ತಾ, ತನ್ನ ಎರಡೂ ಪುಟ್ಟ ಅಂಗೈಯಲ್ಲಿ ಅಮ್ಮನ ಕಣ್ಣೀರು ಒರೆಸುತ್ತಾ, “ಅಮ್ಮಾ ನೀನತ್ತರೆ ನಂಗೂ ಅಳು ಬರುತ್ತೆ” ಎಂದಾಗ ಪರಿಣಿತಾಳಿಗೆ ಎದೆ ಒಡೆದಂತಾಯಿತು. ಮತ್ತೆ ಮತ್ತೆ ತನ್ನ ಕಣ್ಣನ್ನು ಒರೆಸಿಕೊಂಡು “ಇಲ್ಲಾ ಪುಟ್ಟಾ ಇನ್ನೆಂದೂ, ಎಂದೆಂದೂ ನಾನು ಅಳುವುದಿಲ್ಲ, ಕಂಡಿತಾ ನಿನಗಾಗಿ ಸದಾಕಾಲ ನಗು ನಗುತ್ತಲೇ ಇರ‍್ತೀನಿ, ಯಾರು ಏನೇ ಆಡಿಕೊಳ್ಳಲಿ, ಅನ್ನಲಿ, ಹೀಯಾಳಿಸಲಿ, ಯೋಚನೆ ಮಾಡಲ್ಲ” ಎನ್ನುತ್ತಾ ತನ್ನ ಪುಟ್ಟ ಆ ಕಂದಮ್ಮನನ್ನು, ಕರುಳ ಕುಡಿಯನ್ನು ಬಾಚಿ ತಬ್ಬಿದಳು.

(ಚಿತ್ರ ಸೆಲೆ:pixabay)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ದುಃಖ ಸದಾಕಾಲ ಕಣ್ಣಂಚಲಿ ನೀರಾಗುವ ಬದಲು ನಮ್ಮ ಇಷ್ಟದ ಅವರಿಗೋಸ್ಕರ ಮುಖದಲ್ಲಿ ಮಂದಹಾಸ ಬೀರುವುದೇ ಜೀವನ. ಒಳ್ಳೆಯ ಲೇಖನಕ್ಕೆ ಧನ್ಯವಾದಗಳು ಸರ್

ಅನಿಸಿಕೆ ಬರೆಯಿರಿ: