ಹೀಗೊಂದು ವಿಲಕ್ಶಣ ಮದುವೆ ಸಂಪ್ರದಾಯ

– .

ಇಂಡೋನೇಶ್ಯಾ, ಮದುವೆ

ಇಂಡೋನೇಶ್ಯಾದ ಟಿಡಾಂಗ್ ಸಮುದಾಯದಲ್ಲಿ ನಡೆಯುವ ವಿವಾಹಗಳು ನಿಜವಾಗಿಯೂ ವಿಶಿಶ್ಟವಾದ, ಅಚ್ಚರಿಯ ಸಂಪ್ರದಾಯಗಳನ್ನು ಹೊಂದಿವೆ ಎಂದರೆ ಸುಳ್ಳಲ್ಲ. ವರ, ವದುವನ್ನು ಹೊಗಳುವ ಅನೇಕ ಪ್ರೇಮ ಗೀತೆಗಳನ್ನು ಹಾಡುವ ತನಕ ಆಕೆಯ ಮುಕವನ್ನು ನೋಡಲು ಅನುಮತಿ ನೀಡದಿರುವುದು, ಇವರ ಪದ್ದತಿಗಳಲ್ಲಿ ಅತ್ಯಂತ ಆರಾದ್ಯವಾದದ್ದು. ವರ ಈ ಪರೀಕ್ಶೆಯನ್ನು ಎದುರಿಸಿದ ನಂತರವಶ್ಟೇ ಅಂತರಪಟವನ್ನು ಸರಿಸಿ ವದುವನ್ನು ನೋಡಲು ವೇದಿಕೆಯನ್ನು ಸ್ರುಶ್ಟಿಸಲಾಗುತ್ತದೆ.

ಟಿಡಾಂಗ್ ಸಮುದಾಯದಲ್ಲಿ ಎಲ್ಲಾ ವಿವಾಹದ ವಿದಿ ವಿದಾನಗಳು, ಪದ್ದತಿಗಳು ಇಶ್ಟು ಸಂತೋಶ ಬರಿತವಾಗಿರುವುದಲ್ಲ. ಕುಶಿ ನೀಡುವುದಿಲ್ಲ. ನಿಶ್ಚಿತಾರ‍್ತದ ಸಮಯದಲ್ಲಿ ವದುವನ್ನು ಮನೆಯ ಪರಿದಿಯಲ್ಲೇ ಗ್ರುಹಬಂದನದಲ್ಲಿ ಇರಿಸಲಾಗುತ್ತದೆ. ಆಕೆ ಎಲ್ಲೂ ಹೊರ ಹೋಗುವಂತಿಲ್ಲ. ಮದುವೆಯ ದಿನ ವರ ತಡವಾಗಿ ಬಂದಲ್ಲಿ ಆತನು ದಂಡ ಪಾವತಿಸಬೇಕಾಗುತ್ತದೆ. ಈ ದಂಡ ಸಾಮಾನ್ಯವಾಗಿ ಬಂಗಾರದ ಆಬರಣದ ರೀತಿಯಲ್ಲಿರುತ್ತದೆ. ಇವೆಲ್ಲಕ್ಕೂ ಮಿಗಿಲಾದ ವಿಲಕ್ಶಣ ಸಂಪ್ರದಾಯ ಸಹ ಈ ಟಿಡಾಂಗ್ ಸಮುದಾಯದಲ್ಲಿದೆ. ಅದೇ ನವ ವಿವಾಹಿತರಿಗೆ ಮೂರು ರಾತ್ರಿ, ಮೂರು ಹಗಲು ಶೌಚಾಲಯ ಬಳಸಲು ಅನುಮತಿ ಇಲ್ಲದಿರುವುದು! ಬಹಳ ವಿಲಕ್ಶಣ ಅನಿಸುತ್ತದಲ್ಲವೆ? ಆದರೂ ಇದು ನಿಜ. ಇದು ಸಂಪ್ರದಾಯ ಎನ್ನುವುದಕ್ಕಿಂತ ಶಿಕ್ಶೆ ಎಂದರೆ ಸಮಂಜಸವಾಗುತ್ತದೆ. ಮಾನವನಿಗೆ ಅನ್ನ ಆಹಾರಾದಿಗಳು ಎಶ್ಟು ಮುಕ್ಯವೋ ಅಶ್ಟೇ ಮುಕ್ಯ ಮಲಮೂತ್ರ ವಿಸರ‍್ಜನೆಗಳು. ಇವರೆಡರಲ್ಲಿ ಯಾವುದೊಂದರಲ್ಲಿ ಏರುಪೇರಾದರೂ ಅದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವುದು ಸಹಜ ಹಾಗೂ ಸತ್ಯ. ಈ ಸಮುದಾಯದಲ್ಲಿ ಶೌಚಾಲಯವನ್ನು ನಿಶೇದಗೊಳಿಸಿದರೆ ಅದೂ ಮೂರು ಪೂರ‍್ಣ ದಿನಗಳು ಅವರುಗಳು ಬದುಕುವುದಾದರೂ ಹೇಗೆ? ಎಂಬ ಪ್ರಶ್ನೆ ಉದ್ಬವಿಸುತ್ತದೆ.

ಮಲೇಶ್ಯಾದ ಸಬಾದಲ್ಲಿರುವ ಸ್ಯಾಂಡಕನ್ ನಗರದಲ್ಲಿ ವಾಸವಾಗಿರುವ ಟಿಡಾಂಗ್ ಬುಡಕಟ್ಟಿನ ಜನರಿಗೆ ಈ ಪದ್ದತಿ ತುಂಬಾ ಸಾಮಾನ್ಯ ಮತ್ತು ನೈಸರ‍್ಗಿಕವಾದದ್ದು. ಈ ಸಮುದಾಯದಲ್ಲಿ ವಿವಾಹವಾದವರೆಲ್ಲಾ ಈ ನಿಶೇದವನ್ನು ಯಾವುದೇ ಅಡೆ ತಡೆಯಿಲ್ಲಿದೆ, ನಿಬಾಯಿಸಿ ಹೊರ ಬಂದಿರುವ ಕಾರಣ ಇದು ಅಸಾದ್ಯವಲ್ಲ ಎಂಬ ಚಿಂತನೆ ಅವರದ್ದು. ಈ ಮೂರು ರಾತ್ರಿ ಮೂರು ಹಗಲು ಶೌಚಾಲಯವನ್ನು ಉಪಯೋಗಿಸದೇ ಇರುವ ಸಂಪ್ರದಾಯ ಅನುಸರಿಸದಿದ್ದಲ್ಲಿ ಆ ದಂಪತಿಗೆ ಇದು ಕೆಟ್ಟ ಅದ್ರುಶ್ಟಕ್ಕೆ ಕಾರಣವಾಗುತ್ತದೆ ಎಂಬುದು ಅವರ ನಂಬಿಕೆ. ಗಂಡ ಹೆಂಡಿರಲ್ಲಿ ಅನ್ಯೋನ್ಯತೆ ಕುಂಟಿತವಾಗುವುದು, ಮದುವೆಗಳು ಮುರಿದು ಬೀಳುವುದು, ದಾಂಪತ್ಯ ದ್ರೋಹ, ಸಣ್ಣ ವಯಸ್ಸಿನಲ್ಲೇ ಹುಟ್ಟಿದ ಮಕ್ಕಳು ತೀರಿಕೊಳ್ಳುವುದು ಇವೆಲ್ಲಾ ಈ ಸಂಪ್ರದಾಯವನ್ನು ಪಾಲಿಸದಿದ್ದಲ್ಲಿ ಆಗಬಹುದಾದ ಅನಾಹುತಗಳು ಎಂದು ಪರಿಗಣಿಸುತ್ತಾರೆ.

ಹಾಗಾದರೆ ಈ ಕಶ್ಟದ ಕೆಲಸವನ್ನು ಅವರುಗಳು ಹೇಗೆ ನಿಬಾಯಿಸುತ್ತಾರೆ? ಇದು ಅತಿ ಸರಳ. ಇದನ್ನು ನಿಬಾಯಿಸಲು ಅವರುಗಳ ಕಂಡು ಕೊಂಡ ಮಾರ‍್ಗ, ಆಹಾರ ಮತ್ತು ಪಾನೀಯಗಳನ್ನು ಸೇವನೆಯನ್ನು ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಸುವುದು. ಇದಕ್ಕಿರುವುದು ಅದೊಂದೇ ಮಾರ‍್ಗ. ಬೇರಾವುದೇ ಪರ‍್ಯಾಯ ಮಾರ‍್ಗ ಇದಕ್ಕಿಲ್ಲ. ಈ ಮೂರು ದಿನಗಳ ಕಾಲ ನವ ವದು-ವರರನ್ನು ಹಲವಾರು ಜನ ಹದ್ದಿನ ಕಣ್ಣಿನಿಂದ ವೀಕ್ಶಿಸುತ್ತಾರೆ. ಈ ಕಟಿಣ ಮೂರು ದಿನಗಳು ಮುಗಿದ ನಂತರ, ನವ ವದುವರರಿಗೆ ಸ್ನಾನ ಮಾಡಿಸಿ, ನಂತರ ಸಾಮಾನ್ಯ ಜೀವನಕ್ಕೆ ಮರಳಲು ಅನುಮತಿ ನೀಡಲಾಗುತ್ತದೆ.

ಈ ಸಂಪ್ರದಾಯ ದಂಪತಿಗಳು ಮಾನಸಿಕ ಕಾಟಿಣ್ಯತೆಯನ್ನು ರೂಡಿಸಿಕೊಳ್ಳಲು, ಒಬ್ಬರೊಬ್ಬರನ್ನು ಸಂಪೂರ‍್ಣವಾಗಿ ಅರಿಯಲು ಹಾಗೂ ತಮ್ಮ ಮುಂದಿನ ದಾಂಪತ್ಯ ಜೀವನದಲ್ಲಿ ಕಶ್ಟಗಳ ಎದುರಾದಾಗ ಒಟ್ಟಾಗಿ ಎದುರಿಸುವ ಮತ್ತು ನಿಬಾಯಿಸುವ ಚಾತಿಯನ್ನು ಮೈಗೂಡಿಸಿಕೊಳ್ಳಲು ಸಹಾಯಕ ಎಂಬುದು ಟಿಡಾಂಗ್ ಸಮುದಾಯದ ಹಿರಿಯರ ಅಬಿಮತ.

ಟಿಡಾಂಗ್ ಸಮುದಾಯದವರು ತಮ್ಮ ಈ ಸಂಪ್ರದಾಯವನ್ನು ಸಮರ‍್ತಿಸಲು ಏನೇ ಸಬೂಬು ಹೇಳಿದರೂ, ಏನೇ ಸಮಜಾಯಿಶಿ ಕೊಟ್ಟರೂ ಸಹ, ವಿಶ್ವದಲ್ಲೇ ಇದೊಂದು ವಿಲಕ್ಶಣ ಸಂಪ್ರಾದಯ ಎಂದು ವರ‍್ಗೀಕರಿಸುವುದರಲ್ಲಿ ಎರೆಡು ಅಬಿಪ್ರಾಯ ಇಲ್ಲವೇ ಇಲ್ಲ ಅಲ್ಲವೇ?

(ಮಾಹಿತಿ ಮತ್ತು ಚಿತ್ರ ಸೆಲೆ: odditycentral.comcatchnews.combeautyincultures.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: