ಕರ‍್ನಾಟಕ ಕ್ರಿಕೆಟ್ ತಂಡದ ಮೂರನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.

ಕರ‍್ನಾಟಕ ರಣಜಿ ಕ್ರಿಕೆಟ್ ತಂಡ

1977/78 ರಲ್ಲಿ ಎರಡನೇ ಬಾರಿ ಟೂರ‍್ನಿ ಗೆದ್ದ ಮೇಲೆ ಕರ‍್ನಾಟಕ ತಂಡ ಸತತ ನಾಲ್ಕು ವರುಶಗಳ ಕಾಲ ಟ್ರೋಪಿ ಗೆಲ್ಲಲಾಗದೆ ನಿರಾಸೆ ಅನುಬವಿಸುತ್ತಾರೆ. 1978/79 ರಲ್ಲಿ ಪೈನಲ್ ತಲುಪಿದರೂ ದೆಹಲಿ ಎದುರು ತವರಿನಲ್ಲೇ ಇನ್ನಿಂಗ್ಸ್ ಹಾಗೂ 399 ರನ್ ಗಳಿಂದ ಹೀನಾಯ ಸೋಲು ಕಾಣುತ್ತಾರೆ. ನಂತರ 1979/80 ಟೂರ‍್ನಿಯಲ್ಲಿ ಕ್ವಾರ‍್ಟರ್ ಪೈನಲ್ ನಲ್ಲಿ ಕಪಿಲ್ ದೇವ್ ನಾಯಕತ್ವದ ಹರಿಯಾಣ ಎದುರು 88 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದರೂ ಎರಡನೇ ಇನ್ನಿಂಗ್ಸ್ ನ ಬ್ಯಾಟಿಂಗ್ ವೈಪಲ್ಯದಿಂದ 5 ವಿಕೆಟ್ ಗಳಿಂದ ಸೋಲುತ್ತಾರೆ. ಹೀಗೆ ಎರಡು ಬಾರಿಯ ನಾಕೌಟ್ ಹಂತದ ಸೋಲಿನ ಬಳಿಕ ಗಾಯದ ಮೇಲೆ ಬರೆ ಎಂಬಂತೆ 1980/81 ರಲ್ಲಿ ಲೀಗ್ ಹಂತದಲ್ಲೇ ಕರ‍್ನಾಟಕದ ಹೋರಾಟ ಕೊನೆಗೊಳ್ಳುತ್ತದೆ. ಬಳಿಕ 1981/82 ರ ಸೆಮಿ ಪೈನಲ್ ನಲ್ಲಿ ಬಾಂಬೆಯನ್ನು ಇನ್ನಿಂಗ್ಸ್ ಮುನ್ನಡೆಯಿಂದ ಹಿಂದಿಕ್ಕಿ ಪೈನಲ್ ತಲುಪುತ್ತಾರೆ. ಆದರೆ ಪೈನಲ್ನಲ್ಲಿ 705 ರನ್ ಗಳಿಸಿದರೂ ದೆಹಲಿ 707 ರನ್ ಗಳಿಸಿ ಮತ್ತೊಮ್ಮೆ ಕರ‍್ನಾಟಕಕ್ಕೆ ಆಗಾತ ನೀಡುತ್ತಾರೆ. ನಾಲ್ಕು ವರ‍್ಶಗಳಲ್ಲಿ ಎರಡು ಪೈನಲ್ ಗಳಲ್ಲಿ ಮುಗ್ಗರಿಸಿದ್ದು ಆಟಗಾರರಿಗೆ ಹಾಗೂ ಅಬಿಮಾನಿಗಳಿಗೆ ನುಂಗಲಾರದ ತುತ್ತಾಗುತ್ತದೆ. 1982 ರ ಪೈನಲ್ ಸೋಲಿನಿಂದ ನೊಂದ ವಿಶ್ವನಾತ್ ಅವರು ಸೋಲಿನ ಹೊಣೆ ಹೊತ್ತು ತಾವಾಗಿಯೇ ನಾಯಕತ್ವ ತೊರೆಯುತ್ತಾರೆ.

1982/83 ಲೀಗ್ ಹಂತ

ಲೀಗ್ ಹಂತ ಮೊದಲಾಗುವ ಹೊತ್ತಿಗೆ ಸರಿಯಾಗಿ ಬಾರತ ತಂಡ ಪಾಕಿಸ್ತಾನದ ಪ್ರವಾಸ ಕೈಗೊಳ್ಳುತ್ತದೆ. ಹಾಗಾಗಿ ಗುಂಡಪ್ಪ ವಿಶ್ವನಾತ್ ಹಾಗೂ ಕಿರ‍್ಮಾನಿ ಅವರ ಸೇವೆ ತಂಡಕ್ಕೆ ಸಿಗುವುದಿಲ್ಲ. ನಾಯಕ ಬ್ರಿಜೇಶ್ ಪಟೇಲ್ ಹೆಚ್ಚು ಅನುಬವವಿಲ್ಲದ ಯುವಕರ ಪಡೆಯನ್ನು ಕಟ್ಟಿಕೊಂಡು ಆಂದ್ರದ ಎದುರು ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಾರೆ. ಶ್ರೀನಿವಾಸ ಪ್ರಸಾದ್ ಅವರ ಶತಕ (106) ಹಾಗೂ ಎರಡೂ ಇನ್ನಿಂಗ್ಸ್ ನಲ್ಲಿ ಮಿಂಚಿದ ವಿಜಯಕ್ರಿಶ್ಣರ ಸ್ಪಿನ್ ದಾಳಿಯಿಂದ (7/85; 5/28) 117 ರನ್ ಗಳ ಗೆಲುವು ಪಡೆದು ಟೂರ‍್ನಿಯಲ್ಲಿ ಒಳ್ಳೆಯ ಆರಂಬ ಪಡೆಯುತ್ತಾರೆ. ಮುಂದಿನ ಪಂದ್ಯದಲ್ಲಿ ಹೈದರಾಬಾದ್ ಎದುರು ಪಂದ್ಯ ಗೆಲ್ಲಲಾಗದ್ದಿದ್ದರೂ ಇನ್ನಿಂಗ್ಸ್ ಮುನ್ನಡೆ ಪಡೆಯುತ್ತಾರೆ. ಬಿನ್ನಿ ಶತಕ (111) ಗಳಿಸುತ್ತಾರೆ. ಆ ಬಳಿಕ ತಮಿಳುನಾಡು ಎದುರು ಮದ್ರಾಸ್ ನಲ್ಲಿ 190 ರನ್ ಗಳ ದೊಡ್ಡ ಇನ್ನಿಂಗ್ಸ್ ಹಿನ್ನಡೆ ಅನುಬವಿಸಿ ಪಂದ್ಯಸೋಲುವ ಅಪಾಯದಲ್ಲಿರುತ್ತಾರೆ. ಕಡೇ ದಿನದ ಪಿಚ್ ಮೇಲೆ ವಿಕೆಟ್ ಒಪ್ಪಿಸದೆ ಕನಿಶ್ಟ 70 ಓವರ್ ಗಳಾದರೂ ಬ್ಯಾಟಿಂಗ್ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ಎದುರಾಳಿ ತಂಡಕ್ಕೆ ಬಾರತದ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ವೆಂಕಟರಾಗವನ್ ರ ಬಲ ಇರುತ್ತದೆ. ಆದರೆ ತಮ್ಮಜವಾಬ್ದಾರಿಯನ್ನು ಅರಿತು ಎಲ್ಲಾ ಸವಾಲುಗಳನ್ನು ಹಿಮ್ಮೆಟ್ಟಿ ಆರಂಬಿಕ ಆಟಗಾರರಾದ ಬಿನ್ನಿ (69) ಹಾಗೂ ಶ್ರೀನಿವಾಸ ಪ್ರಸಾದ್ (59) ಒಳ್ಳೆ ಅಡಿಪಾಯಹಾಕಿಕೊಡುತ್ತಾರೆ. ನಂತರ ಬ್ಯಾಟ್ ಮಾಡಲು ಬಂದ ಸದಾನಂದ್ ವಿಶ್ವನಾತ್ (67)* ಹಾಗೂ ಜಯಪ್ರಕಾಶ್ (24)* ಕೂಡ ಪ್ರತಿರೋದ ಒಡ್ಡುತ್ತಾರೆ. 74 ಓವರ‍್ಗಳಲ್ಲಿ ಕರ‍್ನಾಟಕ 2 ವಿಕೆಟ್ ಗಳಿಗೆ 231 ಗಳಿಸಿರುವಾಗ ಪಂದ್ಯ ಡ್ರಾ ನಲ್ಲಿ ಕೊನೆಗೊಳ್ಳುತ್ತದೆ. ತಿರುಗುತ್ತಿದ್ದ ಕಡೇ ದಿನದ ಪಿಚ್ ಮೇಲೆ ವೆಂಕಟ್ 32 ಓವರ್ ಬೌಲ್ ಮಾಡಿದರೂ ಒಂದೂ ವಿಕೆಟ್ ಅವರಿಗೆ ಸಿಗುವುದಿಲ್ಲ. ಸಂದಿಗ್ದ ಪರಿಸ್ತಿತಿಯಲ್ಲಿ ಹೋರಾಡಿ ಪಂದ್ಯ ಉಳಿಸಿಕೊಂಡ ಕನ್ನಡಿಗರ ಮನೋಬಲ ಸಹಜವಾಗಿಯೇಇಮ್ಮಡಿಯಾಗುತ್ತದೆ.

ಬಳಿಕ ಕೇರಳ ಎದುರಿನ ಕೊನೆ ಲೀಗ್ ಪಂದ್ಯ ಕರ‍್ನಾಟಕಕ್ಕೆ ಮಾಡು ಇಲ್ಲವೇ ಮಾಡಿ ಪಂದ್ಯವಾಗಿರುತ್ತದೆ. ನಾಕೌಟ್ ಹಂತ ತಲುಪಲು ಕ್ಯಾಲಿಕಟ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಗೆಲುವೊಂದೇ ದಾರಿಯಾಗಿರುತ್ತದೆ. ರೋಜರ್ ಬಿನ್ನಿ ಅವರ ಆಲ್ರೌಂಡ್ ಆಟ ಕೇರಳಕ್ಕೆ ಮುಳುವಾಗುತ್ತದೆ. ಬೌಲಿಂಗ್ ನಲ್ಲಿ (4/29; 5/52) ಹಾಗೂ ಬ್ಯಾಟಿಂಗ್ ನಲ್ಲಿ 62 ರನ್ ಗಳಿಸಿ ಬಿನ್ನಿ ತಂಡಕ್ಕೆ ನೆರವಾಗುತ್ತಾರೆ. 10 ವಿಕೆಟ್ ಗಳ ಬರ‍್ಜರಿ ಗೆಲುವು ಪಡೆದು ಕರ‍್ನಾಟಕ ತಂಡ ದಕ್ಶಿಣ ವಲಯದಿಂದ ಮತ್ತೊಮ್ಮೆ ನಾಕೌಟ್ ಹಂತಕ್ಕೆ ಲಗ್ಗೆ ಇಡುತ್ತದೆ.

ಕ್ವಾರ‍್ಟರ್ ಪೈನಲ್ – ಬರೋಡ

ಪಾಕಿಸ್ತಾನ ಪ್ರವಾಸ ಮುಗಿಸಿ ಬಂದ ಗುಂಡಪ್ಪ ವಿಶ್ವನಾತ್ ಅವರು ಕ್ವಾರ‍್ಟರ್ ಪೈನಲ್ ಹಂತಕ್ಕೆ ಕರ‍್ನಾಟಕ ತಂಡ ಸೇರಿಕೊಳ್ಳುತ್ತಾರೆ. ಅವರ ಬರುವಿಕೆ ಸಹಜವಾಗಿಯೇ ತಂಡದ ಮನೋಬಲ ಹೆಚ್ಚಿಸುತ್ತದೆ. ಬರೋಡದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ‍್ನಾಟಕ ಕೇವಲ 128 ರನ್ ಗಳಿಗೆ ಆಲೌಟ್ ಆಗಿ, ಸಂಕಶ್ಟದಲ್ಲಿರುವಾಗ ಹೊಸ ಸ್ಪಿನ್ ಅವಳಿಗಳಾದ ವಿಜಯಕ್ರಿಶ್ಣ (6/17) ಹಾಗೂ ರಗುರಾಮ್ ಬಟ್ (3/27) ಒಟ್ಟಾಗಿ ಬರೋಡವನ್ನು 63 ರನ್ ಗಳಿಗೆ ಕಟ್ಟಿಹಾಕಿ 65 ರನ್ ಗಳ ಇನ್ನಿಂಗ್ಸ್ ಮುನ್ನಡೆ ದಕ್ಕಿಸಿ ಕೊಡುತ್ತಾರೆ. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ 179 ರನ್ ಗಳಿಸಿ ಆತಿತೇಯರಿಗೆ ಗೆಲ್ಲಲು 245 ರನ್ ಗಳ ಗುರಿ ನೀಡುತ್ತಾರೆ. ಮೊದಲ ಇನ್ನಿಂಗ್ಸ್ ನಂತೆ ಎರಡನೇ ಇನ್ನಿಂಗ್ಸ್ ನಲ್ಲೂ ಸ್ಪಿನ್ ಮೋಡಿಗೆ – ರಗುರಾಮ್ ಬಟ್ (7/57); ವಿಜಯಕ್ರಿಶ್ಣ (2/51) ತತ್ತರಿಸಿ ಬರೋಡ ತಂಡ 114 ರನ್ ಗಳಸೋಲುಣ್ಣುತ್ತದೆ. ನಿರಾಯಸಾಗಿ ಕರ‍್ನಾಟಕ ಇನ್ನೊಂದು ಸೆಮಿಪೈನಲ್ ನತ್ತ ಹೆಜ್ಜೆ ಇಡುತ್ತದೆ.

ಸೆಮಿಪೈನಲ್ ಎದುರಾಳಿ ಹರಿಯಾಣ

ಕೆಲವೇ ವರ‍್ಶಗಳ ಹಿಂದೆ ಹರಿಯಾಣ ಎದುರು ಅನಿರೀಕ್ಶಿತವಾಗಿ ಕ್ವಾರ‍್ಟರ್ ಪೈನಲ್ ನಲ್ಲಿ ಸೋತ ನೋವು ಇನ್ನೂ ಹಸಿರಾಗಿರುವಾಗಲೇ ಮತ್ತೊಮ್ಮೆ ಅದೇ ತಂಡ ಸೆಮಿಪೈನಲ್ ನಲ್ಲಿ ಎದುರಾಗುತ್ತದೆ. ಪರಿದಾಬಾದ್ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹರಿಯಾಣದ ಲೆಕ್ಕಾಚಾರವನ್ನು ಎರಡೇ ತಾಸುಗಳಲ್ಲಿ ರೋಜರ್ ಬಿನ್ನಿ ತಲೆಕೆಳಗೆ ಮಾಡುತ್ತಾರೆ. ಬಿನ್ನಿ ಅವರ ಸೊಗಾಸಾದ ಸ್ವಿಂಗ್ ಬೌಲಿಂಗ್ ಗೆ (8/22) ನಲುಗಿದ ಹರಿಯಾಣ ಕೇವಲ 25 ಓವರ್ ಗಳಲ್ಲಿ 78 ರನ್ ಗಳಿಗೆ ಆಲೌಟ್ ಆಗುತ್ತಾರೆ. ಬಿನ್ನಿ ಅವರ ಆ ಪ್ರದರ‍್ಶನ ಇಂದಿಗೂ ಮೊದಲ ದರ‍್ಜೆ ಕ್ರಿಕೆಟ್ ನಲ್ಲಿ ಅವರ ಶ್ರೇಶ್ಟ ಬೌಲಿಂಗ್ ಪ್ರದರ‍್ಶನವಾಗಿ ಉಳಿದಿದೆ. ಬಳಿಕ ಬ್ಯಾಟ್ ಮಾಡಿದ ಕರ‍್ನಾಟಕ 230 ರನ್ ಗಳಿಸುತ್ತಾರೆ. ಬ್ಯಾಟಿಂಗ್ ನಲ್ಲೂ ಬಿನ್ನಿ (54) ಮಿಂಚುತ್ತಾರೆ. 152 ರನ್ ಗಳ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ನಲ್ಲಿ ಕರ‍್ನಾಟಕ ಬೌಲ್ ಮಾಡಲು ಕಣಕ್ಕಿಳಿಯುವ ಹೊತ್ತಿಗೆ ಪಿಚ್ ತಿರುಗಲಾರಂಬಿಸಿರುತ್ತದೆ. ಇದರ ಪ್ರಯೋಜನ ಪಡೆದ ರಗುರಾಮ್ ಬಟ್ ಸ್ಪಿನ್ ಬಲೆ ಹೆಣೆಯುತ್ತಾರೆ(7/24). ಅವರ ಆರ‍್ಮ್ ಬಾಲ್ – ಪ್ಲಿಪ್ಪರ್ – ಪ್ಲೈಟ್ ಎಸೆತಗಳಿಗೆ ಹರಿಯಾಣ ತಂಡಕ್ಕೆ ದಿಕ್ಕೇ ತೋಚದಂತಾಗಿ 125 ರನ್ ಗಳಿಗೆ ಕುಸಿದು ಇನ್ನಿಂಗ್ಸ್ ಹಾಗೂ 27 ರನ್ ಗಳಿಂದ ಶರಣಾಗುತ್ತಾರೆ. ಈ ಪಂದ್ಯದಲ್ಲಿ ಎದುರಾಳಿಗೆ ಎಲ್ಲೂ ಅವಕಾಶ ಕೊಡದೆ ಪ್ರಾಬಲ್ಯ ಮೆರೆದು ಗೆದ್ದ ಕರ‍್ನಾಟಕ ಆರು ವರ‍್ಶಗಳಲ್ಲಿ ನಾಲ್ಕನೇ ರಣಜಿ ಪೈನಲ್ ಗೆತನ್ನಂಬಿಕೆಯಿಂದ ತಲುಪುತ್ತದೆ.

ಪೈನಲ್ – ಬಲಾಡ್ಯ ಬಾಂಬೆ

ಒಂದೆಡೆ ತವರಲ್ಲಿ ಒಂದೂ ಪೈನಲ್ ಸೋಲದ ಬಾಂಬೆ ಇನ್ನೊಂದೆಡೆ ಯುವಕರ ಹಾಗೂ ಕೆಲವು ಅನುಬವಿ ಆಟಗಾರರನ್ನೊಳಗೊಂಡ ಹೊಸ ಹುರುಪಿನ ಕರ‍್ನಾಟಕ, ಬಹುನಿರೀಕ್ಶಿತ ಪೈನಲ್ ನಲ್ಲಿ ಎದುರಾದವು. ಅಶೋಕ್ ಮಂಕಡ್ ರ ಮುಂದಾಳ್ತನದ ಬಲಾಡ್ಯ ಬಾಂಬೆಯನ್ನು ಅವರ ತವರಲ್ಲಿ ಮಣಿಸೋದು ಅಸಾದ್ಯ. ಮೊದಲೇ ಕರ‍್ನಾಟಕದ ಮುಕ್ಯ ಬ್ಯಾಟ್ಸ್ಮನ್ ಗಳಾದ ಗುಂಡಪ್ಪ ವಿಶ್ವನಾತ್ ಹಾಗೂ ಬ್ರಿಜೇಶ್ ಪಟೇಲ್ ಕಳಪೆ ಪಾರ‍್ಮ್ ನಲ್ಲಿದ್ದಾರೆ. ಹಾಗಾಗಿ ಈ ಪಂದ್ಯಕೇವಲ ಔಪಚಾರಿಕ, ಬಾಂಬೆ ಮತ್ತೊಮ್ಮೆ ಗೆಲ್ಲಲಿದೆ ಎಂಬುದೇ ಬಹುತೇಕ ಬಾಂಬೆ ಪತ್ರಕರ‍್ತರ ಅಂಬೋಣವಾಗಿತ್ತು.

ಬಾಂಬೆಯಲ್ಲಿ ನಡೆದ ಈ ಪೈನಲ್ ನಲ್ಲಿ ಟಾಸ್ ಗೆದ್ದ ನಾಯಕ ಬ್ರಿಜೇಶ್ ಬೌಲಿಂಗ್ ಆಯ್ದುಕೊಂಡರು. ಪಿಚ್ ಮೇಲೆ ಮುಂಜಾನೆ ಇದ್ದ ತೇವಾಂಶದ ಪ್ರಯೋಜನ ಪಡೆಯುವುದು ಅವರ ಯೋಚನೆಯಾಗಿತ್ತು. ಅವರ ಯೋಜನೆಯಂತೆ ವೇಗದ ಬೌಲರ್ ಗಳಾದ ಬಿನ್ನಿ ಹಾಗೂ ಕಾನ್ವಿಳ್ಕರ್ ಬೌಲಿಂಗ್ ಕೂಡ ಮಾಡಿದರು. ಆದರೆ ಕರ‍್ನಾಟಕದ ಕಳಪೆ ಕ್ಯಾಚಿಂಗ್ ಬಾಂಬೆಗೆ ವರವಾಯಿತು. ಮೊದಲ ದಿನವೇ ಒಟ್ಟು ಆರು ಕ್ಯಾಚ್ ಗಳನ್ನು ಕೈಚೆಲ್ಲಿ ನಂತರ ಬಾಂಬೆಯ ಬ್ಯಾಟಿಂಗ್ ನ ಪ್ರಹಾರಕ್ಕೆ ಸಿಲುಕಿದರು. ಚಂದ್ರಕಾಂತ್ ಪಂಡಿತ್ ರ 157 ರನ್ ಗಳ ಬಲದಿಂದ ಮೂರನೇ ದಿನದ ಬೆಳಗಿನ ಆಟದ ತನಕ ಒಟ್ಟು 193 ಓವರ್ ಗಳನ್ನುಎದುರಿಸಿ ಬರೋಬ್ಬರಿ 534 ರನ್ ಗಳಿಸಿ ಬಾಂಬೆ ತಂಡ ಮತ್ತೊಂದು ರಣಜಿ ಕಿರೀಟದ ಕನಸು ಕಾಣತೊಡಗಿತು. ಅಶ್ಟು ಹೊತ್ತು ಪೀಲ್ಡಿಂಗ್ ಮಾಡಿ ದೊಡ್ಡ ಮೊತ್ತವನ್ನು ಬೆನ್ನತ್ತುವುದು ದೊಡ್ಡ ಸವಾಲಾಗಿತ್ತು. 43 ಓವರ್ ಗಳನ್ನು ಬೌಲ್ ಮಾಡಿ ದಣಿದ್ದಿದ್ದ ಬಿನ್ನಿ ಓಪನಿಂಗ್ ಮಾಡುವುದು ತರವಲ್ಲ ಎಂದು ಬ್ರಿಜೇಶ್, ಸ್ಪೋಟಕ ಹೊಡೆತಗಳಿಗೆ ಹೆಸರುವಾಸಿಯಾಗಿದ್ದ ಕೀಪರ್ ಸದಾನಂದ್ ವಿಶ್ವನಾತ್ ರನ್ನು ಶ್ರೀನಿವಾಸ ಪ್ರಸಾದ್ ರೊಟ್ಟಿಗೆ ಓಪನಿಂಗ್ ಮಾಡಲು ಕಳಿಸುತ್ತಾರೆ. ಈ ಬದಲಾವಣೆ ಯಶಸ್ಸು ಕಾಣುತ್ತದೆ. ಸದಾನಂದ್ ವಿಶ್ವನಾತ್ 92 ರನ್ ಗಳಿಸಿ ಒಳ್ಳೆ ಅಡಿಪಾಯ ಹಾಕಿಕೊಡುತ್ತಾರೆ. ಬಳಿಕ ಬಂದ ಜಯಪ್ರಕಾಶ್ (89) ಹಾಗೂ ಬಿನ್ನಿ (115) ರನ್ ಗಳಿಸಿ ಗುರಿಯತ್ತ ತಂಡವನ್ನು ಕೊಂಡೊಯ್ಯುತ್ತಾರೆ. ಆದರೆ ದಿಗ್ಗಜರಾದ ಗುಂಡಪ್ಪ ವಿಶ್ವನಾತ್ (3) ಹಾಗೂ ಬ್ರಿಜೇಶ್ (18) ರನ್ ಗಳಿಗೆ ಔಟ್ ಆಗಿ ಬಾಂಬೆ ಪಾಳಯದಲ್ಲಿ ನಂಬಿಕೆ ಮೂಡಿಸುತ್ತಾರೆ. ಇಬ್ಬರೂ ಒಬ್ಬರ ಹಿಂದೆ ಒಬ್ಬರು ಹೊರನಡೆದಾಗ ಕರ‍್ನಾಟಕದ ಸ್ಕೋರ್ 293/6 ಆಗಿರುತ್ತದೆ. ಗುರಿಯಿಂದ ಇನ್ನೂ 240 ರನ್ ದೂರ ಇರುವಾಗ ಬಿನ್ನಿ ರೊಟ್ಟಿಗೆ ಅಬಿರಾಮ್ ಜೊತೆಯಾಗುತ್ತಾರೆ. ಇಬ್ಬರೂ ಜೊತೆಯಾಟದಲ್ಲಿ 154 ರನ್ ಕಲೆ ಹಾಕುತ್ತಾರೆ. ಅಬಿರಾಮ್ 69 ರನ್ ಗಳಕೊಡುಗೆ ನೀಡುತ್ತಾರೆ. ಇವರಿಬ್ಬರೂ ಔಟ್ ಆದಾಗ ಕರ‍್ನಾಟಕದ ಸ್ಕೋರ್ 470/8 ಆಗಿರುತ್ತದೆ. ಕೇವಲ ಎರಡು ವಿಕೆಟ್ ಗಳೊಂದಿಗೆ ಇನ್ನೂ 65 ರನ್ಗಳಿಸಬೇಕಾದಂತ ಅಸಾದ್ಯವೆಂಬಂತಿದ್ದ ಕಾರ‍್ಯ ವಿಜಯಕ್ರಿಶ್ಣ ಹಾಗೂ ಕಾನ್ವಿಳ್ಕರ್ ರ ಮುಂದಿರುತ್ತದೆ. ಆದರೆ ವಿಜಯಕ್ರಿಶ್ಣ ದಿಟ್ಟತನ ಮೆರೆದು ಬಿರುಸಿನ ಹೊಡೆತಗಳಿಗೆ ಮುಂದಾಗುತ್ತಾರೆ. ನಾಲ್ಕೇ ಓವರ್ ಗಳಲ್ಲಿ 42 ರನ್ ರನ್ ಗಳಿಸುತ್ತಾರೆ. ಬಾಂಬೆ ಆಟಗಾರರು ಇದನ್ನು ಎದುರು ನೋಡಿರುವುದಿಲ್ಲ. ಎಲ್ಲರೂ ಗರಬಡಿದವರಂತೆ ನಿಲ್ಲುತ್ತಾರೆ. ಈ ಜೊತೆಯಾಟ ಕ್ಶಣಮಾತ್ರದಲ್ಲಿ 56 ರನ್ ಕಲೆಹಾಕುತ್ತದೆ. ಕಡೆಗೆ ವಿಜಯಕ್ರಿಶ್ಣ ಒಂಬತ್ತನೆಯವರಾಗಿ ಔಟ್ ಆದಾಗ ಇನ್ನಿಂಗ್ಸ್ ಮುನ್ನಡೆಗೆ ಇನ್ನೂ 9 ರನ್ ಗಳು ಬೇಕಿರುತ್ತವೆ. ಆಗ ರಗುರಾಮ್ ಬಟ್ ಕಾನ್ವಿಳ್ಕರ್ ರನ್ನು ಸೇರುತ್ತಾರೆ. ಬಟ್ ಅವರು ಒಂದೂ ರನ್ ಗಳಸದೆ ಎಲ್ಲಾ ಎಸೆತಗಳನ್ನು ಬ್ಲಾಕ್ ಮಾಡಿ ಕಾನ್ವಿಳ್ಕರ್ ರಿಗೆ ಬೆಂಬಲ ನೀಡುತ್ತಾರೆ. ಕಾನ್ವಿಳ್ಕರ್ 32 ರನ್ ಗಳಿಸಿ ಕನ್ನಡಿಗರ ಪಡೆಯನ್ನು ಮುನ್ನಡೆಯ ಗೆರೆಯನ್ನು ದಾಟಿಸುತ್ತಾರೆ. ಕನ್ನಡಿಗರು ಪೆನಾಲ್ಟಿರನ್ ಗಳೊಂದಿಗೆ 551 ರನ್ ಗಳಿಗೆ ಆಲೌಟ್ ಆಗಿ 17 ರನ್ ಗಳ ಮೊದಲ ಇನ್ನಿಂಗ್ಸ್ ಪಡೆಯುತ್ತಾರೆ. ಬಿಸಿಲ ಬೇಗೆಗೆ ದಣಿದಿದ್ದ ರಗುರಾಮ್ ಬಟ್ ಪೆವಿಲಿಯನ್ ನತ್ತ ಹಿಂದಿರುಗುವಾಗ ಕುಸಿದು ಬೀಳುತ್ತಾರೆ. ಎಲ್ಲರೂ ಕ್ಶಣ ಕಾಲ ಗಾಬರಿಯಾಗುತ್ತಾರೆ ಆದರೆ ಕೆಲ ಹೊತ್ತಿನಲ್ಲೇ ಚೇತರಿಸಿಕೊಂಡು ಬಟ್ ಅವರು ಮತೊಮ್ಮೆ ಬೌಲ್ಮಾಡಲು ಸಜ್ಜಾಗುತ್ತಾರೆ.

ಆಟ ಇನ್ನೂ ಮುಗಿದಿಲ್ಲ!!

ನಾಲ್ಕನೇ ದಿನದಲ್ಲಿ ಕೇವಲ ಒಂದು ಗಂಟೆ ಉಳಿದಿರುವಾಗ ಮುನ್ನಡೆ ಪಡೆದ ಕರ‍್ನಾಟಕ ಇನ್ನೇನು ಪಂದ್ಯ ಮುಗಿಯಿತು ಎಂದು ಸಂಬ್ರಮ ಪಡುತ್ತಾರೆ. ಆದರೆಬಾಂಬೆಯ ಲೆಕ್ಕಾಚಾರ ಬೇರೆ ಇರುತ್ತದೆ. ಬೇಗನೆ ರನ್ ಗಳಿಸಿ ಕರ‍್ನಾಟಕವನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಆಲೌಟ್ ಮಾಡಿ ಪಂದ್ಯ ಗೆಲ್ಲುವ ಯೋಜನೆ ಬಾಂಬೆ ರೂಪಿಸಿರುತ್ತದೆ. ನಾಲ್ಕನೇ ದಿನದ ಆಟದ ಬಳಿಕ ಆ ರಾತ್ರಿ ಬಾಂಬೆಯ ಸಂದೀಪ್ ಪಾಟೀಲ್ ಕರ‍್ನಾಟಕ ತಂಡಕ್ಕೆ ಪಾರ‍್ಟಿಯೊಂದನ್ನು ಏರ‍್ಪಡಿಸುತ್ತಾರೆ. ಬಾಂಬೆಯ ಮಾಜಿ ಆಟಗಾರರು ಹಾಗೂ ಹಿಂದಿ ಸಿನಿ ರಂಗದ ನಟ-ನಟಿಯರು ಕೂಡ ಪಾರ‍್ಟಿಯಲ್ಲಿ ಪಾಲ್ಗೊಳ್ಳುತ್ತಾರೆ. ರಾತ್ರಿ ಸುಮಾರು 10:30 ಕ್ಕೆ ಅಲ್ಲಿಂದ ಹೊರನಡೆದ ಮ್ಯಾನೇಜರ್ ಡಾ|| ಕೆ. ತಿಮ್ಮಪ್ಪಯ್ಯ, ಕರ‍್ನಾಟಕದ ಆಟಗಾರರನ್ನೆಲ್ಲಾ ಕರೆದು ಬೇಗನೆ ಪಾರ‍್ಟಿ ಮುಗಿಸಿಕೊಂಡು ಹೋಟೆಲ್ ತಲುಪುವಂತೆ ಎಚ್ಚರಿಸುತ್ತಾರೆ. ಆದರೆ ಅಸಲಿಗೆ ಅವರು ಹೋದ ನಂತರವೇ ಪಾರ‍್ಟಿ ಮೊದಲ್ಗೊಂಡು ತಡರಾತ್ರಿ ವರೆಗೂ ನಡೆಯುತ್ತದೆ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.

ಕಡೇ ದಿನದ ರೋಚಕ ಆಟ

ಐದನೇ ದಿನ ಬಾಂಬೆ ಬಿರುಸಿನ ಆಟಕ್ಕೆ ಮುಂದಾಗುತ್ತದೆ. ಸಂದೀಪ್ ಪಾಟೀಲ್ ಔಟಾಗದೆ ಅಬ್ಬರದ 121 ರನ್ ಗಳಿಸಿ ಅವರ ತಂಡಕ್ಕೆ ಪಂದ್ಯದಲ್ಲಿ ಮರಳುವ ಅವಕಾಶ ಮಾಡಿಕೊಡುತ್ತಾರೆ. ಕೇವಲ 27 ಓವರ್ ಗಳಲ್ಲಿ 213 ರನ್ ಗಳಿಸಿ ಬಾಂಬೆ, ಕರ‍್ನಾಟಕದ ಮುಂದೆ ಗೆಲ್ಲಲು 70 ಓವರ್ ಗಳಲ್ಲಿ 197 ರನ್ ಗಳ ಗುರಿಇಡುತ್ತದೆ. ಕಡೆ ದಿನದ ಪಿಚ್ ಮೇಲೆ ಏನಾದರೂ ಆಗಬಹುದು ಎಂಬುವ ಅಪಾಯವನ್ನು ಅರಿತ ಕರ‍್ನಾಟಕದ ಆಟಗಾರರು ಎಚ್ಚರಿಕೆಯ ಆಟಕ್ಕೆಮುಂದಾಗುತ್ತಾರೆ. ಸದಾನಂದ್ ವಿಶ್ವನಾತ್ (77) ಹಾಗೂ ಬಿನ್ನಿ (45) ರನ್ ಗಳಿಸುತ್ತಾರೆ. 70 ಓವರ್ ಗಳಲ್ಲಿ 5 ವಿಕೆಟ್ ಗಳಿಗೆ 179 ರನ್ ಗಳಿಸಿ ಗೆಲುವಿನ ಗುರಿಯಿಂದ ಕೇವಲ 18 ರನ್ ದೂರ ಇರುವಾಗ, ಬ್ರಿಜೇಶ್ ಮತ್ತು ಅಬಿರಾಮ್ ಜೊತೆಯಾಟದ ವೇಳೆ ಪಂದ್ಯ ಡ್ರಾ ನಲ್ಲಿ ಕೊನೆಗೊಂಡು ಕರ‍್ನಾಟಕ ಮೊದಲ,ಇನ್ನಿಂಗ್ಸ್ ಮುನ್ನಡೆಯ ಮೇಲೆ ತನ್ನ ಮೂರನೇ ರಣಜಿ ಟೂರ‍್ನಿಯನ್ನು ಗೆದ್ದು ಬೀಗುತ್ತದೆ! ಬಾಂಬೆಯನ್ನು ಪೈನಲ್ ನಲ್ಲಿ ಅವರ ತವರಲ್ಲಿ ಮೊದಲ ಬಾರಿಗೆ ಮಣಿಸಿದ ಶ್ರೇಯ ಕನ್ನಡಿಗರ ಪಾಲಾಗುತ್ತದೆ.

ಪಂದ್ಯದ ಬಳಿಕ ಕರ‍್ನಾಟಕದ ಎಚ್ಚರಿಕೆಯ ಆಟ ಬಾಂಬೆ ಪತ್ರಕರ‍್ತರಿಂದ ತೀವ್ರ ಟೀಕೆಗೆ ಗುರಿಯಾಗುತ್ತದೆ. ಬಾಂಬೆಯ ಕ್ಯಾತ ಕ್ರಿಕೆಟ್ ವರದಿಗಾರ ವಾಸು ಪರಾಂಜಪೆ ರೇಡಿಯೋ ನಲ್ಲಿ ನಾಯಕ ಬ್ರಿಜೇಶ್ ರ ತಂತ್ರವನ್ನು ಕ್ರಿಕೆಟ್ ಆಟಕ್ಕೆ ಕಳಂಕ ಎಂದು ಟೀಕಿಸುತ್ತಾರೆ. ಇದಕ್ಕೆಬ್ರಿಜೇಶ್ ಅವರು ಕೂಡ ಸರಿಯಾದ ಪ್ರತ್ಯುತ್ತರ ನೀಡುತ್ತಾರೆ. “ಬಾಂಬೆ ಮಂದಿಗೆ ಅವರ ತಂಡ ಗೆಲ್ಲುವುದು ಬೇಕು. ಹಾಗಾಗಿ ನಮ್ಮ ಮೇಲೆ ಈ ರೀತಿ ಒತ್ತಡಹೇರುತ್ತಾರೆ. ಗುರಿ ಬೆನ್ನತ್ತಲು ಹೋಗಿ ನಾವು ಇನ್ನೆರಡು ವಿಕೆಟ್ ಕಳೆದುಕೊಂಡಿದ್ದರೆ ದೊಡ್ಡ ಅಪಾಯಕ್ಕೆ ಸಿಲುಕುತ್ತಿದ್ದೆವು. ವಾಸು ಅವರಿಗೆ ಬೇಕಿದ್ದುದು ಅದೇ”. ಈಗ ನಾವು ರಣಜಿ ಟೂರ‍್ನಿ ಗೆದ್ದಾಗಿದೆ. ಅದು ಅಶ್ಟೇ ಮುಕ್ಯ. ಗುರಿ ಬೆನ್ನತ್ತಿ ಗೆದ್ದಿದ್ದರೆ ನಮಗೇನೂ ಎರಡು ಟ್ರೋಪಿ ಕೊಡುತ್ತಿದ್ದರೆ ಎಂದು ಕೇಳಿ, ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿ ನಾಯಕ ಬ್ರಿಜೇಶ್ ಟ್ರೋಪಿಯೊಂದಿಗೆ ತವರು ಬೆಂಗಳೂರಿಗೆ ಮರಳುತ್ತಾರೆ. ಟ್ರೋಪಿ ಗೆಲ್ಲಲಾಗುತ್ತಿಲ್ಲ ಎಂಬ ಹಲವು ವರ‍್ಶಗಳಹತಾಶೆ ಅಲ್ಲಿಗೆ ಕೊನೆಗೊಳ್ಳುತ್ತದೆ.

ಅಪರೂಪದ ವಿಶೇಶ ಗೆಲುವು

1982/83 ರ ರಣಜಿ ಗೆಲುವು ಬಹು ಬಗೆಯಲ್ಲಿ ವಿಶೇಶವೆನಿಸಿದೆ. ಸ್ಪಿನ್ ದಂತಕತೆಗಳಾದ ಪ್ರಸನ್ನ ಹಾಗೂ ಚಂದ್ರ ಆ ವೇಳೆಗೆ ಆಟದಿಂದ ದೂರ ಸರಿದಿರುತ್ತಾರೆ. ಗುಂಡಪ್ಪ ವಿಶ್ವನಾತ್ ಮತ್ತು ಬ್ರಿಜೇಶ್ ರ ಬ್ಯಾಟ್ ಇಂದ ಹೆಚ್ಚು ರನ್ ಕೂಡ ಬಾರದೆ ಮೂರೂ ನಾಕೌಟ್ ಪಂದ್ಯಗಳನ್ನು ತವರಿಂದಾಚೆ ಕ್ರಮವಾಗಿ ಬರೋಡ, ಪರೀದಾಬಾದ್, ಬಾಂಬೆಯಲ್ಲಿ ಆಡಿ, ರೋಜರ್ ಬಿನ್ನಿ, ಸದಾನಂದ್ ವಿಶ್ವನಾತ್, ಕಾನ್ವಿಳ್ಕರ್, ಶ್ರೀನಿವಾಸ್ ಪ್ರಸಾದ್, ರಗುರಾಮ್ ಬಟ್ ರಂತಹ ಯುವ ಪ್ರತಿಬೆಗಳ ಕೊಡುಗೆಯಿಂದ ಗೆದ್ದು ಬಂದದ್ದು ಕರ‍್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಸುವರ‍್ಣಾಕ್ಶರಗಳಲ್ಲಿ ಬರೆದಿಡಬೇಕಾದ ಗೆಲುವು.

(ಚಿತ್ರ ಸೆಲೆ: twitter/@ranjikarnataka)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: