ಜೆನ್ ಕತೆ – ಮನದಲ್ಲೇ ಒಯ್ಯುವುದು

– .

 

zen monks, ಜೆನ್ ಸನ್ಯಾಸಿಗಳು

ಇಬ್ಬರು ಜೆನ್ ಸನ್ಯಾಸಿಗಳು, ಟಾನ್ಜಾನ್ ಮತ್ತು ಎಕಿಡೋ, ತೀರ‍್ತಯಾತ್ರೆ ಕೈಗೊಂಡಿದ್ದರು. ಮಳೆಗಾಲವಾದದ್ದರಿಂದ ಬಾರೀ ಮಳೆ ಸುರಿಯುತ್ತಿತ್ತು. ಹಾದಿಯೆಲ್ಲಾ ನೀರು ತುಂಬಿ ಕೆಸರಾಗಿತ್ತು. ಹಾದಿಯಲ್ಲಿ ಹಾಗೇ ಮುಂದುವರೆಯುತ್ತಿದ್ದಂತೆ ಅಲ್ಲೊಂದು ತಿರುವು ಕಂಡಿತು. ತಿರುವಿನಲ್ಲಿ ಮುನ್ನಡೆಯುತ್ತಿದ್ದಂತೆ, ಜೆನ್ ಸನ್ಯಾಸಿಗಳ ಕಣ್ಣಿಗೆ ಅತಿ ಸುಂದರವಾದ ಹುಡುಗಿಯ ದರ‍್ಶನವಾಯಿತು. ಆಕೆ ಆ ಹಾದಿಯಲ್ಲಿದ್ದ ಕೆಸರಿನ ಹೊಂಡವನ್ನು ದಾಟಲು ಸಾದ್ಯವಾಗದೆ, ಅಲ್ಲೇ ನಿಂತು ಮುಂದಿನ ದುರ‍್ಗಮ ಹಾದಿಯತ್ತ ನೋಡುತ್ತಿದ್ದಳು. ದಾಟಲು ಉಪಾಯ ಹುಡುಕುತ್ತಿದ್ದಳು. ಇದನ್ನು ಗಮನಿಸಿದ ಜೆನ್ ಸನ್ಯಾಸಿ ಟಾನ್ಜಾನ್, ಆ ಹುಡುಗಿಯನ್ನು ತನ್ನ ತೋಳುಗಳಿಂದ ಮೇಲೆತ್ತಿಕೊಂಡ. ಆತನ ಸಹ ಸನ್ಯಾಸಿ, ಎಕಿಡೋ, ಆ ದ್ರುಶ್ಯವನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ. ಟಾನ್ಜಾನ್ ಆ ಹುಡುಗಿಯನ್ನು ಹೊತ್ತುಕೊಂಡು, ಕೆಸರಿನ ಹೊಂಡ ದಾಟಿಸಿ, ಆಚೆ ಬದಿಯವರೆಗೂ ಹೋಗಿ, ಆಕೆಯನ್ನು ಕೆಳೆಗಿಳಿಸಿದ.

ಎಕಿಡೋ ಈ ಗಟನೆ ಬಗ್ಗೆ ಆ ಸಮಯದಲ್ಲಿ ಯಾವುದೇ ಸೊಲ್ಲೆತ್ತಲಿಲ್ಲ. ಎಲ್ಲವನ್ನೂ ಮನದಲ್ಲೇ ಮಂತಿಸುತ್ತಿದ್ದ. ಜೆನ್ ಸನ್ಯಾಸಿಗಳಿಬ್ಬರೂ ತಮ್ಮ ತೀರ‍್ತಯಾತ್ರೆಯ ಪ್ರಯಾಣ ಮುಂದುವರೆಸಿದ್ದರು. ರಾತ್ರಿ ಸಮೀಪಿಸಿದಾಗ, ಮಾಮೂಲಿನಂತೆ ಹತ್ತಿರದಲ್ಲೇ ಇದ್ದ ದೇವಸ್ತಾನದಲ್ಲಿ ಆಶ್ರಯ ಪಡೆದರು. ಎಕಿಡೋಗೆ ಮುಂಜಾನೆ ಆ ಹುಡುಗಿಯನ್ನು ಎತ್ತಿ ಹೊಂಡ ದಾಟಿಸಿದ್ದ ಟಾನ್ಜಾನ್ ವರ‍್ತನೆ ಸರಿ ಎಂದು ಕಂಡುಬಂದಿರಲಿಲ್ಲ. ಮನದಲ್ಲೇ ಅದು ಕುದಿಯುತ್ತಿತ್ತು. ತಡೆಯಲು ಸಾದ್ಯವಾಗದೆ “ಟಾನ್ಜಾನ್, ನಾವುಗಳು ಸನ್ಯಾಸಿಗಳು. ಹೆಣ್ಣು, ಹೊನ್ನು, ಮಣ್ಣುಗಳನ್ನು ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಿದ್ದೇವೆ. ಅಂತಹುದರಲ್ಲಿ ನೀನು ಅದು ಹೇಗೆ ಆ ಸುಂದರ ಹುಡುಗಿಯನ್ನು ಹೊತ್ತು, ಆ ಹೊಂಡ ದಾಟಿಸಿದ್ದು? ನೀನು ಏಕೆ ಇಂತಹ ಕೆಲಸಕ್ಕೆ ಕೈ ಹಾಕಿದೆ? ಇದು ಸನ್ಯಾಸತ್ವಕ್ಕೇ ಕಳಂಕ” ಎಂದು ಬೇಸರದಿಂದಲೇ ಕೇಳಿದ ಎಕಿಡೋ.

ಎಕಿಡೋ ಮಾತಿಗೆ ಟಾನ್ಜಾನ್ ಬೇಸರಿಸಿಕೊಳ್ಳಲಿಲ್ಲ, ಕೋಪಿಸಿಕೊಳ್ಳಲಿಲ್ಲ. ಇದನ್ನು ಯಾರ ಬಳಿಯೂ ಪ್ರಸ್ತಾಪಿಸದಂತೆ ಕೋರಲಿಲ್ಲ. ತಪ್ಪು ಮಾಡಿದವರಂತೆ ಬಯಪಡಲಿಲ್ಲ. ಬದಲಿಗೆ ತನ್ನ ಸಹ ಸನ್ಯಾಸಿಯ ಹೆಗಲ ಮೇಲೆ ಆತ್ಮೀಯವಾಗಿ ಕೈ ಹಾಕಿ “ಗೆಳೆಯನೇ, ನಾನು ಆ ಸುಂದರ ಹುಡುಗಿಯನ್ನು ಹೊತ್ತಿದ್ದೇನೋ ನಿಜ. ಹೊಂಡ ದಾಟಿಸಿದ್ದೂ ನಿಜ. ಹೊಂಡ ದಾಟಿಸಿದ ಕೂಡಲೇ ಆಕೆಯನ್ನು ಆ ತಿರುವಿನಲ್ಲಿ ಇಳಿಸಿ ಬಿಟ್ಟೆ. ಬಿಟ್ಟೆ ಎಂದರೆ ನೆನಪಿನಿಂದಲೂ ಸಹ ಅಲ್ಲೇ ಬಿಟ್ಟು ಬಿಟ್ಟೆ. ಆದರೆ ಆ ಗಟನೆಯನ್ನು ನೀನಿನ್ನೂ ನೆನಪಿಸಿಕೊಂಡು, ಆ ಹುಡಗಿಯನ್ನು ಮನದಲ್ಲೇ ಒಯ್ಯುತ್ತಿರುವಂತೆ, ಹೊತ್ತಿರುವಂತೆ ಕಾಣಿಸುತ್ತಿದೆ!” ಎಂದು ಮುಗುಳ್ನಕ್ಕ. ಎಕಿಡೋಗೆ ತನ್ನ ತಪ್ಪಿನ ಅರಿವಾಗಿತ್ತು. ತಗ್ಗಿಸಿದ ತಲೆಯನ್ನು ಮೇಲೆತ್ತಲೇ ಇಲ್ಲ.

(ಸೆಲೆ: buddhagroove.com, medium.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: