ಕರ‍್ನಾಟಕ ಕ್ರಿಕೆಟ್ ತಂಡದ ಆರನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.

ಹಿಂದಿನ ವರುಶ 1997/98 ರಲ್ಲಿ ಗೆದ್ದ ರಣಜಿ ಟ್ರೋಪಿಯನ್ನು ಉಳಿಸಿಕೊಳ್ಳಲು ಕರ‍್ನಾಟಕ ತಂಡ 1998/99 ರ ಸಾಲಿನ ಟೂರ‍್ನಿಯಲ್ಲಿ ತನ್ನಂಬಿಕೆಯಿಂದ ಕಣಕ್ಕಿಳಿಯಿತು. ಕಳೆದ ಮೂರು ವರುಶಗಳಲ್ಲಿ ಎರಡು ಬಾರಿ ಟೂರ‍್ನಿ ಗೆದ್ದಿದ್ದರರಿಂದ ರಾಜ್ಯ ತಂಡವನ್ನು ಮತ್ತೊಮ್ಮೆ ಟೂರ‍್ನಿ ಗೆಲ್ಲುವ ನೆಚ್ಚಿನ ತಂಡವೆಂದೇ ಎಲ್ಲರೂ ಎಣಿಸಿದ್ದರು. ಕರ‍್ನಾಟಕದ ಎಲ್ಲಾ ಅಂತರಾಶ್ಟ್ರೀಯ ಆಟಗಾರರು ಬಾರತ ತಂಡದೊಂದಿಗೆ ಶಾರ‍್ಜಾ ಪ್ರವಾಸಕ್ಕೆ ತೆರಳಿದ್ದರಿಂದ ಸುಜಿತ್ ಸೋಮಸುಂದರ್‌ರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಹೆಚ್ಚು ಅನಾನುಬವಿ ಯುವಕರಿದ್ದ ಹೊಸ ಪಡೆಯನ್ನು ಮುನ್ನಡೆಸುವ ದೊಡ್ಡ ಹೊಣೆ ಸುಜಿತ್ ರ ಹೆಗಲಮೇಲಿತ್ತು.

1998/99 – ಲೀಗ್ ಹಂತ

ಆಂದ್ರ ಎದುರು ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ದೊಡ್ಡ ಗಣೇಶ್ ರ (6/90) ಬೌಲಿಂಗ್ ನಿಂದ ಆಂದ್ರವನ್ನು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸಿ ಸಣ್ಣ ಮುನ್ನಡೆ ಪಡೆದರೂ, ಆಂದ್ರ ಎರಡನೇ ಇನ್ನಿಂಗ್ಸ್ ನಲ್ಲಿ ಚೇತರಿಸಿಕೊಂಡು 424 ರನ್ ಕಲೆ ಹಾಕಿತು. ಈ ದೊಡ್ಡ ಮೊತ್ತಕ್ಕೆ ಉತ್ತರವಾಗಿ ಅರುಣ್ ಕುಮಾರ್ ರ ಶತಕದ (141) ಬಲದ ಮೇಲೆ ಕರ‍್ನಾಟಕ 300/5 ಗಳಿಸಿ ಡ್ರಾಗೆ ತ್ರುಪ್ತಿ ಪಟ್ಟಿತು. ಎರಡನೇ ಪಂದ್ಯವನ್ನು ತಿರುನಲ್ವೇಲಿಯಲ್ಲಿ ತಮಿಳುನಾಡು ಎದುರಿಗೆ ಆಡಿದ ಕನ್ನಡಿಗರು ಮತ್ತೊಂದು ಡ್ರಾ ಪಡೆದರು. ವಿಜಯ್ ಬಾರದ್ವಾಜ್ 171 ಹಾಗೂ ಸೋಮಸುಂದರ್ 106 ಗಳಿಸಿದ್ದು ಹಾಗೂ ನಿರ‍್ಜೀವ ಪಿಚ್ ಮೇಲೆ ವೇಗಿ ಗಣೇಶ್ 45 ಓವರ್ ಬೌಲ್ ಮಾಡಿದ್ದು ಈ ಪಂದ್ಯದ ಮುಕ್ಯಾoಶಗಳು. ಕರ‍್ನಾಟಕದ 439 ರನ್ ಗಳನ್ನು ಬೆನ್ನತ್ತಿದ್ದ ತಮಿಳುನಾಡು ಮೊದಲ ಇನ್ನಿಂಗ್ಸ್ ನಲ್ಲಿ 225/8 ಗಳಿಸುವಶ್ಟರಲ್ಲಿ ನಿಯೋಜಿತ ನಾಲ್ಕು ದಿನಗಳು ಮುಗಿದು ಪಾಯಿಂಟ್ ಗಳು ಸಮಾನವಾಗಿ ಹಂಚಿಕೆಯಾದವು. ನಾಲ್ಕು ದಿನಗಳಲ್ಲಿ ಎರಡು ಇನ್ನಿಂಗ್ಸ್ ಕೂಡ ಪೂರೈಸದೇ ಇದ್ದದ್ದನ್ನು ಕಂಡು ಪಿಚ್ ಬಗ್ಗೆ ಎಲ್ಲಾ ವಲಯಗಳಿಂದ ಟೀಕೆಗಳು ಕೇಳಿ ಬಂದವು. ಎರಡು ಪಂದ್ಯಗಳಲ್ಲಿಯೂ ಗೆಲುವು ಪಡೆಯದೆ, ಹೆಚ್ಚು ಪಾಯಿಂಟ್ ಪಡೆಯದೆ ಕರ‍್ನಾಟಕ ತಂಡ ಸಣ್ಣ ಒತ್ತಡಕ್ಕೆ ಸಿಲುಕಿತು. ದಕ್ಶಿಣ ವಲಯದ ಲೀಗ್ ಹಂತದಿಂದ ಮುಂದಿನ ರೌಂಡ್ ರಾಬಿನ್ ಹಂತ ತಲುಪಲು ಕರ‍್ನಾಟಕಕ್ಕೆ ಮುಂದಿನ ಮೂರೂ ಪಂದ್ಯಗಳು ಮುಕ್ಯವಾದವು. ಆ ಹೊತ್ತಿಗೆ ಸರಿಯಾಗಿ ಬಾರತ ತಂಡದಿಂದ ಹತ್ತು ದಿನಗಳ ಬಿಡುವು ಸಿಕ್ಕಿದ್ದರಿಂದ ರಾಹುಲ್ ದ್ರಾವಿಡ್ ಹೈದರಾಬಾದ್ ಎದುರಿನ ಪಂದ್ಯಕ್ಕೆ ನಾಯಕನಾಗಿ ರಾಜ್ಯ ತಂಡ ಸೇರಿಕೊಂಡರೆ ವೆಂಕಟೇಶ್ ಪ್ರಸಾದ್ ಕೂಡ ಮರಳಿ, ತಂಡಕ್ಕೆ ಬೌಲಿಂಗ್ ಬಲ ನೀಡಿದರು. ನಾಯಕ ದ್ರಾವಿಡ್ ರದ್ವಿಶತಕದ (210) ನೆರವಿನಿಂದ 458 ರನ್ ಗಳಿಸಿದ ಕರ‍್ನಾಟಕ ಪ್ರಸಾದ್ ರ ಮಾರಕ ಬೌಲಿಂಗ್ (4/56; 5/36) ನಿಂದ ಇನ್ನಿಂಗ್ಸ್ ಹಾಗೂ 3 ರನ್ ಗಳಿಂದ ಪಂದ್ಯ ಗೆದ್ದು ಈ ಸಾಲಿನ ಮೊದಲ ಗೆಲುವು ದಾಕಲಿಸಿತು. ಈ ಒಂದು ಪಂದ್ಯದ ಬಳಿಕ ದ್ರಾವಿಡ್ ಹಾಗೂ ಪ್ರಸಾದ್ ಬಾರತ ತಂಡಕ್ಕೆ ತೆರಳಿದರು. ಹಾಗಾಗಿ ಮತ್ತೊಮ್ಮೆ ಸೋಮಸುಂದರ್ ತಂಡದ ನಾಯಕರಾದರು. ನಂತರದ ಗೋವಾ ಎದುರಿನ ಇನ್ನಿಂಗ್ಸ್ ಹಾಗೂ 73 ರನ್ ಗಳ ಗೆಲುವಿನಲ್ಲಿ ಅರುಣ್ ಕುಮಾರ್ ರ 131; ಗಣೇಶ್ ರ (4/24), ಮನ್ಸೂರ್ ರ (4/30) ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಬಾರದ್ವಾಜ್ ರ (6/34) ಪಾತ್ರ ಹಿರಿದಿತ್ತು. ದಕ್ಶಿಣ ವಲಯದ ಕಡೇ ಲೀಗ್ ಪಂದ್ಯದಲ್ಲಿ ಕೇರಳ ಎದುರು ಸೆಣಸಿದ ಕರ‍್ನಾಟಕ ಬಾರದ್ವಾಜರ 200 ರನ್ ಗಳ ನೆರವಿನಿಂದ 583 ಗಳಿಸಿ ಪಾಲೊ-ಆನ್ ಹೇರಿದರೂ ಪಂದ್ಯ ಡ್ರಾನಲ್ಲಿ ಕೊನೆಗೊಂಡು ಮೊದಲ ಇನ್ನಿಂಗ್ಸ್ ಮುನ್ನಡೆಯ ಪಾಯಿಂಟ್ಸ್ ಅಶ್ಟೇ ಪಡೆಯಿತು. ಒಂದೂ ಪಂದ್ಯ ಸೋಲದೆ ಒಟ್ಟು ಎರಡು ಗೆಲುವು ಎರಡು ಇನ್ನಿಂಗ್ಸ್ ಮುನ್ನಡೆ ಪಡೆದು ರಾಜ್ಯ ತಂಡ ಮುಂದಿನ ರೌಂಡ್ ರಾಬಿನ್ ಹಂತ ತಲುಪಿತು.

ಎರಡನೇ ಹಂತ – ರೌಂಡ್ ರಾಬಿನ್

ಈ ಹಂತದ ಮೊದಲನೇ ಪಂದ್ಯವನ್ನು ಬಿಲಾಯಿಯಲ್ಲಿ ಮದ್ಯಪ್ರದೇಶದ ಎದುರು ಆಡಿ ರಾಜ್ಯ ತಂಡ 11 ರನ್ ಗಳ ಸಣ್ಣ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ನಂತರಈ ಹಂತದ ಇನ್ನುಳಿದ ಮೂರೂ ಪಂದ್ಯಗಳನ್ನು ತವರಲ್ಲೇ ಆಡಲಿದ್ದ ಕರ‍್ನಾಟಕಕ್ಕೆ ಒಂದು ಬಗೆಯಲ್ಲಿ ತನ್ನಂಬಿಕೆ ಹೆಚ್ಚಾದದ್ದು ಸುಳ್ಳಲ್ಲ. ಎರಡನೇ ಪಂದ್ಯದಲ್ಲಿ ಎದುರಾದ ಹರಿಯಾಣ ತಂಡವನ್ನು ಗಣೇಶ್ ರ ಬೌಲಿಂಗ್ (3/71; 5/114), ಬಾರದ್ವಾಜ್ ರ 175 ಹಾಗೂ ತಿಲಕ್ ನಾಯ್ಡುರ 123 ರನ್ ಗಳ ಹೊಣೆಗಾರಿಕೆಯ ಬ್ಯಾಟಿಂಗ್ ನಿಂದ ಇನ್ನಿಂಗ್ಸ್ ಹಾಗೂ 36 ರನ್ ಗಳಿಂದ ಮಣಿಸಿ ಮತ್ತೊಮ್ಮೆ ಕರ‍್ನಾಟಕ ಗೆಲುವಿನ ಹಾದಿಗೆ ಮರಳಿತು. ಬಳಿಕ ಈ ಹಂತದ ಮೂರನೇ ಪಂದ್ಯದಲ್ಲಿ ಸೌರಾಶ್ಟ್ರವನ್ನು 197 ರನ್ ಗಳಿಂದ ಸೋಲಿಸಲು ಗಣೇಶ್ (5/79; 5/65) ಬೌಲಿಂಗ್ ನಲ್ಲಿ ನೆರವಾದರೆ ಬ್ಯಾಟಿಂಗ್ ನಲ್ಲಿ ಅರುಣ್ ಕುಮಾರ್ 151, ಎ.ವಿಜಯ್ 97 ಹಾಗೂ ಬಾರದ್ವಾಜ್ 87 ರನ್ ಗಳ ಕೊಡುಗೆ ನೀಡಿದರು. ಕಡೇ ಪಂದ್ಯವನ್ನು ಬಿಹಾರ್ ಎದುರು ಆಡಿದ ಕರ‍್ನಾಟಕ ಅರುಣ್ ಕುಮಾರ್ 135 ಹಾಗೂ ಬಾರದ್ವಾಜ್ 124 ರನ್ ಗಳ ಬಲದ ಮೇಲೆ 497 ರನ್ ಕಲೆಹಾಕಿ ಇನ್ನಿಂಗ್ಸ್ ಹಾಗೂ 87 ರನ್ ಗಳ ನಿರಾಯಾಸ ಗೆಲುವು ಪಡೆಯಿತು. ಬೌಲಿಂಗ್ ನಲ್ಲಿ ಆನಂದ್ ಎಲವಿಗಿ (5/41) ಮೊದಲ ಇನ್ನಿಂಗ್ಸ್ ನಲ್ಲಿ ಮಿಂಚಿದರೆ ಎರಡನೇ ಇನ್ನಿಂಗ್ಸ್ ನಲ್ಲಿ ಜೋಶಿ (5/48) ಗಮನ ಸೆಳೆದರು. ಎರಡನೇ ಹಂತದ ಒಟ್ಟು ನಾಲ್ಕು ಪಂದ್ಯಗಳಲ್ಲಿ ಮೂರು ದೊಡ್ಡ ಗೆಲವುಗಳನ್ನುಪಡೆದ ಕರ‍್ನಾಟಕ ನಿರಾಯಾಸವಾಗಿ ಮತ್ತೊಂದು ಸೆಮಿಪೈನಲ್ ಗೆ ಲಗ್ಗೆ ಇಟ್ಟಿತು.

ಸೆಮಿಪೈನಲ್ – ಎದುರಾಳಿ ಪಂಜಾಬ್

ವಿಕ್ರಮ್ ರಾತೋಡ್ ನಾಯಕತ್ವದ ಪಂಜಾಬ್ ತಂಡದಲ್ಲಿ ಅಂತರಾಶ್ಟ್ರೀಯ ಆಟಗಾರರಾದ ನವಜೋತ್ ಸಿದು, ಪಂಕಜ್ ದರ‍್ಮಾನಿ, ಹರ‍್ಬಜನ್ ಸಿಂಗ್ ಜೊತೆ ಅದಾಗಲೇ ದೇಸೀ ಕ್ರಿಕೆಟ್ ನಲ್ಲಿ ಹೆಸರು ಮಾಡಿದ್ದ ಸರಣ್ ದೀಪ್ ಸಿಂಗ್ ಹಾಗೂ ದಿನೇಶ್ ಮೊಂಗಿಯ ಇದ್ದರು. ಬೌಲರ್ ಗಳಿಗೆ ಯಾವುದೇ ಬಗೆಯ ನೆರವಿಲ್ಲದ ಅಮ್ರಿತ್ಸರ್ ನ ಗಾಂದಿ ಗ್ರೌಂಡ್ ನ ನಿರ‍್ಜೀವ ಪಿಚ್ ಮೇಲೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಮೊದಲ ಗಂಟೆಯಲ್ಲಿ ನಿರಾಯಾಸವಾಗಿ ಬ್ಯಾಟಿಂಗ್ ಮಾಡುತ್ತಾ ವಿಕೆಟ್ ನಶ್ಟವಿಲ್ಲದೆ 44 ರನ್ ಕಲೆ ಹಾಕಿ ದೊಡ್ಡ ಮೊತ್ತ ಎದುರು ನೋಡುತ್ತಿತ್ತು. ಆಗ ವೇಗಿ ದೊಡ್ಡ ಗಣೇಶ್ ನವಜೋತ್ ಸಿದು ಅವರಿಗೆ ಎರಡು ಬೌನ್ಸರ‍್ ಹಾಕಿ ಆಡು ನೋಡೋಣ ಎಂದು ಕಿಚಾಯಿಸುತ್ತಾರೆ. ಇದರಿಂದ ಸಿಟ್ಟಾದ ಸಿದು ಬ್ಯಾಟ್ ತೋರಿಸುತ್ತಾ “ನಾನು ಅಂತರಾಶ್ಟ್ರೀಯ ಆಟಗಾರ. ನೀನು ಹೇಳಿದ್ದೆಲ್ಲಾ ಕೇಳಿಸ್ಕೊಂಡು ಸುಮ್ಮನಿರೋಕೆ ಗೌತಮ ಬುದ್ದ ಅಲ್ಲ” ಎಂದು ಮಾತಿನ ಚಕಮಕಿಗೆ ಇಳಿಯುತ್ತಾರೆ. ನಂತರ ಗಣೇಶ್ ಕೂಡ ಸುಮ್ಮನಾಗದೆ ಸಿದು ಬಳಿ ಹೋಗಿ ವಾಗ್ವಾದ ಮುಂದುವರೆಸುತ್ತಾರೆ. ಪಂದ್ಯ ಕೆಲವು ನಿಮಿಶಗಳ ಕಾಲ ನಿಲ್ಲುತ್ತದೆ. ಇವರಿಬ್ಬರನ್ನು ಬೇರ‍್ಪಡಿಸಿ ಆಟ ಮುಂದುವರೆಸಲು ನಾಯಕ ಸೋಮಸುಂದರ್ ಹಾಗೂ ಅಂಪೈರ್ ಗಳು ಹರಸಾಹಸ ಪಡುತ್ತಾರೆ. ಈ ಮಾತಿನ ಚಕಮಕಿಯಿಂದ ಉತ್ತೇಜಿತರಾದ ಗಣೇಶ್, ಸಿದು ಮತ್ತವರ ತಂಡಕ್ಕೆ ಬಾಲ್ ನಿಂದ ಉತ್ತರಕೊಡುತ್ತಾರೆ. ಆಗಿನ್ನೂ ಹೊಸದಾಗಿ ರಿವರ‍್ಸ್ ಸ್ವಿಂಗ್ ಚಳಕ ಕಲಿತಿದ್ದ ಪೀಣ್ಯ ಎಕ್ಸ್ಪ್ರೆಸ್, ಪಂಜಾಬ್ ತಂಡವನ್ನು ಮುಂದಿನ ಒಂದು ಗಂಟೆಯಲ್ಲಿ ಹಳಿ ತಪ್ಪಿಸುತ್ತಾರೆ. ಸತತ 14 ಓವರ್ ಬೌಲ್ ಮಾಡಿ ಕೇವಲ 37 ರನ್ ಗಳಿಗೆ 6 ವಿಕೆಟ್ ಕೆಡವಿ ತಾವೂ ಅಂತರಾಶ್ಟ್ರೀಯ ಬೌಲರ್ ಎಂದು ಸಿದು ಬಳಗಕ್ಕೆ ನೆನಪಿಸುತ್ತಾರೆ. 44/0 ಇಂದ ಪಂಜಾಬ್ 90 ರನ್ ಗಳಿಗೆ ನೆಲಕಚ್ಚಿತು ಎಂದರೆ ದೊಡ್ಡ ಗಣೇಶ್ ರ ವೇಗದ ದಾಳಿ ಹೇಗಿದ್ದಿರಬಹುದು ಎಂದು ಇಂದಿಗೂ ಕೂಡ ಯಾರಾದರೂ ಊಹಿಸಬಹುದು. 90 ರನ್ ಗಳನ್ನು ಬೆನ್ನತ್ತಿ ಹೊರಟ ರಾಜ್ಯ ತಂಡ, ತಿಲಕ್ ನಾಯ್ಡುರ 125 ರನ್ ಗಳ ನೆರವಿನಿಂದ 322 ಗಳಿಸಿ 132 ರನ್ ಗಳ ಮುನ್ನಡೆ ಪಡೆಯಿತು. ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಯಲವಿಗಿ (4/60) ಹಾಗೂ ಕಟ್ಟಿ (3/63) ರವರ ಸ್ಪಿನ್ ದಾಳಿ ಪಂಜಾಬ್ ಗೆ ಚೇತರಿಕೆಗೆ ಅವಕಾಶ ನೀಡಲಿಲ್ಲ. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗೆಲುವಿಗೆ ಬೇಕಾದ 91 ರನ್ ಗಳನ್ನು ಕೇವಲ 16 ಓವರ್ ಗಳಲ್ಲಿ ಗಳಿಸಿ 7 ವಿಕೆಟ್ ಗಳ ಬರ‍್ಜರಿ ಗೆಲುವು ಪಡೆದು ಕರ‍್ನಾಟಕ ಮತ್ತೊಂದು ರಣಜಿ ಪೈನಲ್ ಗೆ ದಾಪುಗಾಲಿಟ್ಟಿತು. ಗಣೇಶ್‌ರ ಈ ಪಂದ್ಯದ ಸ್ಪೆಲ್ (6/37) ಕರ‍್ನಾಟಕ ಕ್ರಿಕೆಟ್ ಇತಿಹಾಸದಲ್ಲಿ ಎಂದೆಂದಿಗೂ ಅಜರಾಮರ ಎಂದು ನಾಡಿನ ಹಲವಾರು ಮಾಜಿ ಆಟಗಾರರು ಇಂದಿಗೂ ನೆನೆಯುತ್ತಾರೆ. ಈ ಸ್ಪೆಲ್ ಅನ್ನು ಹತ್ತಿರದಿಂದ ಕಂಡು ಕಣ್ಣು ತುಂಬಿಸಿಕೊಂಡಿದ್ದು ನನ್ನ ಅದ್ರುಶ್ಟ ಎಂದು ಬಾರದ್ವಾಜ್ ತಮ್ಮ ಗೆಳೆಯ ಗಣೇಶ್ ರನ್ನು ಇಂದೂಕೊಂಡಾಡುತ್ತಾರೆ.

ಪೈನಲ್ ಪಂದ್ಯ – ನಂಬಿಕೆ, ರೋಚಕತೆ ಹಾಗೂ ಸಮಯ ಪ್ರಗ್ನೆಗೆ ಸಾಕ್ಶಿ

ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಕರ‍್ನಾಟಕ ಹಾಗೂ ಮದ್ಯ ಪ್ರದೇಶ ನಡುವಣ 1998/99 ರ ರಣಜಿ ಪೈನಲ್ ಪಂದ್ಯ ಬಾರತದ ದೇಸೀ ಕ್ರಿಕೆಟ್ ನ ಅತ್ಯಂತ ರೋಚಕ ಪಂದ್ಯಗಳಲ್ಲೊಂದಾಗಿ ಇಂದಿಗೂ ನೆನೆಯಲ್ಪಡುತ್ತದೆ. ಚಂದ್ರಕಾಂತ್ ಪಂಡಿತ್ ರ ಮದ್ಯ ಪ್ರದೇಶ ತಂಡದಲ್ಲಿ ಅಂತರಾಶ್ಟ್ರೀಯ ಆಟಗಾರರಾದ ಹಿರ‍್ವಾನಿ, ರಾಜೇಶ್ ಚೌಹಾಣ್ ಜೊತೆಗೆ ಈ ಸಾಲಿನಲ್ಲಿ ಸೊಗಸಾಗಿ ಬ್ಯಾಟಿಂಗ್ ಮಾಡುತ್ತಾ ಬಾರತ ತಂಡದ ಕದ ತಟ್ಟುತ್ತಿದ್ದ ದೇವೇಂದ್ರ ಬುಂಡೇಲ ಇದ್ದರು. ಸೆಮಿಪೈನಲ್ ನಲ್ಲಿ ಹೈದರಾಬಾದ್ ಅನ್ನು ಅವರ ತವರಲ್ಲೇ ಮಣಿಸಿದ್ದ ಮದ್ಯ ಪ್ರದೇಶ ವಿಶ್ವಾಸದಿಂದ ಬೀಗುತ್ತಿತ್ತು. ಸುನಿಲ್ ಜೋಶಿ ಹಾಗೂ ದೊಡ್ಡ ಗಣೇಶ್ 1999 ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದೆ ನಿರಾಸೆ ಅನುಬವಿಸದರೂ ಪೈನಲ್ ಪಂದ್ಯಕ್ಕೆ ಅದನ್ನು ಮರೆತು ಆಡಲು ಸಜ್ಜಾದರು. ಜೋಶಿ ಬಾರತ ತಂಡದಿಂದ ಮರಳಿ ನಾಯಕನ ಹೊಣೆ ಹೊತ್ತರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ‍್ನಾಟಕ, ಬಾರದ್ವಾಜ್ ರ 86 ಹಾಗೂ ಸೋಮಸುಂದರ್ ರ 70 ರನ್ ಗಳ ಕೊಡುಗೆಯಿಂದ 304 ರನ್ ಗಳಿಸಿತು. ರಣಜಿ ಪೈನಲ್ ನಲ್ಲಿ ಈ ಮೊತ್ತ ಕಡಿಮೆ ಅನಿಸಿದರೂ ತಂಡದಲ್ಲಿ ಅಂತರಾಶ್ಟ್ರೀಯ ಕ್ರಿಕೆಟ್ ಆಡಿದ್ದ ಇಬ್ಬರು ಬೌಲರ್ ಗಳಿದ್ದುದರಿಂದ ಎದುರಾಳಿಯನ್ನು ಸುಳುವಾಗಿ ಕಟ್ಟಿ ಹಾಕಬಹುದೆಂದು ಎಣಿಸಿದ್ದರು. ಆದರೆ ಸಾಹುರ ಶತಕ (130) ಮತ್ತು ಬುಂಡೇಲರ (79) ರನ್ ಗಳ ಬಲದಿಂದ ಮದ್ಯ ಪ್ರದೇಶ ಒಂದು ಹಂತದಲ್ಲಿ ಕೇವಲ 2 ವಿಕೆಟ್ ಗಳಿಗೆ 273 ಗಳಿಸಿ ಆತಿತೇಯರ ಪಾಳಯದಲ್ಲಿ ದಿಗಿಲು ಉಂಟು ಮಾಡಿದರು. ಆಗ ತಮ್ಮ ಆಟದ ಉತ್ತುಂಗದಲ್ಲಿದ್ದ ದೊಡ್ಡ ಗಣೇಶ್ ಶತಕ ಗಳಿಸಿದ್ದ ಸಾಹುರನ್ನು ಔಟ್ ಮಾಡಿ ಜೊತೆಯಾಟ ಮುರಿದರು. ಮುಂದಿನ ಓವರ್ ನಲ್ಲೇ ಬದಲಿ ಪೀಲ್ಡರ್ ಆಗಿ ಕಣಕ್ಕಿಳಿದ್ದಿದ್ದ ಜಿ.ಕೆ ಅನಿಲ್ ಕುಮಾರ್ ನೇರ ಹಿಟ್ ನಿಂದ ಬುಂಡೇಲಾರನ್ನು ರನ್ ಔಟ್ ಮಾಡಿದರು. ಒಂದು ಹಂತದಲ್ಲಿ 500 ರನ್ ಎದುರು ನೋಡುತ್ತಿದ್ದ ಮದ್ಯಪ್ರದೇಶ ತಂಡ ಗಣೇಶ್ ರ ದಾಳಿಗೆ (5/103) ಸಿಕ್ಕು 379 ರನ್ ಗಳಿಗೆ ಕುಸಿಯಿತು. ಆದರೂ 75 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು ಪಂದ್ಯದಲ್ಲಿ ಒಳ್ಳೆಯ ಸ್ತಿತಿಯಲ್ಲಿದ್ದರು.

ಹಿನ್ನಡೆ ಅನುಬವಿಸಿದ್ದರಿಂದ ಕರ‍್ನಾಟಕ ತಂಡಕ್ಕೆ ಟೂರ‍್ನಿ ಗೆಲ್ಲಲು ಈ ಪಂದ್ಯವನ್ನು ಗೆಲ್ಲಲೇ ಬೇಕಿತ್ತು. ಪಂದ್ಯದ ಮೂರನೇ ದಿನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮೊದಲು ಮಾಡಿದ ಕನ್ನಡಿಗರ ಪಡೆ ಅರುಣ್ ಕುಮಾರ್ ರ ಸೊಗಾಸಾದ 147 ಹಾಗೂ ಬಾರದ್ವಾಜ್ ರ 75 ರನ್ ಗಳಿಂದ ಪಂದ್ಯದಲ್ಲಿ ಮರಳಿತು. ಆದರೆ ನಾಲ್ಕನೇ ದಿನ ಮಳೆಯಿಂದ ಕೇವಲ 35 ಓವರ್ ಗಳಶ್ಟೇ ಸಾದ್ಯವಾಯಿತು. ನಾಲ್ಕನೇ ದಿನದ ಕೊನೆಗೆ ತಂಡದ ಮೊತ್ತ 321/7 ಇರುವಾಗ ಸುನಿಲ್ ಜೋಶಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಕಡೆ ದಿನ ಗೆಲ್ಲಲು ಮದ್ಯ ಪ್ರದೇಶಕ್ಕೆ 247 ರನ್ ಗಳ ಗುರಿ ನೀಡಿದರು. ಮಳೆಯ ಕಾರ‍್ಮೋಡ ಐದನೇ ದಿನ ಕೂಡ ಇತ್ತು. ಹಾಗೂ ಚಿನ್ನಸ್ವಾಮಿ ಅಂಗಳದಲ್ಲಿದ್ದ ಸೂಪರ್ ಸಾಪರ್ ಕೆಟ್ಟಿದ್ದನ್ನು ತಿಳಿದ ಜೋಶಿ ಹಾಗೂ ಗಣೇಶ್, ತಾವೇ ಕುದ್ದಾಗಿ ಅದನ್ನು ಸರಿಪಡಿಸಲು ಮೆಕ್ಯಾನಿಕ್ ನನ್ನು ಕರೆತಂದದ್ದು ಈ ಕರ‍್ನಾಟಕದ ದಿಗ್ಗಜರಿಗೆ ರಣಜಿ ಗೆಲುವು ಎಶ್ಟು ಮುಕ್ಯವಾಗಿತ್ತು ಅನ್ನುವುದನ್ನು ಸಾರಿ ಹೇಳುತ್ತದೆ. ನ್ಯಾಯವಾಗಿ ಬಾರತದ 1999 ರ ವಿಶ್ವಕಪ್ ತಂಡದಲ್ಲಿರಬೇಕಾಗಿದ್ದ ಇವರಿಬ್ಬರೂ ಆ ಮೋಸವನ್ನು ಮರೆತು ನೋವು ನುಂಗಿಕೊಂಡು ರಣಜಿ ಟೂರ‍್ನಿಯಲ್ಲಿ ತಮ್ಮ ನಾಡಿನ ತಂಡಕ್ಕೆ ಗೆಲ್ಲುವು ದಕ್ಕಿಸಿ ಕೊಡಲು ಮಾಡುತ್ತಿದ್ದ ಹೋರಾಟ ಕರ‍್ನಾಟಕದಲ್ಲಿ ಕ್ರಿಕೆಟ್ ಆಡುವ ಪ್ರತಿಯೊಬ್ಬರಿಗೂ ಸ್ಪೂರ‍್ತಿಯಾಗುವಂತಿತ್ತು.

ಐದನೇ ದಿನದಾಟ – ರೋಚಕ ತಿರುವು

ಕನ್ನಡಿಗರ ಅದ್ರುಶ್ಟಕ್ಕೆ ಐದನೇ ದಿನ ಮಳೆ ಬಾರದೆ ಪಂದ್ಯ ಸಮಯಕ್ಕೆ ಸರಿಯಾಗಿ ಮೊದಲ್ಗೊಂಡಿತು. ಮದ್ಯ ಪ್ರದೇಶ ರನ್ ಗಳಿಸದೆ ಪಂದ್ಯ ಡ್ರಾ ಮಾಡಿಕೊಳ್ಳಲು ಮುಂದಾಯ್ತು. ಟೀ ವಿರಾಮದ ವೇಳೆಗೆ ಕೇವಲ 3 ವಿಕೆಟ್ ನಶ್ಟಕ್ಕೆ 108 ರನ್ ಗಳಿಸಿದ್ದರು. ಅಬ್ಬಾಸ್ ಅಲಿ 204 ಬಾಲ್ ಎದುರಿಸಿ 47 ರನ್ ಗಳಿಸಿದರೆ ಬುಂಡೇಲಾ124 ಬಾಲ್ ಗೆ 28 ಗಳಿಸಿ ಕರ‍್ನಾಟಕದಿಂದ ಟ್ರೋಪಿ ಕಸಿದುಕೊಳ್ಳುವಂತಿದ್ದರು. ಇಬ್ಬರೂ ಚಲದಿಂದ ಪ್ರತಿಯೊಂದು ಎಸೆತವನ್ನು ಎದುರಿಸುತ್ತಿದ್ದರು. ಅವರಿಬ್ಬರೂ ಪಿಚ್ ಗೆ ಹೊಂದಿಕೊಂಡು ಆಡುತ್ತಿದ್ದನ್ನು ಕಂಡರೆ ಔಟ್ ಆಗುವ ಒಂದು ಅವಕಾಶವೂ ಇಲ್ಲ ಎಂಬಂತೆ ಬಾಸವಾಗುತ್ತಿತ್ತು. ಚೆಂಡುಮೇಲೆ ಪುಟಿಯದಂತೆ ಬ್ಲಾಕ್ ಮಾಡುತ್ತಾ ಕನ್ನಡಿಗರ ತಾಳ್ಮೆ ಪರೀಕ್ಶಿಸುತ್ತಿದ್ದರು. ಪಿಚ್ ನಲ್ಲೂ ಬೌಲರ್ ಗಳಿಗೆ ಹೇಳಿಕೊಳ್ಳುವಂತಹ ನೆರವು ಇರಲಿಲ್ಲ. ಇನ್ನುಳಿದ 30 ಓವರ್ ಗಳನ್ನೂ ಹೀಗೆ ಆಡಿಕೊಂಡರೆ ಸಾಕಿತ್ತು ಮದ್ಯ ಪ್ರದೇಶ ಟೂರ‍್ನಿ ಗೆಲ್ಲುತ್ತಿದ್ದರು. ಟೀ ನಂತರ ಕಡೇ ಎರಡು ಗಂಟೆಗಳ ಆಟ ಮೊದಲ್ಗೊಳ್ಳುವ ಹೊತ್ತಿಗೆ ಸರಿಯಾಗಿ ಮತ್ತೊಮ್ಮೆ ಕಾರ‍್ಮೋಡ ಕವಿದು ಬೆಳಕು ಮಂದವಾಗುತ್ತಾ ಹೋಯ್ತು. ಬೌಲಿಂಗ್ ಮಾಡಲು ಸಜ್ಜಾಗಿದ್ದ ಗಣೇಶ್, ವೇಗದ ಬೌಲರ್ ಗಳು ಬೌಲ್ ಮಾಡಿದರೆ ಮಂದ ಬೆಳಕಿನ ನೆಪವೊಡ್ಡಿ ಆಟ ನಿಲ್ಲಿಸುವ ಅಪಾಯವಿದೆ ಎನ್ನುವುದನ್ನು ಅರಿತು, ನಾಯಕ ಜೋಶಿ ಜೊತೆ ಸಮಾಲೋಚನೆ ನಡಿಸಿ ಎರಡೂ ಕಡೆಯಿಂದ ಸ್ಪಿನ್ ದಾಳಿ ನಡೆಸುವುದೇ ಸೂಕ್ತ ಎಂದು ತೀರ‍್ಮಾನ ಕೈಗೊಳ್ಳುತ್ತಾರೆ.

ವಿಜಯ್ ಬಾರದ್ವಾಜರ ಕೈಚಳಕ – ಕರ‍್ನಾಟಕಕ್ಕೆ ಮತ್ತೊಂದು ರಣಜಿ ಕಿರೀಟ

ಇನ್ನೇನು ನಾವು ರಣಜಿ ವಿಜೇತರಾಗಲಿದ್ದೇವೆ ಎಂದು ನಗು, ನಲಿವಿನಿಂದ ತುಂಬಿದ್ದ ಮದ್ಯ ಪ್ರದೇಶದ ಡ್ರೆಸ್ಸಿಂಗ್ ಕೊಟಡಿಯಲ್ಲಿ ಒಂದೇ ಗಂಟೆಯೊಳಗೆ ನೀರಸಮೌನ ಆವರಿಸುವಂತೆ ಬಾರದ್ವಾಜ್ ಮಾಡಿದರು. ಬುಂಡೇಲಾರನ್ನು ಅವರು ಕ್ಲೀನ್ ಬೌಲ್ಡ್ ಮಾಡಿ ಜೊತೆಯಾಟ ಮುರಿದ ಮೇಲೆ ಬ್ಯಾಟ್ಸ್ಮನ್ ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಹಾದಿ ಹಿಡಿದರು. ಇದನ್ನು ಕಂಡು, ಮಲಗಿದ್ದ ಪಿಚ್ ಒಮ್ಮೆಗೆ ಎದ್ದು ಬುಸುಗುಟ್ಟುತಿದೆಯೇನೋ ಎಂದು ಪಂದ್ಯದ ನೇರುಲಿಗರಾದ(commentator) ಹರ‍್ಶ ಬೋಗ್ಲೆ ಹಾಗೂ ಮಣಿಂದರ್ ಸಿಂಗ್ ಅಚ್ಚರಿ ವ್ಯಕ್ತ ಪಡಿಸಿದರು. ಒಂದೊಂದು ವಿಕೆಟ್ ಬೀಳುತ್ತಿದ್ದಂತೆ ಕರ‍್ನಾಟಕದ ಬೆಂಬಲಿಗರಿಂದ ಕೂಡಿದ್ದ ಚಿನ್ನಸ್ವಾಮಿ ಅಂಗಳದಲ್ಲಿ ಗೆಲುವಿನ ಆಸೆ ಮೊಳಕೆಯೊಡೆಯಿತು. ಜನರು ಕೂಡ ಕೇಕೇ ಹೊಡಿಯುತ್ತಾ ರಾಜ್ಯ ತಂಡಕ್ಕೆ ಬೆಂಬಲ ಸೂಚಿಸಿದರು. ಒಂದು ಬದಿಯಿಂದ ಜೋಶಿ(3/31) ಪಡೆದರೆ ಇನ್ನೊಂದು ಬದಿಯಿಂದ ವಿಜಯ್ ಬಾರಾದ್ವಾಜ್ ಪವಾಡವೊಂದನ್ನು ಮಾಡಿದರು. 15 ಓವರ್ ಗಳಲ್ಲಿ ಕೇವಲ 24 ರನ್ ನೀಡಿ ಅವರು 6 ವಿಕೆಟ್ ಪಡೆದು, ಒಂದು ಹಂತದಲ್ಲಿ ಡ್ರಾ ಆಗುವಂತಿದ್ದ ಪಂದ್ಯವನ್ನು ಎರಡೇ ಗಂಟೆಯೊಳಗೆ ತಲೆಕೆಳಗೆ ಮಾಡಿ ಕರ‍್ನಾಟಕ ಹಿಂದೆಂದೂ ಕಾಣದಂತಹ ರೋಚಕ ಗೆಲುವು ದಕ್ಕಿಸಿಕೊಟ್ಟರು. ಅವರು ಬೌಲ್ ಮಾಡುವಾಗ ತಂಡದ ಹಿರಿಯರಾದ ಜೋಶಿ ಹಾಗೂ ಗಣೇಶ್ ಹತ್ತಿರದಲ್ಲೇ ಪೀಲ್ಡಿಂಗ್ ಮಾಡುತ್ತಾ ಅವರನ್ನು ಹುರಿದುಂಬಿಸಿದ್ದು, ನಂಬಿಕೆಯೊಂದಿದ್ದರೆ ಏನನ್ನಾದರೂ ಸಾದಿಸಬಹುದು ಎನ್ನುವುದಕ್ಕೆ ಎತ್ತುಗೆ ಎಂದರೆ ತಪ್ಪಾಗಲಾರದು. ಕಡೆಗೆ 150 ರನ್ ಗಳಿಗೆ ಮದ್ಯ ಪ್ರದೇಶ ಸರ‍್ವಪತನ ಕಂಡಿತು. ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದ ಮೇಲೆಯೂ ಕರ‍್ನಾಟಕ ತಂಡ ಎದೆಗುಂದದೆ ದಿಟ್ಟತನದಿಂದ ಹೋರಾಡಿ 96 ರನ್ ಗಳ ರೋಚಕ ಗೆಲುವು ಪಡೆದು, ತಮ್ಮ ಆರನೇ ರಣಜಿ ಟೂರ‍್ನಿಯನ್ನು ಗೆದ್ದು ಬೀಗುವುದರ ಜೊತೆಗೆ ಮತ್ತೊಮ್ಮೆ ತಾವು ದೇಸೀ ಕ್ರಿಕೆಟ್ ನ ದೊರೆಗಳು ಎಂದು ಸಾಬೀತು ಮಾಡಿದರು.

ಯುವಕರು ತಂದಿತ್ತ ಗೆಲುವು

1998/99 ರ ಸಾಲಿನಲ್ಲಿ ಶ್ರೀನಾತ್ ಮತ್ತು ಕುಂಬ್ಳೆ ಒಂದೂ ಪಂದ್ಯ ಆಡಲಿಲ್ಲ. ದ್ರಾವಿಡ್ ಹಾಗೂ ಪ್ರಸಾದ್ ಕೇವಲ ಒಂದು ಪಂದ್ಯ ಆಡಿದರು. ಹೀಗಿದ್ದರೂ ಕರ‍್ನಾಟಕ ಆಡಿದ ಒಟ್ಟು 11 ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದೆ ರಣಜಿ ಟೂರ‍್ನಿ ಗೆದ್ದದ್ದು ಪವಾಡವೆಂದರೆ ಅತಿಶಯೋಕ್ತಿ ಅಲ್ಲ. ಈ ಗೆಲುವು ಯುವಕರ ಹೋರಾಟದ ಪಲ ಎಂದೇ ಹೇಳಬೇಕು. ಅರುಣ್ ಕುಮಾರ್ 800 ಕ್ಕೂ ಹೆಚ್ಚು ರನ್ ಗಳಿಸಿದರು. ಬಾರದ್ವಾಜ್ ಆಗ ಅತ್ಯದಿಕ 1280 ರನ್ ಗಳಿಸಿ ಟೂರ‍್ನಿಯ ಬ್ಯಾಟಿಂಗ್ ದಾಕಲೆ ಮಾಡಿದರೆ ವೇಗಿ ದೊಡ್ಡ ಗಣೇಶ್ 62 ವಿಕೆಟ್ ಪಡೆದು ಟೂರ‍್ನಿಯ ಬೌಲಿಂಗ್ ದಾಕಲೆ ಮಾಡಿದರು. ಹೀಗೆ ಅಂತರಾಶ್ಟ್ರೀಯ ತಾರೆಯರ ಅನುಪಸ್ತಿತಿಯಲ್ಲಿ ಯುವಕರು ಮುನ್ನೆಲೆಗೆ ಬಂದು ದೇಶವೆಲ್ಲಾ ತಮ್ಮತ್ತ ತಿರುಗಿ ನೋಡುವಂತಹ ಪ್ರದರ‍್ಶನ ನೀಡಿ ಪಡೆದಂತ 1998/99 ರ ರಣಜಿ ಗೆಲುವು, ನಿಜಕ್ಕೂ ಕರ‍್ನಾಟಕ ಕ್ರಿಕೆಟ್ ಇತಿಹಾಸದ ಅತೀ ಶ್ರೇಶ್ಟ ಗೆಲುವುಗಳಲ್ಲೊಂದು.

(ಚಿತ್ರ ಸೆಲೆ: timetoast.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: