ಕರ‍್ನಾಟಕ ಕ್ರಿಕೆಟ್ ತಂಡದ ಏಳನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.

 

2000ದ ಇಸವಿ ಬಳಿಕ ಕರ‍್ನಾಟಕ ರಣಜಿ ತಂಡ ಹಲವಾರು ಏರಿಳಿತಗಳನ್ನು ಕಂಡಿತು. ನಾಲ್ಕೈದು ಅನುಬವಿ ಆಟಗಾರರು ಒಬ್ಬೊಬ್ಬರಾಗಿ ನಿವ್ರುತ್ತರಾದರು. ಒಮ್ಮೆ2002/03 ರ ಸಾಲಿನಲ್ಲಿ ತಂಡ ಪ್ಲೇಟ್ ಗ್ರೂಪ್ ಗೆ ಕೂಡ ಹೋಗಿ ತೀವ್ರ ಮುಜುಗರಕ್ಕೊಳಗಾಯಿತು. 1998/99 ರ ಸಾಲಿನ ಗೆಲುವಿನ ಬಳಿಕ ಒಂದೂವರೆ ದಶಕಗಳ ಕಾಲ ಒಂದೂ ರಣಜಿ ಟೂರ‍್ನಿ ಗೆಲ್ಲಲಾಗದೆ ಹಲವಾರು ಬಾರಿ ನಾಕೌಟ್ ಹಂತ ತಲುಪಿದ್ದು ಕರ‍್ನಾಟಕ ತಂಡ ಆರಕ್ಕೇರದ ಮೂರಕ್ಕಿಳಿಯಿದ ಎನ್ನುವಂತಾಯಿತು. 1999/2000, 2006/07 ಮತ್ತು 2010/11 ರಲ್ಲಿ ಸೆಮಿಪೈನಲ್ ನಲ್ಲಿ ಮುಗ್ಗರಿಸಿದರೆ 2008/09, 2011/12 ಮತ್ತು 20 12/13 ರಲ್ಲಿ ರಾಜ್ಯ ತಂಡದ ಹೋರಾಟ ಕ್ವಾರ‍್ಟರ್ ಪೈನಲ್ ನಲ್ಲಿ ಕೊನೆಗೊಂಡಿತು. 2009/10 ರಲ್ಲಿ ಪೈನಲ್ ತಲುಪಿ, ಮುಂಬೈ ಎದುರು ತವರು ಮೈಸೂರಿನಲ್ಲಿ ಕೇವಲ 6 ರನ್ ಗಳಿಂದ ಸೋಲುಂಡಿದ್ದು ನಾಡಿನ ಪ್ರತಿಯೊಬ್ಬ ಕ್ರಿಕೆಟ್ ಅಬಿಮಾನಿಯು ಇಂದಿಗೂ ತುಂಬಾ ನೋವಿನಿಂದ ನೆನೆಯುವ ಸಂಗತಿ ಆಗಿ ಉಳಿದಿದೆ. ಈ ಹದಿನೈದು ವರುಶಗಳ ಇನ್ನುಳಿದ ರುತುಗಳಲ್ಲಿ ಗ್ರೂಪ್ ಹಂತದಲ್ಲೇ ತಂಡ ಸೋತು ಹೊರ ನಡೆಯಿತು. ಹಾಗಾಗಿ ಕ್ರಿಕೆಟ್ ವಲಯದಲ್ಲಿ ಕರ‍್ನಾಟಕ ತಂಡಕ್ಕೆ ಮೊದಲಿದ್ದ ಮರ‍್ಯಾದೆ 2000 ದ ಬಳಿಕ ಸಿಗದೇ ಹೋದದ್ದು ಸುಳ್ಳಲ್ಲ.

ಬದಲಾವಣೆ ಸಮಯ

ಪ್ರತೀ ವರುಶ ಸ್ತಿರ ಪ್ರದರ‍್ಶನ ನೀಡಲಾಗದಿದ್ದ ಮಾಜಿ ಚಾಂಪಿಯನ್ ತಂಡಕ್ಕೆ ಬಹು ಮುಕ್ಯ ಬದಲಾವಣೆಗಳು ಅವಶ್ಯಕವಾಗಿದ್ದವು. 2008/09 ರಲ್ಲಿ 22ರ ಹರೆಯದ ರಾಬಿನ್ ಉತ್ತಪ್ಪರನ್ನು ನಾಯಕರನ್ನಾಗಿ ಮಾಡಲಾಯಿತು. ಆ ವೇಳೆಗೆ ರಾಹುಲ್ ದ್ರಾವಿಡ್ ಬಾರತದ ಒಂದು ದಿನದ ತಂಡದಿಂದ ಹೊರಗುಳಿದ್ದಿದ್ದರು. ಹಾಗಾಗಿ ಅವರೂ ಸಹ ರಾಜ್ಯ ಕ್ರಿಕೆಟ್ ಸಂಸ್ತೆಗೆ ಸಲಹೆ, ಸೂಚನೆಗಳನ್ನು ನೀಡುವುದರ ಜೊತೆಗೆ ಬಾರತ ತಂಡದಿಂದ ಬಿಡುವಿದ್ದಾಗ ಹಲವಾರು ಪಂದ್ಯಗಳನ್ನಾಡಿ ಯುವಕರಿಗೆ ಮಾರ‍್ಗದರ‍್ಶಕರಾದರು. ಅದೇ 2-3 ವರುಶಗಳ ಅವದಿಯಲ್ಲಿ ಮನೀಶ್ ಪಾಂಡೆ, ಗಣೇಶ್ ಸತೀಶ್, ಶ್ರೀನಾತ್ ಅರವಿಂದ್, ಸಿ.ಎಮ್ ಗೌತಮ್, ಅಮಿತ್ ವರ‍್ಮಾ ಹಾಗೂ ಅಬಿಮನ್ಯು ಮಿತುನ್ ರಂತಹ ಅಳವುಳ್ಳ ಯುವ ಆಟಗಾರರು ಪಾದಾರ‍್ಪಣೆ ಮಾಡಿ ತಂಡದ ಚೇತರಿಕೆಗೆ ಇಂಬು ನೀಡಿದರು. 2009/10 ರಲ್ಲಿ ಬಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕರ‍್ನಾಟಕದ ಪೂರ‍್ಣಪ್ರಮಾಣದ ನಾಯಕನ ಹೊಣೆ ಕೂಡ ಹೊತ್ತರು. ಹೀಗೆ ಯುವ ಆಟಗಾರರ ಬರುವಿಕೆಯಿಂದ ತಂಡ ಹಂತಹಂತವಾಗಿ ಬಲಗೊಳ್ಳುತ್ತಾ ಹೋಯಿತು. ನಂತರ 2010/11 ರ ಸಾಲಿನಿಂದ ವಿನಯ್ ಕುಮಾರ್ ನಾಯಕರಾದ ಮೇಲೆ ತಂಡ ಸ್ತಿರ ಪ್ರದರ‍್ಶನ ನೀಡುತ್ತಾ ದೇಸೀ ಕ್ರಿಕೆಟ್ ನ ಬಲಾಡ್ಯ ತಂಡ ಎಂದೆನಿಸಿಕೊಂಡಿತು. ಅಲ್ಲಿಂದ ಕೆಲವೇ ವರುಶಗಳಲ್ಲಿ, 2013/14 ರ ಸಾಲಿನಲ್ಲಿ ಕಡೆಗೆ ತಂಡ ಟೂರ‍್ನಿ ಕೂಡ ಗೆದ್ದಿತು.

2013/14 – ಲೀಗ್ ಹಂತ

ಒಟ್ಟು 9 ತಂಡಗಳ ಏ ಗ್ರೂಪ್ ನಲ್ಲಿದ್ದ ಕರ‍್ನಾಟಕ, ಜಾರ‍್ಕಂಡ್ ಎದುರು ಮೊದಲ ಪಂದ್ಯ ಆಡಿ ಇನ್ನಿಂಗ್ಸ್ ಮುನ್ನಡೆ ಪಡೆಯಿತು. ಈ ಪಂದ್ಯದಲ್ಲಿ ಪಾದಾರ‍್ಪಣೆಮಾಡಿದ ಮಾಯಾಂಕ್ ಅಗರ‍್ವಾಲ್ 90 ರನ್ ಗಳಿಸಿದ್ದು ವಿಶೇಶ. ಬಳಿಕ ಗುಜರಾತ್ ಎದುರು ಇನ್ನಿಂಗ್ಸ್ ಹಿನ್ನಡೆ ಅನುಬವಿಸಿತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಸ್ಟುವರ‍್ಟ್ ಬಿನ್ನಿ ಬ್ಯಾಟ್‌ನಿಂದ ಬಂದ ಸ್ಪೋಟಕ ಶತಕ ಎಲ್ಲರ ಗಮನ ಸೆಳೆಯಿತು. ಈ ಪಂದ್ಯದ ನಂತರ ವೈಯಕ್ತಿತ ಕಾರಣಗಳಿಂದ ನಾಯಕ ವಿನಯ್ ಮೂರು ಪಂದ್ಯಗಳಿಗೆ ಬಿಡುವು ಪಡೆದ್ದಿದ್ದರಿಂದ ಸಿ.ಎಮ್. ಗೌತಮ್ ನಾಯಕರಾಗುತ್ತಾರೆ. ವಿದರ‍್ಬ ಎದುರಿನ ಪಂದ್ಯದಲ್ಲಿ 542 ರನ್ ಗಳ ದೊಡ್ಡ ಮೊತ್ತವನ್ನು ಬೆನ್ನತ್ತಿ ಇನ್ನಿಂಗ್ಸ್ ಮುನ್ನಡೆ ಪಡೆದ ಬಳಿಕ ಆಟಗಾರರಲ್ಲಿ ತನ್ನಂಬಿಕೆ ಹೆಚ್ಚಾದ್ದುದ್ದಕ್ಕೆ ಆ ನಂತರ ಪಡೆದ ಸತತ ಗೆಲುವುಗಳೇ ಸಾಕ್ಶಿ. ಹೀಗೆ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಪಡೆಯದೇ ತಂಡ ಗೆಲುವಿನ ಅಂಕಗಳಿಗೆ ಹಾತೊರೆಯುತ್ತಿತ್ತು. ಇದರ ಬೆನ್ನಲ್ಲೇ ಒಡಿಶಾ ಎದುರು ಆಡಿದ ನಾಲ್ಕನೇ ಪಂದ್ಯದಲ್ಲಿ 4 ವಿಕೆಟ್ ಗಳ ಜಯದಲ್ಲಿ ಬ್ಯಾಟಿಂಗ್ ನಲ್ಲಿ ಮನೀಶ್ ಪಾಂಡೆ 132 ರನ್ ಗಳಿಸಿದರೆ, ಬೌಲಿಂಗ್ ನಲ್ಲಿ ಮಿತುನ್ (6/52; 5/58) ಹಾಗೂ ಹೆಚ್.ಎಸ್. ಶರತ್ (5/80) ಕೊಡುಗೆ ನೀಡುತ್ತಾರೆ. ಈ ರೀತಿ ಗೌತಮ್ ರ ಮುಂದಾಳ್ತನದಲ್ಲಿ ರಾಜ್ಯ ತಂಡ ಈಸಾಲಿನ ಮೊದಲ ಗೆಲುವು ಪಡೆಯುತ್ತದೆ. ನಂತರ ಹರಿಯಾಣ ಎದುರು 3 ವಿಕೆಟ್ ಗಳ ರೋಚಕ ಗೆಲುವು ದಾಕಲಿಸಿ ಅಂಕಪಟ್ಟಿಯ ಮೊದಲ ಸ್ತಾನಕ್ಕೇರುತ್ತದೆ. ಹರಿಯಾಣದ ರೋಹ್ಟಕ್ ನ ಹುಲ್ಲು ಹಾಸಿನ ಕಟಿಣ ಪಿಚ್ ಮೇಲೆ ಕೆ.ಎಲ್. ರಾಹುಲ್ 239 ಚೆಂಡುಗಳನ್ನು ಎದುರಿಸಿ ಗಳಿಸಿದ ತಾಳ್ಮೆಯ 98 ರನ್ ಅವರ ಬ್ಯಾಟಿಂಗ್ ಅಳವನ್ನು ಇಡೀ ದೇಶಕ್ಕೆ ತಿಳಿಯುವಂತೆ ಮಾಡಿತು. ಇನ್ನು ಲೀಗ್ ಹಂತದಲ್ಲಿ 3 ಪಂದ್ಯಗಳು ಉಳಿದಿರುವಾಗ ಪಂಜಾಬ್ ಎದುರಿನ ಪಂದ್ಯಕ್ಕೆ ವಿನಯ್ ತಂಡಕ್ಕೆ ಮರಳಿ ನಾಯಕನ ಹೊಣೆ ಹೊರುತ್ತಾರೆ. ಹಾಗೂ ಕರುಣ್ ನಾಯರ್ ರಿಗೆ ಪಾದಾರ‍್ಪಣೆ ಅವಕಾಶ ಮಾಡಿಕೊಡುತ್ತಾರೆ. ಪಂಜಾಬ್ ಮೇಲೆ 10 ವಿಕೆಟ್ ಗಳ ಬರ‍್ಜರಿ ಗೆಲುವು ಪಡೆಯುವಲ್ಲಿ ಮನೀಶ್ 161, ವಿನಯ್105, ಹಾಗೂ ರಾಹುಲ್ 92 ರನ್ ಗಳ ಕೊಡುಗೆ ನೀಡುತ್ತಾರೆ.

ಮುಂಬೈ ಎದುರು ಐತಿಹಾಸಿಕ ಗೆಲುವು

ಕರ‍್ನಾಟಕ 6 ರಣಜಿ ಟೂರ‍್ನಿ ಗೆದ್ದು ಬಲಿಶ್ಟ ಮುಂಬೈಗೆ 70ರ ದಶಕದಿಂದಲೂ ಪೈಪೋಟಿ ನೀಡುತ್ತಾ ಹಲವಾರು ಬಾರಿ ಇನ್ನಿಂಗ್ಸ್ ಮುನ್ನಡೆಯಿಂದ ಮಣಿಸಿದ್ದರೂ ಒಂದೂ out-right ಗೆಲುವು ಪಡೆದಿರುವುದಿಲ್ಲ. ಈ ಕುಂದನ್ನು ವಿನಯ್ ರ ತಂಡ ಈ ಸಾಲಿನಲ್ಲಿ ಇನ್ನಿಲ್ಲದಂತೆ ಮಾಡುತ್ತದೆ. ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ರ 133 ರನ್ ಗಳ ಹೊರತಾಗಿಯೂ 251 ಗಳಿಸಿ ಮುಂಬೈಗೆ 18 ರನ್ ಗಳ ಸಣ್ಣ ಮುನ್ನಡೆ ಬಿಟ್ಟುಕೊಡುತ್ತದೆ. ನಾಲ್ಕು ದಿನದ ಪಂದ್ಯಗಳಲ್ಲಿ ಹಿನ್ನಡೆ ಅನುಬವಿಸಿ ಪಂದ್ಯ ಗೆಲ್ಲುವುದು ಅಶ್ಟು ಸುಳುವಾದುದಲ್ಲ. ಆದರೆ ಮನೀಶ್ ರ ಸ್ಪೋಟಕ 119 ಹಾಗೂ ತಮ್ಮ ಮೊದಲ ಪಂದ್ಯ ಆಡುತಿದ್ದ ಸಮರ‍್ತ್ ರ 75 ರನ್ ಗಳ ಬಲದ ಮೇಲೆ 282 ರನ್ ಗಳ ಗುರಿ ನೀಡಿ ಕಡೇ ದಿನ 121 ಕ್ಕೆ ಆಲೌಟ್ ಮಾಡಿ ಕನ್ನಡಿಗರ ಪಡೆ ಮುಂಬೈ ಎದುರು ಚೊಚ್ಚಲ ಗೆಲುವು ಪಡೆಯುತ್ತದೆ. ಬೌಲಿಂಗ್ ನಲ್ಲಿ ವಿನಯ್, ಶರತ್ ರೊಟ್ಟಿಗೆ ಪಾದಾರ‍್ಪಣೆ ಮಾಡಿದ ಶ್ರೇಯಸ್ ಗೋಪಾಲ್ ಕೂಡ ಮಿಂಚುತ್ತಾರೆ.

ಬಳಿಕ ಸೆಹ್ವಾಗ್, ಗಂಬೀರ್ ಹಾಗೂ ನೆಹ್ರಾರ ಬಲವಿದ್ದ ದೆಹಲಿ ತಂಡವನ್ನು ಕೂಡ ಕಡೇ ಲೀಗ್ ಪಂದ್ಯದಲ್ಲಿ ಕರುಣ್ ನಾಯರ್ ರ ಚೊಚ್ಚಲ ಶತಕದ (105) ನೆರವಿನಿಂದ 8 ವಿಕೆಟ್ ಗಳಿಂದ ನಿರಾಯಾಸವಾಗಿ ಗೆದ್ದು ಕರ‍್ನಾಟಕ ಲೀಗ್ ಹಂತದಲ್ಲಿ ಸತತ ಐದನೇ ಗೆಲುವು ದಾಕಲಿಸಿ, ಅಂಕಪಟ್ಟಿಯಲ್ಲಿ ಎಲ್ಲರಿಗಿಂತ ಹೆಚ್ಚು ಒಟ್ಟು 38 ಪಾಯಿಂಟ್ ಗಳಿಸಿ ಮೊದಲ ಸ್ತಾನ ಪಡೆದು, ಸತತ ಆರನೇ ಬಾರಿ ಕ್ವಾರ‍್ಟರ್ ಪೈನಲ್ ಗೆ ಲಗ್ಗೆ ಇಡುತ್ತದೆ.

ಕ್ವಾರ‍್ಟರ್ ಪೈನಲ್ – ಎದುರಾಳಿ ಉತ್ತರ ಪ್ರದೇಶ

ಅಂತರಾಶ್ಟ್ರೀಯ ಆಟಗಾರರಾದ ಆರ್.ಪಿ ಸಿಂಗ್, ಮೊಹಮ್ಮದ್ ಕೈಪ್ ಹಾಗೂ ಪಿಯೂಶ್ ಚಾವ್ಲಾ ಅವರನ್ನೊಳಗೊಂಡ ಉತ್ತರಪ್ರದೇಶ ಈ ನಾಕೌಟ್ ಹಣಾಹಣಿಯಲ್ಲಿ ಕರ‍್ನಾಟಕಕ್ಕೆ ಬಲವಾದ ಪ್ರತಿರೋದ ಒಡ್ಡಲಿದೆ ಎಂದೇ ಕ್ರಿಕೆಟ್ ವಲಯದಲ್ಲಿ ಎಲ್ಲರೂ ಎಣಿಸಿರುತ್ತಾರೆ. ಮುಂಜಾನೆ ವೇಗಿಗಳಿಗೆ ಸಾಕಶ್ಟು ನೆರವಿದ್ದ ಚಿನ್ನಸ್ವಾಮಿ ಅಂಗಳದ ಪಿಚ್ ಮೇಲೆ ಬಹು ಮುಕ್ಯವಾದ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಉತ್ತರ ಪ್ರದೇಶ ಕನ್ನಡಿಗರಿಗೆ ಆರಂಬಿಕ ಆಗಾತ ನೀಡುತ್ತದೆ. ರಾಹುಲ್, ಸಮರ‍್ತ್ ಹಾಗೂ ಮನೀಶ್ ಮೂವರೂ ಸೊನ್ನೆಗೆ ಔಟಾಗಿ ಆತಿತೇಯರ ಪಾಳಯದಲ್ಲಿ ದಿಗಿಲು ಉಂಟುಮಾಡುತ್ತಾರೆ. ಆದರೆ ಉತ್ತಪ್ಪ, ಕರುಣ್, ಹಾಗೂ ಗೌತಮ್ ತಲಾ 100 ರನ್ ಗಳಿಸಿ ಇನ್ನಿಂಗ್ಸ್ ಗೆ ಚೇತರಿಕೆ ನೀಡಿ ತಂಡದ ಮೊತ್ತವನ್ನು 349 ಕ್ಕೆ ಕೊಂಡೊಯ್ಯುತ್ತಾರೆ. ಕರ‍್ನಾಟಕದ ಮೊದಲ ಆರು ಮಂದಿ ಬ್ಯಾಟ್ಸ್ಮನ್ ಗಳ ಪೈಕಿ ಮೂವರು ಸೊನ್ನೆ ಸುತ್ತಿದರೆ ಇನ್ನು ಮೂವರು ಸರಿಯಾಗಿ 100 ರನ್ ಗಳಿಸಿ ವಿಶಿಶ್ಟ ದಾಕಲೆ ಮಾಡುತ್ತಾರೆ. ಯಾವ ಬಗೆಯ ಕ್ರಿಕೆಟ್ ನಲ್ಲೂ ಈಬಗೆಯ ಸ್ಕೋರ್ ಕಾರ‍್ಡ್ ನೋಡಲು ಸಿಗದು ಎಂದು ಮಾರನೇ ದಿನ ಪತ್ರಿಕೆಗಳು ಸೋಜಿಗದಿಂದ ವರದಿ ಮಾಡುತ್ತವೆ. ನಂತರ ಒಳ್ಳೆ ವೇಗದ ಜೋಡಿ-ಬೌಲಿಂಗ್ ದಾಳಿ ಮಾಡಿದ ಮಿತುನ್ (4/70) ಮತ್ತು ವಿನಯ್ (3/49) ಎದುರಾಳಿಯನ್ನು 221ಕ್ಕೆ ಕಟ್ಟಿಹಾಕಿ ರಾಜ್ಯ ತಂಡಕ್ಕೆ 128 ರನ್ ಗಳ ದೊಡ್ಡ ಮುನ್ನಡೆ ಕೊಡಿಸುತ್ತಾರೆ. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ರಾಹುಲ್ ರ 92 ಬಿಟ್ಟರೆ ಇನ್ನೆಲ್ಲಾ ಆಟಗಾರರು ವೈಪಲ್ಯ ಅನುಬವಿಸುತ್ತಾರೆ. ತಂಡ 204 ಕ್ಕೆ ಆಲೌಟ್ ಆಗಿ ಉತ್ತರಪ್ರದೇಶಕ್ಕೆನಾಲ್ಕನೇ ಇನ್ನಿಂಗ್ಸ್ ನಲ್ಲಿ ಗೆಲುವಿಗೆ 333 ರನ್ ಗಳ ದೊಡ್ಡ ಗುರಿ ನೀಡುತ್ತದೆ. ಗುರಿ ಬೆನ್ನತ್ತಿ ಮೊದಲಿಗೆ ಕೊಂಚ ಹೋರಾಟ ಮಾಡಿದ ಆರ್.ಪಿ ಸಿಂಗ್ ನಾಯಕತ್ವದ ತಂಡ ಶ್ರೇಯಸ್ ಗೋಪಾಲ್ ರ (5/59) ಸ್ಪಿನ್ ಮರ‍್ಮ ಅರಿಯದೆ 240 ರನ್ ಗಳಿಗೆ ಸರ‍್ವಪತನ ಕಂಡು 92 ರನ್ ಗಳ ಸೋಲುಣ್ಣುತ್ತದೆ. ಸಾಮೂಹಿಕ ಹೋರಾಟ ಮಾಡಿ ಸತತ ಆರನೇ ಪಂದ್ಯ ಗೆದ್ದ ಕರ‍್ನಾಟಕ ತಂಡ ತನ್ನಂಬಿಕೆಯಿಂದ ಮತ್ತೊಂದು ಸೆಮಿಪೈನಲ್ ಗೆ ಜಿಗಿಯುತ್ತದೆ.

ಸೆಮಿಪೈನಲ್ – ಎದುರಾಳಿ ಪಂಜಾಬ್

ಹರ‍್ಬಜನ್ ಸಿಂಗ್ ನಾಯಕತ್ವದ ಪಂಜಾಬ್ ತಂಡದಲ್ಲಿ ಅಂತರಾಶ್ಟ್ರೀಯ ತಾರೆ ಯುವರಾಜ್ ಸಿಂಗ್ ರೊಟ್ಟಿಗೆ ಬರವಸೆಯ ಯುವ ಆಟಗಾರರಾದ ಮಂದೀಪ್ ಸಿಂಗ್, ವೋಹ್ರಾ, ಸಂದೀಪ್ ಶರ‍್ಮ ಹಾಗೂ ಗುರುಕೀರತ್ ಮನ್ ಇರುತ್ತಾರೆ. ಮೊಹಾಲಿಯಲ್ಲಿ ಪಂದ್ಯ ನಡೆಯಲಿದ್ದರಿಂದ ತವರು ತಂಡವನ್ನು  ಮಣಿಸಲು ಕರ‍್ನಾಟಕ ತಮ್ಮ ಅತ್ಯುತ್ತಮ ಆಟವನ್ನು ಆಡಲೇಬೇಕಿತ್ತು. ಮಳೆಯಿಂದ ಮೊದಲ ದಿನ ಆಟ ಸಾದ್ಯವಾಗುವುದಿಲ್ಲ. ಎರಡನೇ ದಿನ, ಹುಲ್ಲುಹಾಸಿನಿಂದ ಕೂಡಿದ್ದ ಪಿಚ್ ಮೇಲೆ ಟಾಸ್ ಗೆದ್ದು ಬೌಲಿಂಗ್ ಮಾಡಲು ವಿನಯ್ ತೀರ‍್ಮಾನ ಮಾಡುತ್ತಾರೆ. ಆದರೆ ಪಂದ್ಯ ಮೊದಲಾದ ಹತ್ತೇ ನಿಮಿಶಗಳಲ್ಲಿ back-spasms ನಿಂದ ವಿನಯ್ ಹೊರನಡೆಯುತ್ತಾರೆ. ಅವರು ಸುಮಾರು ಎರಡು ಗಂಟೆ ಹೊತ್ತು ಹೊರಗುಳಿಯುತ್ತಾರೆ. ಇದರ ಪ್ರಯೋಜನ ಪಡೆದ ಪಂಜಾಬ್ ಆ ವೇಳೆಗೆ 221/3 ತಲುಪುತ್ತಾರೆ. ಜೀವನ್ಜೋತ್ 74 ಹಾಗೂ ವೋಹ್ರಾ 51 ಗಳಿಸಿದರೆ ಯುವರಾಜ್ ಸಿಂಗ್ 40 ರ ಗಡಿ ದಾಟುವಶ್ಟರಲ್ಲಿ 2 ಸಿಕ್ಸರ್ ಸಿಡಿಸಿ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಾರೆ. ಡ್ರೆಸ್ಸಿಂಗ್ ಕೊಟಡಿಯಲ್ಲಿ ಕೂತು ಆಟ ನೋಡುತ್ತಿದ್ದ ನಾಯಕ ವಿನಯ್, ಇದು ಹೀಗೇ ಮುಂದುವರೆದರೆ ಪಂದ್ಯ ಕೈತಪ್ಪಿ ಹೋಗುವ ಅಪಾಯವನ್ನು ಅರಿತು ಇನ್ನೂ ತುಸು ನೋವು ಇದ್ದರೂ ಕಣಕ್ಕೆ ಮರಳುತ್ತಾರೆ. ಹೊಳಪು ಕಳೆದುಕೊಂಡಿದ್ದ 50 ಓವರ್ ಹಳೆಯ ಚೆಂಡಿನಿಂದ ತಮ್ಮ ಎರಡನೇ ಸ್ಪೆಲ್ ಶುರು ಮಾಡುತ್ತಾರೆ. ವಿನಯ್ ಕಣಕ್ಕಿಳಿಯುತ್ತಿದ್ದಂತೆ ಕರ‍್ನಾಟಕದ ಆಟಗಾರರ ಹಾವ-ಬಾವ ಬದಲಾಗುತ್ತದೆ. ಒಂದು ಬಗೆಯಲ್ಲಿ ಎಲ್ಲರಲ್ಲೂ ಹುಮ್ಮಸ್ಸು ಹೆಚ್ಚಾಗುತ್ತದೆ. ಪೀಲ್ಡಿಂಗ್ ಮಾಡುತ್ತಿದ್ದವರೆಲ್ಲಾ ಚೀರುತ್ತಾ, ಸದ್ದು ಮಾಡುತ್ತಾ ತಮ್ಮ ನಾಯಕನ ಬೆನ್ನಿಗೆ ನಿಲ್ಲುತ್ತಾರೆ. ಎರಡೂ ದಿಕ್ಕಿನಲ್ಲಿ ಸ್ವಿಂಗ್ ಆಗುತ್ತಿದ್ದ ವಿನಯ್ ರ ಎಸೆತಗಳನ್ನು ಎದುರಿಸಲಾಗದೆ ಪಂಜಾಬ್ ತಂಡ ತತ್ತರಿಸಿ ಹೋಗುತ್ತದೆ. ವಿನಯ್ ರ 8 ಓವರ್ ಗಳ ಕರಾರುವಾಕ್ ಸ್ವಿಂಗ್ ದಾಳಿಗೆ (5/27) ದೊಡ್ಡ ಮೊತ್ತ ಎದುರು ನೋಡುತ್ತಿದ್ದ ಆತಿತೇಯರು 270 ರನ್ ಗಳಿಗೆ ಕುಸಿಯುತ್ತಾರೆ. ಪಂಜಾಬ್ ತಮ್ಮ ಕಡೇ 7 ವಿಕೆಟ್ ಗಳನ್ನು ಕೇವಲ 47 ರನ್ ಗಳಿಗೆ ಕಳೆದುಕೊಂಡ್ಡಿದ್ದನ್ನು ಕಂಡರೆ ವಿನಯ್ ರ ಶಿಸ್ತಿನ ಬೌಲಿಂಗ್ ಹೇಗಿದ್ದಿರಬಹುದು ಎಂದು ಯಾರಾದರೂ ಊಹಿಸಬಹುದು. ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮೊದಲು ಮಾಡಿದ ಕರ‍್ನಾಟಕ ತಂಡ ಮೊದಲೆರಡು ವಿಕೆಟ್ ಗಳನ್ನು ಬೇಗ ಕಳೆದುಕೊಂಡರೂ ಕರುಣ್ 151* ಹಾಗೂ ಅಮಿತ್ ವರ‍್ಮಾ 114* ಅವರ ಜೊತೆಯಾಟದ ನೆರವಿನಿಂದ 447/5 ತಲುಪಿ, 177 ರನ್ ಗಳ ಮುನ್ನಡೆ ಪಡೆಯುತ್ತದೆ. ಕಡೆಯ ದಿನ ಕೂಡ ಮಳೆಯಿಂದ ಆಟ ನಡೆಯದ ಕಾರಣ ಪಂದ್ಯ ಡ್ರಾ ನಲ್ಲಿ ಕೊನೆಗೊಂಡು ಮೊದಲ ಇನ್ನಿಂಗ್ಸ್ ಮುನ್ನಡೆಯ ಮೇಲೆ ಕರ‍್ನಾಟಕ ಮತ್ತೊಂದು ಪೈನಲ್ ಗೆ ಬರವಸೆಯಿಂದ ದಾಪುಗಾಲಿಡುತ್ತದೆ. ಕಳೆದ ನಾಲ್ಕು ವರುಶಗಳಲ್ಲಿ ಕನ್ನಡಿಗರಿಗೆ ಇದು ಎರಡನೇ ರಣಜಿ ಪೈನಲ್ ಆಗಿರುತ್ತದೆ.

ಪೈನಲ್ ಪಂದ್ಯ – ಹೊಸ ಹುರುಪಿನ ಮಹಾರಾಶ್ಟ್ರ

2013/14 ರ ಟೂರ‍್ನಿಯನ್ನು ಪ್ಲೇಟ್ ಗ್ರೂಪ್ ನಿಂದ ಮೊದಲು ಮಾಡಿ ಕ್ವಾರ‍್ಟರ್ ಪೈನಲ್ ನಲ್ಲಿ ಮುಂಬೈ ಹಾಗೂ ಸೆಮೀಸ್ ನಲ್ಲಿ ಬಂಗಾಳವನ್ನು ಮಣಿಸಿ ಪವಾಡದ ರೀತಿಯಲ್ಲಿ ಮಹಾರಾಶ್ಟ್ರ ಪೈನಲ್ ತಲುಪಿತ್ತು. ಬಿಸಿಸಿಐನ ತಟಸ್ತ ಸ್ತಳದ ನೀತಿಯಿಂದ ಹುಡುಕಿದರೂ ನೂರು ಮಂದಿ ಸಿಗದ ಹೈದರಾಬಾದ್ ನ ಉಪ್ಪಳದ ಅಂಗಳದಲ್ಲಿ ಪೈನಲ್ ಪಂದ್ಯ ನಡೆಯುತ್ತದೆ. ಬೌಲರ್ ಗಳಿಗೆ ಯಾವುದೇ ಬಗೆಯಲ್ಲಿ ನೆರವಿಲ್ಲದ ಬ್ಯಾಟ್ಸ್ಮನ್ ಗಳಿಗೆ ಸ್ವರ‍್ಗದಂತಿದ್ದ ಪಿಚ್ ಮೇಲೆ ಮಹಾರಾಶ್ಟ್ರಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ವಿನಯ್, ಮಿತುನ್ ಹಾಗೂ ಅರವಿಂದ್ ತಲಾ 3 ವಿಕೆಟ್ ಗಳನ್ನು ಪಡೆದು ಮಹಾರಾಶ್ಟ್ರವನ್ನು 305 ರನ್ ಗಳಿಗೆ ಕಟ್ಟಿಹಾಕುತ್ತಾರೆ. ಆ ಪಿಚ್ ಮೇಲೆ ಇದು ಸಾದಾರಣ ಮೊತ್ತವಾಗಿತ್ತು. ಇದನ್ನು ಬೆನ್ನತ್ತಿ ಹೊರಟ ಕನ್ನಡಿಗರ ಪಡೆ ಗಣೇಶ್ ಸತೀಶ್ ರ 117, ಕೆ.ಎಲ್ ರಾಹುಲ್ ರ 131 ಹಾಗೂ ಉತ್ತಪ್ಪರ 72 ರನ್ ಗಳ ಕೊಡುಗೆಯಿಂದ 515 ರನ್ ಕಲೆ ಹಾಕಿ ಒಟ್ಟು 210 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು ಪಂದ್ಯದ ಮೇಲೆ ಒಳ್ಳೆ ಹಿಡಿತ ಪಡೆಯುತ್ತದೆ.

ಮಹಾರಾಶ್ಟ್ರ ಮರುಹೋರಾಟ

ಪೈನಲ್ ಐದು ದಿನಗಳ ಪಂದ್ಯವಾಗಿದ್ದರಿಂದ ಮಹಾರಾಶ್ಟ್ರಕ್ಕೆ ಇನ್ನೂ ಪಂದ್ಯದಲ್ಲಿ ಮರಳಲು ಅವಕಾಶವಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ದಿಟ್ಟತನದಿಂದ ಬ್ಯಾಟ್ ಮಾಡಿ ಕೇದಾರ್ ಜಾದವ್ ಬಿರುಸಿನ 112 ರನ್ ಗಳಿಸಿದರೆ ಅಂಕಿತ್ ಬಾವನೆ ಅವರಿಗೆ ಬೆಂಬಲ ನೀಡುತ್ತಾ 61 ರನ್ ಗಳಿಸುತ್ತಾರೆ. ಆದರೆ ಸರಿಯಾದ ಹೊತ್ತಿಗೆ ಜಾದವ್ ರ ವಿಕೆಟ್ ಪಡೆದು ನಾಯಕ ವಿನಯ್ ರನ್ ಗಳಿಕೆಗೆ ಕಡಿವಾಣ ಹಾಕುತ್ತಾರೆ. ಕಡೆಗೆ ಶ್ರೇಯಸ್ ಹಾಗೂ ವಿನಯ್ ತಲಾ 4 ವಿಕೆಟ್ ಪಡೆದು ಮಹಾರಾಶ್ಟ್ರವನ್ನು 366 ರನ್ ಗಳಿಗೆ ಆಲೌಟ್ ಮಾಡುತ್ತಾರೆ. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗೆಲ್ಲಲು ಕರ‍್ನಾಟಕದ ಮುಂದೆ 157 ರನ್ ಗಳ ಗುರಿ ಇರುತ್ತದೆ. ಮೇಲ್ನೋಟಕ್ಕೆ ಇದು ಸಣ್ಣ ಗುರಿ ಎಂದೆನಿಸಿದರೂ ಐದು ದಿನಗಳ ಪಂದ್ಯಗಳಲ್ಲಿ ಕಡೇ ದಿನ ಅಶ್ಟು ರನ್ ಗಳಿಸುವುದು ಸುಳುವಾದ ಕೆಲಸವಲ್ಲ ಎಂದು ಕ್ರಿಕೆಟ್ ಅರಿತಿರುವ ಯಾರಾದರೂ ಹೇಳುತ್ತಾರೆ. ಕಡೇ ಇನ್ನಿಂಗ್ಸ್ ನಲ್ಲಿ ಮೊದಲೆರಡು ವಿಕೆಟ್ ಗಳು ಬೇಗ ಬಿದ್ದರೆ ಏನಾದರೂ ಆಗಬಹುದಾದ ಅಪಾಯ ಇದ್ದೇ ಇರುತ್ತದೆ. ಆದರೆ ಯಾವುದೇ ಬಗೆಯ ಒತ್ತಡಕ್ಕೊಳಗಾಗದೆ ಈ ಗುರಿಯನ್ನು ಬೆನ್ನತ್ತಿ ಹೊರಟ ಉತ್ತಪ್ಪ (36) ಹಾಗೂ ರಾಹುಲ್ (29) ಮೊದಲ ವಿಕೆಟ್ ಗೆ 65 ರನ್ ಗಳ ಜೊತೆಯಾಟ ಆಡಿ ಗಟ್ಟಿ ಅಡಿಪಾಯ ಹಾಕಿಕೊಡುತ್ತಾರೆ. ಆ ಬಳಿಕ ಬಂದ ಅಮಿತ್ ವರ‍್ಮಾ ಕೂಡ ಬಿರುಸಿನ 38 ರನ್ ಗಳಿಸಿ ಇನ್ನಿಂಗ್ಸ್ ಸರಾಗವಾಗಿ ಒಳ್ಳೆ ವೇಗದಲ್ಲಿ ಸಾಗುವಂತೆ ನೋಡಿಕೊಳ್ಳುತ್ತಾರೆ. ಮೂರನೇ ವಿಕೆಟ್ ಬಿದ್ದ ಮೇಲೆ ಜೊತೆಯಾದ ಮನೀಶ್ (28) ಹಾಗೂ ಕರುಣ್ (20) ಕೂಡ ಅದೇ ಬಗೆಯಲ್ಲಿ ಬ್ಯಾಟ್ ಬೀಸುತ್ತಾರೆ. ಮಹಾರಾಶ್ಟ್ರ ಬೌಲರ್ ಗಳಿಗೆ ಎಲ್ಲೂ ಅವಕಾಶ ನೀಡದೆ ರನ್ ಗಳಿಸುತ್ತಾ ಹೋಗುತ್ತಾರೆ. ಕಡೆಗೆ ಕುರಾನಾರ ಆಪ್ ಸ್ಪಿನ್ ಎಸೆತವೊಂದನ್ನು ಮೊದಲ ರಣಜಿ ಟೂರ‍್ನಿಯಾಡುತ್ತಿದ್ದ ಕರುಣ್ ನಾಯರ್ ಮುನ್ನಗ್ಗಿ ಲಾಂಗ್ ಆನ್ ಮೇಲೆ ಬರ‍್ಜರಿ ಸಿಕ್ಸ್ ಬಾರಿಸಿದಾಗ, ಕರ‍್ನಾಟಕ ತಂಡ ಗೆಲುವಿನ ಗುರಿಯನ್ನು ನಿರಾಯಾಸವಾಗಿ ಮುಟ್ಟಿ ಏಳನೇ ರಣಜಿ ಟೂರ‍್ನಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತದೆ. ಇನ್ನೊಂದು ಬದಿಯಲ್ಲಿದ್ದ ಮನೀಶ್ ನಾಲ್ಕು ವರುಶಗಳ ಹಿಂದೆ ಮೈಸೂರಿನಲ್ಲಿ ಮುಂಬೈ ಎದುರಿನ ಸೋಲಿನ ನೋವನ್ನು ಮರೆತು ಕರುಣ್ ರನ್ನು ಅಪ್ಪಿಕೊಂಡು ಗೆಲುವಿನ ಸಂತಸ ಹಂಚಿಕೊಳ್ಳುತ್ತಾರೆ. 15 ವರುಶಗಳ ಬಳಿಕ ಗೆದ್ದ ಟೂರ‍್ನಿ ಇದಾಗಿದ್ದರಿಂದ ಸಹಜಾವಾಗಿಯೇ ಅಬಿಮಾನಿಗಳಂತೆ ಆಟಗಾರರ ಸಂತಸಕ್ಕೂ ಪಾರವೇ ಇರುವುದಿಲ್ಲ. ಚೆಂಡು ಬೌಂಡರಿ ಇಂದಾಚೆ ಬೀಳುತ್ತಿದ್ದಂತೆಯೇ ಕರ‍್ನಾಟಕದ ನಾಡ ದ್ವಜದೊಂದಿಗೆ ಸಜ್ಜಾಗಿದ್ದ ಆಟಗಾರರು ಕೇಕೇ ಹೊಡಿಯುತ್ತಾ ಅಂಗಳದೊಳಕ್ಕೆ ನುಗ್ಗಿ ಮನೀಶ್ ಮತ್ತು ಕರುಣ್ ಜೊತೆ ಕುಣಿದು ಗೆಲುವಿನ ಸಂಬ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ರಣಜಿ ಟೂರ‍್ನಿ ಗೆದ್ದು ದೂರದ ತೆಲುಗು ನಾಡಿನಲ್ಲಿ ಕನ್ನಡದ ದ್ವಜ ಹಾರಿಸಿದ ವಿನಯ್ ಪಡೆಯ ಸಾದನೆ ಕಂಡಿತವಾಗಿಯೂ ಕರ‍್ನಾಟಕದ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ‍್ಣಾಕ್ಕ್ಶರಗಳಲ್ಲಿ ಬರೆದಿಡಬೇಕಾದ ಕ್ಶಣ.

ವಿನಯ್ ರ ಪರಿಪಕ್ವ ನಾಯಕತ್ವ – ಸಂದ ಗೆಲುವು

2013/14 ರಲ್ಲಿ ಒಟ್ಟು 11 ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದೆ 7 ಪಂದ್ಯಗಳನ್ನು ಗೆದ್ದು ಕರ‍್ನಾಟಕ ಪ್ರಾಬಲ್ಯ ಮೆರೆದ ಪರಿ ನಿಜಕ್ಕೂ ಅದ್ವಿತೀಯ. ಈ ಟೂರ‍್ನಿ ಗೆಲುವಿನಲ್ಲಿ ನಾಯಕ ವಿನಯ್ ರ ಪಾತ್ರ ನಿರ‍್ಣಾಯಕವಾದದ್ದು ಎಂದರೆ ತಪ್ಪಾಗಲಾರದು. ಒಳ್ಳೆ ಆಟ ಆಡಿಯೂ ಸತತ ಮೂರ‍್ನಾಲ್ಕು ವರುಶ ನಾಕೌಟ್ ಹಂತದಲ್ಲಿ ಮುಗ್ಗುರಿಸಿದ್ದ ತಂಡಕ್ಕೆ ಆತ್ಮಸ್ತರ‍್ಯ ತುಂಬಿದರು. ಈ ಬಾರಿ ಗೆಲ್ಲಲಿದ್ದೇವೆ ಎಂದು ಎಲ್ಲ ಆಟಗಾರರಲ್ಲೂ ಬ್ಯಾಟ್ ಮತ್ತು ಬಾಲ್ ನಿಂದ ತಮ್ಮ ವಯಕ್ತಿಕ ಪ್ರದರ‍್ಶನದಿಂದ ನಂಬಿಕೆ ಮೂಡಿಸಿದರು. ಅವರು ತೆಗೆದುಕೊಂಡ ಕೆಲವು ಸಮಯೋಚಿತ ಹಾಗೂ ಕಟಿಣ ತೀರ‍್ಮಾನಗಳು ತಂಡಕ್ಕೆ ಒಳಿತನ್ನೇ ಮಾಡಿದವು. ಟೂರ‍್ನಿ ನಡುವಿನಲ್ಲಿ ರನ್ ಬರ ಎದುರಿಸುತ್ತಿದ್ದ ಅನುಬವಿಗಳಾದ ಗಣೇಶ್ ಸತೀಶ್ ಹಾಗೂ ಅಮಿತ್ ವರ‍್ಮಾರನ್ನು ಆಡುವ ಹನ್ನೊಂದರಿಂದ ಕೈಬಿಟ್ಟು ಯುವಕರಾದ ಸಮರ‍್ತ್ ಹಾಗೂ ಕರುಣ್ ರಿಗೆ ಅವಕಾಶ ಮಾಡಿಕೊಟ್ಟರು. ಆಗ ಹಲವಾರು ಮಂದಿ ಹುಬ್ಬೇರಿಸಿದರೂ ಕಡೆಗೆ ವಿನಯ್ ರ ತೀರ‍್ಮಾನ ಸರಿಯಾದುದು ಎಂದು ಸತತ 3 ಶತಕಗಳನ್ನು ಸಿಡಿಸಿ ಕರುಣ್ ಹಾಗೂ ಎರಡು ಮೂರು ಒಳ್ಳೆ ಇನ್ನಿಂಗ್ಸ್ ಆಡಿ ಸಮರ‍್ತ್ ನಿರೂಪಿಸಿದರು. ಕಡೆಗೆ ನಾಕೌಟ್ ಹಂತದಲ್ಲಿ ತಂಡಕ್ಕೆ ಮರಳಿದ ಸತೀಶ್ ಮತ್ತು ಅಮಿತ್ ಕೂಡ ಶತಕ ಬಾರಿಸಿದ್ದು ವಿಶೇಶ. ಈ ಸಾಲಿನಲ್ಲಿ ಪಾದಾರ‍್ಪಣೆ ಮಾಡಿದ ಇನ್ನಿಬ್ಬರಾದ ಮಾಯಾಂಕ್ ಮತ್ತು ಶ್ರೇಯಸ್ ಇಂದು ಬೆಳೆದಿರುವ ಮಟ್ಟಕ್ಕೆ ನಾಯಕ ವಿನಯ್ ಗೆ ಶ್ರೇಯ ಸಲ್ಲಲೇಬೇಕು. ಕರ‍್ನಾಟಕ ತಂಡಕ್ಕೆ ಮರಳಿದ ರಾಹುಲ್ ಸಾವಿರಕ್ಕೂ ಹೆಚ್ಚು ರನ್ ಗಳಿಸಿದರೆ, ಅನುಬವಿಗಳಾದ ಉತ್ತಪ್ಪ, ಗೌತಮ್ ಮತ್ತು ಮನೀಶ್ ತಮ್ಮ ಸ್ತಿರ ಪ್ರದರ‍್ಶನದಿಂದ ತಂಡಕ್ಕೆ ಬಲ ತುಂಬಿದರು. ಬಿನ್ನಿ ಕೂಡ ತಮ್ಮ ಎಂದಿನ ಆಲ್ ರೌಂಡರ್ ಆಟದಿಂದ ಗಮನ ಸೆಳೆದರು. ಇನ್ನು ಬೌಲಿಂಗ್ ನಲ್ಲಿ ವಿನಯ್ ಮತ್ತು ಮಿತುನ್ 40 ಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದರೆ ಶರತ್ ಕೂಡ ತಾವು ಕೂಡ ಯಾರಿಗೂ ಕಡಿಮೆಯಿಲ್ಲ ಎಂಬಂತೆ 25 ಕ್ಕೂ ಹೆಚ್ಚು ವಿಕೆಟ್ ಪಡೆದರು. ಅರವಿಂದ್ ಕೂಡ ಆಡಿದ ಕೆಲವು ಪಂದ್ಯಗಳಲ್ಲಿ ಒಳ್ಳೆ ಬೌಲಿಂಗ್ ಮಾಡಿದರು. ಶ್ರೇಯಸ್ ತಂಡದ ಏಕೈಕ ಸ್ಪಿನ್ನರ್ ಆಗಿ ತಮ್ಮ ಮೊದಲ ಟೂರ‍್ನಿಯಲ್ಲೇ 20 ಕ್ಕೂ ಹೆಚ್ಚು ವಿಕೆಟ್ ಪಡೆದರು. ಹೀಗೆ ಒಬ್ಬರಿಗೊಬ್ಬರು ನೆರವಾಗುತ್ತಾ ಒಬ್ಬರ ಯಶಸ್ಸನ್ನು ತಂಡದವರೆಲ್ಲಾ ಸಂಬ್ರಮಿಸುತ್ತಾ ಮುಂದಾಳು ವಿನಯ್ ರ ಅಡಿಯಲ್ಲಿ 15 ಸುದೀರ‍್ಗ ವರುಶಗಳ ಬಳಿಕ ಕರ‍್ನಾಟಕ ತಂಡ 2013/14 ರ ರಣಜಿ ಟೂರ‍್ನಿ ಗೆದ್ದದ್ದು ನಿಜಕ್ಕೂ ಕ್ರಿಕೆಟ್ ಜಗತ್ತು ಮೆಚ್ಚುವಂತದ್ದು. ಹಾಗೂ ಈ ಗೆಲುವು ಕರ‍್ನಾಟಕ ತಂಡದ ಪ್ರತಿಯೊಬ್ಬ ಅಬಿಮಾನಿಯೂ ಹೆಮ್ಮೆಯಿಂದ ನೆನೆಯುವ ಗೆಲುವು.

(ಚಿತ್ರ ಸೆಲೆ: news18.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.