ಅಮ್ಮನಿಗೆ ನೆರವಾಗೋಣ

– ಸಂಜೀವ್ ಹೆಚ್. ಎಸ್.

ನಾವು ಯಾವಾಗಲೂ ನಮ್ಮಿಶ್ಟದ ಅಡುಗೆ, ಅಡುಗೆಯ ರಸ-ರುಚಿಯ ಬಗ್ಗೆ ಮಾತಾಡುತ್ತಿರುತ್ತೇವೆ. ಕೇವಲ ಅಡುಗೆ ಬಗ್ಗೆ ಮಾತನಾಡಿದರೆ ಸಾಕೆ? ಸ್ವಾದಿಶ್ಟಕರ ಅಡುಗೆಯನ್ನು ನಮ್ಮೆಲ್ಲರಿಗೂ ಉಣಬಡಿಸಿದ ಕೈಗಳ ಬಗ್ಗೆ ಮಾತನಾಡವುದು ಬೇಡವೇ? ಹೊತ್ತುಹೊತ್ತಿಗೆ ಬಿಸಿಬಿಸಿಯಾಗಿ ರುಚಿಕರ, ಪೌಶ್ಟಿಕ ಆಹಾರವನ್ನು ನಮ್ಮ ಹೊಟ್ಟೆಗೆ ಸೇರಿಸಿದವರ ಬಗ್ಗೆ ಎಂದಿಗಾದರೂ ಯೋಚಿಸಿದ್ದೇವೆಯೇ?

ಅದು ಬೇರೆ ಯಾರೋ ಅಲ್ಲ, “ಅಮ್ಮ”. ಅಡುಗೆ ಮನೆಯ ಉಸ್ತುವಾರಿ ಬಹುತೇಕ ಅಮ್ಮನದ್ದೇ ಆಗಿರುತ್ತದೆ. ಅಡುಗೆ ಮಾಡಿ ಎಲ್ಲರಿಗೂ ಉಣಬಡಿಸಿ, ಮನೆಯ ಇತರೆ ಕೆಲಸಗಳನ್ನು ಜೊತೆಜೊತೆಗೆ ಮಾಡುವುದು ಅಮ್ಮನ ನೈಪುಣ್ಯತೆ.  ಹೆಂಚಿನ ಮೇಲೆ ಬೇಯಿಸಿದ ರೊಟ್ಟಿ  ನೇರ ನಮ್ಮ ತಟ್ಟೆಗೆ ಬಂದ ನಂತರ ಬಿಸಿಬಿಸಿಯಾದ ರೊಟ್ಟಿಯನ್ನು ಪಲ್ಯ ಅತವಾ ಚಟ್ನಿಯ ಜೊತೆಗೆ ಸೇವಿಸುತ್ತಾ ಚಪ್ಪರಿಸುವುದು ನಮ್ಮೆಲ್ಲರ ಅಬ್ಯಾಸ. ನಮಗೆ ದೋಸೆ, ಚಪಾತಿ, ರೊಟ್ಟಿ ಎಲ್ಲ ಬಿಸಿ-ಬಿಸಿಯಾಗಿ ಇರಬೇಕು, ಬಿಸಿ ಇಲ್ಲದಿದ್ದರೆ ಇಶ್ಟವಾಗುವುದು ಬಿಡಿ, ಸೇವಿಸುವುದೂ ಕಶ್ಟ, ಬೇಡದ ಮನಸ್ಸಿನಿಂದ ತಿನ್ನುತ್ತೇವೆ.

ಗಮನಿಸಿ ನೋಡಿ – ರೊಟ್ಟಿಯನ್ನೊ, ಚಪಾತಿಯನ್ನೊ ಅತವಾ ದೋಸೆಯನ್ನೊ ಬೇಯಿಸಿ, ಮನೆಮಂದಿಗೆಲ್ಲ ಬಿಸಿ ಬಿಸಿಯಾಗಿ ಹಂಚಿ, ಅವರ ಹೊಟ್ಟೆ ಮತ್ತು ಮನಸ್ಸನ್ನು ಸಂತುಶ್ಟಗೊಳಿಸಿದ ಮೇಲಶ್ಟೇ ಅಮ್ಮ ಊಟ ಮಾಡುವುದು. ನಮಗೆಲ್ಲಾ ಬಿಸಿ ದೋಸೆ ಮಾಡಿ ಕೊಟ್ಟ ಅಮ್ಮ, ತಾನು ಮಾತ್ರ ಕೊನೆಯಲ್ಲಿ ಒಂದು ಅತವಾ ಎರಡು ದೋಸೆ ಮಾಡಿಕೊಂಡು ತಿಂದು ಮುಗಿಸುತ್ತಾಳೆ. ಅದು ಕೂಡ ಬಿಸಿ ಇರುತ್ತದೋ ಇಲ್ಲವೋ? ಯಾಕೆಂದರೆ ತಾನೇ ಬೇಯಿಕೊಳ್ಳುತ್ತಾ ಬಿಸಿಯಾದ ಆಹಾರ ತಿನ್ನುವುದು ಸಾದ್ಯವಿಲ್ಲ, ತಿನ್ನುವಶ್ಟರಲ್ಲಿ ಬಿಸಿ ದೋಸೆ ತಣ್ಣಗಾಗಿರುತ್ತದೆ. ಕೊನೆಯಲ್ಲಿ ಅವರು ತಿನ್ನುತ್ತಾರೆ ನಿಜ. ಆದರೆ ನೆಮ್ಮದಿಯಿಂದ, ತ್ರುಪ್ತಿಯಾಗಿ ತಿನ್ನುತ್ತಾರೆಯೇ? ಆಹಾರದ ನೈಜ್ಯ ಆಸ್ವಾದನೆಯನ್ನು ಸವಿಯಲು ಅವರಿಗೆ ಅವಕಾಶವಾದಿತೇ ಎಂಬುದೇ ಪ್ರಶ್ನೆ.

ಇದು ದೋಸೆ, ಚಪಾತಿ ಅತವಾ ರೊಟ್ಟಿಗೆ ಸಂಬಂದಿಸಿದ್ದಲ್ಲ, ಇದು ಕೇವಲ ಉದಾಹರಣೆಯಶ್ಟೇ. ಯಾವುದೇ ಅಡುಗೆ ಮಾಡಿ ಮನೆಮಂದಿಗೆಲ್ಲಾ ಬಡಿಸಿ ಅವರೆಲ್ಲರನ್ನೂ ತ್ರುಪ್ತಿಪಡಿಸಿದ ಮೇಲೆ ತಾನು ತಿನ್ನುವಶ್ಟರಲ್ಲಿ‌ ಅವರಿಗೆ ಉಳಿಯುವುದೇ ತಣ್ಣಗಾದ ಆಹಾರ. ಅಡುಗೆ ಮನೆಯಿಂದ ತಯಾರಾದ ಆಹಾರ ಊಟದ ಮೇಜಿಗೆ ಬಂದು ಎಲ್ಲರೂ ಚಪ್ಪರಿಸಿದ ನಂತರವಶ್ಟೇ ಅಮ್ಮನ ಊಟ. ಅದರಲ್ಲೂ ದುಡಿಯುವ ಮಹಿಳೆಯರ ಕಶ್ಟ ಹೇಳತೀರದು, ಅತ್ತೆ-ಮಾವ, ಗಂಡ, ಮಕ್ಕಳು ಎಲ್ಲರನ್ನು ಸಂಬಾಳಿಸಿ‌ ಮನೆಮಂದಿಯ ಕಶ್ಟ-ಸುಕಗಳನ್ನು ಆಲಿಸಿ ಅವರ ಇಚ್ಚೆಗಳಿಗೆ ಅನುಸಾರ ತ್ರುಪ್ತಿಪಡಿಸಿ ಕೊನೆಗೆ ತಾವು ಒಂದಿಶ್ಟು ಗಬಗಬನೆ ತಿಂದು ಕೆಲಸಕ್ಕೆ ಹೋಗುತ್ತಾರೆ. ವಿಗ್ನಾನ-ತಂತ್ರಗ್ನಾನದಲ್ಲಿ ಬಾಹ್ಯಕಾಶ ಮುಟ್ಟಿದ್ದರೂ ಅಡುಗೆ ಮನೆಯಲ್ಲಿ ಅಮ್ಮನ ಬದುಕು ಹಾಗೆಯೇ ಇದೆ.

ಇಂತಹ ಅಮ್ಮನಿಗೆ ಎಶ್ಟು ದಿನ ನಾವು ಬಿಸಿ ದೋಸೆ ಮಾಡಿಕೊಟ್ಟಿದ್ದೇವೆ? ನಮಗೆ ಬಿಸಿ ದೋಸೆ ಮಾಡಿ ಕೊಟ್ಟ ಅಮ್ಮ ‘ನೀನು ಕೂಡ ಬಿಸಿ ದೋಸೆ ತಿನ್ನು’ ಎಂದು ಎಶ್ಟು ಬಾರಿ ಹೇಳಿದ್ದೇವೆ? ಕೈತೊಳೆದು ಎದ್ದು ಹೋಗುವುದಶ್ಟೇ ಅಬ್ಯಾಸ. ಅಡುಗೆ ಮಾಡಿ ಬಡಿಸುವುದು ಅವಳ ಕರ‍್ಮ ಎಂದಶ್ಟೇ ಬಾವಿಸಿದ್ದೇವೆ. ಆದರೆ ಅಮ್ಮನಿಗೆ ಇದು ಅಬ್ಯಾಸವಾಗಿ ಬಿಟ್ಟಿದೆ. ಅಮ್ಮ ಈ ವಿಶಯದಲ್ಲಿ ಎಂದೂ ಚಕಾರವೆತ್ತುವುದಿಲ್ಲ.

ಸಮಾನತೆಯ ವಿಚಾರದಲ್ಲಿ ಬಾಶಣ ಬಿಗಿಯುವವರು ಇಂತ ಸಣ್ಣ ವಿಚಾರಗಳ ಬಗ್ಗೆಯೂ ಯೋಚಿಸಬೇಕಲ್ಲವೇ? ಇದರ ಬಗ್ಗೆ ಯಾವುದೇ ಕೋರ‍್ಟ್ ಗಳಲ್ಲಿ ಕೇಸು ಹಾಕಿ ಗೆಲ್ಲುವುದಕ್ಕಂತೂ ಆಗುವುದಿಲ್ಲ. ಇದು ಪ್ರೀತಿ-ವಿಶ್ವಾಸ, ಮಾನವೀಯತೆ, ಸಮಾನತೆ ಮತ್ತು ಹೊಂದಾಣಿಕೆಯಿಂದ ಆಗುವಂತದ್ದು. ಇಂತಹ ವಿಚಾರಗಳು ಬಹಳ ಚಿಕ್ಕದು ಮತ್ತು ಸರಳ, ಆದರೆ ಮಾನಸಿಕವಾದದ್ದು. ಇಂತವುಗಳಿಂದಲೇ ಎಶ್ಟೋ ಪ್ರೀತಿ ಹುಟ್ಟುವುದು, ಸಂಬಂದಗಳು ಬೆಳೆಯುವುದು ಮತ್ತು ಗಟ್ಟಿಯಾಗುವುದು.

ಅಡುಗೆ ಮಾಡುವ ಅಮ್ಮನಿಗೆ ಪ್ರತಿದಿನ ಆಗದಿದ್ದರೂ ಎಂದಾದರೂ ಒಮ್ಮೆ ನಿಮ್ಮ ಕೈಲಾದಶ್ಟು ಸಹಾಯ ಮಾಡಿ ನೋಡಿ, ಕಂಡಿತ ಅಮ್ಮನಿಗೆ ಸಂತೋಶವಾಗುತ್ತದೆ, ನಮಗೂ ಕೂಡ ಅಮ್ಮನ ಕೆಲಸದ ನೈಪುಣ್ಯತೆಯ ಅರಿವಿನ ಜೊತೆಗೆ ಅವಳ ಕೆಲಸದ ಬಾರವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿದ ಸಮಾದಾನ ಸಿಗುತ್ತದೆ. ಅಡುಗೆಮನೆಯ ಮೂಲೆಯಲ್ಲೇ ಉಳಿದುಬಿಡುವ ಅಮ್ಮನನ್ನು ಅಡುಗೆಮನೆಯಿಂದ ಹೊರತರುವುದು ನಮ್ಮೆಲ್ಲರ ಜವಾಬ್ದಾರಿ ಕೂಡ ಹೌದು. ಮನೆ ಮಂದಿಗೋಸ್ಕರ ಎಲ್ಲವನ್ನೂ ತ್ಯಾಗ ಮಾಡುವ ಅಮ್ಮನಿಗೋಸ್ಕರ ಒಂದು ನಿಮಿಶ ಬಿಡುವು ಮಾಡಿಕೊಂಡು ಅವಳ ಜೊತೆ ನಾವಿದ್ದೇವೆ ಎಂಬ ಸಂದೇಶ ಸಾರೋಣ. ಬಿಸಿ ದೋಸೆ ಚಟ್ನಿ ತಿಂದು ಚಪ್ಪರಿಸುವ ಅವಕಾಶ ನಮಗೆ ಎಶ್ಟಿದೆಯೋ ಅಶ್ಟೇ ಅವಕಾಶ ಅಮ್ಮನಿಗೂ ಇರಬೇಕು!.

“ಹಾಯಾಗಿ ಬಿಸಿ ದೋಸೆಯ ತಿನ್ನು ರಾಣಿಯ ಹಾಗೆ, ಮಹಾರಾಣಿಯ ಹಾಗೆ… ಎರಡು ದೋಸೆ ನಾನೇ ಮಾಡಿಕೊಡುವೆ‌….” ಎಂದು ಹಾಡನು ಹಾಡುತ್ತಾ ಅಮ್ಮನಿಗೂ ಒಂದೆರಡು ಬಿಸಿ ದೋಸೆ ನಿಮ್ಮ ಕೈಯಾರೆ ಮಾಡಿಕೊಡಿ. ಅದರಿಂದ ಅಮ್ಮನಿಗಾಗುವ ಸಂತಸ ಆಗಾದವಾದುದು.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: