ಕರ‍್ನಾಟಕ ಕ್ರಿಕೆಟ್ ತಂಡದ ಎಂಟನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ.

ವಿನಯ್ ಕುಮಾರ್ ಮುಂದಾಳ್ತನದಲ್ಲಿ ಒಂದೂವರೆ ದಶಕಗಳ ಬಳಿಕ 2013/14 ರಲ್ಲಿ ರಣಜಿ ಟೂರ‍್ನಿ ಗೆದ್ದ ಕರ‍್ನಾಟಕ ತಂಡ ಅದರ ಮುಂದಿನ ವರುಶ 2014/15 ರಲ್ಲಿ ಮತ್ತೊಮ್ಮೆ ರಣಜಿ ಟೂರ‍್ನಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಿತು. ಬಹುತೇಕ ಅದೇ ಆಟಗಾರರಿಂದ ಕೂಡಿದ್ದ ತಂಡದ ಯಾವ ವಿಬಾಗದಲ್ಲೂ ಕುಂದು ಇರದ್ದದ್ದು ಸ್ಪಶ್ಟವಾಗಿ ತಿಳಿಯುತ್ತಿತ್ತು. ಟೂರ‍್ನಿ ಮೊದಲ್ಗೊಳ್ಳುವ ಮುನ್ನವೇ ಕ್ರಿಕೆಟ್ ವಿಮರ‍್ಶಕರೆಲ್ಲಾ, “ಈಗಿನ ಕರ‍್ನಾಟಕ ತಂಡವನ್ನು ಮಣಿಸುವುದು ತುಂಬಾ ಕಶ್ಟ. ಯಾವ ತಂಡದಲ್ಲೂ ಇವರನ್ನು ಕಟ್ಟಿಹಾಕುವ ಅಳವಿಲ್ಲ” ಎಂದೇ ಹೇಳಿದ್ದರು.

2014/15 ಲೀಗ್ ಹಂತ

ಸಾಂಪ್ರದಾಯಿಕ ಎದುರಾಳಿ ತಮಿಳು ನಾಡು ಎದುರು ಮೊದಲ ಪಂದ್ಯ ಆಡಿದ ಕರ‍್ನಾಟಕ, ಒಂದು ಹಂತದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟು ಕೊಡುವ ಸ್ತಿತಿಯಲ್ಲಿರುತ್ತದೆ. ಆದರೆ ಅಲ್ಲಿಂದ ಹೋರಾಡಿ 285 ರನ್ ಗಳ ಬರ‍್ಜರಿ ಗೆಲುವು ಪಡೆದು ಟೂರ‍್ನಿಯಲ್ಲಿ ಒಳ್ಳೆ ಪ್ರಾರಂಬ ಪಡೆಯುತ್ತದೆ. ಶ್ರೀನಾತ್ ಅರವಿಂದ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆದು ದಾಕಲೆ ಮಾಡುತ್ತಾರೆ. ನಂತರ ಬಂಗಾಳದ ಎದುರು ಶ್ರೇಯಸ್ ಗೋಪಾಲ್ (145) ಹಾಗೂ ಅರವಿಂದ್ (29) ಮೊದಲ ಇನ್ನಿಂಗ್ಸ್‌ನ ಕೊನೆಯ ವಿಕೆಟ್ ಗೆ 148 ರನ್ ಗಳ ದಾಕಲೆ ಜೊತೆಯಾಟವಾಡಿ ತಂಡಕ್ಕೆ 9 ವಿಕೆಟ್ ಗಳ ಗೆಲುವು ದಕ್ಕಿಸಿ ಕೊಡುವಲ್ಲಿ ಮುಕ್ಯ ಪಾತ್ರ ವಹಿಸುತ್ತಾರೆ. ಬಳಿಕ ರೈಲ್ವೇಸ್ ಎದುರು ದೆಹಲಿಯಲ್ಲಿ ಮಂದ ಬೆಳಕಿನಿಂದ ದಿನಕ್ಕೆ ಸರಾಸರಿ ಕೇವಲ 50-55 ಓವರ್ ಗಳಶ್ಟೇ ನಡೆಯುತ್ತಿದ್ದ ಪಂದ್ಯವನ್ನೂ 136 ರನ್ ಗಳಿಂದ ನಿರಾಯಾಸವಾಗಿ ಗೆದ್ದು ತಾವೇಕೆ ದೇಶದ ಅತ್ಯುತ್ತಮ ತಂಡ ಎಂದು ಕರ‍್ನಾಟಕ ಮತ್ತೊಮ್ಮೆ ನಿರೂಪಿಸುತ್ತದೆ. ಇದರ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಇನ್ನಿಂಗ್ಸ್ ಹಾಗೂ 30 ರನ್ ಗಳಿಂದ ಸೋಲುಣಿಸಿ ಈ ಸಾಲಿನ ಸತತ ನಾಲ್ಕನೇ ಗೆಲುವು ದಾಕಲಿಸಿ ರಾಜ್ಯ ತಂಡ ಅಂಕಪಟ್ಟಿಯ ಮೊದಲನೇ ಸ್ತಾನವನ್ನು ಗಟ್ಟಿ ಮಾಡಿಕೊಳ್ಳುತ್ತದೆ. ಆನಂತರ ಮದ್ಯ ಪ್ರದೇಶದ ಎದುರು 522 ರನ್ಗಳಿಸಿ ಪಾಲೋ-ಆನ್ ಹೇರಿದರೂ ಪಂದ್ಯ ಗೆಲ್ಲಲಾಗದೆ ಮೊದಲ ಇನ್ನಿಂಗ್ಸ್ ಮುನ್ನಡೆಗೆ ತ್ರುಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಆರನೇ ಪಂದ್ಯವನ್ನು ಬರೋಡ ಎದುರು ಮೈಸೂರಿನಲ್ಲಿ ಆಡಿದ ಕರ‍್ನಾಟಕ, ಇನ್ನಿಂಗ್ಸ್ ಹಿನ್ನಡೆ ಅನುಬವಿಸಿ ಕಡೇ ದಿನ 288 ರನ್ ಗಳ ಗುರಿಯನ್ನು ಬೆನ್ನತ್ತಿ ಹೊರಟು ಕೇವಲ 18 ಓವರ್ ಗಳಲ್ಲಿ 50/6 ಗೆ ಕುಸಿಯುತ್ತದೆ. ಇನ್ನೇನು ಕನ್ನಡಿಗರ ಗೆಲುವಿನ ನಾಗಾಲೋಟ ಕೊನೆಗೊಳ್ಳಲಿದೆ ಎಂದೇ ಎದುರಾಳಿ ಎಣಿಸಿರುತ್ತದೆ. ಆದರೆ ಆಗ ಜೊತೆಯಾದ ಉಪನಾಯಕ ಸಿ.ಎಮ್. ಗೌತಮ್ ಹಾಗೂ ಶ್ರೇಯಸ್ ಒಟ್ಟು 40 ಓವರ್ ಗಳ ಕಾಲ ತಾಳ್ಮೆಯಿಂದ ಬ್ಯಾಟ್ ಮಾಡಿ ತಂಡವನ್ನು ಸೋಲಿನ ದವಡೆಯಿಂದ ಬಿಡಿಸುತ್ತಾರೆ. ಗೌತಮ್ 119 ಚೆಂಡು ಎದುರಿಸಿ 30 ಗಳಿಸಿದರೆ ಶ್ರೇಯಸ್ 141 ಚೆಂಡು ಎದುರಿಸಿ ಔಟಾಗದೆ 51 ರನ್ ಗಳಿಸುತ್ತಾರೆ. ಸಂದಿಗ್ದ ಪರಿಸ್ತಿತಿಯಲ್ಲಿ ಹೋರಾಡಿ ಸೋಲು ತಪ್ಪಿಸಿಕೊಂಡ ತಂಡದ ತನ್ನಂಬಿಕೆ ಸಹಜವಾಗಿಯೇ ಇಮ್ಮಡಿಯಾಗುತ್ತದೆ. ಆ ಬಳಿಕ ಚಿನ್ನಸ್ವಾಮಿ ಅಂಗಳದಲ್ಲಿ ಉತ್ತರ ಪ್ರದೇಶದ ಎದುರು ತಂಡ ಏಳನೇ ಪಂದ್ಯ ಆಡುತ್ತದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದ ಕೆ.ಎಲ್. ರಾಹುಲ್ ತಂಡಕ್ಕೆ ಮರಳಿ ಬ್ಯಾಟಿಂಗ್ ಗೆ ಇನ್ನಶ್ಟು ಬಲ ತುಂಬುತ್ತಾರೆ. ರಾಹುಲ್ ಈ ಸಾಲಿನಲ್ಲಿ ಆಡಿದ ಈ ಮೊದಲ ಪಂದ್ಯದಲ್ಲೇ ಕರ‍್ನಾಟಕದ ಪರ ಚೊಚ್ಚಲ ತ್ರಿಶತಕ ಬಾರಿಸುತ್ತಾರೆ. ಅವರು ಗಳಿಸಿದ 337 ರನ್ ಗಳು ಕರ‍್ನಾಟಕದ ಬ್ಯಾಟ್ಸ್ಮನ್ ಒಬ್ಬರ ಅತ್ಯದಿಕ ಮೊದಲ ದರ‍್ಜೆ ಮೊತ್ತವಾಗಿ ಇನ್ನೂ ಉಳಿದಿದೆ. ಪಂದ್ಯದಲ್ಲಿ 719 ರನ್ ಗಳಿಸಿದ ರಾಜ್ಯ ತಂಡ ಪಾಲೋ-ಆನ್ ಹೇರುವ ಅವಕಾಶವಿದ್ದರೂ ಹೇರದೆ ಡ್ರಾಗೆ ಸಮಾದಾನ ಪಟ್ಟುಕೊಳ್ಳುತ್ತದೆ. ಬಳಿಕ ಕಡೇ ಲೀಗ್ ಪಂದ್ಯದಲ್ಲಿ ಮುಂಬೈ ಎದುರು ಹತ್ತಿರಕ್ಕೆ ಬಂದು ಇನ್ನಿಂಗ್ಸ್ ಹಿನ್ನಡೆ ಅನುಬವಿಸಿದ ಕರ‍್ನಾಟಕ ತಂಡ ಒಟ್ಟು 8 ಪಂದ್ಯಗಳಲ್ಲಿ ಒಂದೂ ಪಂದ್ಯ ಸೋಲದೆ ನಾಲ್ಕು ಗೆಲುವು ದಾಕಲಿಸಿ 33 ಪಾಯಿಂಟ್ ಗಳಿಂದ ಮೊದಲ ಸ್ತಾನ ಪಡೆದು ಮತ್ತೊಂದು ಕ್ವಾರ‍್ಟರ್ ಪೈನಲ್ ತಲುಪುತ್ತದೆ. ಆದರೆ ಮೊದಲ ಸತತ ನಾಲ್ಕು ಗೆಲುವುಗಳ ಬಳಿಕ ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಗೆಲುವು ಪಡೆಯದೇ, ತಂಡದ ಆಟ ಕೊಂಚ ಸಪ್ಪೆಯಾಗಿದ್ದು ಸುಳ್ಳಲ್ಲ. ಈ ಕುಂದನ್ನು ಅರಿತಿದ್ದ ನಾಯಕ ವಿನಯ್ ಕುಮಾರ್ ಬೆನ್ನಿಗೆ ತಂಡವನ್ನು ಮತ್ತೆ ಗೆಲುವಿನ ದಾರಿಗೆ ತರುವ ಹೊಣೆ ಏರುತ್ತದೆ.

ಕ್ವಾರ‍್ಟರ್ ಪೈನಲ್ – ಎದುರಾಳಿ ಅಸ್ಸಾಮ್

ಪ್ಲೇಟ್ ಗ್ರೂಪ್ ನಿಂದ ಕ್ವಾರ‍್ಟರ್ ಪೈನಲ್ ತಲುಪಿದ್ದ ಅಸ್ಸಾಮ್ ನಿಜಕ್ಕೂ ದೊಡ್ಡ ಸಾದನೆಯನ್ನೇ ಮಾಡಿತ್ತು. ತಟಸ್ತ ಸ್ತಳವಾದ ಇಂದೋರ್ ನಲ್ಲಿ ನಡೆದ ಈ ಪಂದ್ಯಕ್ಕೂ ಮುನ್ನ ಅಸ್ಸಾಮ್ ತಂಡದ ತರಬೇತುದಾರರಾದ ಕನ್ನಡಿಗ ಸನತ್ ಕುಮಾರ್, ಕರ‍್ನಾಟಕವನ್ನು ಸೋಲಿಸುವುದು ಕಶ್ಟವಾದರೂ ನಮ್ಮ ತಂಡ ಚಾಂಪಿಯನ್ ತಂಡಕ್ಕೆ ಪೈಪೋಟಿ ನೀಡಲಿದೆ ಎಂಬ ಬರವಸೆಯ ಮಾತುಗಳನ್ನಾಡುತ್ತಾರೆ. ಅವರ ಮಾತುಗಳಂತೆಯೇ ಅವರ ತಂಡ ಸೋಲದೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಅಸ್ಸಾಮ್ ತಂಡದ ಲೆಕ್ಕಾಚಾರವನ್ನು ಆರಂಬಿಕ ಆಟಗಾರರಾದ ರಾಬಿನ್ ಉತ್ತಪ್ಪ (153) ಹಾಗೂ ಕೆ.ಎಲ್. ರಾಹುಲ್ (91) ತಲೆಕೆಳಗೆ ಮಾಡುತ್ತಾರೆ. ಒಟ್ಟು 452 ರನ್ ಗಳಿಸಿದ ತಂಡ ಬಳಿಕ ಎದುರಾಳಿಯನ್ನು ಎಲ್ಲಾ ಬೌಲರ್ ಗಳ ಸಾಮೂಹಿಕ ಪ್ರಯತ್ನದಿಂದ 185 ಕ್ಕೆ ಆಲೌಟ್ ಮಾಡಿ 267 ರನ್ ಗಳ ದೊಡ್ಡ ಮುನ್ನಡೆ ಪಡೆದು, ಪಾಲೊ-ಆನ್ ಹೇರದೆ ಮತ್ತೊಮ್ಮೆ ಬ್ಯಾಟ್ ಮಾಡುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲಿ ಸಮರ‍್ತ್ ಸೊಗಸಾದ 178 ರನ್ ಗಳಿಸುತ್ತಾರೆ. 415/5 ತಲುಪಿದಾಗ ಡಿಕ್ಲೇರ್ ಮಾಡಿ ವಿನಯ್ ಕಡೇ ದಿನ ಅಸ್ಸಾಮ್ ಎದುರು 683 ರನ್ ಗಳ ಅಸಾದ್ಯ ಗುರಿ ಮುಂದಿಡುತ್ತಾರೆ. ಗೆಲ್ಲಲು ಯಾವುದೇ ಅವಕಾಶ ಇಲ್ಲದಿದ್ದರೂ ಅಸ್ಸಾಮ್, ಕರ‍್ನಾಟಕದ ಬಲಾಡ್ಯ ಬೌಲಿಂಗ್ ಎದುರು 88 ಓವರ್ ಬ್ಯಾಟ್ ಮಾಡಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು 338 ರನ್ ಕಲೆಹಾಕಿ ಸೋಲು ತಪ್ಪಿಸಿಕೊಳ್ಳುತ್ತದೆ. ಪ್ಲೇಟ್ ಗ್ರೂಪ್ ನ ತಂಡವೊಂದಕ್ಕೆ ಹಾಲಿ ಚಾಂಪಿಯನ್ ಕರ‍್ನಾಟಕ ಎದುರು ಐದು ದಿನದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಹೀಗೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಬಲದ ಮೇಲೆ ಕರ‍್ನಾಟಕ ತಂಡ ಮತ್ತೊಂದು ಸೆಮಿಪೈನಲ್ ಗೆ ಲಗ್ಗೆ ಇಡುತ್ತದೆ.

ಸೆಮಿಪೈನಲ್ ಎದುರಾಳಿ – ಮುಂಬೈ

ಕ್ವಾರ‍್ಟರ್ ಪೈನಲ್ ನಲ್ಲಿ ದೆಹಲಿ ಎದುರು ದೊಡ್ಡ ಗೆಲುವು ಪಡೆದು ವಿಶ್ವಾಸದಿಂದ ಬೀಗುತ್ತಾ ಸೆಮಿಪೈನಲ್ ತಲುಪಿದ್ದ ಮುಂಬೈ ಮತ್ತು ಸತತ ಐದು ಪಂದ್ಯಗಳಲ್ಲಿ ಒಂದೂ ಗೆಲುವು ಪಡೆಯದೆ ಗೆಲುವೊಂದಕ್ಕೆ ಹಾತೊರೆಯುತ್ತಿದ್ದ ಕರ‍್ನಾಟಕ, ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಬಹು ನಿರೀಕ್ಶಿತ ಸೆಮಿಪೈನಲ್ ನಲ್ಲಿ ಎದುರಾದವು. ಬ್ಯಾಟಿಂಗ್ ಗೆ ಹೇಳಿ ಮಾಡಿಸಿದಂತಿದ್ದ ಪಿಚ್ ಮೇಲೆ ಟಾಸ್ ಗೆದ್ದ ಕರ‍್ನಾಟಕ ತಂಡ, ಕೆಲವು ಆಟಗಾರರ ಬೇಜವಾಬ್ದಾರಿ ಹೊಡೆತಗಳು ಹಾಗೂ ಮುಂಬೈನ ಕರಾರುವಾಕ್ ಬೌಲಿಂಗ್ ನ ಪರಿಣಾಮವಾಗಿ ಕೇವಲ 202 ರನ್ ಗಳಿಗೆ ಕುಸಿಯಿತು. ಉತ್ತಪ್ಪ (68) ಒಬ್ಬರನ್ನು ಬಿಟ್ಟರೆ ಇನ್ಯಾರೂ ಹೇಳಿಕೊಳ್ಳುವಂತಹ ಆಟ ಆಡದೆ ತಂಡವನ್ನು ಸಂಕಶ್ಟಕ್ಕೆ ಸಿಲುಕಿಸಿದರು. ಮೊದಲ ಇನ್ನಿಂಗ್ಸ್ ಬಳಿಕ ಮುಂಬೈ ಪಾಳಯ ಸಂತಸದಲ್ಲಿ ತೇಲುತ್ತಿತ್ತು. ಅಲ್ಲಿಂದ ಒಂದೊಳ್ಳೆ ಬ್ಯಾಟಿಂಗ್ ಪ್ರದರ‍್ಶನದಿಂದ ಪೈನಲ್ ತಲುಪುವ ಹೊಸ್ತಿಲಲ್ಲಿತ್ತು. “ಮೊದಲೇ ಇದು ಒಳ್ಳೆ ಬ್ಯಾಟಿಂಗ್ ಪಿಚ್. ಅದರ ಜೊತೆಗೆ ದಿನದ ನಡುಹೊತ್ತಿನ ವೇಳೆಬೌಲರ್ ಗಳಿಗೆ ಪಿಚ್ ನಲ್ಲಿ ಕೊಂಚ ನೆರವೂ ಇರುವುದಿಲ್ಲ. ಹಾಗಾಗಿ ಮುಂಬೈ ರನ್ ಗಳ ದೊಡ್ಡ ಗೋಪುರ ಕಟ್ಟಲಿದೆ” ಎಂದೇ ಪಂದ್ಯದ ನೇರುಲಿಗರೆಲ್ಲಾ(commentators) ಅನಿಸಿಕೆ ವ್ಯಕ್ತ ಪಡಿಸುತ್ತಾರೆ. ಆದರೆ ನಾಯಕ ವಿನಯ್ ಪವಾಡವೊಂದನ್ನು ಮಾಡಿ ಕ್ರಿಕೆಟ್ ಪಂಡಿತರೆಲ್ಲಾ ತಮ್ಮ ಮಾತುಗಳನ್ನು ನುಂಗಿಕೊಳ್ಳುವ ಹಾಗೆ ಮಾಡುತ್ತಾರೆ. ತಮ್ಮ ಬ್ಯಾಟ್ಸ್ಮನ್ ಗಳ ವೈಪಲ್ಯದಿಂದ ಸಹಜವಾಗಿಯೇ ಸಿಟ್ಟಾಗಿದ್ದ ವಿನಯ್, ಹೊಸ ಚೆಂಡಿನಿಂದ ಬೆಂಕಿ ಉಗುಳುತ್ತಾರೆ. ದಾವಣಗೆರೆ ಎಕ್ಸ್ಪ್ರೆಸ್ ನ ಸ್ವಿಂಗ್ ದಾಳಿಗೆ ತತ್ತರಿಸಿ ಹೋದ ಮುಂಬೈ ಪಡೆ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಕಡೆ ಮೆರವಣಿಗೆ ಮೊದಲುಮಾಡುತ್ತಾರೆ. ಎರಡು ಸ್ಟಾಂಡ್ ಗಳಲ್ಲಿ ಕಿಕ್ಕಿರಿದು ತುಂಬಿದ್ದ ಕರ‍್ನಾಟಕದ ಅಬಿಮಾನಿಗಳು ಒಂದೊಂದು ವಿಕೆಟ್ ಬೀಳುತ್ತಿದ್ದಂತೆಯೇ ಸದ್ದು ಮಾಡುತ್ತಾ ತವರಿನ ತಂಡದ ಬೆನ್ನಿಗೆ ನಿಲ್ಲುತ್ತಾರೆ. ನೋಡನೋಡುತ್ತಿದಂತೆಯೇ ಕೇವಲ ಒಂದೇ ತಾಸಿನಲ್ಲಿ 15 ಓವರ್ ಗಳಿಗೆ ಮುಂಬೈ 44 ರನ್ ಗಳಿಗೆ ಸರ‍್ವಪತನ ಕಂಡು 158 ರನ್ ಗಳ ಇನ್ನಿಂಗ್ಸ್ ಹಿನ್ನಡೆ ಅನುಬವಿಸುತ್ತದೆ. ನಾಯಕ ವಿನಯ್ 8 ಓವರ್ ಗಳಲ್ಲಿ 20 ರನ್ ನೀಡಿ 6 ವಿಕೆಟ್ ಪಡೆದು ತಮ್ಮ ಬೌಲಿಂಗ್ ಅಳವು ಇನ್ನೂ ಕುಂದಿಲ್ಲ ಎಂದು ಸಾಬೀತು ಮಾಡುತ್ತಾರೆ. ಇನ್ನೇನು ಪಂದ್ಯ ಕೈತಪ್ಪಲಿದೆ ಎಂಬಂತಿದ್ದ ಪರಿಸ್ತಿತಿಯಿಂದ ಕರ‍್ನಾಟಕ ಪಂದ್ಯದಲ್ಲಿ ಮರಳಿ ದೊಡ್ಡ ಮುನ್ನಡೆಯಿಂದ ಬಿಗಿ ಹಿಡಿತ ಪಡೆಯುತ್ತದೆ. ಎರಡನೇ ಇನ್ನಿಂಗ್ಸ್ ನಲ್ಲೂ ಆರಂಬಿಕ ಆಗಾತಕ್ಕೊಳಗಾದರೂ ನೈಟ್ ವಾಚ್‌ಮನ್ ಆಗಿ ಬಂದಿದ್ದ ಮಿತುನ್ ರ 89 ಹಾಗೂ ಸಮರ‍್ತ್ ರ 58 ರನ್ ಗಳ ಕೊಡುಗೆಯಿಂದ ತಂಡ 286 ರನ್ ಗಳಿಸಿ ಮುಂಬೈಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಗೆಲುವಿಗೆ 445 ರನ್ ಗಳ ಗುರಿ ನೀಡುತ್ತದೆ. ಮೊದಲಿಗೆ ತಾರೆ, ಲಾಡ್ ಹಾಗೂ ಅಯ್ಯರ್ ರನ್ ಕಲೆಹಾಕುತ್ತಾ ಮುಂಬೈ ಪರವಾಗಿ ಕೊಂಚ ಪ್ರತಿರೋದ ಒಡ್ಡಿದರೂ ಮಿತುನ್ ರ (4/69) ವೇಗದ ದಾಳಿಗೆ ತಂಡ 332 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಳ್ಳುತ್ತದೆ. ಕರ‍್ನಾಟಕ ಮತ್ತೊಮ್ಮೆ ಮುಂಬೈ ಎದುರು ಪ್ರಾಬಲ್ಯ ಮೆರೆದು 112 ರನ್ ಗಳ ಬರ‍್ಜರಿ ಗೆಲುವು ಪಡೆದು ಸತತ ಎರಡನೇ ಪೈನಲ್ ಗೆದಾಪುಗಾಲಿಡುತ್ತದೆ.

ಪೈನಲ್ – ಎದುರಾಳಿ ತಮಿಳು ನಾಡು

ತಂಡದ ವಿಕೆಟ್ ಕೀಪರ್ ಹಾಗೂ ಉಪನಾಯಕ ಗೌತಮ್ ಗಾಯದ ಸಮಸ್ಯೆಯಿಂದ ಪೈನಲ್ ನಿಂದ ಹೊರಗುಳಿಯುತ್ತಾರೆ. ಸದಾ ಕೆಳಗಿನ ಕ್ರಮಾಂಕದಲ್ಲಿ ಆಪತ್ಬಾಂದವನಾಗಿ ಬ್ಯಾಟ್ ಮಾಡುತ್ತಿದ್ದ ಗೌತಮ್ ರ ಸೇವೆ ಮಹತ್ವದ ಪೈನಲ್ ಗೆ ಇಲ್ಲದ್ದದ್ದು ಕರ‍್ನಾಟಕ ತಂಡಕ್ಕೆ ತುಂಬಲಾರದ ನಶ್ಟವಾಗಿದ್ದು ಸುಳ್ಳಲ್ಲ. ಅವರ ಬದಲು ಉತ್ತಪ್ಪ ಕೀಪಿಂಗ್ ಹೊಣೆ ಹೊರುತ್ತಾರೆ. ಹಾಗಾಗಿ ಒಬ್ಬ ಹೆಚ್ಚುವರಿ ವೇಗದ ಬೌಲರ್ ಶರತ್ ರೊಂದಿಗೆ ತಂಡ ಕಣಕ್ಕಿಳಿಯುತ್ತದೆ. ತಮಿಳು ನಾಡು ತಂಡದಲ್ಲಿ ಅಂತರಾಶ್ಟ್ರೀಯ ಆಟಗಾರರಾದ ಮುರಳಿ ವಿಜಯ್, ಮುಕುಂದ್, ಬಾಲಾಜಿ ಹಾಗೂ ದಿನೇಶ್ ಕಾರ‍್ತಿಕ್ ಇದ್ದುದ್ದರಿಂದ ಒಳ್ಳೆ ಪೈಪೋಟಿಯನ್ನು ಎಲ್ಲರೂ ನಿರೀಕ್ಶಿಸುತ್ತಿರುತ್ತಾರೆ. ಯಾವುದೇ ಕಾರಣಕ್ಕೂ ಎದುರಾಳಿಯನ್ನು ಹಗುರವಾಗಿ ಪರಿಗಣಿಸುವಂತಿರುವುದಿಲ್ಲ. ಒಟ್ಟು ನಾಲ್ಕು ವೇಗದ ಬೌಲರ್ ಗಳು ಹಾಗೂ ಸ್ಪಿನ್ನರ‍್ ಶ್ರೇಯಸ್ ರನ್ನೊಳಗೊಂಡ ತಂಡವನ್ನು ಕಂಡು ಟಾಸ್ ವೇಳೆ ಎಲ್ಲರೂ ಆಶ್ಚರ‍್ಯ ವ್ಯಕ್ತ ಪಡಿಸುತ್ತಾರೆ. ಒಳ್ಳೆ ರಹದಾರಿಯಂತಿದ್ದ ಮುಂಬೈನ ವಾಂಕೆಡೆ ಪಿಚ್ ಮೇಲೆ ಟಾಸ್ ಗೆದ್ದು ವಿನಯ್ ಬೌಲಿಂಗ್ ಆಯ್ದುಕೊಂಡು ಮತ್ತೊಮ್ಮೆ ಎಲ್ಲರೂ ಅವಾಕ್ ಆಗುವಂತೆ ಮಾಡುತ್ತಾರೆ. ವಿನಯ್ ರ ಲೆಕ್ಕಾಚಾರವಾದರೂ ಏನು? ಇಂತಹ ಒಳ್ಳೆ ಬ್ಯಾಟಿಂಗ್ ಪಿಚ್ ಮೇಲೆ ಬೌಲಿಂಗ್ ಮಾಡುವುದು ತರವಲ್ಲ ಎಂಬುವುದು ವಿಮರ‍್ಶಕರ ಅಂಬೋಣವಾಗಿರುತ್ತದೆ. ಆದರೆ ವಿನಯ್ ಅಂತಹ ಸತ್ವವಿಲ್ಲದ ಪಿಚ್ ಮೇಲೂ ತಮ್ಮ ಎಂದಿನ ಸ್ವಿಂಗ್ ದಾಳಿಯಿಂದ (5/34) ತಮಿಳು ನಾಡು ತಂಡವನ್ನು ಕೇವಲ 134 ರನ್ ಗಳಿಗೆ ಕಟ್ಟಿಹಾಕುತ್ತಾರೆ. ಮಿತುನ್ ಕೂಡ ಉತ್ತಮ (3/54) ವಿಕೆಟ್ ಪಡೆದು ತಮ್ಮ ನಾಯಕನಿಗೆ ಬೆಂಬಲ ನೀಡುತ್ತಾರೆ. ಈ ಸಾದಾರಣ ಮೊತ್ತವನ್ನು ಬೆನ್ನತ್ತಿ ಹೊರಟ ಕನ್ನಡಿಗರು ದಿನದ ಕಡೇ ಒಂದು ಗಂಟೆಯ ಹೊತ್ತಲ್ಲಿ 31/4 ಕ್ಕೆ ಕುಸಿಯುತ್ತಾರೆ. ರಾಹುಲ್ ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿ ವಿಶ್ರಾಂತಿಗಾಗಿ ಹೊರನಡೆದಿದ್ದೇ ತಡ ರವಿಕುಮಾರ್ ಸಮರ‍್ತ್ (14), ಶಿಶಿರ್ ಬವಾನೆ (0), ಉತ್ತಪ್ಪ (0) ಹಾಗೂ ಮನೀಶ್ ಪಾಂಡೆ (6) ಒಬ್ಬರ ಹಿಂದೊಬ್ಬರು ಪೆವಿಲಿಯನ್ ಹಾದಿ ಹಿಡಿಯುತ್ತಾರೆ. ತಮಿಳು ನಾಡು ಪಂದ್ಯದಲ್ಲಿ ಮರಳುವ ಹೊಸ್ತಿಲಲ್ಲಿ ಬಂದು ನಿಲ್ಲುತ್ತದೆ. ಆದರೆ ಆಗ ಮಿತುನ್ ಮತ್ತೊಮ್ಮೆ ನೈಟ್ ವಾಚ್‌ಮನ್ ಆಗಿ ಬಂದು ಆ ದಿನ ಮತ್ತೆ ವಿಕೆಟ್ ಬೀಳದಂತೆ ನೋಡಿಕೊಳ್ಳುತ್ತಾರೆ. ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಕರ‍್ನಾಟಕ ತಂಡ 84 ರನ್ ತಲುಪಿದಾಗ ಮಿತುನ್ (39) ರನ್ನು ಕಳೆದುಕೊಳ್ಳುತ್ತದೆ. ಮಿತುನ್ ತಮ್ಮ ಹೊಣೆಯನ್ನು ಸರಿಯಾಗಿ ನಿಬಾಯಿಸಿ ಹೊರನಡೆಯುತ್ತಾರೆ. ಆಗ ಇನ್ನೂ ಸಂಪೂರ‍್ಣ ಗುಣಮುಕವಾಗದೆ ಕುಂಟುತ್ತಲ್ಲೇ ಕೆ.ಎಲ್ ರಾಹುಲ್ ಬ್ಯಾಟ್ ಮಾಡಲು ಬಂದು ತಂಡದ ಪರ ತಮ್ಮ ಬದ್ದತೆಯನ್ನು ತೋರುತ್ತಾರೆ. ಇನ್ನೂ ಅಪಾಯದಲ್ಲಿದ್ದಾಗ (84/5) ಜೊತೆಯಾದ ಕರುಣ್-ರಾಹುಲ್ ಜೋಡಿ ತಾಳ್ಮೆಯಿಂದ ರನ್ ಕಲೆಹಾಕುತ್ತಾ ಹೋಗುತ್ತದೆ. ರಾಹುಲ್ 2-3 ರನ್ ಓಡುವುದು ಪ್ರಯಾಸದ ಕೆಲಸವೇ ಆಗಿದ್ದುದು ಸ್ಪಶ್ಟವಾಗಿ ಎಲ್ಲರಿಗೂ ತಿಳಿಯುತ್ತದೆ. ಆದರೆ ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಲಯ ಕಂಡುಕೊಳ್ಳುತ್ತಿದಂತೆಯೇ ತಮ್ಮ ಎಂದಿನ ಬಿರುಸಿನ ಆಟ ಮೊದಲು ಮಾಡುತ್ತಾರೆ. ವೇಗ, ಸ್ಪಿನ್ ಯಾವ ಬಗೆಯ ಬೌಲಿಂಗ್ ಕೂಡ ಇವರಿಬ್ಬರ ಎದುರು ಪರಿಣಾಮಕಾರಿಯಾಗುವುದಿಲ್ಲ. ಕೊನೆಗೆ ರಾಹುಲ್ 188 ರನ್ ಸಿಡಿಸಿ ಔಟ್ ಆದಾಗ ತಂಡದ ಸ್ಕೋರ್ 470 ತಲುಪಿರುತ್ತದೆ. ಈ ಯುವಕರ ಜೊತೆಯಾಟ 386 ರನ್ ಕಲೆಹಾಕಿ ತಂಡವನ್ನು ಗೆಲುವಿನ ಸನಿಹ ತಂದು ನಿಲ್ಲಿಸುತ್ತದೆ. ರಾಹುಲ್ ಔಟ್ ಆದ ನಂತರ ಕರುಣ್ ನಾಯಕ ವಿನಯ್ ರೊಂದಿಗೆ ಇನ್ನೊಂದು ದೊಡ್ಡ ಜೊತೆಯಾಟವಾಡುತ್ತಾರೆ. ಕರುಣ್ ಬರೋಬ್ಬರಿ 328 ರನ್ ಗಳಿಸಿದರೆ ವಿನಯ್ ಔಟಾಗದೆ 105 ರನ್ ಗಳಿಸಿ ತಮಿಳು ನಾಡು ತಂಡವನ್ನು ಪಂದ್ಯದಿಂದ ಸಂಪೂರ‍್ಣವಾಗಿ ಹೊರಗಟ್ಟುತ್ತಾರೆ. ಪೈನಲ್ ತನಕ ಒಟ್ಟು ಹತ್ತು ಪಂದ್ಯಗಳಲ್ಲಿ ಕೇವಲ ಒಂದು ಅರ‍್ದಶತಕ ಗಳಿಸಿ ಆಡುವ ಹನ್ನೊಂದರಿಂದ ಅವಕಾಶ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದ ಕರುಣ್, ಅತಿಮುಕ್ಯ ಪೈನಲ್ ನಲ್ಲಿ ತ್ರಿಶತಕ ಗಳಿಸಿ ನಾಯಕ ವಿನಯ್ ತಮ್ಮ ಮೇಲಿಟ್ಟಿದ್ದ ಬರವಸೆಯನ್ನು ಉಳಿಸಿಕೊಳ್ಳುತ್ತಾರೆ. 82 ವರ‍್ಶಗಳ ಕಾಲ ಒಂದೂ ತ್ರಿಶತಕ ಗಳಿಸದ ಕನ್ನಡಿಗರು ಕೇವಲ ಒಂದೂವರೆ ತಿಂಗಳಲ್ಲಿ ಎರಡು ತ್ರಿಶತಕ (ರಾಹುಲ್ 337, ಕರುಣ್ 328) ಬಾರಿಸುತ್ತಾರೆ. ಕಡೆಗೆ ಕರ‍್ನಾಟಕ 762 ರನ್ ಗಳಿಸಿ 628 ರನ್ ಗಳ ದೊಡ್ಡ ಮುನ್ನಡೆ ಪಡೆದು ಪ್ರಶಸ್ತಿಯ ಹೊಸ್ತಿಲಲ್ಲಿ ಬಂದು ನಿಲ್ಲುತ್ತದೆ. ಎರಡು ದಿನ ಪೀಲ್ಡಿಂಗ್ ಮಾಡಿ ದಣಿದಿದ್ದ ತಮಿಳು ನಾಡು ಆಟಗಾರರಿಗೆ ಪಂದ್ಯದಲ್ಲಿ ಮರಳುವ ಅವಕಾಶವಿಲ್ಲ ಎಂಬುದು ಚೆನ್ನಾಗಿಯೇ ಗೊತ್ತಿರುತ್ತದೆ. ಆಸ್ಟ್ರೇಲಿಯಾದಲಿ ಜಾನ್ಸನ್, ಸ್ಟಾರ‍್ಕ್ ರಂತಹ ಬೌಲರ್ ಗಳೆದುರು ಒಂದು ಶತಕ ಗಳಿಸಿದ್ದ ಮುರಳಿ ವಿಜಯ್ ಮೊದಲನೆ ಇನ್ನಿಂಗ್ಸ್ ನಂತೆ ಎರಡನೇ ಇನ್ನಿಂಗ್ಸ್ ನಲ್ಲೂ ಕಡಿಮೆ ಮೊತ್ತಕ್ಕೆ ವಿನಯ್ ರ LBW ಬಲೆಗೆ ಬೀಳುತ್ತಾರೆ. ಕಾರ‍್ತಿಕ್ ಹಾಗೂ ವಿಜಯ್ ಶಂಕರ್ ಶತಕ ಗಳಿಸಿದರೂ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶ್ರೇಯಸ್ ತಮ್ಮ ಸ್ಪಿನ್ ದಾಳಿಯಿಂದ (4/126) ಪ್ರಬಾವ ಬೀರುತ್ತಾರೆ. ಕೊನೆಗೆ ಅರವಿಂದ್ ರ ಎಸೆತದಲ್ಲಿ ರಂಗರಾಜನ್ ಮನೀಶ್ ಕೈಗೆ ಕ್ಯಾಚಿತ್ತಾಗ ಎರಡನೇ ಇನ್ನಿಂಗ್ಸ್ ಲಿ ತಮಿಳು ನಾಡು 411 ರನ್ ಗಳಿಗೆ ಸರ‍್ವಪತನ ಕಾಣುತ್ತದೆ. ಕರ‍್ನಾಟಕ ಪೈನಲ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 217 ರನ್ ಗಳಿಂದ ಬರ‍್ಜರಿಯಾಗಿ ಗೆದ್ದು ಎಂಟನೇ ರಣಜಿ ಟೂರ‍್ನಿಯನ್ನು ಮುಡಿಗೇರಿಸಿಕೊಳ್ಳುತ್ತದೆ. ಕ್ಯಾಚ್ ಹಿಡಿದ ಮನೀಶ್ ಹಾಗೂ ನಾಯಕ ವಿನಯ್, ಗೆದ್ದ ಬಳಿಕ ತಮ್ಮ ಪೀಲ್ಡಿಂಗ್ ಸ್ತಳದಿಂದ ಓಡಿ ಬಂದು ಸ್ಟಂಪ್ಸ್ ಕೀಳಲು ನಾ ಮುಂದು ತಾ ಮುಂದು ಎಂದು ಪೈಪೋಟಿಗಿಳಿದಿದ್ದ ತಮಾಶೆಯ ಗಳಿಗೆ ಅಬಿಮಾನಿಗಳ ಮನದಲ್ಲಿ ಇಂದಿಗೂ ಹಚ್ಚಹಸಿರಾಗಿ ಉಳಿದಿದೆ.

ಕರ‍್ನಾಟಕ ಪ್ರಾಬಲ್ಯ ಮೆರೆದು ಗೆದ್ದ ಟೂರ‍್ನಿ

2014/15 ರ ರಣಜಿ ಟೂರ‍್ನಿ ಗೆಲುವು ಒಂದು ಬಗೆಯಲ್ಲಿ ಕರ‍್ನಾಟಕ ಹಾಗೂ ಇತರೆ ತಂಡಗಳಿಗೆ ಇರುವ ಅಂತರವನ್ನು ಜಗಜ್ಜಾಹೀರು ಮಾಡಿ ಎದುರಾಳಿ ತಂಡಗಳಿಗೆ ಎಲ್ಲೂ ಅವಕಾಶ ನೀಡದೆ ಆಟೋಪೈಲಟ್ ಮೋಡ್ ನಲ್ಲಿ ಪಡೆದ ಗೆಲುವು ಎಂದೇ ಹೇಳಬೇಕು. ಯುವಕರಿಂದ ಹಿಡಿದು ಅನುಬವಿಗಳವರೆಗೂ ಎಲ್ಲಾ ಆಟಗಾರರು ತಮ್ಮ ಹೊಣೆಯನ್ನು ಸರಿಯಾಗಿ ಅರಿತು ತಂಡಕ್ಕೆ ನೆರವಾಗಿದ್ದು ಸ್ಪಶ್ಟವಾಗಿ ತಿಳಿಯುವಂತಿತ್ತು. ಈ ಸಾಲಿನಲ್ಲಿ ಉತ್ತಪ್ಪ ಅತ್ಯದಿಕ 912 ರನ್ಗಳಿಸಿದರೆ ವಿನಯ್ ಅತ್ಯದಿಕ 48 ವಿಕೆಟ್ ಪಡೆಯುವುದರ ಜೊತೆಗೆ ನಾಯಕನ ಹೊಣೆಯನ್ನು ಸೊಗಸಾಗಿ ನಿಬಾಯಿಸಿದರು. ವಿನಯ್ ಬ್ಯಾಟ್ಸ್ಮನ್ ರ ಕುಂದುಗಳ ಪ್ರಕಾರ ಪೀಲ್ಡ್ ಸಜ್ಜು ಮಾಡುವುದು, ಸಮಯೋಚಿತ ಬೌಲಿಂಗ್ ಬದಲಾವಣೆ ಮಾಡುವುದನ್ನು ನೋಡುವುದೇ ಒಂದು ಸೊಗಸು ಎಂದರೆ ತಪ್ಪಾಗಲಾರದು. ಒಟ್ಟು ಹನ್ನೊಂದು ಪಂದ್ಯಗಳಲ್ಲಿ ತಂಡ ಕೇವಲ 30-45 ನಿಮಿಶಗಳ ಕಾಲ ಹಿನ್ನಡೆ ಅನುಬವಿಸಿ ಒತ್ತಡಕ್ಕೊಳಗಾಗಿದ್ದರೆ ಹೆಚ್ಚು. ಕನ್ನಡಿಗರ ಆಟ ಆ ದಾಟಿಯಲ್ಲಿದ್ದದ್ದು ಸುಳ್ಳಲ್ಲ. ಹಾಗಾಗಿ 2014/15 ರ ರಣಜಿ ಟೂರ‍್ನಿ ಗೆಲುವು ಕರ‍್ನಾಟಕದ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ವಿಶಿಶ್ಟ ಸ್ತಾನ ಪಡೆದುಕೊಂಡಿದೆ.

(ಚಿತ್ರ ಸೆಲೆ: thequint.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: