ಮಾತು ಮತ್ತು ಮೌನ

– ಪ್ರಕಾಶ್ ಮಲೆಬೆಟ್ಟು.

ಮಾತು ಬೆಳ್ಳಿ ಮೌನ ಬಂಗಾರ” ಎನ್ನುವ ಗಾದೆ ಮಾತು ಹಳೆಯದಾಯಿತು, ಈಗೇನಿದ್ರೂ “ಮಾತು ಕೀರ‍್ತಿ ಮೌನ ಅಪಕೀರ‍್ತಿ” ಆಗಿಬಿಟ್ಟಿರುವುದು  ದೌರ‍್ಬಾಗ್ಯ. ಕೆಲವೊಮ್ಮೆ ಅದ್ಬುತ ಮಾತುಗಾರರು ಸಹ, ಅರ‍್ಹತೆ ಇಲ್ಲದಿದ್ದರೂ ಕೀರ‍್ತಿಯ ಶಿಕರವನ್ನು ಬಹು ಬೇಗನೆ ಏರಿಬಿಡುತ್ತಾರೆ ಹಾಗೂ ಮೌನವಾಗಿರುವವರು ಎಲ್ಲ ಅರ‍್ಹತೆ ಇದ್ದರೂ ಗುರುತಿಸಲ್ಪಡುವುದಿಲ್ಲ. ಮೊದಲೆಲ್ಲ ವ್ಯಕ್ತಿ ಮೌನವಾಗಿದಶ್ಟು ಅವರ ಗನತೆ ಹೆಚ್ಚುತ್ತಿತ್ತು, ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಹಾಗೆ. ತುಂಬಾ ತಿಳಿದುಕೊಂಡಿರುವ ವ್ಯಕ್ತಿ ಜಾಸ್ತಿ ಮಾತನಾಡುತ್ತಿರಲಿಲ್ಲ. ಆ ಕಾರಣಕ್ಕೆ ಹಿರಿಯರು ಹೇಳ್ತಾ ಇದ್ರು; ಮಾತು ಬೆಳ್ಳಿಯಾದ್ರೆ ಮೌನ ಅದಕ್ಕಿಂತಲೂ ಹೆಚ್ಚು ಬೆಲೆಬಾಳುತ್ತೆ, ಅದು ಬಂಗಾರ ಅಂತ. ಆದರೆ ಕಾಲ ಬದಲಾಗಿದೆ, ಈಗ ಏನಿದ್ರು ಸಾಮಾಜಿಕ ಮಾದ್ಯಮಗಳ ಕ್ರಾಂತಿಯ ಯುಗ. ಎಲ್ಲರೂ ಮಾತನಾಡಿಸಿ ಆರ‍್ಬಟಿಸುವವರೇ! ಪ್ರಸಿದ್ದನಾಗಬೇಕಿದ್ದರೆ ಚೆನ್ನಾಗಿ ಮಾತನಾಡಬೇಕು, ವಿವಾದಾತ್ಮಕ ವಿಶಯಗಳ ಮೇಲೆ ಅಬಿಪ್ರಾಯ ವ್ಯಕ್ತಪಡಿಸಬೇಕು, ಇನ್ನೊಬ್ಬರ ಕಾಲೆಳೆಯಬೇಕು, ಹೀಗೆ ನಮಗೆ ಅರಿವಿಲ್ಲದೆ ನಾವೆಲ್ಲ ಮಾತುಗಾರರಾಗಿಬಿಟ್ಟಿದೇವೆ. ಅದೇನೇ ಇರಲಿ ಮೌನ ಮತ್ತು ಮಾತು ಇದರಲ್ಲಿ ಯಾವುದು ಶ್ರೇಶ್ಟ ಎನ್ನುವ ಚರ‍್ಚೆ ಈ ಬರಹದ ಆಶಯವಲ್ಲ. ಹಾಗೆ ನೋಡಿದರೆ ಮಾತಿನ ಕಲೆ ಎಲ್ಲರಿಗೂ ದಕ್ಕೋದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವವನ್ನು, ಮಾತಿನ ಶೈಲಿಯನ್ನು ರೂಪಿಸಿಕೊಂಡಿರುತ್ತಾರೆ. ಆದರೆ ಇಲ್ಲಿ ಹೇಳ ಹೊರಟಿರುವುದು, ಮಾತು ಯಾಕೆ ಕೇವಲ ಬೆಳ್ಳಿಯಾಗಿರಬೇಕು? ಮಾತು ಮತ್ತು ಮೌನ ಇವೆರಡನ್ನೂ ಬಂಗಾರವನ್ನಾಗಿಸಿಕೊಳ್ಳುವ ಶಕ್ತಿ ನಮ್ಮಲಿರುವಾಗ ಅಲ್ವೇ!

ಮಾತಿನ ಕಲೆ

ಮಾತು ಸರಳ, ಹಿತ ಮಿತವಾಗಿದ್ದಶ್ಟು ಸುಂದರ. ಕೆಲವರು ಅರಳು ಹುರಿದಂತೆ ಪಟ ಪಟನೆ ಮಾತನಾಡುವುದನ್ನು ಕೇಳಿದಾಗ ತುಂಬಾ ಸಂತೋಶವಾಗುತ್ತದೆ. ತಮ್ಮ ಮಾತಿನ ಮೋಡಿಯಿಂದಲೇ ಇತರರನ್ನು ಸೂಜಿಗಲ್ಲಿನಂತೆ ಸೆಳೆಯುವ ವ್ಯಕ್ತಿತ್ವ ಹಲವರಲ್ಲಿದೆ. ಕೆಲವರು ತಮ್ಮ ಈ ಕಲೆಯನ್ನು ಜನರಿಗೆ ಮೋಸಮಾಡಲು ಬಳಸಿದರೆ; ಇನ್ನು ಕೆಲವರು ಒಳ್ಳೆಯ ಉದ್ದೇಶಗಳಿಗೆ. ಇನ್ನು, ಸಾಮಾನ್ಯವಾಗಿ ಬಹುತೇಕ ಜನರಿಗೆ ಈ ಮಾತಿನ ಕಲೆ ಸಿದ್ದಿಸಿರುವುದಿಲ್ಲ, ಅದನ್ನು ತಾವೇ ರೂಡಿಸಿಕೊಳ್ಳಬೇಕಾಗುತ್ತದೆ. ದೈವದತ್ತವಾಗಿ ಮಾತಿನ ಕಲೆ ಒಲಿಯದಿದ್ದರೂ, ಕಶ್ಟಪಟ್ಟು ಅಬ್ಯಾಸ ಬಲದಿಂದ ನಾವು ಮಾತಿನ ಕಲೆಯನ್ನು ಸಿದ್ದಿಸಿಕೊಳ್ಳಬಹುದು. ಮಾತು ಮಿತವಾದರೂ ತೂಕದ ಶಬ್ದಗಳನ್ನು ಬಳಸುವ ಮೂಲಕ ನಮ್ಮ ಮಾತಿಗೆ ಒಂದು ಬೆಲೆ ದಕ್ಕಿಸಿಕೊಳ್ಳಬಹುದು. ಮಾತನಾಡಲು ಬರುತ್ತದೆ ಎಂದು ಸುಮ್ಮನೆ ನಾಲಿಗೆ ಹರಿಯಬಿಡದೆ, ಸಂದರ‍್ಬಕ್ಕೆ ಅನುಸಾರವಾಗಿ ತಾಳ್ಮೆಯಿಂದ, ವಿವೇಚನೆಯಿಂದ ಮಾತನಾಡಲು ಕಲಿತರೆ ಅದು ನಮ್ಮ ಬಾಳನ್ನು ಸುಂದರಗೊಳಿಸೋದು ಮಾತ್ರವಲ್ಲ, ನಮ್ಮನ್ನು ನಂಬಿಕೊಂಡಿರುವವರ ಬಾಳನ್ನು ಕೂಡ ಸುಂದರಗೊಳಿಸುತ್ತದೆ. ನಾವು ಪ್ರತಿನಿತ್ಯ ನಮ್ಮ ಸುತ್ತ ಮುತ್ತ ನಡೆಯುವ ಗಟನೆಗಳನ್ನು ಗಮಸಿದರೆ, ನಮಗೆ ತಿಳಿಯುವುದು, ಎಶ್ಟೋ ಜಗಳದ ಮೂಲ ಕಾರಣ ಹಿಡಿತವಿಲ್ಲದ ನಾಲಿಗೆ ಎಂದು. ಕೆಲವೊಮ್ಮೆ ಮಾತನಾಡಲು ಬರುತ್ತದೆ ಎಂದು ನಾಲಿಗೆ ಹರಿಯಬಿಡುವ ನಾವು, ನಮ್ಮ ಮಾತು ಇನ್ನೊಬ್ಬರ ತಾಳ್ಮೆಯನ್ನು ಪರೀಕ್ಶಿಸುತ್ತಿದೆ ಎನ್ನುವುದನ್ನು ಮರೆತು ಬಿಡುತ್ತೇವೆ. ಇಲ್ಲವೇ, ಮಾತನಾಡುವ ಬರದಲ್ಲಿಅದು ಕೇಳುಗರ ಮೇಲೆ ಬೀರುತ್ತಿರುವ ಪರಿಣಾಮವನ್ನು ಊಹಿಸುವಲ್ಲಿ ಸೋಲುತ್ತೇವೆ. ಪರಿಣಾಮ ,ಮುಂದಾಗುವ ಅನಾಹುತಗಳು ಕೆಲವೊಮ್ಮೆ ಬೀಕರವಾಗಿರುತ್ತದೆ. ಎಶ್ಟೋ ಜನ ಸ್ನೇಹಿತರು, ಇಲ್ಲವೇ ಸಂಬಂದಿಕರ ನಡುವಿನ ಮಾತು ವಿಕೋಪಕ್ಕೆ ತಿರುಗಿ ಪ್ರಾಣಕ್ಕೆ ಅಪಾಯ ತಂದೊಡ್ಡಿದನ್ನು ನಾವು ಕೇಳಿದ್ದೇವೆ, ನೋಡಿದ್ದೀವೆ. ಹಾಗಾಗಿ ಯಾವುದೇ ಕ್ಶಣವಿರಲಿ, ಸಂದರ‍್ಬವಿರಲಿ ನಮ್ಮ ನಾಲಿಗೆಯ ಮೇಲೆ ನಮಗೆ ಹಿಡಿತವಿರಬೇಕು. ಕೋಪದ ಬರದಲ್ಲಿ ನಾಲಿಗೆ ಸಡಿಲ ಬಿಟ್ಟರೆ ಸಂಬಂದಗಳಿಗೆ ತಿಲಾಂಜಲಿ ಇಟ್ಟಂತೆ.

ಮನೆಯಲ್ಲಿ ನಾವು ಕೂಡ ಅಶ್ಟೇ, ಕೆಲವೊಮ್ಮೆ ತಕ್ಶಣ ಕೋಪಗೊಂಡು ಬಿಡುತ್ತೇವೆ. ಬಾಯಿಗೆ ಬಂದ ಮಾತನ್ನು ಹೆಂಡತಿ ಗಂಡನ ಮೇಲೆ, ಇಲ್ಲವೇ ಗಂಡ ಹೆಂಡತಿಯ ಮೇಲೆ, ಮಕ್ಕಳ ಮೇಲೆ ಹರಿಯ ಬಿಡುತ್ತೇವೆ. ಆದರೆ ನಿಜವಾಗಿಯೂ ಮಾಡಬೇಕಾದದ್ದು ಏನು ಗೊತ್ತೇ ? ಒಂದೆರಡು ನಿಮಿಶ ಅವರ ಜಾಗದಲ್ಲಿ ನಿಂತು ಯೋಚಿಸಿ ನಂತರ ಮಾತನಾಡಿದರೆ ನಮ್ಮ ಮಾತಿಗೂ ಒಂದು ಗೌರವ ದಕ್ಕುವುದು. ಮಾತು ತೂಕವಾಗಿರಬೇಕು, ಯಾರು ಕೂಡ ಎದುರುತ್ತರ ಕೊಡಲು ಯೋಚನೆ ಕೂಡ ಮಾಡಲಾರದಂತಹ ಮಾತಾಗಿರಬೇಕು. ಮುಂದೊಮ್ಮೆ ಕನ್ನಡಿ ಮುಂದೆ ನಿಂತು ನೋಡಿಕೊಂಡಾಗ ನಮ್ಮ ಮಾತೇ ನಮಗೆ ಅಸಹ್ಯವಾಗಿ ಕಾಣಿಸಬಾರದು.

ಹಾಗಂತ ಮಾತನಾಡುವುದೇ ತಪ್ಪು ಅಂತ ಬಾವಿಸುವುದು ಸಲ್ಲದ್ದು. ಸುಮ್ಮನೆ ಮೌನವಾಗಿದ್ದುಕೊಂಡ್ರೆ ಈ ಸಮಾಜದಲ್ಲಿ, ಬದುಕಲು ಸಾದ್ಯವೂ ಇಲ್ಲ. ನಮ್ಮನ್ನು ನಾವೇ ಮುಕ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಾದ್ರೆ, ಮಾತನಾಡಲೇ ಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ಹಿಂಜರಿಕೆಯ ಸ್ವಬಾವದಿಂದಾಗಿಯೇ ನಾವು ತುಂಬಾ ಹಿಂದುಳಿದು ಬಿಡುತ್ತೇವೆ. ಆದರೆ ಮಾತು ಕಲಿತರೆ ಸಮಾಜದಲ್ಲಿ ನಮಗೆ ಒಂದು ಗುರುತು ದೊರೆಯುತ್ತದೆ. ಮಾತು ಬೇಕು ಆದರೆ ಅದೇ ಮಾತನ್ನು ಬಂಗಾರವನ್ನಾಗಿಸಿಕೊಳ್ಳುವ ಪ್ರಯತ್ನ ನಮ್ಮಿಂದ ಹೊರಹೊಮ್ಮಬೇಕು, ನಾಲಿಗೆಯ ಮೇಲಿನ ಹಿಡಿತ ಎಂದಿಗೂ ತಪ್ಪಬಾರದು.

ಮೌನ ಬಂಗಾರ

ಮೌನ ಎಂದೆದಿಗೂ ಅಪ್ಪಟ ಬಂಗಾರವೇ. ಹಾಗಂತ, ಎಲ್ಲದಕ್ಕೂ ಮೌನವಾಗಿದ್ದುಬಿಡುವುದು ಜಾಣತನದ ಲಕ್ಶಣವಲ್ಲ. ಮೌನ ಎನ್ನುವ ಅಸ್ತ್ರವನ್ನು ಯಾವಾಗ ಉಪಯೋಗಿಸಬೇಕು, ಯಾವ ಸಂದರ‍್ಬದಲ್ಲಿ ಮೌನ ಮುರಿಯಬೇಕು ಎನ್ನುವ ಅರಿವು ನಮ್ಮಲ್ಲಿರಬೇಕು. ಕೆಲವೊಂದು ಸಂದರ‍್ಬಗಳಲ್ಲಿ ಪರಿಸ್ತಿತಿ ವಿಕೋಪಕ್ಕೆ ತಿರುಗುತ್ತಿರುವಾಗ ಯೋಚಿಸಿ ನಿರ‍್ದಾರ ಕೈಗೊಳ್ಳಬೇಕಾದ ಸಮಯದಲ್ಲಿ ಮೌನಕ್ಕೆ ಜಾರುವುದು ಬುದ್ದಿವಂತಿಕೆಯ ಲಕ್ಶಣ. ಎದುರು ಯಾರೇ ಇರಲಿ, ಹಟಾತ್ತನೆ ಆರಂಬಗೊಳ್ಳುವ ವಾದ-ವಿವಾದಗಳನ್ನು ತಕ್ಶಣವೇ ಹತೋಟಿಗೆ ತರಲು ಬೇಕಾಗಿರುವುದೇ ಜಾಣ ಮೌನ. ವಿವಾದ ಶುರುವಾದಾಗ ನಾಲಿಗೆ ಹತೋಟಿ ಕಳೆದುಕೊಂಡು ಹೊಡೆದಾಡುವ ಮಟ್ಟಕ್ಕೆ ತಲುಪುವ ಹಂತ ಬರಬಹುದು. ಇಂತಹ ಸಂದರ‍್ಬಗಳಲ್ಲಿ ನನಗೆ, ನಾನು ಮೊದಲು ಕೆಲಸಮಾಡುತ್ತಿದ್ದ ಸಂಸ್ತೆಯ ಯಜಮಾನರ ನೆನಪು ಬರುತ್ತಿದೆ. ಅವರು ಯಾವಾಗಲೂ ಒಂದು ಮಾತು ಹೇಳುತಿದ್ದರು, ತಪ್ಪು ನಡೆಯುವ ಸಂದರ‍್ಬ ಎದುರಾಗುವ ಮುಂಚೆ ತಪ್ಪಿನ ದಾರಿ ತಪ್ಪಿಸಬೇಕು ಎಂದು. ತಪ್ಪು ನಡೆದಾಗ ತುಂಬಾ ಕೋಪ ಬರ‍್ತಾಯಿತ್ತು ಅವ್ರಿಗೆ, ಆದರೆ ತಕ್ಶಣ ಕೋಪವನ್ನು ವ್ಯಕ್ತಪಡಿಸಿ ನಾಲಿಗೆ ಹರಿಯಬಿಡುತ್ತಿರಲಿಲ್ಲ. ಆ ಕ್ಶಣಕ್ಕೆ ಮೌನಕ್ಕೆ ಜಾರುತಿದ್ರು. ಕೋಣೆಯಲ್ಲಿ ಕುಳಿತು ನಡೆದ ಗಟನೆಯ ಬಗ್ಗೆ ಇಲ್ಲವೇ ತಪ್ಪಿನ ಬಗ್ಗೆ ವಿಚಾರ ವಿಮರ‍್ಶೆ ತನ್ನಶ್ಟಕ್ಕೆ ತಾವೇ ನಡೆಸುತಿದ್ದರು. ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು ಎನ್ನುವುದನ್ನು ಯೋಚಿಸಿ ನಂತರ ಕರೆಸಿ ಮಾತನಾಡುತ್ತಿದ್ರು. ಯಾವುದೇ ವಿಚಾರವಿರಲಿ, ಕರೆ ಮಾಡಿ ವಿಚಾರಿಸಿದಾಗ ಕೂಡ ಒಂದು ಐದು ನಿಮಿಶ ಬಿಟ್ಟು ಕರೆ ಮಾಡುತ್ತೇನೆ ಎನ್ನುತಿದ್ದರೇ ವಿನಹ ತಕ್ಶಣ ತಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಇದು ಕೆಟ್ಟ ಪರಿಸ್ತಿತಿಯನ್ನು ನಿರ‍್ವಹಿಸುವ ರೀತಿ.

ಮನೆಯಲ್ಲಿ ಪದೇ ಪದೇ ಅಸಹನೆ ಮೂಡುವಾಗ, ಮಾತಿಗೆ ಮಾತು ಬೆಳೆಯತೊಡಗಿದಾಗ ಕನಿಶ್ಟ ಒಬ್ಬರಾದ್ರೂ ಆ ಕ್ಶಣಕ್ಕೆ ಮೌನಕ್ಕೆ ಜಾರಿದ್ರೆ ಪರಿಸ್ತಿತಿಯನ್ನು ಬಹಳ ಬೇಗನೆ ತಿಳಿಗೊಳಿಸಬಹುದು. ಜಗಳದ ಪರಿಸ್ತಿತಿಯನ್ನು ನಿಬಾಯಿಸುವಲ್ಲಿ ಮೌನಕ್ಕಿಂತ ಪ್ರಬಲ ಅಸ್ತ್ರ ಬೇರೊಂದಿಲ್ಲ. ನಾಲಿಗೆ ನಮ್ಮ ಹತೋಟಿ ತಪ್ಪುತ್ತಿದೆ ಎಂದ ತಕ್ಶಣ ಮೌನಕ್ಕೆ ಶರಣಾಗಿಬಿಡಬೇಕು. ಹಾಗಂತ ಎಲ್ಲ ಸಂದರ‍್ಬದಲ್ಲಿ ಮೌನವಾಗಿಬಿಟ್ಟರೆ ಜನ ನಮ್ಮನ್ನು ತಪ್ಪಾಗಿ ತಿಳಿದುಕೊಂಡುಬಿಡುತ್ತಾರೆ. ಮೌನ ಸಮ್ಮತಿ ಲಕ್ಶಣ ಎನ್ನುವ ಮಾತನ್ನು ನಾವು ಕೇಳಿದ್ದೇವೆ, ನಮ್ಮ ಅಬಿಪ್ರಾಯವನ್ನು ವ್ಯಕ್ತಪಡಿಸುವ ಸಂದರ‍್ಬ ಬಂದಾಗ ಮೌನಕ್ಕೆ ಶರಣಾಗುವುದರಲ್ಲಿ ಅರ‍್ತವಿಲ್ಲ.

ಮಾತು ಮತ್ತು ಮೌನ ಎರಡು ಕೂಡ ಶ್ರೇಶ್ಟ!

ಒಟ್ಟಿನಲ್ಲಿ ಮಾತು ಮತ್ತು ಮೌನ ಎರಡನ್ನು ಎಚ್ಚರಿಕೆಯಿಂದ ಬಳಸಿದರೆ ಬಾಳ ಪಯಣ ಸರಾಗವಾಗಿ ಸಾಗುವುದು. ಹಾಗಾದಾಗ ಮಾತ್ರ ನಮ್ಮ ಮಾತು ಮತ್ತು ಮೌನ ನಮ್ಮ ವ್ಯಕ್ತಿತ್ವಕ್ಕೆ ಶೋಬೆ ತಂದುಕೊಡುತ್ತದೆ. ಮಾತು ಮತ್ತು ಮೌನ ಯಾವಾಗ ಹೇಗೆ ಬಳಸಬೇಕು ಎನ್ನುವ ಅರಿವಿನಲ್ಲಿ ಬಳಸಿದರೆ ಜೀವನ ಇನ್ನಶ್ಟು ಸುಕಮಯವಾಗುವುದರಲ್ಲಿ ಸಂಶಯವಿಲ್ಲ.

(ಚಿತ್ರ ಸೆಲೆ: pixy.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. K.V Shashidhara says:

    ಸೊಗಸಾದ ಬರಹ. 25ನೇ ಬರಹ. ಅಭಿನಂದನೆಗಳು ???

ಅನಿಸಿಕೆ ಬರೆಯಿರಿ:

%d bloggers like this: