ಸಣ್ಣಕತೆ: ದಾಳಗಳು

– .

dice, ದಾಳ

ತುಂಬಿದ ಮಹಿಳಾ ಮಂಡಳಿಯ ಸಬೆಯಲ್ಲಿ ಲಾಸ್ಯಳಿಗೆ ಅವಮಾನವಾಗುವ ರೀತಿಯಲ್ಲಿ ಅದ್ಯಕ್ಶೆ ಮಾಲಿನಿ ಮಾತನಾಡಿದ್ದಳು. ಲಾಸ್ಯ, ಸಿಟ್ಟಿನಿಂದ ಉರಿದು ಬೀಳುತ್ತಿದ್ದಳು. ತಾನೇನು ಆಕೆಗೆ ಕಡಿಮೆಯಿಲ್ಲ ಎಂದು, ಅವಳ ಏಟಿಗೆ ಮಾತಿನ ತಿರುಗೇಟು ಕೊಟ್ಟಿದ್ದರೂ ಸಹ ಲಾಸ್ಯಳಿಗೆ ಸಮಾದಾನವಾದಂತರಲಿಲ್ಲ. ಇನ್ನೂ ಹೆಚ್ಚಿನ ಅವಮಾನ, ಹಾನಿ ಮಾಡಲು ಲಾಸ್ಯಳ ಮನಸ್ಸು ಹಾತೊರೆಯುತ್ತಿತ್ತು. ಲಾಸ್ಯ ಬುಸುಗುಡುತ್ತಿದ್ದಳು. ಇಂತಹ ಹೊತ್ತಲ್ಲಿ, ಸಂಗೀತ ಬಹಳ ಹಿಂದೆ ಕೊಟ್ಟಿದ್ದ ಮ್ಯಾಜಿಕ್ ದಾಳಗಳ ನೆನಪಾಗಿ ಅದರ ಪ್ರಯೋಗಕ್ಕೆ ಇದೇ ತಕ್ಕ ಸಮಯ ಎಂದೆನಿಸಿತು. ‘ಮನಸ್ಸಿನಲ್ಲಿ ಏನಾದರೂ ಅಂದುಕೊಂಡು ದಾಳ ಹಾಕಿದಲ್ಲಿ, ಸಮ ಸಂಕ್ಯೆ ಬಿದ್ದರೆ ಅಂದುಕೊಂಡಿದ್ದು ಕಂಡಿತಾ ನೆರವೇರುತ್ತದೆ. ಬೆಸ ಬಿದ್ದಲ್ಲಿ ಇಲ್ಲ’ ಎಂದು ತಿಳಿಸಿದ್ದ ನೆನಪು ಹಸಿರಾಗಿತ್ತು. ಮನೆಗೆ ಬಂದೊಡನೆ ಲಾಸ್ಯ ಆ ಮ್ಯಾಜಿಕ್ ದಾಳಗಳ ಪ್ರಯೋಗಕ್ಕೆ ಮುಂದಾದಳು. ಅದನ್ನು ಹುಡುಕಿ ತೆಗೆದು ಮನಸ್ಸಿನಲ್ಲಿ ‘ಅದ್ಯಕ್ಶೆ ಮಾಲಿನಿ, ಅದ್ಯಕ್ಶ ಸ್ತಾನದಿಂದ ಕೆಳಗಿಳಿಯುವಂತಾಗಲಿ’ ಎಂದು ಆಶಿಸುತ್ತಾ ದಾಳಗಳನ್ನು ಉರುಳಿಸಿದ್ದಳು. ಲಾಸ್ಯಳ ಅದ್ರುಶ್ಟವೋ, ಅದ್ಯಕ್ಶೆ ಮಾಲಿನಿಯ ದುರಾದಶ್ಟವೋ ಸಮ ಸಂಕ್ಯೆಯೇ ಬಿದ್ದಿತ್ತು. ಒಂದು ವಾರದಲ್ಲಿ, ಯಾವುದೋ ಕ್ಶುಲ್ಲಕ ಕಾರಣಕ್ಕೆ ಮಾಲಿನಿ ಅದ್ಯಕ್ಶ ಸ್ತಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂತು ಹಾಗೂ ಆಕೆ  ರಾಜೀನಾಮೆ ಕೊಟ್ಟಳೂ ಸಹ. ಈ ಗಟನೆ, ಸಂಗೀತ ಹೇಳಿದ್ದಕ್ಕೆ ಪುಶ್ಟಿ ಕೊಟ್ಟಿತ್ತು. ದಾಳಗಳನ್ನು ಕಣ್ಣಿಗೆ ಒತ್ತಿಕೊಂಡು, ಯಾರ ಕೈಗೂ ಸಿಗದಂತೆ ಜೋಪಾನವಾಗಿ ಇರಿಸಿದ್ದಳು ಲಾಸ್ಯ.

ಹೊಸ ಅದ್ಯಕ್ಶರ ಆಯ್ಕೆಗೆ ಸಬೆಯನ್ನು ಕರೆಯಲಾಗಿತ್ತು. ಲಾಸ್ಯ ಸಹ ಪ್ರಮುಕ ಅಬ್ಯರ‍್ತಿಯಾಗಿದ್ದಳು. ತನ್ನ ವೈಯುಕ್ತಿಕ ವರ‍್ಚಸ್ಸನ್ನು ಪ್ರದರ‍್ಶಿಸಲು, ಅತ್ಯಂತ ಹೆಚ್ಚು ಬೆಲೆ ಬಾಳುವ ಸೀರೆಯನ್ನು ಉಟ್ಟು ಹೋಗಲು ಮನಸ್ಸು ಮಾಡಿ, ತನ್ನ ಕಪಾಟು ತೆಗೆದಳು. ರಾಶಿ ಸೀರೆಯಲ್ಲಿ, ತನ್ನಿಶ್ಟದ ಸೀರೆಯನ್ನು ಹುಡುಕಿ ತೆಗೆಯಲು ಹರಸಾಹಸ ಮಾಡಬೇಕಾಯಿತು. ಹುಡುಕಿ ಹುಡುಕಿ ಸಾಕಾಗಿ, ಬಾಯಿಗೆ ಬಂದಂತೆ ತನ್ನನ್ನು ತಾನೇ ಬೈದುಕೊಂಡು, ಅದ್ಯಕ್ಶಗಿರಿ ಸಿಗದೇ ಹೋದರೂ ಪರವಾಗಿಲ್ಲ, ಸೀರೆ ಸಕ್ಕರೆ ಸಾಕು ಎನ್ನುತ್ತಿದ್ದಂತೆ, ತಳದಲ್ಲಿದ್ದ ಆ ಸೀರೆ ಕಣ್ಣಿಗೆ ಬಿದ್ದಿತ್ತು. ಮನಸ್ಸಿಗೆ ನೆಮ್ಮದಿಯಾಯಿತು. ಅದನ್ನು ಬಲವಂತವಾಗಿ ರಾಶಿಯಿಂದ ಹೊರಕ್ಕೆಳೆದಳು. ಅದರ ಜೊತೆ ಜೊತೆಯಾಗಿ ತಾನೇ ಜೋಪಾನವಾಗಿರಲಿ ಎಂದು ಜತನವಾಗಿಟ್ಟಿದ್ದ ದಾಳಗಳೂ ಕೆಳಕ್ಕೆ ಉರುಳಿದವು. ಬಿದ್ದ ದಾಳಗಳನ್ನು ಗಮನಿಸಿದಳು. ಸಮ ಸಂಕ್ಯೆ ಸ್ಪುಟವಾಗಿ ಕಂಡಿತು. ಲಾಸ್ಯಳ ಮನದ ಮೂಲೆಯಲ್ಲೆಲ್ಲೋ ಅಳುಕು ಹುಟ್ಟಿಕೊಂಡಿತು. ‘ಅದನ್ನು ನೋಡುವ ಮುನ್ನ ತಾನೇನು ಅಂದುಕೊಂಡೆ’ ಎಂದು ಯೋಚಿಸಲು ಶುರುಮಾಡಿದಳು. ಆದರೆ ಹೊಳೆಯಲಿಲ್ಲ. ಸಮಯ ಕಳೆದಂತೆ, ತಯಾರಾಗುವ ತರಾತುರಿಯಲ್ಲಿ ಆ ನೆನಪು ಹಿಂದಕ್ಕೆ ಸರಿಯಿತು.

ಮಹಿಳಾ ಮಂಡಳಿಯ ಸಬೆಯಲ್ಲಿ, ಲಾಸ್ಯ ಸಲ್ಲಿಸಿದ್ದ ಉಮೇದುವಾರಿಕೆಯ ಅರ‍್ಜಿ, ತಾಂತ್ರಿಕ ಕಾರಣಗಳಿಂದ ತಿರಸ್ಕ್ರುತವಾಯಿತು. ಅದ್ಯಕ್ಶಗಿರಿಯನ್ನು ಏರಿ, ಮಾಲಿನಿ ವಿರುದ್ದ ಸೇಡನ್ನು ತೀರಿಸಿಕೊಳ್ಳಬೇಕೆಂದಿದ್ದ ಅತ್ಯುತ್ತಮ ಅವಕಾಶ ಕೈ ತಪ್ಪಿ ಹೋಗಿ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು. ಮಾಲಿನಿಯ ಅಬ್ಯರ‍್ತಿಯೇ ಆ ಗದ್ದುಗೆಯನ್ನು ಏರಿದ್ದಳು. ಅದ್ಯಕ್ಶಗಿರಿ ಮತ್ತೆ ಮಾಲಿನಿಯ ಕೈ ಹಿಡಿತದಲ್ಲೇ ಉಳಿದು ಹೋಯಿತು. ಲಾಸ್ಯ ಅವಮಾನದಿಂದ ಕುಗ್ಗಿದ್ದಳು. ತನಗಾಗಿದ್ದ ಅವಮಾನ ಮನದಲ್ಲೇ ಕುದಿಯುತ್ತಿತ್ತು. ಪ್ರತಿ ಮಹಿಳಾ ಮಂಡಳಿಯ ಸಬೆಯಲ್ಲೂ ಮಾಲಿನಿ, ಲಾಸ್ಯಳ ಕಾಲುಕೆರೆದು, ಕಿಚಾಯಿಸುತ್ತಿದ್ದಳು. ಯಾವುದೇ ಅತಿ ಚಿಕ್ಕ ಸಮಸ್ಯೆ ಎದುರಾದರೂ ಅದಕ್ಕೆ ಲಾಸ್ಯಳನ್ನು ಗುರಿ ಮಾಡಿ ಅವಮಾನಿಸುತ್ತಿದ್ದಳು. ಲಾಸ್ಯ ಮಾಲಿನಿಯ ವರ‍್ತನೆಯಿಂದ ರೋಸಿಹೋಗಿದ್ದಳು. ಹೇಗಾದರೂ ಮಾಡಿ ಅವಳ ಮೇಲೆ ಸೇಡು ತೀರಿಸಿಕೊಂಡು ಮಹಿಳಾ ಮಂಡಳಿಯಿಂದ ಹೊರ ಬರಬೇಕೆಂದು ತೀರ‍್ಮಾನಿಸಿದಳು. ‘ಮಾಲಿನಿಗೆ ಹೀಗಾಗಲಿ, ಹಾಗಾಗಲಿ ಅವಳಿಗೆ ಆದಶ್ಟು ಕಶ್ಟಗಳು ಬರಲಿ’ ಎಂದು ಮನಸ್ಸಿನಲ್ಲಿ ಶಪಿಸುತ್ತಾ ಮ್ಯಾಜಿಕ್ ದಾಳಗಳನ್ನು ಉರುಳಿಸಿದ್ದಳು. ಲಾಸ್ಯಳ ಕೈ ಗುಣ, ದಾಳಗಳು ಮತ್ತೆ ಸಮ ಸಂಕ್ಯೆ ತೋರಿಸಿತ್ತು. ಲಾಸ್ಯಳಿಗೆ ಹಾಲು ಕುಡಿದಶ್ಟು ಸಂತಸವಾಗಿತ್ತು. ಕುಶಿಗೆ ಅಂದು ರಾತ್ರಿ ಊಟ ಸಹ ಸರಿಯಾಗಿ ಸೇವಿಸಲಾಗಲಿಲ್ಲ. ಒಂತರಾ ಆನಂದ ಅವಳಲ್ಲಿ ಮನೆಮಾಡಿತ್ತು. ಅಂದುಕೊಂಡಿದ್ದ ಹಾಗೆ ಆಗುತ್ತದೆ ಎಂಬ ಬರವಸೆ ಅವಳಿಗೆ ನೆಮ್ಮದಿ ತಂದಿತ್ತು. ಲಾಸ್ಯ ಅಂದುಕೊಂಡಂತೆ, ಮಹಿಳಾ ಮಂಡಳಿಯಲ್ಲಿ ನಡೆದಿದ್ದ ಸಾಕಶ್ಟು ಹಗರಣಗಳಲ್ಲಿ, ಮಾಲಿನಿ ಪ್ರಮುಕ ಆರೋಪಿಯಾಗಿ, ಪೋಲೀಸರ ಆತಿತ್ಯ ಸೇರಿದ್ದಳು. ಮಹಿಳಾ ಪೋಲೀಸರು ಅವಳಿಗೆ ಸಾಕಶ್ಟು ಹಿಂಸೆ ಕೊಡುವುದನ್ನು ಮನದಲ್ಲೇ ಕಲ್ಪನೆ ಮಾಡಿಕೊಂಡಳು ಲಾಸ್ಯ. ‘ಅವಳಿಗೆ ಹಾಗೇ ಆಗಬೇಕು’ ಎಂದು ಒಂದು ಮನಸ್ಸು ಬಯಸಿದರೂ ಮತ್ತೊಂದು ಮನಸ್ಸು ಅವಳೂ ನನ್ನಂತೆ ಹೆಣ್ಣಲ್ಲವೇ? ಅದರಲ್ಲೂ ಸಮಾಜದ ಗಣ್ಯ ವ್ಯಕಿಗಳ ಮನೆಯ ಹೆಣ್ಣಲ್ಲವೇ? ಅನ್ನಿಸದಿರಲಿಲ್ಲ.

ಮಾಲಿನಿಯಿಂದ ಪಡೆದ ಹೇಳಿಕೆಯಲ್ಲಿ ಲಾಸ್ಯಳ ಹೆಸರು ಪ್ರಮುಕವಾಗಿ ತಳಕು ಹಾಕಿಕೊಂಡಿತ್ತು. ಲಾಸ್ಯಳಿಗೂ ಹೆದರಿಕೆ ಆವರಿಸಿತ್ತು. ತಕ್ಶಣ ಆ ದಾಳಗಳನ್ನು ಉರುಳಿಸಿ ನೋಡಿದ್ದಳು. ಮೊದಲ ಬಾರಿ ಸಮ ಸಂಕ್ಯೆ ಬಿದ್ದಿತ್ತು. ಇಲ್ಲಾ, ತಾನೇನು ತಪ್ಪು ಮಾಡಿಲ್ಲ. ಈ ದಾಳದಲ್ಲಿ ಬಿದ್ದ ಸಮ ಸಂಕ್ಯೆ ಸುಳ್ಳು, ಎನ್ನುತ್ತಾ ಮತ್ತೊಮ್ಮೆ ದಾಳಗಳನ್ನು ಉರುಳಿಸಿದ್ದಳು. ಮತ್ತದೇ ಸಮ ಸಂಕ್ಯೆ! ಮುಂದಾಗಬಹುದಾದುದೆಲ್ಲಾ ಕಣ್ಣ ಮುಂದೆ ಬಂದು ಹೆದರಿದಳು. ಮಾಲಿನಿಯ ಹೇಳಿಕೆಯ ಮೇರೆಗೆ ಪೋಲೀಸರು, ಲಾಸ್ಯಳನ್ನೂ ಎಳೆದುಕೊಂಡ ಹೋಗಿ, ಸ್ಟೇಶನ್ನಲ್ಲಿ ತಮ್ಮದೇ ಪರಿಯ ಶಿಕ್ಶೆ ಕೊಡಲು ಶುರುಮಾಡಿದರು. ಶಿಕ್ಶೆಯ ಒಂದೊಂದು ಕ್ಶಣವೂ ನರಕದ ದರ‍್ಶನವಾಗಿತ್ತು ಲಾಸ್ಯಳಿಗೆ. ಸಾಕಪ್ಪ ಸಾಕು ಈ ಶಿಕ್ಶೆ. ಇದು ಯಾರಿಗೂ, ನನ್ನ ಶತ್ರುವಾದ ಮಾಲಿನಿಗೂ ಬೇಡ ಎಂದು ಪರಿತಪಿಸತೊಡಗಿದಳು. ಪೋಲೀಸರು ಶಿಕ್ಶೆಯ ರುಚಿ ಇಡೀ ದೇಹವನ್ನೇ ಹಣ್ಣು ಮಾಡಿತ್ತು. ಆ ದಾಳಗಳ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತ್ತು.

ಮಲಗಿದ್ದ ಲಾಸ್ಯಳಿಗೆ ತಟ್ಟನೆ ಎಚ್ಚರವಾಯಿತು. ತಲೆಯ ಕೂದಲೆಲ್ಲಾ ಕೆದರಿತ್ತು. ಇನ್ನೂ ದ್ರುಶ್ಟಿ ಪೂರಾ ತಿಳಿಯಾಗಿರಲಿಲ್ಲ. ಸುತ್ತಲೂ ನೋಡುತ್ತಾ ಏನನ್ನೋ ತಡಕಾಡಲು ಶುರುಮಾಡಿದಳು. ಮೈ ಬಯಂಕರವಾಗಿ ಬೆವರಿತ್ತು. ಉಟ್ಟಿದ್ದ ಬಟ್ಟೆಯಲ್ಲಾ ತೊಯ್ದು ಹೋಗಿತ್ತು. ಕ್ರಮೇಣ ಪೂರ‍್ಣ ಎಚ್ಚರ ಮಾಡಿಕೊಂಡಳು. ಬೇರಾರಿಗೂ ಎಚ್ಚರವಾಗದಂತೆ ಎಚ್ಚರ ವಹಿಸಿ ಮೆಲ್ಲನೆ ಮಂಚದಿಂದ ಕೆಳಗಿಳಿದ ಲಾಸ್ಯ ಅಲ್ಲೇ ಕಪಾಟಿನಲ್ಲಿದ್ದ ದಾಳಗಳನ್ನು ತೆಗೆದು, ಒಮ್ಮೆ ಅದರತ್ತ ನೋಡಿ ‘ಪ್ರಾರಬ್ದವೇ’ ಎನ್ನುತ್ತಾ ಕಿಟಕಿಯಿಂದ ದೂರ, ಬಹುದೂರಕ್ಕೆ, ಕಣ್ಣಿಗೆ ಕಾಣಿಸದಶ್ಟು ದೂರಕ್ಕೆ ಎಸೆದಿದ್ದಳು. ಎದೆಯ ಮೇಲೆ ಕೈ ಇಟ್ಟುಕೊಂಡು ಮೇಲುಸಿರು ಬಿಟ್ಟಿದ್ದಳು. ನೆಮ್ಮದಿ ಮನದಲ್ಲಿ ಇಣುಕಿತ್ತು. ಜಗ್ ನಲ್ಲಿದ್ದ ನೀರನ್ನು ಗಟಗಟನೆ ಕುಡಿದು, ಒದ್ದೆಯಾಗಿದ್ದ ಮೈ ಕೈ ಒಣ ಬಟ್ಟೆಯಲ್ಲಿ ಒರೆಸಿಕೊಂಡು, ಮತ್ತೆ ಮಂಚದ ಮೇಲೆ ಮಲಗಿದಳು. ಮನಕ್ಕಾದ ನೆಮ್ಮದಿಯ ಕಾರಣ ಕೊಂಚ ಸಮಯದಲ್ಲೇ ನಿದ್ರೆ ಆವರಿಸಿತ್ತು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: