ಮಾರೇಶ್ವರೊಡೆಯರ ವಚನದಿಂದ ಆಯ್ದ ಸಾಲುಗಳ ಓದು

ಸಿ.ಪಿ.ನಾಗರಾಜ.

ವಚನಗಳು, Vachanas

ಹೆಸರು: ಮಾರೇಶ್ವರೊಡೆಯ
ಕಾಲ: ಕ್ರಿ.ಶ.12ನೆಯ ಶತಮಾನ
ದೊರೆತಿರುವ ವಚನಗಳು: 13
ವಚನಗಳ ಅಂಕಿತನಾಮ: ಮಾರೇಶ್ವರ

ಊರೆಲ್ಲರೂ ನೆರೆದು ಕಳ್ಳನ ಬೆಳ್ಳನೆಂದಡೆ
ಅವ ಕಳ್ಳನೋ ಬೆಳ್ಳನೋ
ನೀವು ಹೇಳಿರೆ. (1272/1502)

ಊರ‍್+ಎಲ್ಲರೂ; ಊರೆಲ್ಲರೂ=ಊರಿನ ಜನರೆಲ್ಲರೂ; ನೆರೆ=ಜತೆಗೂಡಿ; ಕಳ್ಳ=ಜನರ ಒಡವೆ ವಸ್ತುಗಳನ್ನು ಕದಿಯುವುದನ್ನೇ ಕಸುಬನ್ನಾಗಿ ಉಳ್ಳವನು; ಬೆಳ್ಳನ್+ಎಂದಡೆ; ಬೆಳ್ಳ=ಏನನ್ನು ತಿಳಿಯದವನು/ಏನೂ ಗೊತ್ತಿಲ್ಲದವನು/ಮಗುವಿನಂತಹ ಮನಸ್ಸಿನವನು/ಪ್ರಾಮಾಣಿಕ ವ್ಯಕ್ತಿ; ಎಂದಡೆ=ಎಂದು ಹೇಳಿದರೆ; ಅವ=ಅಂತಹ ವ್ಯಕ್ತಿಯು; ನೀವು ಹೇಳಿರೆ=ಅಂತಹ ವ್ಯಕ್ತಿಯನ್ನು ನೀವು ಏನೆಂದು ಕರೆಯುತ್ತೀರಿ;

ಕಂಡಕಂಡವರ ಒಡವೆ ವಸ್ತುಗಳನ್ನು ಕದ್ದು ಅಪಾರವಾದ ಸಂಪತ್ತಿಗೆ ಒಡೆಯನಾಗಿರುವ ಕಳ್ಳನನ್ನು ಊರಿನ ಜನರಲ್ಲಿ ಬಹುತೇಕ ಮಂದಿ ಒಕ್ಕೊರಲಿನಿಂದ “ ಅವನು ಬಹಳ ಒಳ್ಳೆಯವನು “ ಎಂದು ಹೆಸರಿಸಿ, ಅವನನ್ನು ಹಾಡಿಹೊಗಳತೊಡಗಿದಾಗ, ಅಂತಹವರ ಮುಂದೆ “ ನೀವು ಹೇಳುತ್ತಿರುವುದು ಸರಿಯಲ್ಲ. ಆತ ಒಬ್ಬ ಕಳ್ಳ “ ಎಂದು ಹೇಳುವ ಕೆಚ್ಚು ಯಾರೊಬ್ಬರಿಗೂ ಇರುವುದಿಲ್ಲ. ಏಕೆಂದರೆ ಅಂತಹ ಪರಿಸರದಲ್ಲಿ “ ಸುಳ್ಳೇ ನಿಜವಾಗಿರುತ್ತದೆ; ನಿಜವೇ ಸುಳ್ಳಾಗಿರುತ್ತದೆ.”

ಈಗ ನಾವೆಲ್ಲರೂ ಬಾಳುತ್ತಿರುವ ನಮ್ಮ ಕಣ್ಣ ಮುಂದಿನ ಜಗತ್ತಿನಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ವಂಚನೆಯನ್ನು ಮಾಡಿ ಒಂದೆರಡು ಕೋಟಿಯಲ್ಲ, ನೂರಾರು ಕೋಟಿ ಬೆಲೆಬಾಳುವ ಸಾರ‍್ವಜನಿಕ ಆಸ್ತಿಪಾಸ್ತಿಯನ್ನು ಲೂಟಿಮಾಡಿ ಸಿರಿವಂತಿಕೆಯಲ್ಲಿ ಮೆರೆಯುತ್ತ, ಜನಸಮುದಾಯದ ನಡುವೆ ಉನ್ನತವಾದ ಅಂತಸ್ತನ್ನು ಗಳಿಸಿರುವ ವ್ಯಕ್ತಿಯನ್ನು “ ಅವನೊಬ್ಬ ಕಳ್ಳ” ಎಂದು ಹೇಳುವ ಎದೆಗಾರಿಕೆ ಯಾರೊಬ್ಬರಿಗೂ ಇಲ್ಲ. ಏಕೆಂದರೆ ಅಂತಹ ವ್ಯಕ್ತಿಗೆ ಜಾತಿಬಲ, ಜನಬಲ ಮತ್ತು ತೋಳ್ಬಲದ ಬೆಂಬಲವಿರುತ್ತದೆ.

ಮತ್ತೊಂದು ಸಂಗತಿಯೆಂದರೆ ವ್ಯಕ್ತಿಯು ಸಂಪತ್ತನ್ನು ಪ್ರಾಮಾಣಿಕತನದ ದುಡಿಮೆಯಿಂದ ಗಳಿಸಿದ್ದಾನೆಯೋ ಇಲ್ಲವೇ ಮೋಸದ ನಡೆನುಡಿಗಳಿಂದ ಪಡೆದಿದ್ದಾನೆಯೋ ಎಂಬುದನ್ನು ಜನ ಯಾವಾಗಲೂ ನೋಡುವುದಿಲ್ಲ, ಅವನ ಬಳಿಯಿರುವ ಸಂಪತ್ತಿಗೆ ಮಾತ್ರ ಬೆಲೆಕೊಟ್ಟು ಅವನನ್ನು ಸರ‍್ವಗುಣಸಂಪನ್ನನೆಂದು ಕೊಂಡಾಡಿ ಮೆರೆಸುತ್ತಾರೆ. ಆದ್ದರಿಂದಲೇ “ ದುಡ್ಡಿದ್ದವನೇ ದೊಡ್ಡಪ್ಪ” ಎಂಬ ಗಾದೆ ಮಾತು ಎಲ್ಲ ಕಾಲಕ್ಕೂ ಸತ್ಯವಾಗಿದೆ.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: