ಮಣ್ಣಿನ ಹಿರಿಮೆ

– ಸಂಜೀವ್ ಹೆಚ್. ಎಸ್.

ಉತ್ತಮ ಆರೋಗ್ಯದ ಗುಟ್ಟು ಅತ್ಯುತ್ತಮ ಆಹಾರ, ಆದರೆ ಅತ್ಯುತ್ತಮ ಆಹಾರದ ಮೂಲವನ್ನು ಎಂದಾದರೂ ಯೋಚಿಸಿದ್ದೇವೆಯೇ? ಪಂಚಬೂತಗಳಲ್ಲಿ ಒಂದಾದ ಮಣ್ಣು ಜೀವಸಂಕುಲಕ್ಕೆ ಕೊಡುಗೆಯಾಗಿ ಬಂದಿರುವ ಬೆಲೆಕಟ್ಟಲಾಗದ ಸಂಪತ್ತು. ಮಾನವ ಸೇರಿದಂತೆ ಪ್ರತಿಯೊಂದು ಜೀವ ಸಂಕುಲಕ್ಕೂ ಮಣ್ಣೇ ಆದಾರ. ಪುರಂದರದಾಸರು ಹೇಳಿರುವ ಹಾಗೆ “ಮಣ್ಣಿಂದ ಕಾಯ, ಮಣ್ಣಿನಿಂದ ಜೀವ, ಮಣ್ಣ ಬಿಟ್ಟವರಿಗೆ ಆದಾರವಿಲ್ಲ“. ನಾವು ಮಾಡುವ ಪ್ರತಿಯೊಂದು ಕಾರ‍್ಯಕ್ಕೂ ಪ್ರತ್ಯಕ್ಶವಾಗಿ ಮತ್ತು ಪರೋಕ್ಶವಾಗಿ ಮಣ್ಣೇ ಮೂಲ ಆದಾರ. ಇತಿಹಾಸದ ಪುಟಗಳಲ್ಲಿ ಅಡಗಿರುವ ಹಲವು ಸಂಗರ‍್ಶಗಳು, ಯುದ್ದಗಳು ಎಲ್ಲವೂ ಮಣ್ಣಿಗಾಗಿಯೇ. ಮಣ್ಣಿನ ಜೊತೆ ನಮಗೊಂದು ಬಾವನಾತ್ಮಕ ಸಂಬಂದವಿದೆ. ನಾವು ಬಿಟ್ಟರೂ ಮಣ್ಣು ನಮ್ಮನ್ನು ಬಿಡುವುದಿಲ್ಲ. ಕೊನೆಗೆ ಸೇರಬೇಕಾಗಿರುವುದು ಕೂಡ ಮಣ್ಣಿನಲ್ಲೇ ಎಂಬ ಅರಿವು ಎಲ್ಲರಿಗೂ ಇದೆ.

ಮಣ್ಣಿನ ವಿಶೇಶತೆ ಮತ್ತು ಉಪಯೋಗ

ಒಂದೊಂದು ಪ್ರದೇಶದ ಮಣ್ಣಿಗೆ ಒಂದೊಂದು ಬಗೆಯ ಬಣ್ಣ ಇರುತ್ತದೆ. ಕರ‍್ನಾಟಕದ ಬಹುತೇಕ ಬಾಗದ ಮಣ್ಣು ಕಪ್ಪು ಬಣ್ಣದಿಂದ ಕೂಡಿರುವ ಕಾರಣ ಕರ‍್ನಾಟಕಕ್ಕೆ ‘ಕರುನಾಡು’‌ ಎಂಬ ಹೆಸರು ಬಂತು ಅಂತ ಹೇಳಲಾಗುತ್ತದೆ. ಮಣ್ಣಿನ ವೈವಿದ್ಯತೆ ನಮ್ಮ ಊಹೆಗೂ ಕೂಡ ನಿಲುಕದ್ದು. ಜೈವಿಕ ಚಟುವಟಿಕೆಗಳ ಮೂಲಕ ಸಜೀವ ಮಣ್ಣಿನ ಶ್ರೀಮಂತಿಕೆಯನ್ನು ಹೆಚ್ಚು ಮಾಡುವ ಸಕಲ ಜೀವಾಣುಗಳ ಜೊತೆ ಪರಸ್ಪರ ಬಾಂದವ್ಯ ಬೆಸೆದುಕೊಂಡಿದೆ. ಜಗತ್ತಿನಾದ್ಯಂತ ಮೂರು ಲಕ್ಶಕ್ಕೂ ಅದಿಕ ಮಣ್ಣಿನ ಬಗೆಗಳಿವೆ, ಸಾವಿರಾರು ಜಾತಿಯ ಸೂಕ್ಶ್ಮ ಜೀವಿಗಳಿವೆ, ಸಹಸ್ರಾರು ಸಂಕ್ಯೆಯ ಕ್ರಿಮಿಕೀಟಗಳಿವೆ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಣ್ಣಿನ ರಚನೆ ಬಿನ್ನವಾಗಿರುತ್ತದೆ. ಮಣ್ಣಿನ ಜಗತ್ತು ಎಶ್ಟು ವಿಸ್ಮಯಕಾರಿ ಎಂದರೆ ತನ್ನ ಒಡಲಾಳದಲ್ಲಿ ಇರಿಸಿಕೊಂಡಿರುವ ಕೋಟ್ಯಾಂತರ ಜೀವರಾಶಿಯಲ್ಲಿ ಕೇವಲ ಶೇಕಡಾ ಒಂದರಶ್ಟನ್ನು ಮಾತ್ರ ನಾವು ಗುರುತಿಸಿದ್ದೇವೆ‌. ಮಣ್ಣಿನಲ್ಲಿ ಅಡಗಿರುವ ಕನಿಜಾಂಶ, ತೇವಾಂಶ, ಜೀವಾಂಶ, ಸಾವಯವ ಅಂಶ ಮತ್ತು ಹೊದಿಕೆ ಅಂಶಗಳು ಮಣ್ಣಿನ ಪಲವತ್ತತೆಯನ್ನು ಸೂಚಿಸುತ್ತವೆ. ಮಣ್ಣಿನ ಬೌತಿಕ, ರಾಸಾಯನಿಕ ಹಾಗೂ ಜೈವಿಕ ಆರೋಗ್ಯಗಳ ಸಂಯೋಗವೇ ಮಣ್ಣಿನ ಆರೋಗ್ಯ. ಮನುಶ್ಯ ಹೆಚ್ಚು ಇಳುವರಿಯ ಆಸೆಯಿಂದಾಗಿ ಇಂತಹ ಮಣ್ಣಿನ ಜೀವಸತ್ವ ಅಂಶಗಳನ್ನು ನಾಶಪಡಿಸುತ್ತಿದ್ದಾನೆ.

ಸಸ್ಯ ಆದಾರಿತ ಆಹಾರ ಪದ್ದತಿ ಅತವಾ ಮಾಂಸ ಆದಾರಿತ ಆಹಾರ ಪದ್ದತಿ ಎರಡಕ್ಕೂ ಮೂಲ ಬೇರು ಮಣ್ಣು. ಮಣ್ಣು ಕೇವಲ ಆಹಾರವನ್ನು ಒದಗಿಸುವುದಶ್ಟೇ ಅಲ್ಲ‌ ಹವಾಮಾನದ ಏರುಪೇರುಗಳನ್ನು ನಿಯಂತ್ರಿಸುತ್ತದೆ. ಮಣ್ಣು ಕೋಟ್ಯಾಂತರ ಜೀವಜಂತುಗಳಿಗೆ ಆಶ್ರಯ ನೀಡಿದೆ, ಗೊಬ್ಬರವನ್ನು ಪೋಶಕಾಂಶಗಳನ್ನಾಗಿ ಬದಲಿಸುವುದು ಕೂಡ ಇದೇ ಮಣ್ಣು. ನೀರನ್ನ ಹಿಡಿದಿಟ್ಟುಕೊಳ್ಳುವುದು ಮತ್ತು ಆವಿ ಮಾಡುವುದರಲ್ಲಿ ಮಣ್ಣಿನ ಪಾತ್ರ ದೊಡ್ಡದು. ಮನುಶ್ಯ ಸಂತತಿಗೆ ಆಹಾರದ ಜೊತೆಜೊತೆಗೆ ಮನೆ, ಬಟ್ಟೆ, ಇಂದನ ಎಲ್ಲವೂ ಕೂಡ ಮಣ್ಣಿನಿಂದಲೇ. ಅಶ್ಟೆಲ್ಲ ಯಾಕೆ, ಯಾವುದೇ ಜೀವಿಯ ಅಂತ್ಯವಾದರೂ ಅದು ಮಣ್ಣಿನಲ್ಲಿ ಕೊಳೆಯುವ ಹಿಂದಿನ ಕಾರಣ ಇದೇ ಮಣ್ಣು. ಒಂದು ವೇಳೆ ಕೊಳೆಯುವಿಕೆ ಇಲ್ಲದಿದ್ದರೆ ಪ್ರಪಂಚ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳಲಿಕ್ಕೂ ಅಸಾದ್ಯ!

ಮಣ್ಣಿನ ಸಂರಕ್ಶಣೆ ಮತ್ತು ನಮ್ಮ ಮುಂದಿನ ಹೆಜ್ಜೆ

ನಮ್ಮ ಪೂರ‍್ವಜರು ಅವರಲ್ಲಿನ ಅನುಬವ, ಜಾಣ್ಮೆ, ತಿಳಿವಳಿಕೆ ಮತ್ತು ಸಾಮಾನ್ಯ ಗ್ನಾನಗಳ ಮೂಲಕ ಮಣ್ಣಿನ ಸಂರಕ್ಶಣೆ ಮಾಡಿದ್ದರು. ಅದನ್ನು ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ‍್ತವ್ಯ ಕೂಡ ಹೌದು. ಆರ‍್ತಿಕತೆಗೆ, ಜಾಗತೀಕರಣಕ್ಕೆ, ಕ್ರುಶಿಗೆ, ರಾಶ್ಟ್ರ ನಿರ‍್ಮಾಣಕ್ಕೆ, ಜನಜೀವನ ಅಬಿವ್ರುದ್ದಿಗೆ, ಹವಾಮಾನ, ಪರಿಸರ ಸಂರಕ್ಶಣೆ ಸೇರಿದಂತೆ ಯಾವುದೇ ದ್ರುಶ್ಟಿಕೋನದಿಂದ ನೋಡಿದರೂ ಮಣ್ಣಿನ ಸಂರಕ್ಶಣೆ ಅತ್ಯಗತ್ಯ. ಸುಸ್ತಿರ ಕ್ರುಶಿ ಮತ್ತು ಜೀವವೈವಿದ್ಯತೆಗಳ ಸಮತೋಲನ ಕಾಯ್ದುಕೊಳ್ಳಲು ಮಣ್ಣಿನ ಆರೋಗ್ಯ ಬಹಳ ಮುಕ್ಯವಾಗಿದೆ. ಜೀವ ಸಂಕುಲಗಳಿಗೆ ಬೇಕಾಗುವ ಪೋಶಕಾಂಶಗಳು ಮಣ್ಣಿನಿಂದ ಉತ್ಪತ್ತಿಯಾಗುವ ರೀತಿಯೇ ಅದ್ಬುತ. ನಾವು ತಿನ್ನುವ ಸಸ್ಯ ಆಹಾರದಲ್ಲಿ ಇರುವ ಪೋಶಕಾಂಶಗಳು ಮಣ್ಣಿನಿಂದ ಸಸ್ಯದ ಬೇರಿಗೆ ಸೇರಿ – ಹಿಗ್ಗಿ ಕಣ ಕಣಗಳನ್ನು ಕೂಡಿಟ್ಟುಕೊಂಡು‌ ಮಾನವನ ದೇಹದ ಅಬಿವ್ರುದ್ದಿಗೆ ಕೊಡುಗೆ ನೀಡುತ್ತದೆ. ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ‍್ತ್ಯವಿರುವ ಮಣ್ಣಿಗೆ ಜೀವ ಸ್ರುಶ್ಟಿಸುವ ಶಕ್ತಿ ಇದೆ.

ನಿಜವಾದ ಬೆಳವಣಿಗೆ ಶುರುವಾಗುವುದು ಮಣ್ಣಿಂದಲೇ, ಆದರೆ ಇತ್ತೀಚಿಗೆ ಮಣ್ಣಿಗೆ ಕೊಡಬೇಕಾದ ಪ್ರಾದಾನ್ಯತೆ ಕಡಿಮೆಯಾಗುತ್ತಿದೆ. ಮನುಶ್ಯ ಮಣ್ಣಿನಲ್ಲಿರುವ ಜೀವಸತ್ವವನ್ನು ನಾಶಮಾಡಿ ಏನನ್ನು ಗಳಿಸಲು ಹೊರಟಿದ್ದಾನೆ? ಒಂದು ವೇಳೆ ನಾಶವಾದರೆ ಅದನ್ನು ಮರುಸ್ತಾಪಿಸಲು ವರ‍್ಶಗಟ್ಟಲೆ ಬೇಕಾಗಬಹುದು ಇಲ್ಲವೇ ಮರುಸ್ತಾಪಿಸಲು ಸಾದ್ಯವಾಗದೇ ಹೋಗಬಹುದು. ಮನುಶ್ಯನ ದುರಾಸೆಗೆ ಮಣ್ಣು ಹಾಳಾಗುತ್ತಿದೆ. ಆದ್ದರಿಂದ ಮಣ್ಣು ಕೇವಲ ವ್ಯಾಪಾರ ಮತ್ತು ಹಣವನ್ನು ದ್ವಿಗುಣಗೊಳಿಸುವ ವಸ್ತುವಾಗಬಾರದು. ಪ್ರಕ್ರುತಿಗೆ ಪೂರಕವಾದ ಸಾವಯವ ಗೊಬ್ಬರ ಮಣ್ಣಿಗೆ ಒಳ್ಳೆಯದು. ಅತಿಯಾದ ರಾಸಾಯನಿಕ ಗೊಬ್ಬರ ಮಣ್ಣಿನ ಪಲವತ್ತತೆಯನ್ನು ನಾಶಮಾಡಿ ಮಣ್ಣನ್ನು ಬರಡಾಗಿಸುತ್ತದೆ. ಅತಿಯಾದರೆ ಅಮ್ರುತವೂ ವಿಶವಾಗುವುದು. ತಿಳಿದವರು ಹೇಳಿದಂತೆ “ಬರಡು ಮಣ್ಣು – ಬಡವಾಗುವ ಗಿಡ – ಬಡಕಲು ಆಹಾರ – ಬಳಲುವ ಮಾನವ”. ಎಲ್ಲವೂ ಒಂದಕ್ಕೊಂದು ಪೂರಕ. ಮಣ್ಣು ಬರಡಾದರೆ ಮನುಶ್ಯ ಬರಡಾದಂತೆ.

ಕಾಲಡಿಯ ಮಣ್ಣು ಎಂಬ ಅಸಡ್ಡೆ ಬೇಡ

ಕಾಲಡಿಯ ಮಣ್ಣು ಎಂಬ ನಿರ‍್ಲಕ್ಶ್ಯ ಮತ್ತು ಅಸಡ್ಡೆ ಮನೋಬಾವ ಮನುಶ್ಯನನ್ನು ವಿನಾಶದೆಡೆಗೆ ನೂಕುವುದರಲ್ಲಿ ಅನುಮಾನವಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ‘ಸಾವಯವ ಆಹಾರ ಪದ್ದತಿ’ ಒಂದು ರೀತಿಯ ಸಂಚಲನವನ್ನೇ ಸ್ರುಶ್ಟಿ ಮಾಡಿದೆ. ಸಾವಯವ ಆಹಾರದ ಇಂದಿನ ಸತ್ಯಾ‌ಸತ್ಯತೆಗಳನ್ನು ಅವಲೋಕಿಸಿ ನೋಡುವ ವ್ಯವದಾನ ಯಾರಿಗೂ ಇಲ್ಲ. ರೋಗ ಬಂದ ಮೇಲೆ ರೋಗಕ್ಕೆ ಔಶದಿ ತೆಗೆದುಕೊಳ್ಳುವ ಬದಲು, ರೋಗದ ಮೂಲಕ್ಕೆ ಹೋಗಿ ಮತ್ತೊಮ್ಮೆ ಪುನರಾವರ‍್ತಿಸದಂತೆ ನೋಡಿಕೊಳ್ಳುವುದು ಜಾಣ್ಮೆಯ ವಿದಾನ. ಮಣ್ಣಿಗೆ ಅಗತ್ಯಗಿಂತ ಹೆಚ್ಚಾಗಿ ಸುರಿಯುತ್ತಿರುವ ಅತಿಯಾದ ರಾಸಾಯನಿಕ ಗೊಬ್ಬರ ಬೂಮಿ ಮತ್ತು ಅದರಿಂದ ಉತ್ಪತ್ತಿಯಾಗುವ ಆಹಾರ ಎಶ್ಟರ ಮಟ್ಟಿಗೆ ಉತ್ಕ್ರುಶ್ಟವಾಗಿದೆ ಎಂಬುದನ್ನು ತೋರುತ್ತದೆ. ಹಸಿರು ಕ್ರಾಂತಿಯಿಂದಾಗಿ ಆಹಾರ ಬದ್ರತೆಯನ್ನು ಸಾದಿಸಿದ್ದರೂ ಕೂಡ ಪೌಶ್ಟಿಕಾಂಶಗಳ ಬದ್ರತೆ ಇನ್ನೂ ದೂರದ ಮಾತಾಗಿಯೇ ಉಳಿದಿದೆ.

ಮಣ್ಣಿನ ಸಾರ ಹೆಚ್ಚಿಸಲು ಏನು ಮಾಡಬಹುದು?

ಮಣ್ಣಿನ ಗುಣ ವರ‍್ದಕಗಳ ಸ್ತಿತಿ ಮತ್ತು ಸಂರಕ್ಶಣೆ ಅರಿತವರು ಕ್ರುಶಿಯಲ್ಲಿ ಅದ್ಬುತ ಸಾದನೆಗಯ್ಯಬಹುದು. ಬೆಳೆಗೆ ಅವಶ್ಯಕವಿರುವ ಪೋಶಕಾಂಶಗಳ ಪೂರೈಕೆ, ಒಳ್ಳೆಯ ಇಳುವರಿಯನ್ನು ತಂದುಕೊಂಡುತ್ತದೆ. ಸಮಗ್ರ ಬೆಳೆ, ಮಿಶ್ರಬೆಳೆ, ಸಾವಯವ ಕ್ರುಶಿ ಆದಾರಿತ ಪದ್ದತಿಗಳು ಮಣ್ಣಿನ ಸಾರವನ್ನು ಹೆಚ್ಚಿಸುವುದರ ಜೊತೆಗೆ ಆಹಾರದ ಗುಣಮಟ್ಟವನ್ನು ಕೂಡ ಹೆಚ್ಚಿಸುತ್ತದೆ. ರೈತ ಪ್ರಕ್ರುತಿಯ ಕಾಲಚಕ್ರದ ನಿಯಮದಂತೆ ಮತ್ತೊಮ್ಮೆ ಸಾವಯವ ಕ್ರುಶಿಯನ್ನು ಹೆಚ್ಚು ಹೆಚ್ಚು ಅಳವಡಿಸಿಕೊಂಡರೆ, ಅದು ಒಳ್ಳೆಯ ಬೆಳವಣಿಗೆಯಾಗುತ್ತದೆ. ಮನುಕುಲದ ಉದ್ದಾರ ಮತ್ತು ಅಬಿವ್ರುದ್ದಿಗಾಗಿ ಮಣ್ಣಿನ ಸಮಗ್ರ ನಿರ‍್ವಹಣೆ ಮತ್ತು ಸಂರಕ್ಶಣೆ ಅತ್ಯಗತ್ಯವಾಗಿದೆ.

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: